ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಯ ಬಳಕೆ- ದುರ್ಬಳಕೆ

ವ್ಯಕ್ತಿಯ ಜಾತಿ, ಸ್ವಭಾವ ಮೀರಲು ನೆರವಾಗುವ ಕಲೆ ಒಂದು ಆಧ್ಯಾತ್ಮಿಕ ಸಾಧನೆ. ಕಲೆಯಲ್ಲಿ ಜಾತಿ, ಸಮುದಾಯಗಳ ಪ್ರಾತಿನಿಧ್ಯವನ್ನು ಆಗ್ರಹಿಸುವುದು ಸರಿಯಲ್ಲ
Last Updated 12 ಅಕ್ಟೋಬರ್ 2018, 11:07 IST
ಅಕ್ಷರ ಗಾತ್ರ

ಚಿತ್ರದುರ್ಗವನ್ನಾಳಿದ ಮದಕರಿ ನಾಯಕನ ಹೆಸರಿನಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಅದೇ ಸಮುದಾಯದ ನಟನೊಬ್ಬ ನಾಯಕನಾಗಿ ನಟಿಸಬೇಕೆಂದು ಆ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಗ್ರಹಿಸಿರುವುದು ನಿಜಕ್ಕೂ ಆಘಾತಕಾರಿ. ಇಂಥದೇ ಒಂದು ವಿವಾದ ಡಾ. ರಾಜ್‍ಕುಮಾರ್ ನಟಿಸಿದ್ದ ‘ಮಂತ್ರಾಲಯ ಮಹಾತ್ಮೆ’ ಸಿನಿಮಾ ತಯಾರಿಕೆಯ ಸಂದರ್ಭದಲ್ಲೂ ಎದ್ದಿತ್ತು.

ಆಗ ರಾಘವೇಂದ್ರ ಸ್ವಾಮಿಯ ಜಾತಿಯೊಂದಿಗೆ ಗುರುತಿಸಿಕೊಂಡಿದ್ದ ಸಮುದಾಯದ ಕೆಲವರು ತಮ್ಮ ಸಮುದಾಯದವರಲ್ಲದ ರಾಜ್‍ಕುಮಾರ್ ಈ ಚಿತ್ರದಲ್ಲಿ ನಟಿಸಬಾರದೆಂದು ಆಗ್ರಹಿಸಿದ್ದರು. ಆದರೆ ಧರ್ಮ ಕರ್ಮ ಸಂಯೋಗ ಒದಗಿಬಂದು ಕೊನೆಗೆ ರಾಜ್‍ಕುಮಾರ್ ಅವರೇ ರಾಘವೇಂದ್ರ ಸ್ವಾಮಿಯ ಪಾತ್ರಕ್ಕೆ ಆಯ್ಕೆಯಾದರಲ್ಲದೆ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿಕೊಟ್ಟಿದ್ದರು.

ಒಂದು ಸಮುದಾಯದ ನಾಯಕನ (ದೊರೆಯಿರಲಿ, ಸನ್ಯಾಸಿ ಇರಲಿ ಅಥವಾ ಮತ್ತಾರೇ ಇರಲಿ) ಪಾತ್ರವನ್ನು ಆ ಸಮುದಾಯದೊಂದಿಗೆ ಗುರುತಿಸಿಕೊಂಡ ನಟನೇ ಮಾಡಿದಾಗ ಆ ಚಿತ್ರ ಅರ್ಥಪೂರ್ಣವಾಗುತ್ತದೆ ಎಂಬ ಬಗೆಯ ಊಹೆ ಬುಡವಿಲ್ಲದ್ದು ಎಂಬುದನ್ನು ಈ ಪ್ರಸಂಗ ರುಜುವಾತುಪಡಿಸಿತು.

ಇತಿಹಾಸದ ಸಾಧು ಸಂತರು, ಅನುಭಾವಿಗಳನ್ನು ಒಂದು ಸಮುದಾಯ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಂಸ್ಕೃತಿಕ ರಾಜಕಾರಣ ಆ ಸಾಧುಸಂತರ ಕೊಡುಗೆಯನ್ನು ಮತ್ತು ಅವರ ಅನನ್ಯತೆಯನ್ನು ಇನ್ನಿಲ್ಲದಂತೆ ನಾಶಮಾಡುತ್ತದೆ. ಇದಕ್ಕೆ ಶಂಕರ, ರಾಮಾನುಜ, ಮಧ್ವ, ಬಸವ, ಅಲ್ಲಮ, ಕನಕ, ಯೇಸು, ಪೈಗಂಬರ್ ಮುಂತಾದ ನೂರಾರು ಹೆಸರುಗಳನ್ನು ಉಲ್ಲೇಖಿಸಬಹುದು. ಈ ‘ವಿಶ್ವಮಾನವರು’ ಜಾತಿವಾದಿಗಳ ಸಾಂಸ್ಕೃತಿಕ ರಾಜಕಾರಣದ ಕಾರಣದಿಂದ ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಸೀಮಿತರಾಗಿ ಹೋಗಿದ್ದಾರೆ.

ರಾಜಮಹಾರಾಜರನ್ನೂ ಜಾತಿ ಸಮುದಾಯಗಳು ಇದೇ ರೀತಿ ತಮ್ಮ ಸುಪರ್ದಿಗೆ ಒಳಪಡಿಸಿಕೊಳ್ಳುವ ಪರಿಪಾಟ ಇನ್ನೂ ಅಪಾಯಕಾರಿಯಾದುದು. ಏಕೆಂದರೆ ಆ ರಾಜಮಹಾರಾಜರ ಸಾಧನೆ, ಕೊಡುಗೆಗಳನ್ನು ಆಯಾ ಸಮುದಾಯಗಳು ತಮ್ಮ ಹೆಗ್ಗಳಿಕೆಯನ್ನಾಗಿಸಿಕೊಳ್ಳುವ ಹಾಗೆಯೇ ಅವರ ಕ್ರೌರ್ಯ, ಕುತಂತ್ರ, ಭ್ರಷ್ಟತನ, ಮತಾಂತರ, ಹಿಂಸಾಚಾರಗಳ ಹೊರೆಯನ್ನೂ ಆ ಸಮುದಾಯಗಳೇ ಹೊರಬೇಕಾಗುತ್ತದೆ.

ಉದಾಹರಣೆಗೆ, ಪಾಳೆಗಾರರ ಪೂರ್ವಿಕನಾದ 15ನೇ ಶತಮಾನದಲ್ಲಿದ್ದ ತಿಮ್ಮಣ್ಣ ನಾಯಕನು ವಿಜಯನಗರದ ಅರಸರೊಂದಿಗೆ ಅಕಾರಣವಾಗಿ ಶತ್ರುತ್ವ ಬೆಳೆಸಿಕೊಳ್ಳುತ್ತಾನೆ. ಗುಂಟೂರು, ಮಾಯಕೊಂಡ ಮುಂತಾದ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಲೂಟಿ, ದರೋಡೆಗಳನ್ನು ಮಾಡುತ್ತಾನೆ. ಕೊನೆಗೆ ವಿಜಯನಗರದ ಸಾಳ್ವ ನರಸಿಂಗರಾಯನಿಂದ ಬರ್ಬರವಾಗಿ ಹತ್ಯೆಯಾಗುತ್ತಾನೆ.

ಇತಿಹಾಸವನ್ನು ಬೆದಕುತ್ತ ಹೋದರೆ ಇಂತಹ ನೂರಾರು ಹಿಂಸಾಚಾರ, ಭ್ರಷ್ಟಾಚಾರಗಳು, ಅನ್ಯಾಯ, ಅನಿಷ್ಟಗಳು ಬಯಲಾಗುತ್ತ ಹೋಗುತ್ತವೆ. ಇವರು ಹೀಗೆ ಹಿಂಸೆಗೆ ತೊಡಗಲು, ಅನ್ಯರೊಂದಿಗೆ ವೈರತ್ವ ಬೆಳೆಸಿಕೊಳ್ಳಲು ಕಾರಣ ತಮ್ಮ ಸಾಮ್ರಾಜ್ಯ ವಿಸ್ತರಣೆಯೋ ಅಥವಾ ವ್ಯಕ್ತಿಗತ ಪ್ರತಿಷ್ಠೆಯೋ ಕಾರಣವಿರಬಹುದು ನಿಜ. ಆದರೆ ಇಂತಹ ದೊರೆಗಳನ್ನು ಈ ಆಧುನಿಕ ಕಾಲಘಟ್ಟದಲ್ಲಿ ಜಾತ್ಯತೀತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುತ್ತಿರುವ ನಾವು ನಮ್ಮ ಜಾತಿ–ಜನಾಂಗಗಳೊಳಗೆ ಸಮಾಹಿತಗೊಳಿಸಿಕೊಳ್ಳಲು ಹೊರಟರೆ ಬೇಡದ ಉಪದ್ವ್ಯಾಪಗಳನ್ನು ಆಹ್ವಾನಿಸಿಕೊಂಡಂತಾಗುತ್ತದೆ.

ನಿರ್ಲಕ್ಷಿತ ಜಾತಿ, ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರಾತಿನಿಧ್ಯ ಗಳಿಸಬೇಕೆಂಬ ಆಗ್ರಹಕ್ಕೆ ಯಾರೂ ತಕರಾರು ಮಾಡಲಾರರು. ಈ ಬಗೆಯ ಆಗ್ರಹಕ್ಕೆ ನಮ್ಮ ಸಂವಿಧಾನವೂ ಬೆಂಬಲ ನೀಡುತ್ತದೆ. ಆದರೆ ನಿರ್ಲಕ್ಷಿತ ಜಾತಿ, ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯ ದೊರಕಿಸಿಕೊಳ್ಳಲು ಸಂವಿಧಾನದತ್ತವಾದ ಹಲವು ಮಾರ್ಗಗಳಿವೆ. ಅದು ಬಿಟ್ಟು ಕಲೆ, ಚಿತ್ರರಂಗ, ಸಾಹಿತ್ಯ ಮುಂತಾದ ಕ್ಷೇತ್ರಗಳಿಗೂ ಈ ಸಮೀಕರಣವನ್ನು ಎಳೆದು ತರುವ ಪ್ರಯತ್ನ ಮಾಡಿದರೆ ಈಗಾಗಲೇ ಇರುವ ಸಮಸ್ಯೆಗಳಿಗೆ ಪರಿಹಾರ ಸಿಗದೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ.

ಈ ಅಪಾಯವನ್ನು ಮನಗಂಡೇ ಈ ಹಿಂದೆ ಟಿಪ್ಪು ಜಯಂತಿಯನ್ನು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ ಆಚರಿಸಲು ಹೊರಟಿದ್ದ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸುವ ನಿರ್ಧಾರ ಕೈಗೊಂಡಿತ್ತು.

ಒಬ್ಬ ವ್ಯಕ್ತಿ ಜಾತಿಯೊಂದಿಗೆ ಗುರುತಿಸಿಕೊಳ್ಳುವುದು ಎಷ್ಟು ಮುಖ್ಯವೋ, ಜಾತಿಯನ್ನು ಮೀರಿ ತನ್ನತನವನ್ನು, ತನ್ನ ಅಸ್ಮಿತೆಯನ್ನು ಕಂಡುಕೊಳ್ಳಬೇಕಾದುದು ಸಹ ಅಷ್ಟೇ ಮುಖ್ಯವಾಗುತ್ತದೆ. ಕಲೆ ಮತ್ತು ಸಾಹಿತ್ಯ ಹಾಗೆ ಜಾತಿಯನ್ನು ಮೀರುವ ಮಾರ್ಗಗಳನ್ನು ವ್ಯಕ್ತಿಗೆ ತೋರಿಸಿಕೊಡುತ್ತವೆ. ಏಕೆಂದರೆ ಒಬ್ಬ ಕಲಾವಿದ ತನ್ನ ಸೃಜನಶೀಲ ಪ್ರಯೋಗದ ಮೂಲಕ ತನಗರಿವಿಲ್ಲದೆಯೇ ತನ್ನ ಜಾತಿ, ಸಂಸ್ಕಾರ, ಸ್ವಭಾವಗಳನ್ನು ತಾತ್ಕಾಲಿಕವಾಗಿ ನಿರಸನಗೊಳಿಸಿಕೊಳ್ಳುತ್ತಾನೆ. ಹಾಗೆ ನಿರಸನಗೊಳಿಸಿ ತನ್ನ ವ್ಯಕ್ತಿತ್ವವನ್ನು ಮೀರಬಲ್ಲವನಾಗುತ್ತಾನೆ.

ಬಹು ಹಿಂದೆ ಸಂದರ್ಶಕರೊಬ್ಬರು ‘ಮಂತ್ರಾಲಯ ಮಹಾತ್ಮೆ’ ಚಿತ್ರದ ವಿವಾದದ ಬಗ್ಗೆ ಡಾ. ರಾಜ್‍ಕುಮಾರ್ ಅವರನ್ನು ಪ್ರಶ್ನೆ ಕೇಳಿದಾಗ ಅವರು ನೀಡಿದ ಉತ್ತರ ಎಲ್ಲ ಕಲಾಸಾಧಕರಿಗೂ ಅಮೂಲ್ಯವಾದ ಪಾಠವಾಗಿದೆ. ಯಾವುದೇ ವಿವಾದದಿಂದ ಸದಾ ಒಂದು ಅಂತರ ಕಾಯ್ದುಕೊಳ್ಳುವ ಸ್ವಭಾವದ ರಾಜ್‍ಕುಮಾರ್ ಆ ಪ್ರಶ್ನೆಯ ದಿಕ್ಕನ್ನೇ ಬದಲಿಸಿ ಹೀಗೆ ಹೇಳಿದ್ದರು: ‘ನನ್ನ ಚಿತ್ರರಂಗದ ಬದುಕಿನಲ್ಲಿ ಎರಡು ಪಾತ್ರಗಳು ಇಂದಿಗೂ ನನಗೆ ಸವಾಲಾಗಿ ಉಳಿದಿವೆ. ಒಂದು ಕಸ್ತೂರಿ ನಿವಾಸದ ‘ರವಿವರ್ಮ’ನ ಪಾತ್ರ. ಮತ್ತೊಂದು ಮಂತ್ರಾಲಯ ಮಹಾತ್ಮೆಯ ರಾಘವೇಂದ್ರ ಸ್ವಾಮಿಗಳ ಪಾತ್ರ’ ಎಂದಿದ್ದರು.

ರವಿವರ್ಮನ ಅಹಂಕಾರ, ಆತ್ಮಪ್ರತ್ಯಯಗಳನ್ನು ಮತ್ತು ರಾಘವೇಂದ್ರ ಸ್ವಾಮಿಯ ದೈವಿಕ ವರ್ಚಸ್ಸನ್ನು ನಟನೆಯ ಮೂಲಕ ಪ್ರತೀತಗೊಳಿಸುವುದು ಸಹಜ ವಿನಯಶೀಲರಾದ ಅವರಿಗೆ ಅಂದು ನಿಜಕ್ಕೂ ಸವಾಲಾಗಿತ್ತು. ಆ ಪಾತ್ರಗಳೊಳಗೆ ಮುಳುಗುವ ಮೂಲಕವೇ ಅವರು ತಮ್ಮ ವ್ಯಕ್ತಿತ್ವದ ವಿನಯಶೀಲತೆಯೆಂಬ ಮೂಲಧಾತುವನ್ನು ನಿರಸನಗೊಳಿಸುವ ಪ್ರಯೋಗ ಮಾಡಿದ್ದರೆನಿಸುತ್ತದೆ.

ಹೀಗೆ ವ್ಯಕ್ತಿಯ ಜಾತಿ, ಸ್ವಭಾವ, ಸಂಸ್ಕಾರವನ್ನು ಮೀರಲು ನೆರವಾಗುವ ಕಲೆ ಒಂದು ಆಧ್ಯಾತ್ಮಿಕ ಸಾಧನೆಯಾಗಿದೆ. ಇಂತಹ ಕಲೆಯಲ್ಲಿ ಪುನಃ ಜಾತಿ, ಸಮುದಾಯಗಳ ಪ್ರಾತಿನಿಧ್ಯ ಇರಬೇಕೆಂದು ಆಗ್ರಹಿಸುವುದು ಬೇಡವೆನಿಸುತ್ತದೆ. ಇದರಿಂದ ಅಂತಿಮವಾಗಿ ಕಲೆಗೇ ಅಪಚಾರ ಮಾಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT