ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುರಾಜಕಾರಣದಲ್ಲಿ ಮದ್ದಿನ ಮುದುಕಿಯರು

Last Updated 25 ಜೂನ್ 2018, 17:26 IST
ಅಕ್ಷರ ಗಾತ್ರ

ಇದು, ಜೂನ್ ಎರಡನೇ ವಾರದಲ್ಲಿ ನಡೆದ ಘಟನೆ. ಮುಸ್ಲಿಂ ಹೆಸರಿನ ಫೇಸ್‌ಬುಕ್ ಅಕೌಂಟ್ ಒಂದರಲ್ಲಿ ಹಿಂದೂ ದೇವದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಲಾಗಿತ್ತು. ಅಸಭ್ಯವಾದ ‘ಪೋಸ್ಟ್’ ಗಳನ್ನು ಹಾಕಲಾಗಿತ್ತು. ಧಾರ್ಮಿಕ ಆಸಕ್ತಿಗಳಿಲ್ಲದವರು ಓದಿದರೂ ಒಮ್ಮೆ ಗಾಬರಿಯಾಗುವಷ್ಟು ಅಸಭ್ಯ ಬರಹಗಳಿದ್ದವು. ಮಿಂಚಿನ ವೇಗದಲ್ಲಿ ಜಾಲತಾಣದ ತುಂಬ ಸುದ್ದಿ ಹರಿದಾಡಿತು. ನೂರಾರು ‘ಶೇರ್’ಗಳಾದವು. ಹಿಂದೂ ದೇವತೆಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬ ಅತ್ಯಂತ ಕೀಳಾಗಿ ಚಿತ್ರಿಸಿದ್ದಾನೆ ಅನ್ನುವ ವಿಷಯ, ನೂರಾರು ಯುವಕ ಯುವತಿಯರ ‘ರಕ್ತ ಕುದಿಸಿತು’. ಇನ್ನೇನು ಬೆಂಕಿ ಹೊತ್ತಿಕೊಳ್ಳಬೇಕು, ಇದಕ್ಕೆಲ್ಲ ಕಾರಣನಾದವನು ಸಿಕ್ಕಿಬಿದ್ದ; ಮತ್ತು ಆತ ಮುಸ್ಲಿಮನಾಗಿರದೆ ಸ್ವತಃ ಹಿಂದೂವೇ ಆಗಿದ್ದ! ಆ ವ್ಯಕ್ತಿ ಹಾಗೇಕೆ ಮಾಡಿದ?

ಇದೆಲ್ಲ ಶುರುವಾಗಿ ವರ್ಷಗಳೇ ಕಳೆದಿದೆ. 2012ರಲ್ಲಿ ಹಿಂದುತ್ವವಾದಿ ಸಂಘಟನೆಯ ಹುಡುಗರು ಸಿಂದಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿ ಸಿಕ್ಕಿಬಿದ್ದಾಗಲೇ ನಮಗದು ಅರಿವಾಗಿದ್ದು. ಭಾರತದ ಪರಮ ಶತ್ರುವೆಂದು ಬಿಂಬಿಸಲಾಗಿರುವ ಪಾಕಿಸ್ತಾನದ ಧ್ವಜವನ್ನು ಹಾರಿಸುವುದೆಂದರೆ, ಕೋಮು ಜ್ವಾಲೆಗೆ ಸೀಮೆಎಣ್ಣೆ ಸುರಿದಂತೆಯೇ. ಆ ಹುಡುಗರು ಹಾಗೇಕೆ ಮಾಡಿದರು? ಅದೇ ಸಂಘಟನೆಯ ಮತ್ತಷ್ಟು ಹುಡುಗರು 2016ರಲ್ಲಿಯೂ ಅಂಥದೇ ವಿಕೃತಿ ನಡೆಸಿದರು. ಕಲಬುರ್ಗಿಯಲ್ಲಿ ತಾವೇ ಕಟ್ಟಿದ ಶ್ರೀರಾಮನ ಕಟೌಟಿಗೆ ತಾವೇ ಸೆಗಣಿ ಎರಚಿದರು; ಮತ್ತು ತಾವೇ ಅದರ ವಿರುದ್ಧ ಹುಯಿಲೆಬ್ಬಿಸಿದರು. ಬಾಬ್ರಿ ಮಸೀದಿ ಧ್ವಂಸದಿಂದೀಚೆಗೆ ‘ರಾಮ’ ಮುಟ್ಟಿದರೆ ಸುಟ್ಟುಹಾಕುವ ಸಿಡಿಲಿನಂತೆ. ಮತ್ತದೇ ಪ್ರಶ್ನೆ; ಆ ಹುಡುಗರು ಹಾಗೇಕೆ ಮಾಡಿದರು? ಅದೇ ವರ್ಷ ಕುಶಾಲನಗರದಲ್ಲಿ ಮತ್ತೊಂದು ಘಟನೆ ನಡೆದಿತ್ತು. ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ಪೂಜಾರಿ ಎಂಬ ಆಟೊ ಚಾಲಕನನ್ನು ಗೋರಕ್ಷಕದಳದ ಹುಡುಗರು ಬಡಿದು ಕೊಂದುಹಾಕಿದ್ದರು. ಅವನು ಗೋಸಾಗಾಣಿಕೆ ಮಾಡುತ್ತಿದ್ದ ಎಂಬ ತಪ್ಪು ಕಲ್ಪನೆಯೇ ಅದಕ್ಕೆ ಕಾರಣವಾಗಿತ್ತು! ಕೊಂದ ಹುಡುಗರೆಲ್ಲ ಪ್ರವೀಣ್ ಪೂಜಾರಿಯ ತಾಯಿ ಮಾಡಿ ಬಡಿಸಿದ ಅಡುಗೆ ಉಂಡವರೇ! ಆತನ ಹೆಗಲೆಣೆಯ ಜೊತೆಗಾರರೇ. ಅವರೇಕೆ ಹಾಗೆ ಮಾಡಿದರು?

ಇವು ಒಂದಷ್ಟು ಸುದ್ದಿಯಾದ ಉದಾಹರಣೆಗಳಷ್ಟೇ. ರಾಜಕೀಯ ಪಕ್ಷದ ನಾಯಕರು ಕೋಮುಗಲಭೆಯನ್ನು ಪ್ರಚೋದಿಸಲು ಕೊಡುವ ತಪ್ಪು ಮಾಹಿತಿ, ಕೊಲೆಯಾದವರ ತಪ್ಪು ಪಟ್ಟಿ, ವದಂತಿಗಳೆಲ್ಲವೂ ಇದೇ ಎಳೆಯಲ್ಲಿ ಪೋಣಿಸಲ್ಪಟ್ಟ ಗುಂಡುಗಳಾಗಿವೆ. ಸಾಮಾಜಿಕ ಜಾಲತಾಣಗಳು ಇದಕ್ಕೆ ಆಧುನಿಕ ಸೇರ್ಪಡೆಯಷ್ಟೇ.

ಮಲೆನಾಡಿನ ಕಡೆ ಒಂದು ಮಾತಿದೆ; ‘ಮದ್ದಿನ ಮುದುಕಿ ಯಾರೂ ಸಿಗದೆ ಹೋದರೆ ಕೊನೆಗೆ ತನ್ನ ಮಕ್ಕಳಿಗೇ ಮದ್ದಿಡ್ತಾಳೆ’ ಅಂತ. (ಮೌಖಿಕವಾಗಿ ಹರಿದು ಬಂದಿರುವ ಕಥನದ ಹಿನ್ನೆಲೆಯಲ್ಲಿ ‘ಮುದುಕಿ’. ಅದು ‘ಮುದುಕ’ನೂ ಆಗಬಹುದು). ಉಡವನ್ನು ತಲೆಕೆಳಗು ನೇತುಹಾಕಿ ಅದರ ಕೊಬ್ಬು ಬಸಿದು, ಊಟಕ್ಕೆ ಬೆರೆಸಿ ಕೊಡುವ ವಿಕೃತಿಗೆ ‘ಮದ್ದು ಹಾಕೋದು’ ಅನ್ನುತ್ತಾರೆ. ಕೋಮುರಾಜಕಾರಣದ ಅಸಹ್ಯಗಳನ್ನು ನೋಡುವಾಗೆಲ್ಲ ಈ ಮದ್ದಿನ ಮುದುಕಿಯ ನೆನಪಾಗುತ್ತದೆ.

ನೆನ್ನೆ ಮೊನ್ನೆ ತನಕವೂ ನಾವು ಐಎಸ್‌ ಅನ್ನು ನೋಡಿ ಲೊಚಗುಡುತ್ತಿದ್ದೆವು. ‘ಅವರಿಗೆ ಕೊಲ್ಲುವ ವ್ಯಸನ ಎಷ್ಟೆಂದರೆ, ಎಲ್ಲರನ್ನೂ ಮುಗಿಸಿ ಈಗ ತಮ್ಮದೇ ಕಾಲು ಕತ್ತರಿಸಿಕೊಳ್ತಿದ್ದಾರೆ’ ಎಂದು ಬೇಸರಪಡುತ್ತಿದ್ದೆವು (ಅಥವಾ ಹಾಗೆ ನಟಿಸುತ್ತಿದ್ದೆವು). ಅದಕ್ಕೆ ಮುಂಚೆ ಅಫ್ಗಾನಿಸ್ತಾನದ ತಾಲಿಬಾನಿಗಳನ್ನು ಮನಸಾರೆ ಶಪಿಸುತ್ತಿದ್ದೆವು. 70ರ ದಶಕದ್ದು ಎಂದು ಸ್ಕರ್ಟಿನ ಹುಡುಗಿಯರದ್ದೂ 90ರ ದಶಕದ್ದು ಎಂದು ಬುರ್ಖಾಧಾರಿಣಿಯರದ್ದೂ ಫೋಟೊ ಹಾಕಿ ಕಂಪೇರ್ ಮಾಡುತ್ತಿದ್ದೆವು. ಅಷ್ಟು ದೂರವೂ ಬೇಕಿಲ್ಲ. ಪಕ್ಕದ ಪಾಕಿಸ್ತಾನದಲ್ಲೇ ಭಯೋತ್ಪಾದಕರು ಶಾಲೆಯಲ್ಲಿ ಬಾಂಬ್ ಇಟ್ಟು ಉಡಾಯಿಸಿದಾಗ, ‘ಮತಾಂಧರು ತಮ್ಮದೇ ಮಕ್ಕಳನ್ನೂ ಬಿಡಲಿಲ್ಲ’ವೆಂದು ಕಣ್ಣೀರಿಟ್ಟೆವು.

ಐಎಸ್‌ ಏಕಾಏಕಿ ಶುರುವಾಗಿದ್ದಲ್ಲ ಅನ್ನುವುದು ನಮಗೆ ಗೊತ್ತಿದೆ. ತಾಲಿಬಾನ್ ರಾತ್ರೋರಾತ್ರಿ ಎದ್ದು ನಿಲ್ಲಲಿಲ್ಲ ಎಂಬುದೂ ಗೊತ್ತಿದೆ. ಪಾಕಿಸ್ತಾನದ ಭಯೋತ್ಪಾದನೆ ಕೇವಲ ಧರ್ಮಾಧರಿತವಲ್ಲ ಎಂದು ತಿಳಿಯದವರಲ್ಲ ನಾವು. ಇಷ್ಟೆಲ್ಲ ಸಾಮಾನ್ಯ ಜ್ಞಾನ ಇಟ್ಟುಕೊಂಡೂ ನಾವು ಮೂರ್ಖರಾಗುತ್ತಿರುವುದು ಎಲ್ಲಿ?

ಸಿಂದಗಿಯ ಯುವಕರು, ಕಲಬುರ್ಗಿಯ ಯುವಕರು, ಕುಶಾಲನಗರದ ಗೋರಕ್ಷಕರು, ಫೇಸ್‌ಬುಕ್ ವ್ಯಕ್ತಿ... ಇವರೆಲ್ಲ ಹಾಗೇಕೆ ಮಾಡಿದರು ಅನ್ನೋದು ಊಹಿಸಲಾಗದ ಸಂಗತಿಯೇನಲ್ಲ. ಕೋಮು ಗಲಭೆ ಎಬ್ಬಿಸಿ, ಅದರ ಕಿಚ್ಚಲ್ಲಿ ಮೈಕಾಯಿಸಿಕೊಳ್ಳೋದು ಅವರಿಗೆ ವ್ಯಸನವಾಗಿ ಹೋಗಿದೆ. ಅದರಿಂದ ರಾಜಕೀಯ ಲಾಭಗಳಿವೆಯೋ ಇಲ್ಲವೋ, ಹಣಕಾಸಿನ ಉಪಯೋಗವಾದರೂ ಇದೆಯೋ ಇಲ್ಲವೋ… ಅವರಿಗೆ ಮತ್ತು ಅವರನ್ನು ಪೋಷಿಸುವ ಸಂಘಟನೆಗಳಿಗೆ ಮತ್ತೇನೂ ಸಿಗದೆ ಹೋದಾಗ ಮಾಡುವುದು ಇದನ್ನೇ; ತಮ್ಮದೇ ಕಾಲು ಕತ್ತರಿಸಿಕೊಳ್ಳುವುದು. ತಮ್ಮದೇ ದೇವತೆಗಳನ್ನು, ಧರ್ಮವನ್ನು, ಜನರನ್ನು ಅವಮಾನಿಸುವುದು ಮತ್ತು ಸಾಯಿಸುವುದು.

ಕೋಮುವಾದಿ ರಾಜಕಾರಣ ಮುದುಕಿಯು ಮದ್ದು ಹಾಕುವಷ್ಟು ಸರಳವಾದ್ದಲ್ಲ, ನಿಜ. ಆದರೆ ಅದಕ್ಕೆ ಆಯುಧಗಳಂತೆ ಬಳಕೆಯಾಗ್ತಿರುವ ಯುವಜನರು ಮಾತ್ರ ಅದಕ್ಕಿಂತ ಹೆಚ್ಚೇನಲ್ಲ. ಕೋಮು ರಾಜಕಾರಣದ ಟಾಸ್ಕ್ ಮತ್ತು ಟಾರ್ಗೆಟ್ ಪೂರೈಸಲು ಅವರು ಇಂಥ ವಿಕೃತ ಉಪಾಯಗಳಿಗೆ ಬಲಿಯಾಗುತ್ತಿದ್ದಾರೆ. ಕೋಮುಸಂಘಟನೆಗಳಲ್ಲಿ ಕಾಲಾಳುಗಳ ಸಂಖ್ಯೆಯೇ ಹೆಚ್ಚಿದೆ. ನಾಳೆ ಇವರೆಲ್ಲ ಒಟ್ಟಾಗಿ, ಮಿದುಳಿನ ಸ್ಥಾನದಲ್ಲಿ ಕೂತವರ ನಿಯಂತ್ರಣವನ್ನೂ ಧಿಕ್ಕರಿಸಿ ದಂಗೆ ಏಳಲೂಬಹುದು. ಈ ಕಾಲಾಳುಗಳಿಗೆ ತಲೆಗೊಂದು ರೀತಿ ವರ್ತಿಸುವ ನಯವಂಚಕ ರಾಜಕಾರಣ ಗೊತ್ತಿಲ್ಲ. ಬೇಕಿದ್ದರೆ, ಕಳೆದ ವರ್ಷ ರಂಜಾನ್ ಅವಧಿಯಲ್ಲಿ ಕರಾವಳಿಯ ಪ್ರವೀಣ್ ವಾಲ್ಕೆ ಹೇಳಿದ್ದನ್ನು ನೆನಪಿಸಿಕೊಳ್ಳಿ. ಪೇಜಾವರ ಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಮತ್ತದೇ ಹಿಂದುತ್ವವಾದಿ ಸಂಘಟನೆಯ ಮುಖಂಡ ಪ್ರವೀಣ್ ವಾಲ್ಕೆ ಖಂಡಿಸಿದ್ದರು. ‘ಅಯೋಧ್ಯೆ ರಾಮಮಂದಿರದ ವಿಷಯದಲ್ಲಿ ನಾವು ಪೆಟ್ಟು ತಿಂದಿದ್ದು, ನಮ್ಮ ಅಕ್ಕತಂಗಿಯರು ವಿಧವೆಯರಾಗಿದ್ದು, ನಮ್ಮ ಹುಡುಗರು ಜೈಲುಪಾಲಾಗಿದ್ದು, ಕೊಲೆಗಳಾಗಿದ್ದಕ್ಕೆಲ್ಲ ಯಾರು ಕಾರಣ, ಯಾರ ಮಾತು ಕೇಳಿ ಸಂಘಟನೆಗೆ ಹೋಗಿದ್ದು ನಾವು’ ಎಂದು ಪ್ರಶ್ನಿಸಿದ್ದರು. ‘ನಮ್ಮನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿದವರು ಇವತ್ತು ಇಫ್ತಾರ್ ಮಾಡ್ತಿದ್ದಾರೆ, ನಾವು ಯಾರನ್ನು ನಂಬುವುದು?’ ಎಂದು ಪ್ರವೀಣ್ ವಾಲ್ಕೆ ಹರಿಹಾಯ್ದಿದ್ದರು. ಈ ಅಮಾಯಕ ಕಾಲಾಳುಗಳು ಕೂಡಾ ಮದ್ದು ಹಾಕಿಸಿಕೊಂಡವರೇ.

ಇದೇ ಎಳೆಗೆ ಮತ್ತೊಂದು ಸಂಗತಿ ಕೂಡಿಕೊಳ್ಳುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಐಟಿಯು ಕೋಮುವಾದಿ ಸಂಘಟನೆಗಳ ಒಂದಷ್ಟು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು ವರದಿಯಾಗಿತ್ತು. ಈ ಸಂದರ್ಭದಲ್ಲಿ, ವಿಚಾರಣೆಯ ಭಾಗವಾಗಿ ‘ಒಂದು ಶ್ಲೋಕ ಹೇಳಿ’ ಎಂದು ಕೇಳಿದಾಗ, ಅವರಲ್ಲಿ ಒಬ್ಬನೂ ಸರಿಯಾಗಿ ಒಂದು ಶ್ಲೋಕವನ್ನೂ ಹೇಳಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದರು. ಈ ಯುವಕರು ಕೂಡಾ ಮದ್ದು ಹಾಕಲ್ಪಟ್ಟವರು. ತಮ್ಮ ವಿರೋಧಿಗಳನ್ನು ಕೊಲ್ಲುವ ಆಯುಧಗಳನ್ನಾಗಿ ಬಳಸಲು ಇಂಥಾ ಯುವಕರನ್ನು ತಯಾರು ಮಾಡಲಾಗುತ್ತದೆ. ಇಂಥಾ ಒಂದೊಂದು ಮಾನವ ಆಯುಧ ತಯಾರಾದಾಗಲೂ ಅದರೊಳಗಿನ ಮನುಷ್ಯ ಸಂಪೂರ್ಣವಾಗಿ ಸತ್ತುಹೋಗಿರುತ್ತಾನೆ. ಹೀಗೆ ಕೋಮುವಾದಿ ಸಂಘಟನೆಗಳು ದ್ವೇಷದ ಕುರುಡಿನಲ್ಲಿ ತಮ್ಮದೇ ಕೋಮಿನ (ಧರ್ಮ ಅನ್ನುವ ಪದ ಭಾರಿಯಾದೀತು) ಯುವ ಸಂಪನ್ಮೂಲವನ್ನು ಹಾಳುಗೆಡವುತ್ತಿವೆ. ತಮ್ಮ ಸಮುದಾಯಕ್ಕೆ ತಾವೇ ಮದ್ದಿಡುತ್ತಿವೆ.

ಈ ಕಾಯಿಲೆ ಐಎಸ್‌, ತಾಲಿಬಾನ್ ಅಥವಾ ಪಾಕಿಸ್ತಾನಿ ಉಗ್ರರಿಗಿಂತ ಭಿನ್ನವಾಗಿ ಕಾಣುತ್ತದೆಯೇ? ಸಂಖ್ಯೆ ಸಣ್ಣದಿರಬಹುದು. ಕುರವೊಂದು ಕ್ಯಾನ್ಸರ್ ಆಗುವ ತನಕ ಕಾಯಬೇಕೇ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT