ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆಸ್ಟ್ರೇಲಿಯಾ: ತಾಳ ತಪ್ಪಿದ ಋತುಮಾನ

ಯಾವುದೋ ದೇಶದ ಅರಣ್ಯ ನಾಶವಾದರೆ ನಮಗೇನು ಅನ್ನುವಂತಿಲ್ಲ
Last Updated 15 ಜನವರಿ 2020, 4:46 IST
ಅಕ್ಷರ ಗಾತ್ರ
ADVERTISEMENT
""
""

ಆಸ್ಟ್ರೇಲಿಯಾ ಖಂಡವು ತನ್ನ ಒಟ್ಟು ಭೂಪ್ರದೇಶದ ಶೇ 19ರಷ್ಟು (14.70 ಕೋಟಿ ಹೆಕ್ಟೇರ್‌) ಅರಣ್ಯ ಪ್ರದೇಶವನ್ನು ಹೊಂದಿದ್ದು, ಸ್ಥಳೀಯ ಸಸ್ಯಸಂಕುಲ ಮತ್ತು ಪ್ರಾಣಿಸಂಕುಲಕ್ಕೂ ಹೆಸರಾಗಿದೆ. ಅತ್ಯಂತ ಒಣ ಖಂಡವೂ ಇದಾಗಿದ್ದು, ಇಲ್ಲಿ ಏಳು ರೀತಿಯ ಅರಣ್ಯಗಳಿವೆ.

ಅವೆಂದರೆ, ಮೆಲಲೂಕಾ (ಕರಾವಳಿ ಕಾಡು), ದಟ್ಟ ಮಳೆಕಾಡುಗಳು, ಕ್ಯಾಸುಅರೀನಾ (ಹರಿದ್ವರ್ಣ), ನೀಲಗಿರಿ, ಕ್ಯಾಲಿಟ್ರಿಸ್ (ಕೋನಿಫೆರಸ್), ಅಕೇಶಿಯ ಮತ್ತು ಮ್ಯಾಂಗ್ರೋವ್ ಅರಣ್ಯಗಳು. ಈ ಅರಣ್ಯಗಳಲ್ಲಿ ಲಕ್ಷಲಕ್ಷ ಸಸ್ಯಸಂಕುಲ ಮತ್ತು ಜೀವಸಂಕುಲ ಬೆಂಕಿಗೆ ಆಹುತಿಯಾಗಿವೆ. 1,250 ಜಾತಿಯ ಮರಗಳು ಮತ್ತು 390 ಪ್ರಾಣಿಪ್ರಭೇದಗಳು ಅಳಿವಿನ ಅಂಚಿಗೆ ಬಂದಿವೆ. ಸುಮಾರು 50 ಕೋಟಿ ಸಸ್ತನಿಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಕೀಟಗಳು ಸುಟ್ಟುಹೋಗಿರುವುದಾಗಿ ಹೇಳಲಾಗುತ್ತಿದೆ. ಇವುಗಳಲ್ಲಿ ಕೋಲಾ ಪ್ರಾಣಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿವೆ.

ಆಸ್ಟ್ರೇಲಿಯಾದ ಮುಖ್ಯವಾದ ಸ್ಥಳೀಯ ಪ್ರಾಣಿಗಳೆಂದರೆ ಕಾಂಗರೂ, ಕೋಲಾ, ಮುಳ್ಳು ದೇಹದ ಎಕಿಡ್ನಾ, ಪ್ಲಾಟಿಪಸ್, ಮ್ಯಾಕ್ರೋಟಿಸ್ ಇಲಿ, ಸುಗರ್ ಗ್ಲೈಡರ್, ಟೈಗರ್ ಕೋಲ್, ಕೇನ್ ಕಪ್ಪೆ, ಮುಳ್ಳು ಡ್ರ್ಯಾಗನ್, ಒಳನಾಡಿನ ತೈಪಾನ್, ಟ್ಯಾಸ್ಮೆನಿಯನ್ ದೆವ್ವ, ಗೊನ್ನಾ ಹಲ್ಲಿ, ದಿಂಗೊ ನಾಯಿ ಇತ್ಯಾದಿಗಳ ಜೊತೆಗೆ ಇನ್ನೂ ನೂರಾರು ಪ್ರಾಣಿಸಂಕುಲಗಳು ಅಪಾಯದಲ್ಲಿ ಸಿಲುಕಿಕೊಂಡಿವೆ. ಇವೆಲ್ಲ ಆಸ್ಟ್ರೇಲಿಯಾದಲ್ಲಿ ಮಾತ್ರ ಇರುವ ಪ್ರಾಣಿಗಳು. ಇವುಗಳ ಜೊತೆಗೆ ಸಾವಿರಾರು ರೀತಿಯ ಪಕ್ಷಿಗಳು ಮತ್ತು ಕೀಟಗಳು ಸಹ ಸೇರಿವೆ.

ಈ ಅರಣ್ಯಗಳು ಬೆಂಕಿಗೆ ಸಿಲುಕುವುದನ್ನು 1851ರಿಂದಲೇ ಇಲ್ಲಿನ ಸರ್ಕಾರ ದಾಖಲಿಸುತ್ತಾ ಬಂದಿದೆ. ಒಟ್ಟು ಸುಮಾರು 3 ಲಕ್ಷ ಸಸ್ಯಜಾತಿಗಳಿದ್ದು, ಕಾಳ್ಗಿಚ್ಚು ನಂದಿಸುವುದು ಸಾಹಸದ ಕೆಲಸ. ಸಿಡಿಲುಬಿದ್ದು ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ. ಬೆಂಕಿಗೆ ಇತರ ಕಾರಣಗಳೆಂದರೆ ಹೈಟೆನ್ಷನ್ ವಿದ್ಯುತ್ ಕಂಬಗಳು, ಅಗ್ನಿಸ್ಪರ್ಶ, ಅರಣ್ಯ ಒತ್ತುವರಿಗಾಗಿ ಕಾಡು ಸುಡುವುದು, ಗ್ರೈಂಡಿಂಗ್– ವೆಲ್ಡಿಂಗ್, ಕ್ಯಾಂಪ್‍ಫೈರ್, ಸಿಗರೇಟ್ ತುಂಡುಗಳನ್ನು ಎಸೆಯುವುದು ಇತ್ಯಾದಿ. ಬೇಸಿಗೆ ಕಾಲದಲ್ಲಿ ಒಣಗಿದ ಕಾಡುಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಜೊತೆಗೆ ಬರ ಮತ್ತು ಉಷ್ಣದ ಅಲೆಗಳಿಂದ ಬೆಂಕಿ ಹೊತ್ತಿಕೊಂಡು, ಮಳೆಗಾಲ ಬಂದರೆ ಬೆಂಕಿ ನಂದಿಹೋಗುತ್ತಿತ್ತು.

ಈ ನೂರು ವರ್ಷಗಳಲ್ಲಿ ಆಸ್ಟ್ರೇಲಿಯಾ ಖಂಡದ ಹವಾಮಾನದಲ್ಲಿ ಒಂದು ಡಿಗ್ರಿ ಸೆಂಟಿಗ್ರೇಡ್‌
ನಷ್ಟು ಉಷ್ಣಾಂಶ ಹೆಚ್ಚಾಗಿದೆ. ಇದರಿಂದ ಉಷ್ಣದ ಅಲೆಗಳು ಹೆಚ್ಚಾಗಿವೆ ಎನ್ನಲಾಗಿದೆ. 2005ರಿಂದ 2015ರ ನಡುವೆ ಎಂಟು ವರ್ಷಗಳು ಅತಿಹೆಚ್ಚು ತಾಪಮಾನದಿಂದ ಕೂಡಿದ್ದವು. 2019ರ ಬೇಸಿಗೆ ಕಾಲ ಅತ್ಯಂತ ಹೆಚ್ಚು ತಾಪಮಾನದಿಂದ ಕೂಡಿತ್ತು. ಒಂದೆಡೆ ಮಳೆಗಾಲ, ಶರತ್ಕಾಲದ ದಿನಗಳು ಕಡಿಮೆಯಾಗಿ ಶೇ 25ರಷ್ಟು ಮಳೆ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಋತುಮಾನಗಳ ತಾಳತಪ್ಪಿ ವಿಪರೀತ ಮಳೆಯ ಜೊತೆಗೆ, ಚಂಡಮಾರುತಗಳಿಂದ ಪ್ರವಾಹಗಳು ಉಕ್ಕಿ ಅಪಾರ ಹಾನಿ ಉಂಟಾಗುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಮಾನವ ಚಟುವಟಿಕೆಗಳು ಮತ್ತು ಅತಿ ದುರುಳ ಆಧುನಿಕತೆ.

ಎರಡು ವರ್ಷಗಳಿಂದೀಚೆಗೆ ಆಸ್ಟ್ರೇಲಿಯಾದಾದ್ಯಂತ, ವಿಶೇಷವಾಗಿ ಆಗ್ನೇಯ ಭಾಗದಲ್ಲಿ ಕಾಡುಗಳಿಗೆ ತಗುಲಿರುವ ಬೆಂಕಿಯು ಗಂಭೀರ ಸ್ವರೂಪದ್ದು. 63 ಲಕ್ಷ ಹೆಕ್ಟೇರುಗಳಷ್ಟು ಅರಣ್ಯ ಸುಟ್ಟು ಕರಕಲಾಗಿದೆ. ಆಸ್ಟ್ರೇಲಿಯಾ ಅರಣ್ಯಗಳು ಬೆಂಕಿಯಿಂದ ಬಿಡುಗಡೆ ಮಾಡುವ ಇಂಗಾಲವನ್ನು ಮತ್ತೆ ಹೀರಿಕೊಳ್ಳುತ್ತವೆ ಎನ್ನುವ ಮಾತಿದೆ. ಆದರೆ ಪ್ರಸ್ತುತ ಜಾಗತಿಕ ತಾಪಮಾನದಿಂದ ಅರಣ್ಯಗಳು ಹೆಚ್ಚೆಚ್ಚು ಹೊತ್ತಿ ಉರಿದವು. ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬೆಂಕಿಯಿಂದಾಗಿ ಸುಮಾರು 35 ಕೋಟಿ ಟನ್‌ ಇಂಗಾಲ ಬಿಡುಗಡೆಯಾಗಿದೆ. ಈ ಇಂಗಾಲವನ್ನು ಮರಗಳು ಹೀರಿಕೊಳ್ಳಲು 100 ವರ್ಷಗಳಾದರೂ ಬೇಕಾಗುತ್ತದೆ. ಜೊತೆಗೆ ಇದು ಜಾಗತಿಕ ಹಸಿರುಮನೆ ಅನಿಲದ ಸಮಸ್ಯೆಯನ್ನೂ ಉಲ್ಬಣಗೊಳಿಸುತ್ತದೆ.

ಕಾಳ್ಗಿಚ್ಚಿಗೆ ಸಿಲುಕಿ ಬದುಕುಳಿದ ಕಾಂಗರೂ ಮತ್ತು ಕೋಲಾ ಮರಿಗಳಿಗೆ ಸ್ವಯಂ ಸೇವಕರ ಆರೈಕೆ

ಡ್ರೋನ್‌ಗಳು ಮತ್ತು ಉಪಗ್ರಹಗಳ ನೆರವಿನ ಮೂಲಕ ಸರ್ಕಾರವು ಬೆಂಕಿ ನಂದಿಸುವ ಕಾರ್ಯ ಕೈಗೊಂಡಿತ್ತು. ಆದರೆ ಎಷ್ಟು ವಿಸ್ತೀರ್ಣದ ಕಾಡಿಗೆ ಬೆಂಕಿ ಬಿದ್ದಿದೆ, ಅಲ್ಲಿನ ಎಷ್ಟು ಬಗೆಯ ಜೀವಸಂಕುಲ, ಎಷ್ಟು ಸಂಖ್ಯೆಯಲ್ಲಿ ಸುಟ್ಟುಹೋಯಿತು ಎನ್ನುವ ಲೆಕ್ಕವನ್ನು ಯಾರೂ ಹೇಳಲು ಸಾಧ್ಯವಾಗುತ್ತಿಲ್ಲ. ಇಡೀ ಖಂಡ ಮುಂದಿನ ದಿನಗಳಲ್ಲಿ ಮರಳುಗಾಡಾಗಿ ಪರಿವರ್ತಿತವಾಗುತ್ತದೆಯೇ ಎನ್ನುವ ಆತಂಕವೂ ಮೂಡಿದೆ. ನಿನ್ನೆ ಕ್ಯಾಲಿಫೋರ್ನಿಯಾ, ಇಂದು ಆಸ್ಟ್ರೇಲಿಯಾ, ನಾಳೆ ಇನ್ಯಾವುದೋ ಪ್ರದೇಶ. ಒಟ್ಟಿನಲ್ಲಿ ಭೂಮಿಯ ಮೇಲಿನ ಸಸ್ಯಸಂಕುಲ- ಪ್ರಾಣಿಸಂಕುಲ ಈ ಮಟ್ಟಿಗೆ ಕಳೆದುಹೋದರೆ ಮನುಷ್ಯನ ಗತಿಯೇನು? ‌

ಭೂಮಿಯ ಯಾವುದೋ ಭಾಗದಲ್ಲಿರುವ ಅರಣ್ಯಗಳು ಬಿಡುಗಡೆ ಮಾಡುವ ಆಮ್ಲಜನಕವು ವಾಯುಮಂಡಲದ ಮೂಲಕ ಭೂಮಂಡಲವನ್ನೆಲ್ಲ ಆವರಿಸಿಕೊಂಡು, ಮನುಷ್ಯನ ಜೊತೆಗೆ ಎಲ್ಲ ಜೀವಜಂತುಗಳು, ಸಮುದ್ರದಲ್ಲಿನ ಜೀವಿಗಳು ಕೂಡ ಬದುಕುತ್ತಿವೆ. ಯಾವುದೋ ದೇಶದ ಅರಣ್ಯಗಳು ನಾಶವಾದರೆ ನಮಗೇನು ಎನ್ನುವಂತಿಲ್ಲ. ಎಲ್ಲೋ ಅರಣ್ಯಗಳು ಬೆಂಕಿಯಿಂದ ಸುಡುತ್ತಿವೆ ಎಂದರೆ, ಇಲ್ಲಿ ನಮ್ಮ ಬದುಕಿನ ಮೇಲೂ ಅದರ ಪರಿಣಾಮ ಆಗುತ್ತದೆ ಎನ್ನುವುದು ಮಾತ್ರ ಸತ್ಯ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT