ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಖಾದಿ ಪುರಾಣ

Last Updated 4 ಅಕ್ಟೋಬರ್ 2021, 17:25 IST
ಅಕ್ಷರ ಗಾತ್ರ

ತುರೇಮಣೆ ಮನೇಲಿ ನವರಾತ್ರಿ ಆರಂಭದೇಲೆ ಮಾತೃಪಕ್ಸ ರಾಂಗಾಗಿತ್ತು! ನಾನು ತಡೀನಾರದೆ ಕ್ವಾಣೆ ಒಳಿಕ್ಕೆ ಇಣುಕಿ ನೋಡಿದೆ. ಶ್ರೀಮತಿ ತುರೇಮಣೆ ಕೋಪಾಮುದ್ರೇಲಿದ್ರು. ಪಾತ್ರೆ, ತಟ್ಟೆ, ಲೋಟಗಳು ಮಾತಾಡ್ತಿದ್ದೋ! ತುರೇಮಣೆ ಅಧಿಕಾರ ಇಲ್ಲದ ರಾಜಕಾರಣಿ ಥರಾ ಮೆಲ್ಲಗೆ ಈಚಿಗೆ ಕಡದ್ರು.

‘ಎಲ್ಲಾ ಬಸಣ್ಣನ ಕೃಪೆ ಕನೋ. ಮೊನ್ನೆ ಗಾಂಧಿ ಜಯಂತಿ ದಿನ ಖಾದಿ ಭಂಡಾರಕೋಗಿ ಅವರೆಂಡ್ರಿಗೆ ಹದಿನಾರು ಸಾವಿರದ ಸೀರೆ ಕೊಡಿಸಿದ್ದು ಕಂಡು ನಮ್ಮೋಳು, ‘ಮೂಗಿಗೆ ಕವಣೆ ಕಟ್ಟಿಕ್ಯಂದು ದುಡಿಯದೇ ಆಯ್ತು. ಬಸಣ್ಣನ ನೋಡಿ ಕಲೀರಿ. ಕೊರೊನಾ ಬಂದ ಮ್ಯಾಲೆ ಅಂಗೈ ಅಗಲ ಬಟ್ಟೇನೂ ಕೊಡಿಸಿಲ್ಲ ನಿಮ್ಮ ಯೇಗ್ತೆಗೆ’ ಅಂತ ಮಕ್ಕುಗಿದಳು ಕಲಾ. ಅವರು ಸಿಎಂ ಕನಮ್ಮಿ. ನಾಗಣ್ಣ, ಇಜಿಯಣ್ಣನೇನು ಯೆಂಡ್ರಿಗೆ ಸೀರೆ ತಕ್ಕಂದಿಲ್ಲ
ವಲ್ಲಾ ಅಂದ್ರೂ ಕೇಳಂಗಿಲ್ಲ ರಾಂಗಾಗ್ಯವಳೆ’ ವ್ಯಥೆ ತೋಡಿಕ್ಯಂಡರು.

‘ಈಗೇನು ಮಾಡೀರಿ?’ ಅಂತಂದೆ.

‘ನವರಾತ್ರೀಲಿ ಸ್ತ್ರೀಶಕ್ತಿ ಜೋರಾಗಿರತದೆ ಕನೋ. ಈಗ ಸೀರೆ ತರದೇ ಹೋದ್ರೆ ಮೂರೊತ್ತು ಬೂವಕ್ಕೆ ಕಷ್ಟಾಯ್ತದೆ’ ಅಂತ ನಿಟ್ಟುಸಿರುಬುಟ್ಟರು.

‘ರಾಜಕಾರಣಿಗಳು ಗಾಂಧಿ ಜಯಂತಿ ದಿನ ಹಿಂಗೇ ಆಟ ಕಟ್ಟಿ ನಮಗೆಲ್ಲಾ ಓಂಕಾರ ಹತ್ತಿಸಿಬುಡ್ತರೆ ಕನ್ರೋ! ಖಾದಿ ಉದ್ಧಾರುಕ್ಕೆ ಸರ್ಕಾರ ಏನು ಮಾಡ್ಯದೆ?’ ಯಂಟಪ್ಪಣ್ಣ ಕೇಳಿತು.

‘ಸರ್ಕಾರ ವರ್ಸೊಪ್ಪತ್ತೂ ಮಿನಿಸ್ಟ್ರಿಗೆ, ಸರ್ಕಾರಿ ಆಪೀಸುಗಳಿಗೆ ಕರ್ಟನ್ನು, ಗೆಸ್ಟೌಸುಗಳಿಗೆ ಹಾಸಕೆ, ಹೊದಿಯಕೆ ಪಾಲಿಯೆಸ್ಟರ್, ಲಿನನ್ ಬಟ್ಟೆಗಳನ್ನ ಕೋಟಿಗಟ್ಲೆ ಖರ್ಚು ಮಾಡಿ ಅಂಗಡಿಗಳಿಂದ ಖರೀದಿ ಮಾಡ್ತದೆ. ಬಸಣ್ಣ ‘ಇನ್ನು ಮೇಲೆ ಸರ್ಕಾರ ಖರೀದಿ ಮಾಡೋ ಎಲ್ಲಾ ಬಟ್ಟೆ ಖಾದಿ ಭಂಡಾರದ್ದೇ ಆಗಬೇಕು’ ಅಂತ ಖಟ್‍ನಿಟ್ ಆದೇಸ ಹೊಂಡುಸಿದ್ರೆ ಖಾದಿ ಉದ್ಯಮ ಉದ್ಧಾರಾಯ್ತದೆ. ಗಾಂಧೀಜಿ ತತ್ವ ಪಾಲನೇನೂ ಆಯ್ತದೆ’ ಅಂತ ಭಾಷಣ ಕೊಟ್ಟೆ.

‘ನಿನ್ನ ಇಚಾರ ಪಾಲಿಸಿದ್ರೆ ಪರ್ಸೆಂಟೇಜ್ ಯಾರು ಕೊಡ್ತರ್ಲಾ?’ ತುರೇಮಣೆಯ ಈ ಪ್ರಶ್ನೆಗೆ ಉತ್ತರ ನನಗೂ ಗೊತ್ತಿಲ್ಲ. ನಿಮಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT