ಮಂಗಳವಾರ, ನವೆಂಬರ್ 29, 2022
28 °C
ಅಭಿವೃದ್ಧಿ ಯಂತ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ರೈತರ ಬದುಕು

ಒಳನೋಟ: ಭೂ ಸ್ವಾಧೀನದ ಕಬಂಧಬಾಹು!

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವೆಂಬರ್‌ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್‌) ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಅನ್ನದಾತರ ಒಡಲಲ್ಲಿ ತಳಮಳ ಶುರುವಾಗಿದೆ. ಸಮಾವೇಶದ ಮೂಲಕ ರಾಜ್ಯದಾದ್ಯಂತ ಸಮತೋಲಿತ
ಕೈಗಾರಿಕೀಕರಣಕ್ಕೆ ಉತ್ತೇಜಿಸುವುದು ಸರ್ಕಾರದ ಗುರಿ. ಆದರೆ, ಸರ್ಕಾರಿ ‘ಅಭಿವೃದ್ಧಿ ಯಂತ್ರ’ದ ಚಕ್ರಗಳಿಗೆ ಸಿಲುಕಿ ತಮ್ಮ ಬದುಕು ಅಪ್ಪಚ್ಚಿಯಾಗುತ್ತದೆ ಎಂಬ ಆತಂಕ ಕೃಷಿಕರದ್ದು.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬರುವ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು 50 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿ
ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ. ಆದರೆ, ಕೈಗಾರಿಕೆಗಳ ಹೆಸರಿನಲ್ಲಿ ಸರ್ಕಾರ ಹಗಲು ದರೋಡೆಗೆ ಇಳಿದಿದೆ ಎಂಬ ಆರೋಪ ಕೇಳಿಬಂದಿದೆ.

ಕೈಗಾರಿಕೆಗಳ ಬೆಳವಣಿಗೆಗಾಗಿ ಪ್ರತಿ ಜಿಲ್ಲೆಯಲ್ಲೂ ಭಾರಿ ಪ್ರಮಾಣದಲ್ಲಿ ಭೂಸ್ವಾಧೀನ ನಡೆಯುತ್ತಿದೆ. ಆದರೆ ಭೂಸ್ವಾಧೀನ, ರೈತರಿಗೆ ಪರಿಹಾರ, ಡಿನೋಟಿಫೈ, ಉದ್ಯಮಗಳಿಗೆ ಭೂಮಿ ಹಂಚಿಕೆ ಸೇರಿದಂತೆ ವಿವಿಧ ಹಂತದಲ್ಲಿ ಅವ್ಯವಹಾರ ತಾಂಡವವಾಡು
ತ್ತಿದೆ. ಈ ಜಾಲದ ಹಿಂದೆ ಜನಪ್ರತಿನಿಧಿಗಳು, ಅಧಿಕಾರಶಾಹಿ ಮತ್ತು ರಿಯಲ್‌ ಎಸ್ಟೇಟ್‌ ಮಾಫಿಯಾ ಇದೆ ಎಂಬುದು ರೈತರ ದೂರು.

ಅದರಲ್ಲೂ ಕೆಐಎಡಿಬಿ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್‌ ಮಾಫಿಯಾ ನಡುವಿನ ‘ಅಲಿಖಿತ ಸಂಬಂಧ’ ಸಾವಿರಾರು ರೈತರ ಜೀವನಕ್ಕೆ ಮುಳುವಾಗಿದೆ. ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭ ವಾಗುವ ಮೊದಲೇ ರಿಯಲ್‌ ಎಸ್ಟೇಟ್‌ ಮಾಫಿಯಾ, ಭೂ ಮಾಲೀಕರ ಸಂಪ ರ್ಕಕ್ಕೆ ಎಡತಾಕುತ್ತದೆ. ಹಣದ ಅವಶ್ಯಕತೆ ಹೆಚ್ಚಿರುವ ಸಣ್ಣ ಹಿಡುವಳಿದಾರರೇ ಇದರ ಉರುಳಿಗೆ ಕೊರಳೊಡ್ಡುತ್ತಾರೆ.

ಮತ್ತೊಂದೆಡೆ ಉದ್ದೇಶಿತ ಕೈಗಾರಿಕಾ ಪ್ರದೇಶಕ್ಕೆ ಜಮೀನು ಸ್ವಾಧೀನವಾಗುವ ಬಗ್ಗೆ ಪಹಣಿಯಲ್ಲಿ ನಮೂದಾದ ಬಳಿಕ ರೈತ ಕುಟುಂಬಗಳಲ್ಲಿ ಬೇಗುದಿ ಶುರುವಾಗುತ್ತದೆ. ಈ ಭೂಮಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಕಾರ ಸಂಘ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ದೊರೆಯುವುದಿಲ್ಲ.

ಇದೇ ಮಧ್ಯವರ್ತಿಗಳಿಗೆ ಬಂಡವಾಳ. ಮೊದಲೇ ಈ ಮಾಹಿತಿ ಅರಿತಿರುವ ರಿಯಲ್‌ ಎಸ್ಟೇಟ್‌ ಜಾಲ ಸದ್ದಿಲ್ಲದೆ ಸಕ್ರಿಯವಾಗುತ್ತದೆ. ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಗಳೇ ಈ ಜಾಲದ ಸೂತ್ರದಾರರು ಎಂಬುದು ರೈತರ ಆರೋಪ.

ಕೈಗಾರಿಕೆಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ₹5 ಲಕ್ಷದಿಂದ ₹10 ಲಕ್ಷ ಮುಂಗಡ ನೀಡಿ ಭೂಮಿಯನ್ನು ತಮಗೆ ಮಾರಾಟ ಮಾಡುವಂತೆ ಖಾಲಿ ಕರಾರು ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುತ್ತಾರೆ. ಅದರೊಟ್ಟಿಗೆ ರೈತರ ಬ್ಯಾಂಕ್‌ ಪುಸ್ತಕ, ಖಾಲಿ ಚೆಕ್‌ಗಳನ್ನೂ ಪಡೆಯುತ್ತಾರೆ.

ಕರಾರು ಪತ್ರದಲ್ಲಿ ತಾವು ನೀಡಿದ ನಗದಿಗಿಂತ ಮೂರ‍್ನಾಲ್ಕು ಪಟ್ಟು ಹೆಚ್ಚು ನಗದು ನಮೂದಿಸಿ ಕಾನೂನುಬದ್ಧವಾಗಿಯೇ ನೋಂದಣಿ ಮಾಡಿಸುತ್ತಾರೆ. ಭೂಮಿ ಕಳೆದುಕೊಳ್ಳುವ ಕೆಲವು ರೈತರು ಮೂರ‍್ನಾಲ್ಕು ರಿಯಲ್‌ ಎಸ್ಟೇಟ್‌ದಾರರಿಂದ ಮುಂಗಡವಾಗಿ ನಗದು ಪಡೆದು ಕರಾರು ಪತ್ರಗಳಿಗೆ ಸಹಿ ಹಾಕಿರುವ ನಿದರ್ಶನಗಳು ಸಾಕಷ್ಟಿವೆ. 

ಭೂಸ್ವಾಧೀನ ಕಾಯ್ದೆ ಸೆಕ್ಷನ್ 4(1), 6(1) ಪ್ರಕ್ರಿಯೆ ವೇಳೆಗೆ ಸ್ವಾಧೀನಕ್ಕೊಳಪಡುವ ಜಮೀನಿನ ಮೇಲೆ ಈ ಜಾಲದ ಹಿಡಿತ ಬಿಗಿಯಾಗುತ್ತದೆ. ಭೂಮಿಗೆ ಬೆಲೆ ನಿಗದಿಪಡಿಸುವ ಜಿಲ್ಲಾಧಿಕಾರಿ ಸಭೆಯಲ್ಲಿ ರೈತರೊಟ್ಟಿಗೆ ಇವರೂ ಹಾಜರಾಗುತ್ತಾರೆ. ಬಳಿಕ ಅವರ ಅಸಲಿ ಆಟ ಶುರುವಾಗುತ್ತದೆ.

ನಗದು ಪಡೆದ ರೈತರು ಕರಾರು ಪತ್ರದಂತೆ ತಮಗೆ ಭೂಮಿ ನೀಡಬೇಕೆಂದು ಸಿವಿಲ್‌ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಾರೆ. ಕೆಐಎಡಿಬಿ ಕಚೇರಿಗೂ ತಕರಾರು ಅರ್ಜಿ ಸಲ್ಲಿಸುತ್ತಾರೆ. ಗೋಪ್ಯವಾಗಿ ನಡೆಯುವ ಈ ಪ್ರಕ್ರಿಯೆ ಅರಿವಿಗೆ ಬರುವುದರೊಳಗೆ ರೈತನ ಕಿಸೆಯಲ್ಲಿದ್ದ ಹಣವೂ ಖಾಲಿಯಾಗಿರುತ್ತದೆ. ಆಗ ಪರಿಹಾರದ ಹಣದಲ್ಲಿ ದಲ್ಲಾಳಿಗಳಿಗೆ ಪಾಲು ನೀಡದೆ ರೈತರಿಗೆ ಬೇರೆ ದಾರಿ ಇರುವುದಿಲ್ಲ. ಬ್ಯಾಂಕ್‌ ಖಾತೆಗೆ ಪಾವತಿಯಾಗುವ ಪರಿಹಾರದ ಮೊತ್ತ ಸಂಪೂರ್ಣವಾಗಿ ಕೈಸೇರದೆ ರೈತ ಕಂಗಾಲಾಗುತ್ತಾನೆ. ಇತ್ತ ಹಣವೂ ಇಲ್ಲದೆ, ಭೂಮಿಯ ಒಡೆತನದ ಹಕ್ಕನ್ನೂ ಕಳೆದುಕೊಂಡ ಕುಟುಂಬ ಬೀದಿಪಾಲಾಗುತ್ತದೆ.

‘ದೇವನಹಳ್ಳಿ ತಾಲ್ಲೂಕಿನ ಹರಳೂರು ಕೈಗಾರಿಕಾ ಪ್ರದೇಶದ ಮೊದಲ ಹಂತದಲ್ಲಿ ರೈತರ ಒಂದು ಎಕರೆ ಭೂಮಿಗೆ ಕೆಐಎಡಿಬಿ ₹1.10 ಕೋಟಿ ಪರಿಹಾರ ನಿಗದಿಪಡಿಸಿತ್ತು. ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಅರ್ಧದಷ್ಟೂ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಚನ್ನರಾಯಪಟ್ಟಣದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌.

‘ಮಧ್ಯವರ್ತಿಗಳಿಲ್ಲದೆ ಕೆಐಎಡಿಬಿಯಲ್ಲಿ ಸುಲಭವಾಗಿ ಪರಿಹಾರವೂ ಸಿಗುವುದಿಲ್ಲ. ಪರಿಹಾರದ ಹಣ ಬಂದಾಕ್ಷಣ ಅಕ್ಕ, ತಂಗಿಯರು ತವರುಮನೆಗೆ ಬಂದು ಪಾಲು ಕೇಳುತ್ತಾರೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದ ಕೌಟುಂಬಿಕ ಸಾಮರಸ್ಯ ಹದಗೆಡುತ್ತದೆ. ಪರಿಹಾರದ ಹಣ ಸದ್ವಿನಿಯೋಗವೂ ಕಡಿಮೆ. ಮೋಜಿನ ಜೀವನಕ್ಕೆ ಹಣ ಕಳೆದುಕೊಂಡು ಬೀದಿಪಾಲಾದ ಕುಟುಂಬಗಳು ಸಾಕಷ್ಟಿವೆ’ ಎನ್ನುತ್ತಾರೆ ಅವರು.

ಸ್ವಾಧೀನಪಡಿಸಿದ ಭೂಮಿ ಕಂಪನಿ ಪಾಲು

ಪ್ರಾಥಮಿಕ ಅಧಿಸೂಚನೆ ಹೊರಡಿಸಿ ರೈತರಿಗೆ ಪರಿಹಾರ ನೀಡದಿರುವ ಪ್ರಕರಣಗಳು ಸಾಕಷ್ಟಿವೆ. ಕೆಲವೆಡೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಿಲ್ಲ. ಭೂಮಿಯನ್ನು ರೈತರಿಗೂ ಮರಳಿಸುವುದಿಲ್ಲ. ಕಡಿಮೆ ಮೊತ್ತಕ್ಕೆ ಖಾಸಗಿ ಕಂಪನಿಗಳಿಗೆ ಧಾರೆ ಎರೆಯಲಾಗುತ್ತದೆ. ರೈತರಿಂದ ವಶಪಡಿಸಿಕೊಂಡ 3,677 ಎಕರೆ ಭೂಮಿಯನ್ನು ಜಿಂದಾಲ್‌ ಕಂಪನಿಗೆ ಕಡಿಮೆ ಹಣಕ್ಕೆ ನೀಡಿದ್ದು ಇದಕ್ಕೊಂದು ನಿದರ್ಶನ.

ಉತ್ತಮ್‌ ಗಾಲ್ವಾ ಕಂಪನಿಗೆ ಬಳ್ಳಾರಿ ತಾಲ್ಲೂಕಿನ ಕುಡತಿನಿ, ವೇಣಿವೀರಾಪುರ, ಕೊಳಗಲ್‌ ಬಳಿ ಒಟ್ಟು 4,877.81 ಎಕರೆ ನೀಡಲಾಗಿದೆ. ಅರ್ಸೆಲ್ಲರ್‌ ಮಿತ್ತಲ್‌ ಕಂಪನಿಗೆ ಕುಡತಿನಿ ಹರಗಿನ ಡೋಣಿ ಬಳಿ 2,664.75 ಎಕರೆ ನೀಡಲಾಗಿದೆ. ಈ ಜಮೀನು ನೀಡಿ 10 ವರ್ಷಗಳು ಕಳೆದಿವೆ. ಭೂಸ್ವಾಧೀನ ಕಾಯ್ದೆ ಸೆಕ್ಷನ್‌ 34(3) ಅಡಿ ಈ ಉದ್ಯಮಗಳಿಗೆ 2020ರ ಡಿ. 9ರಂದು ನೋಟಿಸ್‌ ಜಾರಿಗೊಳಿಸಲಾಗಿದೆ. ಇದುವರೆಗೆ ಜಮೀನು ವಾಪಸ್‌ ಪಡೆಯಲು ಸಾಧ್ಯವಾಗಿಲ್ಲ.

ಬ್ರಹ್ಮಿಣಿ ಸ್ಟೀಲ್ಸ್‌ಗೆ ವಶಪಡಿಸಿಕೊಂಡ ಜಮೀನನ್ನು ಉತ್ತಮ್‌ ಗಾಲ್ವಾ ಟೇಕ್‌ ಒವರ್‌ ಮಾಡಿದೆ. ಟೇಕ್‌ ಒವರ್‌ ಮಾಡಿದೆಯೋ ಅಥವಾ ಮಾರಾಟ ಮಾಡಲಾಗಿದೆಯೋ ಎಂಬ ಮಾಹಿತಿ ಸಂಬಂಧಪಟ್ಟ ಇಲಾಖೆ ಬಳಿ ಇಲ್ಲ. ಒಂದು ಉದ್ಯಮಕ್ಕಾಗಿ ವಶಪಡಿಸಿಕೊಂಡ ಜಮೀನನ್ನು ಮತ್ತೊಂದು ಸಂಸ್ಥೆಗೆ ವರ್ಗಾಯಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಕೆಐಎಡಿಬಿ ಅಥವಾ ಕೈಗಾರಿಕಾ ಇಲಾಖೆ ಉತ್ತರಿಸಬೇಕಿದೆ. 

ಒಳಗಿನವರಿಂದಲೇ ಕನ್ನ!

ಹೊಸ ಕೈಗಾರಿಕಾ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಚರ್ಚೆಯ ಆರಂಭಿಕ ಹಂತದಲ್ಲಿ ಲಭಿಸುವ ಮಾಹಿತಿಯನ್ನೇ ‘ಅಸ್ತ್ರ’ವಾಗಿ ಬಳಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಒಳಗಿನವರೇ ಕನ್ನ ಹಾಕುತ್ತಿರುವುದು ಹಲವು ವರ್ಷಗಳಿಂದ ನಡೆಯುತ್ತಿದೆ. ಈಗಲೂ ಅದು ನಿಂತಿಲ್ಲ.

ಕೆಐಎಡಿಬಿ ಅಧಿಕಾರಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳು, ಸಚಿವರು, ಅವರ ಹಿಂಬಾಲಕರು ‘ಒಳಗಿನ ಮಾಹಿತಿ’ (ಇನ್‌ಸೈಡರ್‌ ಇನ್‌ಫಾರ್ಮೇಷನ್‌) ಆಧರಿಸಿ ಉದ್ದೇಶಿತ ಕೈಗಾರಿಕಾ ಬಡಾವಣೆ ಪ್ರದೇಶದಲ್ಲೇ ಅಗ್ಗದ ಬೆಲೆಗೆ ಜಮೀನು ಖರೀದಿಸುತ್ತಾರೆ. ಅದನ್ನೇ ದುಬಾರಿ ದರಕ್ಕೆ ಮಂಡಳಿಗೆ ಮಾರಾಟ ಮಾಡಿ ಜೇಬು ಭರ್ತಿ ಮಾಡಿಕೊಳ್ಳುತ್ತಾರೆ. ಕೆಲವೆಡೆ ಭೂಮಾಲೀಕರನ್ನು ವಂಚಿಸಿ ದಾಖಲೆಗಳಿಗೆ ಸಹಿ ಪಡೆದು ಪರಿಹಾರದ ಮೊತ್ತ ಕಬಳಿಸುತ್ತಾರೆ.

ಬಿಡದಿ ಬಳಿ ಟೊಯೊಟಾ ಕಿರ್ಲೋಸ್ಕರ್‌ ಕಾರ್ಖಾನೆ ಪ್ರದೇಶದ ಕೈಗಾರಿಕಾ ಎಸ್ಟೇಟ್‌ ಅಭಿವೃದ್ಧಿಯ ಸಂದರ್ಭದಲ್ಲಿ ಕೆಐಎಡಿಬಿ ಅಧಿಕಾರಿಗಳೇ ಸುತ್ತಲಿನ ಜಮೀನು ಖರೀದಿಸಿ, ಮಂಡಳಿಗೆ ಮಾರಾಟ ಮಾಡಿದ್ದ ಆರೋಪ ಕೇಳಿಬಂದಿತ್ತು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣಕ್ಕೆ ಜಮೀನು ಸ್ವಾಧೀನ ಅಕ್ರಮದಲ್ಲಿ ಆಗಿನ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂಧಿತರಾಗಿದ್ದರು.

ಈಗ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ಸಮೀಪದ ತ್ಯಾಮಗೊಂಡ್ಲು ಬಳಿ ಮಲ್ಟಿ ಲೆವೆಲ್‌ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣದ  ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಇದೇ ರೀತಿಯ ಅಕ್ರಮ ನಡೆದಿರುವ ಆರೋಪವಿದೆ. ಸಿಟಿಜನ್‌ ರೈಟ್ಸ್‌ ಫೌಂಡೇಷನ್‌, ಪ್ರಧಾನಿ ಕಚೇರಿಯವರೆಗೂ ದೂರು ಒಯ್ದಿದೆ.

ರೈತರ ಜಮೀನು ಡಿನೋಟಿಫೈ ಆಗುತ್ತಾ?

ಬೆಂಗಳೂರು- ಮೈಸೂರು ಹೆದ್ದಾರಿ ದಶಪಥವಾಗಿ ಬದಲಾಗುತ್ತಲೇ ‘ನೈಸ್’ ರಸ್ತೆ ವಿಚಾರ ನೇಪಥ್ಯಕ್ಕೆ ಸರಿದಿದೆ. 

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ನಿರ್ಮಾಣ ಯೋಜನೆ (ಬಿಎಂಐಸಿ) 1990-2000ರ ದಶಕದಲ್ಲಿ ಹೆಚ್ಚು ಸದ್ದು‌ ಮಾಡಿತ್ತು. ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ. ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಸರ್ಕಾರ ಹಾಗೂ ನೈಸ್ ಕಂಪನಿ ನಡುವೆ ಒಪ್ಪಂದವಾಗಿತ್ತು. ಇದರ ಜೊತೆ ಐದು ಟೌನ್‌ಷಿಪ್‌ಗಳ ನಿರ್ಮಾಣಕ್ಕೂ ನಂದಿ ಕಂಪನಿ ಯೋಜಿಸಿತ್ತು. 

ಯೋಜನೆಗಾಗಿ ಬೆಂಗಳೂರಿನಿಂದ ಮೈಸೂರುವರೆಗೆ ಅಗತ್ಯ ಇರುವ 20 ಸಾವಿರ ಎಕರೆಗೂ ಹೆಚ್ಚು ಜಮೀನನ್ನು ನೋಟಿಫೈ ಮಾಡಲಾಯಿತು. ಅದಾದ 20 ವರ್ಷದ ಬಳಿಕವೂ‌ ಬೆಂಗಳೂರಿನ ಹೊರಗೆ ಕಾಮಗಾರಿ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.

ಜಮೀನನ್ನು ಸರ್ಕಾರ ನೋಟಿಫೈ ಮಾಡಿ ರೈತರೊಂದಿಗೆ ಆರಂಭದಲ್ಲಿ ದರ ನಿಗದಿ ಸಂಬಂಧ ಮಾತುಕತೆ ನಡೆಸಿತ್ತು. ಸದ್ಯ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಭೂಸ್ವಾಧೀನವಾಗಿಲ್ಲ.

‘ಗುರುತು ಮಾಡಿದ ಜಮೀನಿನ ಮಾಲೀಕರಿಗೆ ಪರಿಹಾರ ಸಿಕ್ಕಿಲ್ಲ. ನೋಟಿಫೈ ಆಗಿರುವ ಕಾರಣ ರೈತರು ಆ ಜಮೀನಿನಲ್ಲಿ‌ ಕೃಷಿ ಬಿಟ್ಟು ಉಳಿದ ಚಟುವಟಿಕೆ‌ ನಡೆಸಲು ಅವಕಾಶ ಇಲ್ಲ. ಸರ್ಕಾರ ಯೋಜನೆ ಕೈಬಿಟ್ಟಿದ್ದರೆ ಡಿನೋಟಿಫೈ ಮಾಡಿ ರೈತರಿಗೆ ಜಮೀನು ಹಿಂತಿರುಗಿಸಬೇಕು’ ಎನ್ನುತ್ತಾರೆ ರಾಮನಗರದ ರೈತ ಸಿ. ಪುಟ್ಟಸ್ವಾಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು