7
ಏರ್‌ ಇಂಡಿಯಾ ಸಂಸ್ಥೆ ಮೇಲಿನ ಸಂಪೂರ್ಣ ನಿಯಂತ್ರಣ ಬಿಟ್ಟುಕೊಟ್ಟರೆ ಮಾತ್ರ ಷೇರುವಿಕ್ರಯ ಪ್ರಯತ್ನ ಯಶ ಕಂಡೀತು

ಸಂಪೂರ್ಣ ಮಾರಾಟವೇ ಜಾಣ ನಿರ್ಧಾರ

Published:
Updated:

ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ ಮಾರಾಟ ಮುಂದೂಡುವ ಕೇಂದ್ರಸರ್ಕಾರದ ನಿರ್ಧಾರವು ಅಚ್ಚರಿ ಮೂಡಿಸಿದೆ. ಭಾರಿ ನಷ್ಟದಲ್ಲಿ ನಡೆದಿರುವ ಸಂಸ್ಥೆಯನ್ನು ಮಾರಾಟ ಮಾಡುವ ಪ್ರಸ್ತಾವ ಒಪ್ಪಿಕೊಂಡು ಖರೀದಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ. ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಹೊಸಪ್ರಸ್ತಾವಗಳೊಂದಿಗೆ ಏರ್‌ ಇಂಡಿಯಾದ ಸಂಪೂರ್ಣ ಖಾಸಗೀಕರಣದ ಇನ್ನೊಂದು ಪ್ರಯತ್ನಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈ ವರ್ಷದ ಡಿಸೆಂಬರ್‌ ಅಂತ್ಯದ ವೇಳೆಗೆ ಷೇರುವಿಕ್ರಯ ಪ್ರಕ್ರಿಯೆ ಪೂರ್ಣಗೊಳಿಸಲು ಬದ್ಧವಾಗಿರುವುದಾಗಿಯೂ ಸರ್ಕಾರ ಹೇಳಿದೆ. 

ವಸ್ತುಸ್ಥಿತಿ ಪ್ರತಿಕೂಲ ಆಗಿದ್ದಾಗಲೂ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರದಿರುವುದನ್ನು ಅರ್ಥೈಸಿಕೊಳ್ಳುವುದೇ ಕಷ್ಟ. ಏರ್‌ ಇಂಡಿಯಾ, ₹ 50 ಸಾವಿರ ಕೋಟಿಗಳಷ್ಟು ದೊಡ್ಡ ಮೊತ್ತದ ಸಾಲದ ಸುಳಿಗೆ ಸಿಲುಕಿದೆ. ವಿಶ್ವದಾದ್ಯಂತ ಇರುವ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ, ಏರ್‌ ಇಂಡಿಯಾ ಗಾತ್ರಕ್ಕೆ ಗರಿಷ್ಠ ಮಟ್ಟದಲ್ಲಿ ಇರುವ ಸಿಬ್ಬಂದಿಯ ಸಂಖ್ಯೆಯೇ ದೊಡ್ಡ ಹೊರೆಯಾಗಿದೆ.

ಸಂಸ್ಥೆಯ ವರ್ಚಸ್ಸು ಮಂಕಾಗಿರುವುದಕ್ಕೆ ಮತ್ತು ಲಾಭದಾಯಕವಲ್ಲದ ವಿಮಾನ ಸೇವೆಗೆ ವೃತ್ತಿಪರತೆ ಮೈಗೂಡಿಸಿಕೊಳ್ಳದ ಆಡಳಿತ ಮಂಡಳಿಯ ವೈಫಲ್ಯದ ಕೊಡುಗೆಯೂ ಇದೆ. ಏರ್ ಇಂಡಿಯಾ ಸಂಸ್ಥೆಯನ್ನು ಈಗಿರುವ ಸ್ವರೂಪದಲ್ಲಿ ಉಳಿಸಿಕೊಳ್ಳುವುದು ಖಂಡಿತವಾಗಿಯೂ ಜಾಣ ನಿರ್ಧಾರವಲ್ಲ. ಹೀಗಾಗಿ ಸಂಸ್ಥೆಯ ಮಾಲೀಕತ್ವದಿಂದ ಸರ್ಕಾರವು ಸಂಪೂರ್ಣವಾಗಿ ಹೊರ ಬರುವುದೇ ಅದರ ಮುಂದೆ ಇರುವ ಏಕೈಕ ಆಯ್ಕೆಯಾಗಿದೆ. ಇದನ್ನು ವಿಳಂಬ ಮಾಡದೇ ಕಾರ್ಯಗತಗೊಳಿಸಬೇಕಾಗಿದೆ. 

ಏರ್‌ ಇಂಡಿಯಾ ಖಾಸಗೀಕರಣ ಯತ್ನಕ್ಕೆ ಗೆಲುವು ಸಿಗದಿದ್ದಾಗ ನಷ್ಟಕ್ಕೆ ಕಡಿವಾಣ ವಿಧಿಸಿ ಸಂಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಬೇಕಾಗುತ್ತದೆ. ಸರ್ಕಾರ ವಿವೇಚನೆಯಿಂದ ವರ್ತಿಸಿ, ಸದ್ಯದ ಸಂದರ್ಭದಲ್ಲಿನ ಚೌಕಾಸಿ ವಹಿವಾಟಿನಲ್ಲಿ ಲಭಿಸುವ ಸೀಮಿತ ಲಾಭಕ್ಕೆ ತೃಪ್ತಿಪಡಬೇಕಾಗಿದೆ. ವಹಿವಾಟು ಸಂಪೂರ್ಣವಾಗಿ ನಷ್ಟದಲ್ಲಿ ನಡೆಯುತ್ತಿದ್ದಾಗ, ಲಾಭದ ಹಾದಿಗೆ ಮರಳುವ ಬೆಳಕಿನ ಆಶಾಕಿರಣ ಕಾಣದೇ ಹೋದಾಗ ಮಾರಾಟ ಮಾಡುವ ಅನಿವಾರ್ಯ ಉದ್ಭವಿಸಿರುತ್ತದೆ.

ಕೇಂದ್ರ ಸರ್ಕಾರಕ್ಕೆ ಅದರದ್ದೇ ಆದ ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿಗಳಿವೆ. ಮಾರಾಟಕ್ಕೆ ಇರುವ ಯಾವುದೇ ಉದ್ದಿಮೆಗೆ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಮೊತ್ತ ನಿಗದಿಯಾಗಿರುತ್ತದೆ. ಈ ಮೊತ್ತವು ಯಾವತ್ತೂ ಉದ್ಯಮದ ಮಾಲೀಕರ ನಿರೀಕ್ಷೆಯಂತೆ ಇರುವುದಿಲ್ಲ. ಏರ್‌ ಇಂಡಿಯಾ ಮಾರಾಟದ ವಿಷಯದಲ್ಲಿ ಕೇಂದ್ರ ಸರ್ಕಾರವು ಮಾಲೀಕನಾಗಿದ್ದು ಅದು ಅಪೇಕ್ಷೆಪಟ್ಟ ಬೆಲೆಗೆ ಖರೀದಿಸಲು ಯಾರೊಬ್ಬರೂ ಮುಂದಾಗದಿರುವುದರಲ್ಲಿ ಅಸಹಜತೆ ಏನೂ ಕಾಣುವುದಿಲ್ಲ.

ಸರ್ಕಾರವು ಏರ್ ಇಂಡಿಯಾ ಸಂಸ್ಥೆಯ ಮಾರಾಟದ ಜತೆಗೆ, ಅದರ ಎಂಜಿನಿಯರಿಂಗ್‌ ವಿಭಾಗ, ವಿಮಾನ ಸೇವೆಗೆ ಪೂರಕವಾದ ವಿಮಾನ ನಿಲ್ದಾಣದಲ್ಲಿನ ಇತರ ನಿರ್ವಹಣಾ ವಿಭಾಗಗಳನ್ನು ಮುಕ್ತ ಹರಾಜಿನಲ್ಲಿ ಸೇರಿಸುವ ಮತ್ತು ಗರಿಷ್ಠ ಮೊತ್ತ ಸೂಚಿಸುವವರಿಗೆ ಮಾರಾಟ ಮಾಡಲು ಮನಸ್ಸು ಮಾಡಬೇಕಾಗಿದೆ. ಸರ್ಕಾರವು ತನ್ನ ವಶದಲ್ಲಿ ಇರುವ ಏರ್‌ ಇಂಡಿಯಾದ ಎಲ್ಲ ಸ್ವತ್ತುಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಇದನ್ನು ಬದಿಗಿಟ್ಟು, ಸಂಸ್ಥೆಯಲ್ಲಿ ತನ್ನ ಕೆಲ ಪಾಲು ಬಂಡವಾಳ ಉಳಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ.

ಸಂಸ್ಥೆಯ ಸಾಲದ ಹೊರೆಯನ್ನು ತಾನು ಭರಿಸಿ, ಖರೀದಿಸಲು ಮುಂದೆ ಬರುವ ಖಾಸಗಿಯವರು ತನಗೆ ಅಗತ್ಯ ಇರುವ ಸಿಬ್ಬಂದಿಯನ್ನಷ್ಟೇ ಉಳಿಸಿಕೊಳ್ಳಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಬೇಕಾಗಿದೆ. ಹೀಗೆ ಮಾಡಿದರೆ ಮಾತ್ರ ಮಾರಾಟ ಪ್ರಕ್ರಿಯೆ ಯಶಸ್ವಿಯಾಗಲಿದೆ.

ಸಂಸ್ಥೆಯಲ್ಲಿನ ಎಲ್ಲ ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕೆಂಬ ನಿಬಂಧನೆ ಕಾರಣಕ್ಕಾಗಿಯೇ ಖಾಸಗಿ ಸಂಸ್ಥೆಗಳು ಹರಾಜು ದಾಖಲೆಗಳನ್ನು ಮುಟ್ಟಿ ನೋಡಲೂ ಹಿಂದೇಟುಹಾಕಿವೆ. ಸರ್ಕಾರವು ಉದ್ಯೋಗಿಗಳಿಗೆ ‘ಸುವರ್ಣ ಹಸ್ತಲಾಘವ’ದ ಮೂಲಕ ಸ್ವಯಂ ನಿವೃತ್ತಿ ಯೋಜನೆಯ ಆಯ್ಕೆ ಅವಕಾಶ ಮುಂದಿಡಬೇಕು. ಸರ್ಕಾರದ ಪಾಲಿಗೆ ಇದು ಹೆಚ್ಚು ಲಾಭದಾಯಕವಾಗಿರುತ್ತದೆ. ಏರ್‌ ಇಂಡಿಯಾಗೆ ನಿರಂತರವಾಗಿ ಹಣಕಾಸಿನ ಬೆಂಬಲ ಮುಂದುವರೆಸಿದರೆ ಅದು ಕಳೆದುಕೊಳ್ಳುವುದೇ ಹೆಚ್ಚು. ಸಂಸ್ಥೆಯ ವಶದಲ್ಲಿರುವ ಆಸ್ತಿಪಾಸ್ತಿಗಳ ಮಾರಾಟದಿಂದ ಬರುವ ಹಣವನ್ನು ಸ್ವಯಂ ನಿವೃತ್ತರಾಗುವ ಸಿಬ್ಬಂದಿಗೆ ವಿತರಿಸಿದರೆ ಖರೀದಿದಾರರಿಗೂ ಹಣಕಾಸಿನ ಹೊರೆಯಾಗುವುದಿಲ್ಲ.

ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿಕೊಂಡರೆ, ಪಾಲು ಬಂಡವಾಳ ಮಾರಾಟಕ್ಕೆ ಖಂಡಿತವಾಗಿಯೂ ಉತ್ತಮ ಬೆಲೆ ಸಿಗಲಿದೆ. ಏರ್‌ ಇಂಡಿಯಾ ಒಡೆತನದಲ್ಲಿ ಇರುವ ವಿಮಾನ ನಿಲ್ದಾಣದಲ್ಲಿನ ಪಾರ್ಕಿಂಗ್‌, ವಿಮಾನಗಳ ಆಗಮನ– ನಿರ್ಗಮನದ ಮೀಸಲು ಸಮಯ, ಪ್ರಮುಖ ಅಂತರರಾಷ್ಟ್ರೀಯ ಮಾರ್ಗಗಳಲ್ಲಿನದ್ವಿಪಕ್ಷೀಯ ಹಕ್ಕುಗಳು ಮತ್ತು ಅಪಾರ ಪ್ರಮಾಣದಲ್ಲಿನ ಪ್ರಯಾಣಿಕರ ಲಭ್ಯತೆಯು ಖಾಸಗಿ ಸಂಸ್ಥೆಗಳ ಪಾಲಿಗೆ ಹೆಚ್ಚು ಲಾಭದಾಯಕವಾಗಿರಲಿದೆ.

ದೇಶದ ಶೇ 97ರಷ್ಟು ಜನರು ಇನ್ನೂ ವಿಮಾನ ಸೇವೆಯಿಂದ ದೂರವೇ ಉಳಿದಿದ್ದಾರೆ. ಏರ್‌ ಇಂಡಿಯಾ ಈಗ ತಲುಪಿರುವ ಮಟ್ಟಕ್ಕೆ ಏರಲು ಯಾವುದೇ ಹೊಸ ವಿಮಾನ ಯಾನ ಸಂಸ್ಥೆಗೆ 15 ವರ್ಷಗಳಷ್ಟು ದೀರ್ಘ ಸಮಯ ಬೇಕಾಗುತ್ತದೆ. ‘ಏರ್‌ ಇಂಡಿಯಾ’ ಬ್ರ್ಯಾಂಡ್‌ ಈಗಲೂ ಜನಪ್ರಿಯವಾಗಿದ್ದು, ಸಂಸ್ಥೆಯ ಲಾಂಛನ ‘ಮಹಾರಾಜ’ನು ವಿಮಾನ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. 

ಸ್ಪಷ್ಟ ನಿರ್ಧಾರಕ್ಕೆ ಬಾರದೆ ಸಮಯ ವ್ಯರ್ಥ ಮಾಡುವುದು, ಉದ್ದಿಮೆ ಸಂಸ್ಥೆಯೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲು ಅವಕಾಶ ನೀಡುವುದು ಜಾಣತನವಲ್ಲ. ಚುಕ್ಕಾಣಿ ಇಲ್ಲದ ಹಡಗು ಪ್ರಕ್ಷುಬ್ಧ ಸಾಗರದಲ್ಲಿ ಎಷ್ಟು ದಿನ ತೇಲಬಲ್ಲದು ಎನ್ನುವುದು ಪ್ರಯಾಣಿಕರಿಗೆ, ನೌಕೆಯ ಸಿಬ್ಬಂದಿಗೆ ಮತ್ತು ಸ್ವತಃ ಸಂಸ್ಥೆಯ ಆಡಳಿತ ಮಂಡಳಿಗೂ ಗೊತ್ತಿಲ್ಲ. ಇಂದಲ್ಲ ನಾಳೆ ನೌಕೆಯು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಬಂಡೆಗಲ್ಲಿಗೆ ತಾಗಿ ಮುಳುಗಲಿದೆ. ಸಕಾಲದಲ್ಲಿ ನಿರ್ಧಾರಕ್ಕೆ ಬರದಿರುವುದೇ ವಿಪತ್ತಾಗಿ ಪರಿಣಮಿಸಲಿದೆ.

ತತ್ವಜ್ಞಾನಿ ಸೆನೆಕಾ ಹೇಳಿರುವಂತೆ, ‘ಯಾವ ಬಂದರಿನತ್ತ ಪಯಣ ಕೈಗೊಳ್ಳಬೇಕು ಎನ್ನುವುದು ನಾವಿಕನಿಗೆ ಗೊತ್ತಿರದಿದ್ದರೆ, ಬೀಸುವ ಗಾಳಿಯೂ ನೆರವಿಗೆ ಬರುವುದಿಲ್ಲ’ ಎನ್ನುವುದು ಸರ್ಕಾರಕ್ಕೆ ಮನದಟ್ಟಾಗಬೇಕಾಗಿದೆ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !