ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಅಪರಾಧ ಮತ್ತು ಅಂತಃಸಾಕ್ಷಿ

Last Updated 3 ನವೆಂಬರ್ 2019, 20:30 IST
ಅಕ್ಷರ ಗಾತ್ರ

ನಾನು ಬರೆದ 20 ಪುಸ್ತಕಗಳ ಬಿಡುಗಡೆ ಸಮಾರಂಭ ಈಚೆಗಷ್ಟೇ ನೆರವೇರಿತು. ಈ ಸಂದರ್ಭದಲ್ಲಿ ನಾನು ಸಭಿಕರಿಗೆ ಒಂದು ಮಾಹಿತಿ ನೀಡಲು ಇಚ್ಛಿಸಿದೆ.

1980ರಿಂದ ನಾನು ದಿನಚರಿ ಬರೆಯಲು ಮುಂದಾದೆ. ನನಗಾಗ 22 ವರ್ಷ. ಅಂದಿನ ದಿನಗಳಲ್ಲಿ ಡೈರಿ ಕೊಳ್ಳಲು ನನ್ನಲ್ಲಿ ಹಣ ಇರುತ್ತಿರಲಿಲ್ಲ. ಅತಿ ಚಿಕ್ಕದಾದ ಡೈರಿಯಲ್ಲಿ, ಅಂದಂದು ನಿರ್ವಹಿಸಿದ ಕೆಲಸ- ಕಾರ್ಯಗಳನ್ನು ಬರೆಯುತ್ತಿದ್ದೆ. ಆ ದಿನ ಯಾತಕ್ಕೆ ಎಷ್ಟು ಖರ್ಚಾಯಿತು ಎಂಬುದನ್ನೆಲ್ಲ ಬರೆದಿಡುತ್ತಿದ್ದೆ. 25-30 ವರ್ಷದವನಿದ್ದಾಗ ಗಾಂಧೀಜಿ ಕುರಿತು ಅಧ್ಯಯನ ನಡೆಸಿದೆ.

ಗಾಂಧಿಯವರ ಬಗೆಗೆ ಅರಿವು ಮೂಡುವ ಮುನ್ನ ದಿನಚರಿ ಬರೆಯಲು ಆರಂಭಿಸಿದ್ದು, ನನ್ನ ಬದುಕಿನ ಒಂದು ಮಹತ್ತರ ಘಟ್ಟ. ಅನೇಕರು ಗಾಂಧಿಯವರ ಜೀವನಗಾಥೆ ‘ಸತ್ಯಶೋಧನೆ’ ಓದಿದ ಬಳಿಕ ಅವರ ಪ್ರಭಾವಕ್ಕೆ ಒಳಗಾಗಿ ತಮ್ಮ ಜೀವನಚರಿತ್ರೆ ಬರೆಯಲು ಮುಂದಾಗಿದ್ದಾರೆ. ನನ್ನ ಬದುಕಿನಲ್ಲಿ ಗಾಂಧಿಯವರ ಪ್ರಭಾವ ಆಗಿಲ್ಲವೆಂದು ಹೇಳಲು ಬರುವುದಿಲ್ಲ. ಅವರನ್ನು ಅಧ್ಯಯನ ಮಾಡಿದ ಬಳಿಕ ಮತ್ತಷ್ಟು ಆಪ್ತವಾಗಿಯೂ ನಿರ್ವಂಚನೆಯಿಂದಲೂ ದಿನಚರಿ ಬರೆಯಲು ಸಾಧ್ಯವಾಯಿತು.

ಮತ್ತೊಂದು ಪ್ರೇರಣೆ ನನ್ನ ಗುರುಗಳಿಂದ ಆಗಿರ ಬಹುದೇನೊ! ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಯಾವುದೇ ಕಾರ್ಯಕ್ರಮವನ್ನು ಒಪ್ಪಿಕೊಂಡ ಬಳಿಕ ಅದನ್ನು ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದರು. ಕೆಲವರು ಗೋಡೆಗೆ ನೇತುಹಾಕಿದ ಕ್ಯಾಲೆಂಡರ್‌ನಲ್ಲಿ ಆ ದಿನಾಂಕವನ್ನು ರೌಂಡ್‍ಅಪ್ ಮಾಡುವ ಪದ್ಧತಿಯು ಪ್ರಚಲಿತವಾಗಿದೆ. ಗುರುಗಳು ತಮ್ಮ ದಿನಚರಿಯಲ್ಲಿ ಏನು ಬರೆದಿಡುತ್ತಿರಬಹುದು ಎಂಬ ಕುತೂಹಲ. ಗುರುಗಳ ಕೊಠಡಿಯ ಕಸ ಗುಡಿಸುವಾಗ ಕುತೂಹಲಕ್ಕಾಗಿ ಒಮ್ಮೆ ಅವರ ದಿನಚರಿಯನ್ನು (ಅವರು ಪೂಜೆಯಲ್ಲಿದ್ದಾಗ) ನೋಡಿದ ನೆನಪು.

ಗಾಂಧಿಯವರಂತೆ ಜೀವನಕ್ಕೆ ಸಂಬಂಧಪಟ್ಟ ಘಟನೆಗಳು ಅದರಲ್ಲಿ ಇರಲಿಲ್ಲ. ಬದಲಾಗಿ, ಶ್ರೀ ಮುರುಗೇಶಾನಮಃ, ಶ್ರೀ ಶಿವಯೋಗೀಶ್ವರಾಯನಮಃ ಮಂತ್ರಗಳೊಡನೆ ಜಾತ್ರೆಗಳು, ಹಬ್ಬಹರಿದಿನಗಳು ಮತ್ತು ಕಾರ್ಯಕ್ರಮ ವಿವರಗಳು ನೋಡಸಿಕ್ಕಿದ್ದವಷ್ಟೆ.

ನನ್ನ ಅರಿವಿನ ಪ್ರಕಾರ, ಇನ್ನೊಬ್ಬರ ದಿನಚರಿಯನ್ನು ಕದ್ದು ನೋಡಬಾರದು, ಮತ್ತೊಬ್ಬರ ಪತ್ರಗಳನ್ನು ಕದ್ದು ಓದಬಾರದು. ಇತರರ ಮಾತುಗಳನ್ನು ಕದ್ದು ಕೇಳಬಾರದು. ಇನ್ನೊಬ್ಬರ ಫೋನಿನೊಳಗೆ ಇರುವುದನ್ನು ನೋಡಬಾರದು, ಯಾವುದೇ ಮಾಹಿತಿಯನ್ನು ಕದಿಯಬಾರದು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಕದಿಯುವಿಕೆಗೆ ಸಂಬಂಧಿಸಿದಂತೆ ದೊಡ್ಡದೊಡ್ಡ ಹಗರಣಗಳು ನಡೆಯುತ್ತಿವೆ. ಮಾಹಿತಿ ಯುಗದ ಎರಡು ಅನಾರೋಗ್ಯಕರ ಬೆಳವಣಿಗೆಗಳೆಂದರೆ- ಮಾಹಿತಿಯನ್ನು ಕದಿಯುವುದು ಮತ್ತು ಮಾಹಿತಿಯನ್ನು ಸೋರಿಕೆ ಮಾಡುವುದು.

ಪ್ರತಿಶತ ಎಂಬತ್ತರಷ್ಟು ಪ್ರಕರಣಗಳು ಮಾಹಿತಿ ಕದಿಯುವಿಕೆಗೆ, ಇಪ್ಪತ್ತರಷ್ಟು ಪ್ರಕರಣಗಳು ಮಾಹಿತಿ ಸೋರುವಿಕೆಗೆ ಸಂಬಂಧಿಸಿರುತ್ತವೆ. ದೊಡ್ಡದೊಡ್ಡ ಕಂಪನಿಗಳಿಗೆ ಸಂಬಂಧಿಸಿದ ಮಾಹಿತಿ, ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ ಸೋರುವಿಕೆ ಇತ್ಯಾದಿ. ಮಾಹಿತಿ ತಂತ್ರಜ್ಞಾನವು ಆಧುನಿಕ ಜಗತ್ತನ್ನು ಅಪಾಯದ ಅಂಚಿನಲ್ಲಿ ತಂದು ನಿಲ್ಲಿಸಿದೆ. ಅದು ಸೈಬರ್ ಕ್ರೈಮ್ ಎಂದು ಹೆಸರಾಗಿದ್ದು, ಅವುಗಳ ಸಂಖ್ಯೆ ಮಿತಿ ಮೀರುತ್ತಿದೆ. ವ್ಯವಹಾರಕ್ಕೆ ಸಂಬಂಧಿಸಿದ ವೆಬ್‍ಸೈಟ್‍ಗೆ ಹೋಗಿ ಮಾಹಿತಿ ಕದಿಯುವಿಕೆ, ಐಡೆಂಟಿಟಿ ಕದಿಯವುದು, ಆನ್‍ಲೈನ್ ಲಾಟರಿ, ಸೈಬರ್ ದಾಳಿ, ಚಾಟ್ ಫ್ರಾಡ್ಸ್, ಬ್ಯಾಂಕಿಂಗ್ ಫ್ರಾಡ್ಸ್, ಸೈಬರ್ ಬುಲ್ಲಿಯಿಂಗ್‌, ಆನ್‍ಲೈನ್ ಬ್ಲ್ಯಾಕ್‍ಮೇಲಿಂಗ್, ಮಾರ್ಫಿಂಗ್, ಸಾಫ್ಟ್‌ವೇರ್ ಕಳ್ಳತನ ಮುಂತಾದವುಗಳಿಂದ ಈ ಅಪರಾಧಲೋಕ ಅನಾವರಣಗೊಳ್ಳುತ್ತದೆ.

ಅನ್ಯರ ಬದುಕಿನಲ್ಲಿ ಇಣುಕಿ ಹಾಕಿ ಅವರ ಶಾಂತಿಯನ್ನು ಕದಡಲು ಪ್ರಯತ್ನಿಸುವುದು ಸರಿಯಲ್ಲ. ಆದರೆ, ಇಂಥ ಅನಾರೋಗ್ಯಕರ ವಿದ್ಯಮಾನಕ್ಕೆ ಜಗತ್ತು ಸಾಕ್ಷಿ ಆಗುತ್ತಿರುವುದು ಅತ್ಯಂತ ಆಘಾತಕಾರಿ. ಅನಾಹುತಕಾರಿ ಚಟುವಟಿಕೆಗಳನ್ನು ನಿವಾರಿಸುವಲ್ಲಿ ಪ್ರತಿಯೊಬ್ಬರೂ ಸಾಕ್ಷಿಪ್ರಜ್ಞೆಗೆ ಒಳಗಾಗುವುದೊಂದೇ ದಾರಿ. ಸಾಕ್ಷಿಪ್ರಜ್ಞೆ ಎಂದರೆ ಒಳಿತು- ಕೆಡುಕುಗಳ ಪರಾಮರ್ಶೆ; ತಪ್ಪು- ತಡೆಗಳ ಅವಲೋಕನ.

ಅರಿವಿನಷ್ಟೇ ಜಾಗೃತವಾದುದು ಅಂತಃಸಾಕ್ಷಿ. ಸಮಾಜ ಸುಧಾರಕರು ನಿತ್ಯವೂ ಅನುಸರಿಸುವ ಅಂತರಂಗದ ಅಧ್ಯಯನ. ಅಂತರಂಗ ಶುದ್ಧಿಗೆ ಹೆಚ್ಚಿನ ಆದ್ಯತೆ. ಅತ್ತ ಗಮನಹರಿಸುವುದರಿಂದ ಅಪರಾಧಗಳಿಗೆ ತಡೆ ಉಂಟಾಗುತ್ತದೆ. ರಾಗ- ದ್ವೇಷ, ಹಣದ ದಾಹ, ಕೀರ್ತಿವಾರ್ತೆ ಮುಂತಾದ ವ್ಯಕ್ತಿಗತ ಆಮಿಷಗಳು ಸೈಬರ್ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯಾರು ಅವುಗಳಿಂದ ದೂರ ಇರುತ್ತಾರೋ ಅಂಥವರಿಂದ ಯಾವುದೇ ತೆರನಾದ ಅವಘಡ ಸಂಭವಿಸುವುದಿಲ್ಲ. ‌

ಸೈಬರ್‌ಲೋಕದ ಅನಾಹುತಗಳು ಸ್ವಯಂಕೃತ ಅಪರಾಧಗಳು. ಇಂಥ ಕೆಲಸಕ್ಕೆ ಎಲ್ಲಿಂದ, ಹೇಗೆ ಪ್ರಚೋದನೆ ಆಗುತ್ತದೆ ಎಂಬುದು ಅಧ್ಯಯನಾರ್ಹ. ಈ ಸಂಬಂಧ ಸಂಶೋಧನೆಗಳು, ಸ್ವವಿಮರ್ಶೆ ನಡೆಯಬೇಕಾಗಿದೆ. ಇಲ್ಲವಾದಲ್ಲಿ ಆಧುನಿಕ ಜಗತ್ತು ಮತ್ತು ಜೀವನವು ಗಂಡಾಂತರ ಅನುಭವಿಸಬೇಕಾಗುತ್ತದೆ. ಉಪಕಾರ ಮಾಡಲಾಗದಿದ್ದರೂ ಉಪದ್ರವ ನೀಡದಿದ್ದರೆ ಸಾಕು. ನಾವಿರುವ ಜಗತ್ತಿಗೆ ಇಷ್ಟೂ ಮಾಡದಿದ್ದರೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT