ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇತಿ ಮುದ್ದೆ ಪ್ರೀತಿ!

Last Updated 2 ಮೇ 2019, 19:45 IST
ಅಕ್ಷರ ಗಾತ್ರ

‘ಏನೋ ಇದು! ಇಷ್ಟ್ ಕಡಿಮೆ ಮಾರ್ಕ್ಸ್ ತಗೊಂಡಿದೀಯಾ?’ ಮಗನಿಗೆ ಬೈತಿದ್ದ ದಕ್ಷಿಣ ಕನ್ನಡದ ಮಂಜಣ್ಣ. ‘ನಂಗ್ಯಾಕೆ ಬೈತೀಯಾ, ಇದಕ್ಕೆಲ್ಲ ನೀನು, ನಿನ್ನ ಹೆಂಡ್ತಿನೇ ಕಾರಣ’ ಮಾರುತ್ತರ ಕೊಟ್ಟ ಪುತ್ರ ಶಿರೋಮಣಿ.

‘ನಾ ಕೇಳ್ತಿರೋದಕ್ಕೂ, ನೀ ಹೇಳ್ತಿರೋದಕ್ಕೂ ಸಿಂಕ್ ಆಗ್ತಾನೇ ಇಲ್ವಲ್ಲೋ’ ತಲೆ ಕೆರೆದುಕೊಂಡು ಹೇಳ್ದ ಮಂಜಣ್ಣ.

‘ನೀನು ಅದ್ಯಾವುದೋ ಕಮಲದ ಪಕ್ಷಕ್ಕೆ ಮತ ಹಾಕಿದ್ದಕ್ಕೇ ನಂಗೆ ಕಡಿಮೆ ಮಾರ್ಕ್ಸ್ ಬಂದಿ
ರೋದು. ಆ ನಿಂಬೆಹಣ್ಣು ಅಂಕಲ್‌ ಹೆಂಡ್ತಿ ನೋಡು, ಇಡೀ ಜಿಲ್ಲೆಯನ್ನೇ ಫಸ್ಟ್ ಬರೋಹಂಗೆ ಮಾಡಿದ್ದಾರೆ. ಆದ್ರೆ ಸ್ವಂತ ಮಗನನ್ನ ಫಸ್ಟ್ ಬರ್ಸೋಕೆ ನಿನ್ನ ಹೆಂಡ್ತಿ ಕೈಲಾಗಲಿಲ್ಲ. ನನ್ನ ಭವಿಷ್ಯವನ್ನ ನೀವಿಬ್ರೂ ಹಾಳ್ ಮಾಡಿದ್ರಿ’ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳ್ದ ಮಗ.

‘ಹೋಗ್ಲಿ ಬಿಡು... ಪ್ರೈಮ್ ಮಿನಿಸ್ಟ್ರು, ಮಿನಿಸ್ಟ್ರುಗಳೇ ಯಾವ ಯೂನಿವರ್ಸಿಟಿಯಿಂದ ತಾವು ಡಿಗ್ರಿ ತಗೊಂಡಿದೀವಿ ಅನ್ನೋದು ನೆನಪಾಗದೆ ಒದ್ದಾಡ್ತಿದಾರೆ. ಅಂಥದ್ರಲ್ಲಿ ನಿಂದೇನ್‌ ದೊಡ್ಡ ಸಮಸ್ಯೆಯಲ್ಲ’ ಮಗನಿಗೆ ಸಮಾಧಾನ ಹೇಳುತ್ತಾ, ‘ಅದ್ಸರಿ, ಮುಂದೆ ಏನ್ ಮಾಡಬೇಕಂತಿದೀಯಾ?’ ಕೇಳ್ದ ಮಂಜಣ್ಣ.

‘ಸೈನ್ಯ ಸೇರ್ತೀನಿ’.

‘ಆದ್ರೆ... ನೀನು ಹೈಟೇ ಇಲ್ವಲ್ಲ’.

‘ಏ... ನಾನು ಒಳ್ಳೆಯ ಫೋಟೊಗ್ರಾಫರ್. ಅಲ್ದೆ, ಮನೆಯಲ್ಲಿರೋ ಹಲ್ಲಿ, ಜಿರಳೆ ಹೆಜ್ಜೆ ಗುರುತು ಪತ್ತೆ ಮಾಡಿ ಅಭ್ಯಾಸ ಇದೆ’ ಹೇಳ್ದ ಪುತ್ರ.

‘ಇಷ್ಟಕ್ಕೇ ಆರ್ಮೀಲಿ ಕೆಲಸ ಕೊಟ್ಟುಬಿಡ್ತಾರಾ’ ವ್ಯಂಗ್ಯವಾಗಿ ಕೇಳ್ದ ಮಂಜಣ್ಣ.

‘ಏ ಅಪ್ಪ, ಈಗ ಆರ್ಮೀಲಿ ಫುಲ್ ಡಿಮಾಂಡ್ ಇರೋದೇ ಫೋಟೊಗ್ರಾಫರ್‌ಗೆ. ಯೇತಿ ಅಂತಹ ಹಿಮ ಮಾನವನ ಬಗ್ಗೆನೂ ನಾನು ರಿಸರ್ಚ್ ಮಾಡಿದೀನಿ. ಅದನ್ನೇನಾದರೂ ನಾನು ಆರ್ಮಿಗೆ ಹೇಳಿದ್ರೆ, ಕರೆದು ಕೆಲಸ ಕೊಡ್ತಾರೆ’ ಕಾಲರ್ ಏರಿಸಿಕೊಂಡು ಹೇಳಿದ ಫ್ಯೂಚರ್ ಸೋಲ್ಜರ್.

‘ಏನದು ರಿಸರ್ಚು?’

‘ಹೇಳಲ್ಲ’.

‘ಅಪ್ಪನಿಗೇ ಹೇಳಲ್ವೇನೋ, ಹೇಳು ಪ್ಲೀಸ್’ ಗೋಗರೆದ ಮಂಜಣ್ಣ.

‘ಈ ಹಿಂದೆ, ಹಾಸನದಲ್ಲಿ ರಾಗಿ ಮುದ್ದೆ ತಿಂದು ನಿಂಬೆಹಣ್ಣಿನ ಜ್ಯೂಸು ಕುಡಿದಿದ್ದೇ ಆ ಯೇತಿ ದೈತ್ಯವಾಗಿ ಬೆಳೆಯೋದಕ್ಕೆ ಕಾರಣ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT