ಸಿಂಹಬಾಲದ ಸಿಂಗಳಿಕವೊಂದು ನಾವು ಬೈಕ್ ನಿಲ್ಲಿಸಿದ ಜಾಗಕ್ಕೆ ಬಂತು. ನಮ್ಮ ಬ್ಯಾಗ್ ನೋಡುತ್ತ ಹತ್ತಿರ ಬಂದ ಅದರ ಕಣ್ಣುಗಳಲ್ಲಿ ನಾವು ನೀಡಬಹುದಾದ ಆಹಾರದ ಬಗ್ಗೆ ನಿರೀಕ್ಷೆಯಿತ್ತು. ಹೀಗೆ ಆಹಾರದ ನಿರೀಕ್ಷೆಯಲ್ಲಿ ಸಿಂಗಳೀಕಗಳು ಪ್ರವಾಸಿಗರನ್ನು ಎಡತಾಕುವುದು ಆಗುಂಬೆಯಲ್ಲಿನ ಸಹಜ ದೃಶ್ಯವಾಗಿದೆ. ಆ ಸಿಂಗಳೀಕದ ಕಣ್ಣುಗಳಲ್ಲಿನ ನಿರೀಕ್ಷೆಯನ್ನು ನೋಡಿದಾಗ ಸಂಕಟವಾಯಿತು. ಅಲ್ಲಿಗೆ ಬರುವ ಪ್ರವಾಸಿಗರು ಸಂಸ್ಕರಿತ ತಿಂಡಿಗಳನ್ನು ಕೊಟ್ಟು ಅವುಗಳ ಸಹಜ ಆಹಾರ ಸಂಸ್ಕೃತಿಯನ್ನೇ ನಾಶ ಮಾಡಿದ್ದಾರೆ. ಅಸಹಜ ರುಚಿಯ ವ್ಯಸನದಿಂದ ಸಿಂಗಳೀಕಗಳು ರಸ್ತೆಗೆ ಬರುವಂತೆ ಮಾಡಿದ್ದಾರೆ.

ಪ್ರವಾಸಿಗರು ಕೊಡುವ ಚಿಪ್ಸ್, ಕೋಲಾ, ಮೊದಲಾದ ಅಪಾಯಕಾರಿ ತಿನಿಸು ಪಾನೀಯಗಳ ರುಚಿಗೆ ಸಿಂಗಳೀಕಗಳು ಮಾರುಹೋಗಿವೆ. ಕಾಡುಪ್ರಾಣಿಗಳಿಗೆ ಆಹಾರ ಕೊಟ್ಟು ಒಳ್ಳೆಯ ಕೆಲಸ ಮಾಡಿದೆವು ಎನ್ನುವ ಭಾವ ಪ್ರವಾಸಿಗರದು. ಕಾಡುಪ್ರಾಣಿಗಳ ಸಹಜ ಆಹಾರಪದ್ಧತಿಯನ್ನು ಬದಲಾಯಿಸಿ, ಅವುಗಳ ದೇಹಕ್ಕೆ ಮಾರಕವಾಗಿರುವ ತಿನಿಸುಗಳನ್ನು ಕೊಟ್ಟು, ಅವುಗಳ ಜೈವಿಕಕ್ರಿಯೆಯನ್ನೇ ನಾಶ ಮಾಡುತ್ತಿದ್ದೇವೆ ಎನ್ನುವ ವಿವೇಕ ಹೆಚ್ಚಿನ ಜನರಿಗಿಲ್ಲ.

ಸಿಂಗಳೀಕಳಿಗೆ ಆಹಾರ ಕೊಡುವುದು ಅಪರಾಧ ಎಂದು ಅರಣ್ಯ ಇಲಾಖೆ ಒಂದಷ್ಟು ದಿನ ಅಭಿಯಾನ ನಡೆಸಿತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಆ ಅಭಿಯಾನ ಫಲಪ್ರದವಾಗಲಿಲ್ಲ. ಕೃತಕ ಆಹಾರ ಪೊಟ್ಟಣಗಳನ್ನು ಮಂಗ, ಸಿಂಗಳೀಕಗಳಿಗೆ ಕೊಡುವ ಪ್ರವಾಸಿಗರು ಜಾಸ್ತಿಯೇ ಆದರು.

ಮನುಷ್ಯ ಕೆಲವೊಂದು ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದೆ ಪರಿಸರವನ್ನೂ, ಜೀವಜಗತ್ತಿನ ಸುಂದರ ಭವಿಷ್ಯವನ್ನು ಹೇಗೆಲ್ಲಾ ಹಾಳುಮಾಡುತ್ತಿದ್ದಾನೆ ಎಂದು ಯೋಚಿಸಿದರೆ ಭಯಆಗುತ್ತದೆ. ಆಗುಂಬೆಯ ಸಿಂಗಳೀಕಗಳಂತಹ ಅತ್ಯಪರೂಪದ ಜೀವಿಗಳು ಮನುಷ್ಯಲೋಕದತ್ತ ಯಾಕೆ ಬರುತ್ತಿವೆ ಎನ್ನುವ
ಪ್ರಶ್ನೆಗೆ, ಆಗುಂಬೆಯ ಕಾಡುಗಳು ಒಳಗೊಳಗೆ ತೆಳುವಾಗುತ್ತಿವೆ ಎನ್ನುವುದೇ ಉತ್ತರ. ದಕ್ಷಿಣದ ಚಿರಾಪುಂಜಿ ಎನ್ನುವ ಖ್ಯಾತಿಯನ್ನು ಆಗುಂಬೆ ಹೊಂದಿದ್ದರೂ, ಆಗುಂಬೆಯ ಮಡಿಲಿನಲ್ಲೇ ಕಾಳಿಂಗ ಸರ್ಪದ ಸಂರಕ್ಷಣೆಯ, ಪರಿಸರಸಂರಕ್ಷಣೆಯ, ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಹಲವು ಅವ್ಯಾಹತ ಚಟುವಟಿಕೆಗಳು ಈ ಕಾನನಜೀವಿಗಳ ಬದುಕನ್ನೇ ಕಸಿದುಕೊಳ್ಳುತ್ತಿವೆ. ಅವುಗಳ ಆವಾಸಸ್ಥಾನ ದಿನೇ ದಿನೇ ಕುಗ್ಗುತ್ತಿದೆ. ಬೇರೆ ದಾರಿಯೇ ಕಾಣದೇ ರಸ್ತೆಗೆ ಬಂದು ಆಹಾರ ಹುಡುಕುವ ಸ್ಥಿತಿ ಕಾಡುಜೀವಿಗಳಿಗೆ ಬಂದಿದೆ.

ಆಗುಂಬೆ ಪರಿಸರ ಒಳಗೊಳಗೇ ಬದಲಾಗುತ್ತಿರುವಾಗ ‘ಆಗುಂಬೆಗೆ ಸುರಂಗ ಮಾರ್ಗ’ ಬೇಕು ಎನ್ನುವ ಅಸೂಕ್ಷ್ಮ ಬೇಡಿಕೆಯೊಂದನ್ನು ಅಲ್ಲಿನ ಜನಪ್ರತಿನಿಧಿಗಳು ಸೃಷ್ಟಿಸಿದ್ದಾರೆ. ದ್ವಿಪಥ ಸುರಂಗಮಾರ್ಗ, ದ್ವಿಪಥ ಹೆದ್ದಾರಿ ನಿರ್ಮಿಸಲು ಇದೀಗ ಕೇಂದ್ರ ಸರ್ಕಾರ ಡಿಪಿಆರ್ ಹೊರಡಿಸಲು ಮುಂದಾಗಿದೆ. ಇದು, ಆಗುಂಬೆಯ ಮಳೆಕಾಡು ಭವಿಷ್ಯದಲ್ಲಿ ಸ್ಮಶಾನವಾಗುವ ಕೆಟ್ಟ ಕನಸಿನ ಸೂಚನೆಯಂತಿದೆ.

ಆಗುಂಬೆ ಮಳೆಕಾಡು ಅಂತಿಂಥ ಕಾಡಲ್ಲ. ಯುನೆಸ್ಕೊ ಘೋಷಿಸಿದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಅತ್ಯಂತ ಸೂಕ್ಷ್ಮವಾದ ಕಾಡಿದು. ಇಲ್ಲಿನ ದಟ್ಟಕಾಡುಗಳು ಅರಬ್ಬಿ ಸಮುದ್ರದಿಂದ ಬೀಸುವ ನೈರುತ್ಯ ಮಾರುತಗಳನ್ನು ತಡೆದು ಸಮೃದ್ಧ ಮಳೆ ಸುರಿಸುತ್ತವೆ. ಕರಾವಳಿಗೂ, ಮಲೆನಾಡಿಗೂ ಉಸಿರು ನೀಡುವ ಇಲ್ಲಿನ ಅಪೂರ್ವ ಮಳೆಕಾಡುಗಳಿಂದಲೇ ಕರಾವಳಿಯ ನದಿ ತೊರೆಗಳು ಜೀವಂತವಾಗಿವೆ. ಇಲ್ಲಿ ಎಷ್ಟೋ ಅನಾಮಧೇಯ ನೀರಧಾರೆಗಳಿವೆ, ಅದ್ಭುತ ಜಲಪಾತಗಳಿವೆ. ಮಣ್ಣನ್ನು ರಕ್ಷಿಸಿ ಫಲವತ್ತತೆ ಹೆಚ್ಚಿಸುವ ಹುಲ್ಲು, ಬೇರು ಬಿಳಲುಗಳ ವಿಶಾಲ ಜಾಲವಿದೆ. ಅಪರೂಪದ ಕಾಳಿಂಗ ಸರ್ಪ, ಪಕ್ಷಿ, ಸಸ್ಯಪ್ರಭೇದ, ಕೀಟ ಪ್ರಭೇದಗಳ ತವರುಮನೆ ಆಗುಂಬೆ. ಇಲ್ಲಿನ ಗುಂಡುಕಲ್ಲುಗಳು ಆಳದಲ್ಲಿ ನೀರಿನ ಒರತೆಯನ್ನು, ಬೇರು ಬಿಳಲುಗಳ ಜಾಲವನ್ನು ಹಿಡಿದಿಟ್ಟುಕೊಂಡು ಇಡೀ ಮಳೆಕಾಡಿಗೆ ಕೋಟೆಯಂತೆ ರಕ್ಷಣೆ ನೀಡುತ್ತಿವೆ. ಇಂತಹ ಜೀವಜಗತ್ತು ಸುರಂಗ ಮಾರ್ಗ ಯೋಜನೆ ಜಾರಿ ಆದರೆ ಬಸವಳಿದು, ಬರಡಾಗಿ ಹೋದೀತು.

ಈಗಾಗಲೇ ಪ್ರತೀ ವರ್ಷದ ಮಳೆಗೆ ಇಲ್ಲಿ ಸಣ್ಣ ಪುಟ್ಟ ಭೂಕುಸಿತಗಳು ಸಂಭವಿಸುತ್ತಿವೆ. ಇಲ್ಲಿನ ಮಣ್ಣಿಗೆ, ಭೂಮಿಗೆ ಪುಟ್ಟಗಾಯವಾದರೂ ಕಾಡುಗಳ ನರ ನಾಡಿಗೆ ದೊಡ್ಡ ಹೊಡೆತ ಅದು. ಹೀಗಿರುವಾಗ ಸುರಂಗ ಮಾರ್ಗದಿಂದ ಆಗುಂಬೆ ಅಭಿವೃದ್ಧಿಯತ್ತ ಅಲ್ಲ, ಇನ್ನಷ್ಟು ವಿನಾಶದತ್ತ ಸಾಗಲಿದೆ.

ಸುರಂಗ ನಿರ್ಮಾಣದಂತಹ ಚಟುವಟಿಕೆಗಳು ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತವೆ. ಪಶ್ಚಿಮ ಘಟ್ಟವಿರುವ ರೈಲು ಮಾರ್ಗಗಳಲ್ಲಿ ಹೆಚ್ಚಿನ ಭೂಕುಸಿತ, ದುರಂತಗಳಾಗುತ್ತಿರುವ ಕುರಿತು, ಅಲ್ಲಿನ ಮೇಲ್ಮೈಗೆ ಹಾನಿಆಗದಂತೆ ಎಚ್ಚರವಹಿಸುವ ಕುರಿತು ಭೂಕುಸಿತ ಅಧ್ಯಯನ
ಸಮಿತಿ ರಾಜ್ಯ ಸರ್ಕಾರದ ಗಮನಸೆಳೆದಿದ್ದರೂ, ಪಶ್ಚಿಮಘಟ್ಟಕ್ಕೆ ಹಾನಿಮಾಡುವ ಯೋಜನೆಗಳ ಜಾರಿಗೆ ಸರ್ಕಾರಗಳೇ ಮುಂದಾಗುತ್ತಿರುವುದು ಆಘಾತಕಾರಿ.

ಆಗುಂಬೆಯ ಕಾಡುಗಳು ನಮಗೆ ಜಾಗತಿಕ ಹೆಮ್ಮೆಯಾಗಿ, ಸಾವಿರಾರು ಜನರ ಧಾರ್ಮಿಕ ಭಾವನೆಗಳ ನಂಬಿಕೆಯಾಗಿ, ನಾಳೆಗಳಿಗೆ ಭರವಸೆಯಾಗಿ ನಿಂತಿವೆ. ಇಲ್ಲಿನ ಸಮೃದ್ಧ ಮರಗಳು ಇನ್ನೇನು ಚೈತ್ರ ಮಾಸಕ್ಕೆ ಹೊಸ ಎಲೆಗಳನ್ನು ತೊಟ್ಟುಕೊಂಡು ಚಿಗುರೊಡೆಯುತ್ತಿರುವಾಗಲೇ ಸುರಂಗ ಮಾರ್ಗದ ಯೋಜನೆಯ ಸಿದ್ಧತೆ ನಡೆದಿದೆ. ಚಿಗುರು ಎಲೆಗಳಂತೆ ಹೊಸ ತಲೆಮಾರು ಕೂಡ ಹುಟ್ಟುತ್ತಿದೆ. ಇಂತಹ ಚಿಗುರುಗಳನ್ನೇ ಪರಿಸರದ ಸಖ್ಯದಿಂದ ದೂರ ಮಾಡುವ ಈ ಯೋಜನೆ ಯಾಕೆ ಬೇಕು?

ಹಸುರಿನ ಗಿರಿಗಳ ಸಾಲೇ... ನಿನ್ನಯ ಕೊರಳಿನ ಮಾಲೆ…ಇಷ್ಟು ವರ್ಷ ಹಾಡಿದ, ಈಗಲೂ ಹಾಡುತ್ತಿರುವ ಕುವೆಂಪು ವಿರಚಿತ ನಾಡಗೀತೆಯ ಸಾಲುಗಳನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರೆ, ಹಸಿರಿನ ಗಿರಿಗಳ ಸಾಲುಗಲ್ಲಿರುವ ಆಗುಂಬೆಯನ್ನು ಉಳಿಸಲೇಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.