ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಮೂಗು ತೂರಿಸುವ ಮುನ್ನ ಎಚ್ಚರವಿರಲಿ 

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಒಂದು ತತ್ತ್ವಜ್ಞಾನಿ ಕಪ್ಪೆ ಇತ್ತು. ಅದಕ್ಕೆ ತನ್ನ ತತ್ತ್ವ, ಸಿದ್ಧಾಂತದ ನೆಲೆಯಲ್ಲಿ  ಬೇರೆಯವರ ಬದುಕನ್ನು ವಿಶ್ಲೇಷಿಸುವ ಹವ್ಯಾಸ. ತನ್ನ ಅನುಮಾನ ಪ್ರಶ್ನೆಗಳನ್ನು ಬೇರೆಯವರ ತಲೆಯೊಳಗೆ ತೂರಿ ಬಿಟ್ಟು ತಾನು ತಣ್ಣಗೆ ಕೂರುತ್ತಿತ್ತು. ದಿನವೂ ಅದರ ಗೂಡಿನ ಎದುರಿನಲ್ಲಿ ಶತಪದಿಯೊಂದು ಹಾದು ಹೋಗುತ್ತಿತ್ತು. ತನ್ನ ನೂರು ಕಾಲುಗಳಿಂದ ಶತಪದಿ ಚಲಿಸುವುದನ್ನು ದಿನವೂ ನೋಡುತ್ತಿದ್ದ ಕಪ್ಪೆಗೆ ಒಂದು ಪ್ರಶ್ನೆ ಕೊರೆಯತೊಡಗಿತು. ಈ ಶತಪದಿ ನಡೆಯುವಾಗ ತನ್ನ ನೂರುಕಾಲುಗಳಲ್ಲಿ ಯಾವ ಕಾಲನ್ನು ಮೊದಲು ಮುಂದೆ ಇಡುತ್ತದೆ ಎಂಬುದೇ ಕಪ್ಪೆಯ ತಲೆ ಹೊಕ್ಕಿದ್ದ ಪ್ರಶ್ನೆ.

ಇದಕ್ಕೆ ಉತ್ತರ ಸಿಗದ ಕಪ್ಪೆ ಒಂದು ದಿನ ಶತಪದಿಯನ್ನು ತಡೆದು ನಿಲ್ಲಿಸಿ, ಕೇಳಿಯೇ ಬಿಟ್ಟಿತು. ‘ಅಣ್ಣಾ ನಾನು ನಿನ್ನನ್ನು ದಿನವೂ ಗಮನಿಸುತ್ತೇನೆ. ನೂರು ಕಾಲುಗಳನ್ನು ಹೊಂದಿರುವ ನಿನಗೆ ನನ್ನ ವಿಶೇಷ ಅಭಿನಂದನೆಗಳು. ಆದರೆ ನನ್ನ ತಲೆಯಲ್ಲಿ ಈ ಬಗ್ಗೆ ಪ್ರಶ್ನೆಯೊಂದು ಕೊರೆಯುತ್ತಿದೆ. ನೀನು ನಡೆಯುವಾಗ ನಿನ್ನ ನೂರು ಕಾಲುಗಳಲ್ಲಿ  ಯಾವ ಕಾಲನ್ನು ಮೊದಲಿಗೆ ಇಡುತ್ತೀ?’

ಈ ಪ್ರಶ್ನೆಯನ್ನು ಆಲಿಸಿದ ಶತಪದಿ ಕಕ್ಕಾಬಿಕ್ಕಿಯಾಯಿತು. ಅದು ಈವರೆಗೂ ತನ್ನ ಚಲನೆಯ ಬಗ್ಗೆ ಯೋಚಿಸಿಯೇ ಇರಲಿಲ್ಲ. ತನ್ನ ಪಾಡಿಗೆ ತಾನು ನೂರು ಕಾಲುಗಳಲ್ಲಿ ನಡೆದುಕೊಂಡಿತ್ತು. ಈಗ ಈ ಕಪ್ಪೆಯ ಮಾತನ್ನಾಲಿಸಿದ ನಂತರ, ‘ಹೌದಲ್ಲ, ನಾನು ಯಾವ ಕಾಲು ಮೊದಲು ಇಟ್ಟು ನಡೆಯುತ್ತೇನೆ?’ ಎಂಬ ಚಿಂತೆ ಅದನ್ನು ತೀವ್ರವಾಗಿ ಕಾಡಲಾರಂಭಿಸಿತು. ಎಷ್ಟರಮಟ್ಟಿಗೆ ಈ ಚಿಂತೆ ಶತಪದಿಯನ್ನು ಆವರಿಸಿಕೊಂಡು ಬಿಟ್ಟಿತು ಎಂದರೆ ಮುಂದಕ್ಕೆ ಅಡಿ ಇಡಲಾರದಷ್ಟು. ಈ ಚಿಂತೆಯ ತೀವ್ರತೆಯಲ್ಲಿ ಶತಪದಿ ಅಲ್ಲಿಯೇ ಕುಸಿದು ಬಿತ್ತು.

ಕೆಲವೊಮ್ಮೆ ನಮ್ಮ ನಡುವೆ ಇರುವ ಬುದ್ಧಿವಂತರು ಸಹ ಇದೇ ಕೆಲಸವನ್ನು ಮಾಡುತ್ತಿರುತ್ತಾರೆ. ಇನ್ನೊಬ್ಬರ ಕೆಲಸ ಕಾರ್ಯದಲ್ಲಿ ಮೂಗು ತೂರಿಸಿ, ತಮ್ಮ ಅಭಿಪ್ರಾಯವೇ ಸರಿ ಎಂಬ ಗುಂಗಿಹುಳುವನ್ನು ಅವರ ತಲೆಯಲ್ಲಿ ತೂರಿಬಿಡುತ್ತಾರೆ. ಮನೆ ಕಟ್ಟುವ ಸಂದರ್ಭ ಇರಬಹುದು, ಮಕ್ಕಳ ವಿದ್ಯಾಭ್ಯಾಸ ಇರಬಹುದು ಹೊಸತೊಂದು ಉದ್ಯೋಗಕ್ಕೆ, ಪ್ರಯತ್ನಕ್ಕೆ ಕೈ ಹಾಕುವ ವಿಚಾರವಿರಬಹುದು.  ಇಂತಹ ಸಂದರ್ಭದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅಗತ್ಯ, ಅವಶ್ಯಕತೆ ಹಾಗೂ  ಸನ್ನಿವೇಶವಿರುತ್ತದೆ. ಆಗ ಸಲಹೆ ಸೂಚಿಸುವ ಭರದಲ್ಲಿ ವಿಭಿನ್ನ ರೀತಿಯ ಪ್ರಶ್ನೆ ಸಂದೇಹಗಳನ್ನು ಅವರ ತಲೆಯಲ್ಲಿ ತುರುಕಿದ್ದೇ ಆದರೆ ಮೊದಲೇ ಸಂದೇಹದಲ್ಲಿರುವ ವ್ಯಕ್ತಿ, ಇನ್ನಷ್ಟು ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ಇನ್ನು ಕೆಲವರ ಬದುಕು ಅವರ ನಂಬಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ನಾವು ಇನ್ನೊಬ್ಬರ ನಂಬಿಕೆಗಳನ್ನು ನಮ್ಮ ತಲೆಯಲ್ಲಿರುವ ಸಂದೇಹ, ಪ್ರಶ್ನೆಗಳೊಂದಿಗೆ ಅಲ್ಲಾಡಿಸುವ ಕೆಲಸವನ್ನು ಎಂದೂ ಮಾಡಬಾರದು. ಹಾಗೆಯೇ ನಮ್ಮ ನಂಬಿಕೆಯೇ ಸರಿ ಅದನ್ನು ಬೇರೆಯವರೂ ಒಪ್ಪಲೇಬೇಕು ಎಂಬ ರೀತಿಯ ವರ್ತನೆಯೂ ಸಲ್ಲ. ಇದರಿಂದ  ಇನ್ನೊಬ್ಬರ  ಬದುಕು, ನಂಬಿಯೂ ನಂಬದಿರುವ ಇಬ್ಬಂದಿ ಸ್ಥಿತಿಯನ್ನು ತಲುಪುವ ಸಾಧ್ಯತೆ ಇರುತ್ತದೆ ಎಂಬುದನ್ನು ನಾವೆಂದಿಗೂ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT