ನಿಮಗೆ ಸಾಕ್ರೆಟಿಸ್ ಗೊತ್ತಿರಬಹುದು. ಎರಡೂವರೆ ಸಾವಿರ ವರ್ಷಗಳ ಹಿಂದೆ ಪ್ರಾಚೀನ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಬದುಕಿದ್ದ ಘನ ತತ್ತ್ವಜ್ಞಾನಿ ಆತ. ಯಾವುದೇ ವಿಚಾರವನ್ನು ಗಹನವಾಗಿ ಆಲೋಚಿಸುವುದು, ವಿಶ್ಲೇಷಿಸುವುದು, ಯುವಕರೊಂದಿಗೆ ಮಾತಾಡುವುದು, ಅವರು ಪ್ರಶ್ನೆ ಮಾಡುವಂತೆ ಪ್ರಚೋದಿಸುವುದು, ಸಾಕ್ರೆಟಿಸ್‌ನ ದಿನಚರಿ. ಹೀಗೆ ಪ್ರಶ್ನೆ ಮಾಡಲು ಪ್ರಚೋದಿಸಿದ್ದರಿಂದಲೇ ಸಾಕ್ರೆಟಿಸ್ ಆ ಕಾಲದಲ್ಲಿ ಆಳುವವರಿಗೆ ಕಣ್ಣುರಿಯಾಗಿದ್ದ. ಆ ಮಾತು ಬೇರೆ. ‘ಸಾಕ್ರಟಿಸ್ ಈ ಕಾಲದ ಮಹಾಜ್ಞಾನಿ’ ಎಂದು ಅಥೆನ್ಸ್‌ನ ನಗರ ದೇವತೆ ಘೋಷಣೆ ಮಾಡಿಬಿಟ್ಟಿದ್ದಳಂತೆ.
ಯಾರೋ ಒಂದು ಸಲ ಸಾಕ್ರೆಟಿಸ್‌ನನ್ನು ಕೇಳಿದರು: ‘ಸಾಕ್ರೆಟಿಸ್, ನೀನು ಮಹಾ ಜ್ಞಾನಿಯಂತೆ, ಹೌದಾ?’ ಸಾಕ್ರೆಟಿಸ್ ಹೇಳಿದ: ‘ಹೌದು ನಾನು ಜ್ಞಾನಿ’
ಕೇಳಿದವನಿಗೆ ಸಾಕ್ರೆಟಿಸ್‌ಗೆ ಬಹಳ ಗರ್ವ, ಅವನಿಗೆ ತಲೆ ಕುತ್ತಿಗೆಯ ಮೇಲೆ ನಿಲ್ಲುತ್ತಿಲ್ಲ ಅನಿಸಿತು. ಅಲ್ಲಾ, ಯಾರಾದರೂ ಜ್ಞಾನಿ ಆದವನು ತಾನು ಜ್ಞಾನಿ ಅಂತ ಹೇಳಿಕೊಳ್ಳುತ್ತಾನಾ? ಅವನು ಮತ್ತೆ ಪ್ರಶ್ನೆ ಕೇಳಿದ: ‘ಸಾಕ್ರಟಿಸ್, ಹೇಳು, ನೀನು ಅದು ಹೇಗೆ ಜ್ಞಾನಿ?’
ಆ ಪ್ರಶ್ನೆಗೆ ಸಾಕ್ರೆಟಿಸ್ ಏನು ಹೇಳಿದ ಅನ್ನುವುದೇ ಬಹಳ ಅದ್ಭುತ: ‘ನಾನು ಹೇಗೆ ಜ್ಞಾನಿ ಅಂದರೆ, ಈ ಜಗತ್ತಿನ ಹಲವಾರು ವಿಷಯಗಳಲ್ಲಿ ನನಗೆ ಯಾವ ಜ್ಞಾನವೂ ಇಲ್ಲ, ಅನ್ನುವ ಜ್ಞಾನ ಇದೆ, ಆದ್ದರಿಂದ ನಾನು ಜ್ಞಾನಿ’.
ಬಹುಶಃ ಈ ಮಾತಿಗೆ ವ್ಯಾಖ್ಯಾನವೇ ಅಗತ್ಯವಿಲ್ಲ. ನನಗೆ ಎಲ್ಲವೂ ಗೊತ್ತು ಎನ್ನುವವನಿಗಿಂತ ಅಜ್ಞಾನಿ ಬೇರಾರೂ ಇಲ್ಲ. ನಿಜವಾದ ಜ್ಞಾನಿ ಆದ್ದರಿಂದಲೇ ಅನಿವಾರ್ಯವಾಗಿ ವಿನೀತನಾಗಿಬಿಡುತ್ತಾನೆ. ಗರ್ವ, ಅಹಂಕಾರ ಎಂಬುದೆಲ್ಲಾ ಅವಿದ್ಯೆಯ ಫಲವೇ.
ಇದೇ ಸಾಕ್ರೆಟಿಸ್‌ಗೆ ಯಾರೋ ಪಂಡಿತನೊಬ್ಬ ಬಂದು ಕಿಚಾಯಿಸಿದ: ‘ಸಾಕ್ರೆಟಿಸ್, ನಿನ್ನ ಶಿಷ್ಯರಿದ್ದಾರಲ್ಲ, ಅವರನ್ನೆಲ್ಲಾ ನೀನು ಸಭ್ಯರನ್ನಾಗಿ ಮಾಡಿಬಿಟ್ಟಿದ್ದೇನೆ ಅಂತ ಬೀಗುತ್ತಿದ್ದೀಯಲ್ಲ, ಆ ಪರಿವರ್ತನೆ ಸತ್ಯವಲ್ಲ. ಅವರೆಲ್ಲಾ ಢೋಂಗಿಗಳು. ನೀನು ಒಂದೇ ಒಂದು ದಿನ ಆ ನಿನ್ನ ಶಿಷ್ಯರನ್ನು ನನ್ನೊಂದಿಗೆ ಕಳುಹಿಸಿಕೊಡು. ಚಿಟಿಕೆ ಹೊಡೆಯುವಷ್ಟರಲ್ಲಿ ಅವರನ್ನೆಲ್ಲಾ ಹಾಳುಮಾಡಿಬಿಡುತ್ತೇನೆ’.
ಸಾಕ್ರೆಟಿಸ್ ಹೇಳಿದ: ‘ಅಯ್ಯಾ, ಇದಕ್ಕೆ ಇಷ್ಟೊಂದು ಪಾಂಡಿತ್ಯವಿರುವ ನೀನೇಕೆ ಬೇಕು? ಯಾರು ಬೇಕಾದರೂ ಆ ಕೆಲಸವನ್ನು ಮಾಡಬಹುದು. ಒಂದು ಬಂಡೆಯನ್ನು ಇಷ್ಟಿಷ್ಟೇ ಉರುಳಿಸಿಕೊಂಡು ಪ್ರಯಾಸಪಟ್ಟು ನಾನು ಪರ್ವತದೆತ್ತರಕ್ಕೆ ಹೋಗುತ್ತಿದ್ದೇನೆ. ಮೇಲಿಂದ ತಳ್ಳುವುದಕ್ಕೆ ಶ್ರಮವೇ ಬೇಕಿಲ್ಲ. ಬೆರಳು ತಾಕಿದರೂ ಆ ಬಂಡೆ ಉರುಳಿಕೊಂಡು ಕೆಳಗೆ ಬಂದುಬಿಡುತ್ತದೆ. ಮೇಲಕ್ಕೆತ್ತುವುದು ಪ್ರಯಾಸ, ಉರುಳಿಸುವುದು ಸಲೀಸು. ಮೇಲಿರುವುದನ್ನು ಕೆಳಕ್ಕೆ ಉರುಳಿಸಲು ನಿನ್ನ ಪಾಂಡಿತ್ಯ ಖರ್ಚಾಗಬೇಕೆ? ಯೋಚಿಸು’.
ಜ್ಞಾನಿಗಳ ಮಾತು, ಕೃತಿ ಎಲ್ಲಾ ಎಷ್ಟು ಚಂದ ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.