ಭಾನುವಾರ, ಮಾರ್ಚ್ 7, 2021
30 °C
ನಿರುದ್ಯೋಗ ಸಮಸ್ಯೆಯ ಮುನ್ಸೂಚನೆ ಇತ್ತಾದರೂ, ಅದು ಈ ಮಟ್ಟಿಗೆ ತೀವ್ರ ಸ್ವರೂಪ ಪಡೆಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ

ಕೆಲಸ ಕಳೆದುಹೋಗಿದೆ, ಹುಡುಕಿಕೊಡಿ

ವಿಕಾಸ್ ಆರ್. ಮೌರ್ಯ Updated:

ಅಕ್ಷರ ಗಾತ್ರ : | |

Prajavani

ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್‌ (ಎನ್‌ಎಸ್‌ ಎಸ್‌ಒ) ಒಂದು ವಿಶ್ವಾಸಾರ್ಹ ಸಂಸ್ಥೆ. ಯುಪಿಎಸರ್ಕಾರದ ಅವಧಿಯಲ್ಲಿ ಹಲವು ಚರಿತ್ರಾರ್ಹ ಸಮೀಕ್ಷೆಗಳನ್ನು ಮಾಡಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್‍ ಅವರ ಆಡಳಿತಾವಧಿಯ ನ್ಯೂನತೆಗಳನ್ನು ಬಹಿರಂಗಪಡಿಸಿತ್ತು. ಹಲವು ಸ್ವಾಯತ್ತ ಸಂಸ್ಥೆಗಳು ತಮಗಿದ್ದ ಘನತೆಯನ್ನು ಮಣ್ಣುಪಾಲು ಮಾಡಿಕೊಂಡಿರುವ ಈಕಾಲಘಟ್ಟದಲ್ಲಿಯೂ ಎನ್‌ಎಸ್‌ಎಸ್‌ಒ ತನ್ನ ಹಿರಿಮೆಯನ್ನು ಕಾಯ್ದುಕೊಂಡಿದೆ. ಇಂತಹ ಸಂಸ್ಥೆ, ನೋಟು ರದ್ದತಿಯಾದ ನಂತರ ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಬೆನ್ನು ಹತ್ತಿತ್ತು. ಇದರ ವರದಿ ಬಹಿರಂಗಗೊಳ್ಳಲು ತಡವಾಗುತ್ತಿದೆಯಲ್ಲಾ ಎನಿಸುತ್ತಿದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ದೇಶದಲ್ಲಿರುವುದು ಉದ್ಯೋಗದ ಕೊರತೆ ಯಲ್ಲ, ಬದಲಾಗಿ ಉದ್ಯೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ಕೊರತೆ’ ಎಂದು ಷರಾ ಬರೆದುಬಿಟ್ಟಿದ್ದರು. 

ಈ ಸಂಸ್ಥೆಯ ನಿರುದ್ಯೋಗ ಸಮೀಕ್ಷೆಯ ಅಂಕಿ ಅಂಶಗಳು ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಗೊಳ್ಳಬೇಕಿತ್ತಾದರೂ ಅದು ಆಗಲೇ ಇಲ್ಲ. ಈ ಬೆಳವಣಿಗೆಯು ಸಂಸ್ಥೆ ಮತ್ತು ಸರ್ಕಾರದ ನಡುವಿನ ಆಂತರಿಕ ಘರ್ಷಣೆಯನ್ನು ಬಹಿರಂಗಗೊಳಿಸಿತ್ತು. ಇದರಬೆನ್ನಲ್ಲೇ ಎನ್‌ಎಸ್‌ಎಸ್‌ಒದ ಸ್ವತಂತ್ರ ಸದಸ್ಯರಲ್ಲಿ ಇಬ್ಬರು ರಾಜೀನಾಮೆ ಕೊಟ್ಟು ಹೊರಬಂದರು. ಅವರಲ್ಲಿ ಒಬ್ಬರಾದ ಪಿ.ಸಿ.ಮೋಹನನ್‍ ಅವರು ‘ಡಿಸೆಂಬರ್‌ನಲ್ಲಿ ಬಿಡುಗಡೆಗೊಳ್ಳಬೇಕಿದ್ದ ವರದಿ ಇನ್ನೂ ಬಹಿರಂಗಗೊಳ್ಳದ ಕಾರಣ ರಾಜೀನಾಮೆ ನೀಡಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ಎನ್‌ಎಸ್‌ಎಸ್‌ಒ ವರದಿ ಸೋರಿಕೆಯಾಗಿದೆ. ಯಥಾಪ್ರಕಾರ ಆಡಳಿತ ಮತ್ತು ವಿರೋಧ ಪಕ್ಷಗಳು ವಾದ ವಿವಾದದಲ್ಲಿ ಮುಳುಗಿವೆ. ಆದರೆ, ಈ ವರದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅದರಲ್ಲೂ ಯುವಜನರ ಆಶಾಗೋಪುರವೇ ಕಳಚಿ ಬಿದ್ದಂತಾಗಿದೆ.

ಎನ್‌ಎಸ್‌ಎಸ್‌ಒ ವರದಿಯ ಪ್ರಕಾರ, ಕಳೆದ 45 ವರ್ಷಗಳಲ್ಲಿಯೇ ಮೊದಲ ಬಾರಿಗೆ 2017-18ನೇ ಸಾಲಿನಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1ಕ್ಕೆ ಏರಿದೆ. 2011-12ನೇ ಸಾಲಿನಲ್ಲಿ ಶೇ 2.2ರಷ್ಟಿದ್ದ ನಿರುದ್ಯೋಗ ಪ್ರಮಾಣ 6 ವರ್ಷಗಳಲ್ಲಿ ಶೇ 6.1ಕ್ಕೆ ಏರಿಕೆ ಕಂಡಿರುವುದು ಸವಾಲಾಗಿ ಪರಿಣಮಿಸಿದೆ. ಈ ಅವಧಿಯಲ್ಲಿ ಯುವಜನರು ಹೆಚ್ಚು ಪೆಟ್ಟು ತಿಂದಿದ್ದಾರೆ. ದೇಶದಲ್ಲಿ ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ಉದ್ಯೋಗಗಳು ಕುಸಿದು ಹೋಗಿವೆ. ಜಾಗತಿಕ ಮಟ್ಟದಲ್ಲಿ ನಿರುದ್ಯೋಗದ ಸಮಸ್ಯೆ ತುಸು ನಿವಾರಣೆಯಾಗುವ ಸೂಚನೆ ಗೋಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಉದ್ಯೋಗಗಳು ಮಾಯವಾಗಿರುವುದು ಆಘಾತಕಾರಿ ಸಂಗತಿ.

ಬೃಹತ್ ಜನಸಂಖ್ಯಾ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಸಾಮಾನ್ಯವೆಂದು ಹೇಳಿಬಿಡಬಹುದು. ಆದರೆ, ಇದರ ಮುನ್ಸೂಚನೆ ನಮಗೆ ಮೊದಲೇ ತಿಳಿದಿತ್ತಾದರೂ ಸಮಸ್ಯೆ ಈ ಮಟ್ಟಿಗೆ ತೀವ್ರ ಸ್ವರೂಪ ಪಡೆಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಉತ್ತರಪ್ರದೇಶದ ಸಚಿವಾಲಯದಲ್ಲಿ ಖಾಲಿ ಇದ್ದ 368 ಅಟೆಂಡರ್ ಹುದ್ದೆಗಳಿಗೆ 2 ಲಕ್ಷ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು, 250ಕ್ಕೂ ಹೆಚ್ಚು ಪಿಎಚ್.ಡಿ ಪದವೀಧರರು ಸೇರಿ 15 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದರು. ಇದೇ ರೀತಿಯ ಹಲವು ಪ್ರಕರಣಗಳು ದೇಶದಾದ್ಯಂತ ಬೆಳಕಿಗೆ ಬಂದಿದ್ದವು. ಆಗೆಲ್ಲ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲೇ ಇಲ್ಲ. ಬದಲಾಗಿ, ಕಪ್ಪುಹಣ ಹೊರತರುತ್ತೇವೆಂದು ರಾತ್ರೋರಾತ್ರಿ ನೋಟು ರದ್ದುಗೊಳಿಸಿದ್ದರ ಪರಿಣಾಮವಾಗಿಯೇ ಉದ್ಯೋಗ ಸೃಷ್ಟಿ ನೆಲಕಚ್ಚಿತು ಎನ್ನಲಾಗುತ್ತಿದೆ. ಹೆಚ್ಚಾಗಿ ನಗದು ಬಳಕೆಯಿರುವ ಭಾರತದ ಶೇ 80ರಷ್ಟು ಆರ್ಥಿಕ ವಹಿವಾಟನ್ನು ನಿಯಂತ್ರಿಸುವ ಚರ್ಮಗಾರಿಕೆ, ನೇಕಾರಿಕೆ, ಕಟ್ಟಡ ಕಾಮಗಾರಿಯಂತಹ ಅಸಂಘಟಿತ ಕಾರ್ಮಿಕ ಸೇವಾ ವಲಯ ಪಾತಾಳಕ್ಕೆ ಕುಸಿದುಬಿದ್ದಿತು. ಕಪ್ಪುಹಣ ಬಯಲಿಗೆ ಬರಲಿಲ್ಲ. ಅಮಾನ್ಯಗೊಂಡ ನೋಟುಗಳೆಲ್ಲವೂ ರಾಜಾರೋಷವಾಗಿ ಬ್ಯಾಂಕುಗಳಿಗೆ ಮರಳಿದವು. ದೇಶದಲ್ಲಿ ಕಳೆದ ವರ್ಷ ಸುಮಾರು 1.10 ಕೋಟಿ ಉದ್ಯೋಗಗಳು ಇಲ್ಲವಾಗಿವೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ಈ ವರ್ಷದ ಆರಂಭದಲ್ಲಿ ತನ್ನ ವರದಿಯಲ್ಲಿ ತಿಳಿಸಿತ್ತು. ಸೋರಿಕೆಯಾದ ಉದ್ಯೋಗ ಸಮೀಕ್ಷೆ ವರದಿಯು ಇದನ್ನು ಖಾತರಿಪಡಿಸಿದೆ. ಭಾರತೀಯರನ್ನು ಮತ್ತೆ ‘ಭ್ರಮೆ’ಗೆ ನೂಕುವ ಎಲ್ಲ ಪ್ರಯತ್ನಗಳೂ ಆರಂಭಗೊಂಡಿವೆ. ಇದರ ಮಧ್ಯೆ ಎನ್‌ಎಸ್‌ಎಸ್‌ಒ ವರದಿಯನ್ನು ತಿರಸ್ಕರಿಸುವುದಾಗಿ ಕೇಂದ್ರ ಸಚಿವ ವಿಜಯ್ ಗೋಯಲ್ ಘೋಷಿಸಿದ್ದಾರೆ.

ಸೋರಿಕೆಯಾದ ಅಂಶಗಳನ್ನು ಗಮನಿಸಿದರೆ ಮೇಕ್ ಇನ್ ಇಂಡಿಯಾ, ಮುದ್ರಾ, ಸ್ಟಾರ್ಟ್ ಅಪ್ ಯೋಜನೆಗಳಾವುವೂ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿಲ್ಲ ಎಂಬುದು ತಿಳಿಯುತ್ತದೆ. ಹಾಗಾದರೆ ಉದ್ಯೋಗ ಸೃಷ್ಟಿಯ ಭರವಸೆಗಳೆಲ್ಲ ಏನಾದವು? ಬರೀ ಭಾಷಣಗಳಿಂದ ದೇಶ ಕಟ್ಟಲಾಗದು ಎಂಬ ಸಂಗತಿಯನ್ನು ಇನ್ನಾದರೂ ನಮ್ಮ ರಾಜಕೀಯ ನಾಯಕರು ತಿಳಿದುಕೊಳ್ಳಬೇಕಿದೆ. ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಿ, ಭಾವನಾತ್ಮಕ ಅಂಶಗಳನ್ನು ಪಕ್ಕಕ್ಕಿಟ್ಟು ದೇಶವನ್ನು ಮುನ್ನಡೆಸಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು