‘ಏಕಕಾಲಕ್ಕೆ ಚುನಾವಣೆ’ ಪ್ರಜಾತಂತ್ರಕ್ಕೆ ವಿರುದ್ಧ

7
ಚುನಾವಣೆಯ ಪ್ರಶ್ನೆಯನ್ನು ಮತದಾರನ ನೆಲೆಯಲ್ಲಿ ನೋಡಬೇಕು. ಏಕಕಾಲಕ್ಕೆ ನಡೆಯುವ ಚುನಾವಣೆಯು ಅವಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ

‘ಏಕಕಾಲಕ್ಕೆ ಚುನಾವಣೆ’ ಪ್ರಜಾತಂತ್ರಕ್ಕೆ ವಿರುದ್ಧ

Published:
Updated:
Deccan Herald

‘ಏಕಕಾಲಕ್ಕೆ ಚುನಾವಣೆ: ವಿಸ್ತೃತ ನೆಲೆಯ ಚರ್ಚೆಗಳಾಗಲಿ’ (ಪ್ರ.ವಾ., ಆ.1) ಎಂಬ ಸಂಪಾದಕೀಯ ಬರಹವು ಸಕಾಲಿಕ ಹಾಗೂ ವಿಚಾರಪ್ರಚೋದಕವಾಗಿದೆ; ಅದಕ್ಕೆ ಪೂರಕವಾಗಿ ಕೆಲವು ಪ್ರಮುಖ ಅಂಶಗಳನ್ನು ಈ ಮೂಲಕ ಓದುಗರಿಗೆ ತಿಳಿಸಲು ಅಪೇಕ್ಷಿಸುತ್ತೇನೆ.

ಭಾರತದ ಚುನಾವಣಾ ಆಯೋಗವು ‘ಏಕಕಾಲಕ್ಕೆ ಚುನಾವಣೆ’ ಎಂಬ ಪ್ರಸ್ತಾಪವನ್ನು ತಿರಸ್ಕರಿಸಿಲ್ಲ; ಕೇವಲ ‘ಕಾನೂನಾತ್ಮಕ ಚೌಕಟ್ಟು ಇಲ್ಲದೆ’ ಇಂತಹ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲ ಎಂದಿದೆ. ಎಂದರೆ, ಕಾನೂನಾತ್ಮಕ ಚೌಕಟ್ಟು ಸಿಕ್ಕಿದರೆ ನಡೆಸಬಹುದು ಎಂಬುದು ಚುನಾವಣಾ ಆಯೋಗದ ನಿಲುವು. ನಮ್ಮ ಸಂವಿಧಾನದ 172ನೇ ಕಲಮನ್ನು ತಿದ್ದುಪಡಿ ಮಾಡುವುದು ಬಹುಮತವಿರುವ ಯಾವ ಸರ್ಕಾರಕ್ಕೂ ಕಷ್ಟವಲ್ಲ ಅಥವಾ ಆ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಮಾಡಬಹುದು. ಇನ್ನು ಕಾನೂನು ಆಯೋಗವು ತನ್ನ (ಕರಡು) ಶಿಫಾರಸುಗಳಲ್ಲಿ ಸಾಕಷ್ಟು ಸರ್ಕಸ್ ಮಾಡಿರುವುದು ಗೊತ್ತಾಗುತ್ತದೆ.

2019ರಲ್ಲಿ ಲೋಕಸಭೆಗೆ ಹಾಗೂ 13 ರಾಜ್ಯಗಳಲ್ಲಿ ಚುನಾವಣೆ; ಆನಂತರ ಉಳಿದ 16 ರಾಜ್ಯಗಳಲ್ಲಿ ಅಲ್ಪಾವಧಿಗೆ 2021 ರಲ್ಲಿ ಚುನಾವಣೆ; ಕೊನೆಗೆ, 2024ರಲ್ಲಿ ಲೋಕಸಭೆಗೆ ಮತ್ತು ಎಲ್ಲಾ ರಾಜ್ಯಗಳ ಶಾಸನಸಭೆಗಳಿಗೆ ಚುನಾವಣೆ. ಸಂವಿಧಾನದ ತಿದ್ದುಪಡಿ, ಕೆಲವು ರಾಜ್ಯಗಳಲ್ಲಿ ಮೂರು ಅಥವಾ ಇನ್ನೂ ಕಮ್ಮಿ ವರ್ಷಗಳಿಗೆ ಚುನಾವಣೆ... ಇಷ್ಟೆಲ್ಲಾ ಸಾಹಸಗಳಿಂದ ಸಾಧಿಸಬೇಕಾದುದೇನು?

ಈ ಪ್ರಶ್ನೆಗೆ ಉತ್ತರವಾಗಿ ಕಾನೂನು ಆಯೋಗವು ಮೂರು ಕಾರಣಗಳನ್ನು ಕೊಡುತ್ತದೆ: ಚುನಾವಣೆಗಳಿಗೆ ಆಗುವ ಅಗಾಧ ವೆಚ್ಚದ ಉಳಿತಾಯ, ಆಡಳಿತಾತ್ಮಕ ಒತ್ತಡ ಕಮ್ಮಿಯಾಗುವುದು ಮತ್ತು ಸರ್ಕಾರದ ಯೋಜನೆಗಳ ಸರಿಯಾದ ಅನುಷ್ಠಾನ. ಇವುಗಳಲ್ಲಿ ಕೊನೆಯದಕ್ಕೂ ಚುನಾವಣಾ ಪ್ರಕ್ರಿಯೆಗೂ ಏನೂ ಸಂಬಂಧವಿಲ್ಲ; ಆಡಳಿತಾತ್ಮಕ ಒತ್ತಡ ಕಮ್ಮಿಯಾಗುವುದು ಚರ್ಚಾಸ್ಪದ; ಹಣದ ಉಳಿತಾಯ ಒಂದೇ ಖಚಿತವಾಗಿ ಗುರುತಿಸಬಹುದಾದದ್ದು. ಹಾಗೆಯೇ ಪ್ರಧಾನ ಮಂತ್ರಿ
ಗಳೂ ಸೇರಿದಂತೆ ಅನೇಕರು ಮುಂದಿಡುವ ಒಂದು ವಾದವೆಂದರೆ ಈಗಿರುವಂತೆ ಇಡೀ ದೇಶ ಎಲ್ಲಾ ಕಾಲದಲ್ಲಿಯೂ ‘ಎಲೆಕ್ಷನ್ ಮೋಡ್‍ನಲ್ಲಿ’ ಇರಬೇಕಾಗುತ್ತದೆ. ಈ ವಾದವು ಅರ್ಥವಾಗುವುದಿಲ್ಲ: ಪ್ರತಿಯೊಂದು ರಾಜ್ಯಲ್ಲಿಯೂ, ಸಾಮಾನ್ಯವಾಗಿ, ಐದು ವರ್ಷಗಳಲ್ಲಿ ಎರಡುಬಾರಿ (ಲೋಕಸಭೆ ಮತ್ತು ಶಾಸನಸಭೆಗಳಿಗೆ) ಚುನಾವಣೆ ನಡೆಯಬೇಕು. ಅದಕ್ಕಾಗಿ, ಅತಿ ಹೆಚ್ಚು ಎಂದರೆ ಎರಡು ಬಾರಿ ತಲಾ ಎರಡು ತಿಂಗಳ ಕಾಲ ಚುನಾವಣೆಯ ಸುತ್ತ ಕಳೆದರೂ ನಾಲ್ಕು ವರ್ಷ ಎಂಟು ತಿಂಗಳು ಉಳಿಯುತ್ತವೆ, ಅಲ್ಲವೆ?

ಚುನಾವಣೆಯ ಪ್ರಶ್ನೆಯನ್ನು ಆಡಳಿತದ ನೆಲೆಯಲ್ಲಿ ಅಲ್ಲದೆ ಮತದಾರನ ನೆಲೆಯಲ್ಲಿ ನೋಡಬೇಕು; ಏಕೆಂದರೆ ಪ್ರಜಾತಂತ್ರ ವ್ಯವಸ್ಥೆ ತನಗೆ ಕೊಡುವ ಅಸಾಧಾರಣ ಹಕ್ಕನ್ನು, ಒಂದು ಪಕ್ಷಕ್ಕೆ ಅಧಿಕಾರವನ್ನು ನೀಡುವ ಅಥವಾ ಅಧಿಕಾರದಿಂದ ಕೆಳಗಿಳಿಸುವ ಶಕ್ತಿಯನ್ನು ಮತದಾರನಿಗೆ ಕೊಡುವುದು ಚುನಾವಣೆ. ಹೀಗೆ ಮತದಾರನ ನೆಲೆಯಲ್ಲಿ ನೋಡಿದಾಗ, ಏಕಕಾಲಕ್ಕೆ ನಡೆಯುವ ಚುನಾವಣೆ ಅವನ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂಬುದು ಸ್ಪಷ್ಟ. ಈ ಹೇಳಿಕೆಗೆ ಕಾರಣಗಳನ್ನು ಹೀಗೆ ವಿವರಿಸಬಹುದು:

* ನಮ್ಮ ದೇಶವು ಒಳಗೊಂಡಿರುವ 29 ರಾಜ್ಯಗಳಲ್ಲಿ ಪ್ರತಿಯೊಂದರ ಸ್ವರೂಪ ಹಾಗೂ ಸಮಸ್ಯೆಗಳು ಭಿನ್ನ ಭಿನ್ನವಾಗಿರುತ್ತವೆ. ಒಂದು ರಾಜ್ಯದಲ್ಲಿ ಕುಡಿಯುವನೀರಿನ ಸಮಸ್ಯೆಯಿದ್ದರೆ, ಇನ್ನೊಂದು ರಾಜ್ಯದಲ್ಲಿ ನಕ್ಸಲೀಯರ ಸಮಸ್ಯೆ ಮುಖ್ಯವಾಗಬಹುದು. ಮತ್ತೊಂದು ರಾಜ್ಯದಲ್ಲಿ ಕೋಮುಸಾಮರಸ್ಯವನ್ನು ಕಾಪಾಡುವುದೇ ದೊಡ್ಡ ಸವಾಲಾಗಿರಬಹುದು. ಈ ಕಾರಣದಿಂದ, ಸ್ಥಳೀಯ ಸಮಸ್ಯೆ, ಅವಶ್ಯಕತೆಗಳಿಗೆ ಅನುಸಾರವಾಗಿ ಆಯಾ ರಾಜ್ಯಗಳ ಮತದಾರರು ಭಿನ್ನ ಅಭ್ಯರ್ಥಿಗಳನ್ನು ಹಾಗೂ ಪಕ್ಷಗಳನ್ನು ಆಯ್ಕೆ ಮಾಡಬಹುದು.

* ಆದರೆ, ಮತದಾರನ ದೃಷ್ಟಿಯಲ್ಲಿ, ಒಂದು ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸುವ ಪಕ್ಷವು ಕೇಂದ್ರದಲ್ಲಿಯೂ ಸಮರ್ಥವಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಕೇಂದ್ರ ಸರ್ಕಾರದ ಜವಾಬ್ದಾರಿಗಳು ಹಾಗೂ ಸಮಸ್ಯೆಗಳು ಬೇರೆ ಬೇರೆ. ಹೀಗಿರುವಾಗ, ಕೇಂದ್ರ- ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆದರೆ, ಎರಡು ಭಿನ್ನ ನಿರೀಕ್ಷೆಗಳ ನಡುವೆ ಮತದಾರನು ಒಂದೇ ಸಮಯದಲ್ಲಿ ಆಯ್ಕೆ ಮಾಡಬೇಕಾಗುತ್ತದೆ.

* ವರ್ತನಶಾಸ್ತ್ರಜ್ಞರು (Behaviour Scientists) ಹೇಳುವಂತೆ ಕನಿಷ್ಠಪಕ್ಷ ಶೇ 80ರಷ್ಟು ಜನರು ಏಕಕಾಲದಲ್ಲಿ ಭಿನ್ನ ವಿಷಯಗಳನ್ನು ಕುರಿತಂತೆ ಆಯ್ಕೆ ಮಾಡುವಾಗ ಒಂದೇ ಬಗೆಯ ಮಾನದಂಡವನ್ನು ಉಪಯೋಗಿಸುತ್ತಾರೆ. ಇದರ ಪರಿಣಾಮವಾಗಿ, ಕೇಂದ್ರಕ್ಕೆ ಅಥವಾ ರಾಜ್ಯಕ್ಕೆ ಸಮರ್ಥ ವ್ಯಕ್ತಿಗಳ, ಪಕ್ಷದ ಆಯ್ಕೆ ಆಗದೇ ಇರಬಹುದು. ಇದು ವ್ಯಕ್ತಿಗಳಿಗೆ, ಪಕ್ಷಕ್ಕೆ ಆಗುವ ಅನ್ಯಾಯ.ಚುನಾವಣೆಗಳಿಗಾಗಿ ಆಗುವ ಅಗಾಧ ವೆಚ್ಚವನ್ನು ಪರಿಹರಿಸಲು, ಏಕಕಾಲದ ಚುನಾವಣೆಯಲ್ಲದೆ ಮತ್ತೂ
ಒಂದು ಪರ್ಯಾಯವಿದೆ. ಒಮ್ಮೆ ಕೇಂದ್ರಕ್ಕೆ, ಮತ್ತೊಮ್ಮೆ ಎಲ್ಲಾ ರಾಜ್ಯಗಳಿಗೆ ಆಗುವ ಚುನಾವಣೆ. ಈ ಪರ್ಯಾಯದಿಂದ, ಮತದಾರನಿಗೆ ಒಮ್ಮೆ ಒಂದೇ ಮಾನದಂಡವನ್ನು ಉಪಯೋಗಿಸಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ; ಮತ್ತು ಚುನಾವಣೆಗಳಿಗಾಗಿ ಆಗುವ ವೆಚ್ಚವೂ ಸಾಕಷ್ಟು ಹತೋಟಿಗೆ ಬರುತ್ತದೆ.

‘ಒಂದು ರಾಷ್ಟ್ರ, ಒಂದು ಚುನಾವಣೆ– ಒಂದು ಭಾಷೆ– ಒಂದು ಧರ್ಮ’ ಎಂಬುದೇನೂ ಸಾರ್ವಕಾಲಿಕ ಸತ್ಯವಲ್ಲ, ಶಾಸನವೂ ಅಲ್ಲ. ಇವೆಲ್ಲವೂ ನಾವು ನಮ್ಮ ಆಶೋತ್ತರಗಳಿಗೆ ಅನುಸಾರವಾಗಿ ಸೃಷ್ಟಿಸಿಕೊಂಡಿರುವ ಪರಿಕಲ್ಪನೆಗಳು. ಆದುದರಿಂದ ನಾವು ಸೃಷ್ಟಿಸಿದ ಪರಿಕಲ್ಪನೆಗಳು ನಮ್ಮನ್ನೇ ನಿರ್ವೀರ್ಯರನ್ನಾಗಿ ಮಾಡಬಾರದು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !