ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಿಶ್ವ ಏಡ್ಸ್‌ ದಿನ : ಔಷಧಿ ಕೊರತೆಯ ಸಂಕಷ್ಟ

2030ಕ್ಕೆ ಏಡ್ಸ್ ಮಾರಿಯನ್ನು ಕೊನೆಗಾಣಿಸುವ ಮಹತ್ವಾಕಾಂಕ್ಷೆ ಯೋಜನೆಯ ಆಶಯ ಈಡೇರಿಕೆಗೆ ಬೇಕಿದೆ ಬದ್ಧತೆ
Last Updated 1 ಡಿಸೆಂಬರ್ 2022, 9:18 IST
ಅಕ್ಷರ ಗಾತ್ರ

ನವದೆಹಲಿಯ ನ್ಯಾಕೊ ಕಚೇರಿಯ (ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಷನ್‌) ಮುಂದೆ ಎಚ್ಐವಿ ಪೀಡಿತ ಐವತ್ತಕ್ಕೂ ಹೆಚ್ಚು ರೋಗಿಗಳು ಜುಲೈ ತಿಂಗಳಿಡೀ ಪ್ರತಿಭಟನೆ ನಡೆಸಿದರು. ತಾವು ಎದುರಿಸು ತ್ತಿರುವ ಗಂಭೀರ ರೋಗದ ನಿಯಂತ್ರಣಕ್ಕೆ ಅತ್ಯಗತ್ಯ ವಾಗಿ ಬೇಕಾದ ಔಷಧಿಗಳು ಸಿಗದಿದ್ದರಿಂದ ಅವರೆಲ್ಲ ಪ್ರತಿಭಟನೆಗಿಳಿದಿದ್ದರು. ಆಸ್ಪತ್ರೆಯಲ್ಲಿ ಅಸುನೀಗಿದ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ಔಷಧಿಗಳನ್ನು ಕಸದ ರಾಶಿಯಲ್ಲಿ ಹಾಕಿದ್ದನ್ನು ಗಮನಿಸಿ, ಅಲ್ಲಿಂದಲೇ ಹೆಕ್ಕಿಕೊಂಡು ಬಂದು ತನ್ನ ಚಿಕಿತ್ಸೆ ಮುಂದುವರಿಸಿಕೊಂಡಿದ್ದ ದೆಹಲಿ ಮೂಲದ ಜಯಪ್ರಕಾಶ್ ಎಂಬಾತ, ‘ಆರು ತಿಂಗಳಿನಿಂದ ನಮಗೆ ಬೇಕಾದ ಯಾವ ಔಷಧವೂ ಸಿಗುತ್ತಿಲ್ಲ’ ಎಂದು ದುಃಖಿಸಿದ.

ನಮ್ಮಲ್ಲಿರುವ 23 ಲಕ್ಷ ಎಚ್‍ಐವಿ ಪೀಡಿತರಿಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಚೇರಿಯಿಂದ ನೀಡುವ ಉಚಿತ ಔಷಧಿ ಕೆಲವು ತಿಂಗಳುಗಳಿಂದ ಸಿಗುತ್ತಿಲ್ಲ. ಕಾರಣ ಔಷಧಿಯ ದಾಸ್ತಾನು ಇಲ್ಲದಿರುವುದು. ಏಡ್ಸ್ ಕಾಯಿಲೆಯನ್ನು ವಾಸಿ ಮಾಡುವ, ಬರದಂತೆ ತಡೆಯುವ ಲಸಿಕೆಯಾಗಲೀ ಔಷಧಿಯಾಗಲೀ ಇಲ್ಲ. ವೈರಾಣು ಹಬ್ಬಿಸುವ ಸೋಂಕನ್ನು ನಿಯಂತ್ರಣದಲ್ಲಿ ಇಡುವ ಔಷಧಿ ಮಾತ್ರ ಇದೆ. ವಿಶ್ವದಾದ್ಯಂತ 4 ಕೋಟಿ ಎಚ್‍ಐವಿ ಪೀಡಿತರಿದ್ದಾರೆ. ರೋಗ ನಿಯಂತ್ರಣಕ್ಕೆ ವೈದ್ಯರು ನೀಡುವ ಔಷಧಿಗಳ ಮಿಶ್ರಣವನ್ನು ಎಆರ್‌ಟಿ (ಆ್ಯಂಟಿ ರಿಟ್ರೋ ವೈರಲ್ ಥೆರಪಿ) ಎನ್ನುತ್ತಾರೆ.

ಏಡ್ಸ್ ಬಾಧಿತರಿಗೆ ಕೇಂದ್ರ ಸರ್ಕಾರವು 2004ರಿಂದ ಉಚಿತ ಔಷಧಿ ನೀಡುತ್ತಿದೆ. ಏಡ್ಸ್ ನಿಯಂತ್ರಣಕ್ಕೆ ಅಬಕವಿರ್ (abacavir), ಲಮಿವುಡಿನ್ (lamivudine) ಮತ್ತು ಡೌಲುಟೆಗ್ರವಿರ್(doultegravir) ಎಂಬ ಮೂರು ಔಷಧಿಗಳಿವೆ. ಅವುಗಳಲ್ಲಿ ಮೂರನೆಯದು ತುಂಬಾ ಪರಿಣಾಮಕಾರಿ. ಇದು ಹಿಂದಿನ ವರ್ಷದ ನವೆಂಬರ್‌ನಿಂದಲೂ ರೋಗಿಗಳಿಗೆ ದೊರಕುತ್ತಿಲ್ಲ ಎಂಬ ದೂರುಗಳಿವೆ.

‘ನ್ಯಾಕೊ’ ಅಡಿಯಲ್ಲಿ ಕೆಲಸ ಮಾಡುವ 680 ಎಆರ್‌ಟಿ ಕೇಂದ್ರಗಳು ದೇಶದಲ್ಲಿವೆ. ಇವು 14 ಲಕ್ಷ ಎಚ್‍ಐವಿ ಪೀಡಿತರಿಗೆ ಉಚಿತ ಔಷಧಿ ನೀಡುತ್ತವೆ. ಎಆರ್‌ಟಿಗಳು ತೀರಾ ಇತ್ತೀಚಿನವರೆಗೂ ಎರಡು ತಿಂಗಳಿಗಾಗುವಷ್ಟು ಔಷಧಿಗಳನ್ನು ರೋಗಿಗಳಿಗೆ ನೀಡುತ್ತಿದ್ದವು. ಇತ್ತೀಚೆಗೆ ಒಂದು ವಾರಕ್ಕಾಗುವಷ್ಟು ಔಷಧಿಯೂ ಸಿಗುತ್ತಿಲ್ಲ ಮತ್ತು ಕೆಲವು ಕಡೆ ಮಕ್ಕಳಿಗೆ ನೀಡುವ ಔಷಧಿಗಳನ್ನೇ ವಯಸ್ಕರಿಗೆ ನೀಡಿದ್ದಾರೆ ಎಂಬುದು ಜಯಪ್ರಕಾಶ್ ಮತ್ತು ಸಂಗಡಿಗರ ದೂರು.

ಏಡ್ಸ್ ರೋಗಿಗಳ ಕ್ಷೇಮಕ್ಕಾಗಿ ದುಡಿಯುತ್ತಿರುವ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಔಷಧಿಯ ಕೊರತೆಯು ರೋಗಿಗಳನ್ನು ತೀವ್ರವಾಗಿ ಬಾಧಿಸುತ್ತಿದೆ ಎಂಬುದನ್ನು ದೃಢಪಡಿಸಿವೆ. ಆದರೆ ಕೇಂದ್ರ ಆರೋಗ್ಯ ಇಲಾಖೆ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ‘ಸ್ಯಾಕ್ಸ್’ (SACS – State Aids Control Societies) ರೋಗಿಗಳ ಮಾತನ್ನು ಸಾರಾಸಗಟಾಗಿ ನಿರಾಕರಿಸಿ, ಅಂಥ ಕೊರತೆ ಏನೂ ಇಲ್ಲ ಎಂದಿವೆ.

ಏಡ್ಸ್ ನಿಯಂತ್ರಣ ಔಷಧಿಯ ಕೊರತೆ ಇದೇ ಮೊದಲೇನಲ್ಲ. 2014 ಮತ್ತು 2017-18ರಲ್ಲೂ ಹೀಗೇ ಆಗಿತ್ತು. ಆಗ ಏಡ್ಸ್ ನಿಯಂತ್ರಿಸುವ ಔಷಧ ತಯಾರಿಸುವ ಕಂಪನಿಗಳಿಗೆ ಗುತ್ತಿಗೆ ನೀಡುವುದು ತಡವಾಗಿತ್ತು. ಈಗಲೂ ಹಾಗೆಯೇ ಆಗಿರಬಹುದು ಎಂಬುದು ಎಚ್‍ಐವಿ ಪೀಡಿತರ ಪರವಾಗಿ ಕೆಲಸ ಮಾಡುತ್ತಿರುವ ವಕೀಲೆ ಲೀನಾ ಮಹಗನಿ ಅವರ ಅಭಿಪ್ರಾಯ.

ಹಿಂದಿನ ಡಿಸೆಂಬರ್‌ನಲ್ಲಿ ಕರೆದ ಟೆಂಡರ್ ಪ್ರಕ್ರಿಯೆ ಜನವರಿ ತಿಂಗಳಲ್ಲಿ ರದ್ದಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಕರೆದಿದ್ದ ಟೆಂಡರ್ ಪ್ರಕ್ರಿಯೆ ಶುರುವಾಗಿತ್ತಾದರೂ ಇದುವರೆಗೂ ಯಾವ ಕಂಪನಿಗೂ ಕೆಲಸದ ಪರವಾನಗಿ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಹೀಗಾದಲ್ಲಿ ಔಷಧಿಯು ಎಆರ್‌ಟಿಗಳನ್ನು ತಲುಪಿ ಅಲ್ಲಿಂದ ಜನರಿಗೆ ತಲುಪುವುದು ಇನ್ನೂ ತಡವಾಗುತ್ತದೆ. ಅಲ್ಲಿಗೆ ರೋಗಿಗಳಿಗೆ ಮತ್ತಷ್ಟು ತೊಂದರೆಯಾಗಿರುತ್ತದೆ.

ಮೇ 30ರಂದು ‘ನ್ಯಾಕೊ’ದ ಡೆಪ್ಯುಟಿ ಡೈರೆಕ್ಟರ್ ಜನರಲ್ ಅನೂಪ್‍ಕುಮಾರ್ ಪುರಿ ಅವರು ರಾಜ್ಯಗಳಿಗೆ ಪತ್ರ ಬರೆದು, ‘ಈಗಿನ ಬಿಕ್ಕಟ್ಟನ್ನು ಎದುರಿಸಲು ಸದ್ಯಕ್ಕೆ ನೀವೆಲ್ಲ ಪರ್ಯಾಯ ಚಿಕಿತ್ಸಾ ಪದ್ಧತಿಗೆ ಬದಲಾಗಿ’ ಎಂದು ತಿಳಿಸಿದ್ದರು. ‘ನಿಮ್ಮ ಔಷಧಿಯನ್ನು ನೀವೇ ಸಂಪಾದಿಸಿಕೊಳ್ಳಿ ಎಂದು ನ್ಯಾಕೊ ಹೇಳಿದ್ದರಿಂದ ನಾವು ಬೇರೆ ರಾಜ್ಯಗಳಿಂದ ಡೊನೇಷನ್ ರೂಪದಲ್ಲಿ ತರಿಸಿಕೊಂಡೆವು’ ಎಂದಿರುವ ಮಹಾರಾಷ್ಟ್ರ ಮತ್ತು ಮಣಿಪುರದ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಅಧಿಕಾರಿಗಳು, ವಯಸ್ಕರ ಔಷಧಿಗಳನ್ನು ಮಕ್ಕಳಿಗೆ ನೀಡಿದ್ದೂ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಸೆಪ್ಟೆಂಬರ್ ವೇಳೆಗೆ ಹೊಸ ಸ್ಟಾಕ್ ಕಳಿಸುತ್ತೇವೆ ಎಂದು ನ್ಯಾಕೊ ಹೇಳಿತ್ತು. ಅದರಂತೆ ನಡೆದುಕೊಂಡ ನ್ಯಾಕೊ, ಒಂದು ತಿಂಗಳ ಅವಧಿಗೆ ಔಷಧಿ ನೀಡಿ ರೋಗಿಗಳನ್ನು ಸಮಾಧಾನಪಡಿಸಿದೆ.

ಈಗ ಸ್ವಲ್ಪ ಎಚ್ಚರ ತಪ್ಪಿದರೂ ನಾವು ಏಡ್ಸ್ ನಿಯಂತ್ರಣಕ್ಕೆ ಮಾಡಿರುವ ಇದುವರೆಗಿನ ಕಠಿಣ ಶ್ರಮ ಮಣ್ಣುಪಾಲಾಗುತ್ತದೆ ಎಂದಿರುವ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷೆ ಪ್ರೀತಿ ಕುಮಾರ್, 2030ಕ್ಕೆ ಏಡ್ಸ್ ಮಾರಿಯನ್ನು ಕೊನೆಗಾಣಿಸುವ ನಮ್ಮ ಮಹತ್ವಾಕಾಂಕ್ಷೆ ಯೋಜನೆ ಹಳ್ಳ ಹಿಡಿಯದಿರಲಿ ಎಂಬ ಆಶಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT