ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಎಂಜಿನಿಯರಿಂಗ್: ಕಾಟಾಚಾರದ ‘ಚಟುವಟಿಕೆ’

ಉತ್ತಮ ಉದ್ದೇಶದಿಂದ ಜಾರಿಗೆ ತರಲಾದ ‘ಚಟುವಟಿಕೆ ಪಾಯಿಂಟ್‌’ ಗಳಿಸುವ ಉಪಕ್ರಮವು ವಿದ್ಯಾರ್ಥಿಗಳಿಗೆ ಬೇಡವಾದ ಕಸರತ್ತಾಗಿ ಮಾತ್ರ ಉಳಿದುಕೊಂಡಿದೆ
Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ಬರೀ ತಾಂತ್ರಿಕ ಜ್ಞಾನ ಮತ್ತು ಕೌಶಲಗಳಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ ಮೈಗೂಡಿಸಲು ಸಾಧ್ಯವಿಲ್ಲವೆಂದು ಭಾವಿಸಿದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), 2019- 20ನೇ ಸಾಲಿನಲ್ಲಿ ‘ಎಐಸಿಟಿಇ ಆ್ಯಕ್ಟಿವಿಟಿ ಪಾಯಿಂಟ್ಸ್’ ಎಂಬ ಉಪಕ್ರಮದ ಜಾರಿಗೆ ಮುಂದಾಯಿತು. ಇದರ ಪ್ರಕಾರ, ಎಂಜಿನಿಯರಿಂಗ್ ವಿದ್ಯಾರ್ಥಿಯು ಪದವಿ ಪಡೆಯಲು ಅರ್ಹನಾಗಬೇಕಿದ್ದರೆ ನಾಲ್ಕು ವರ್ಷಗಳ ಅವಧಿಯಲ್ಲಿ 100 ಎಐಸಿಟಿಇ ಚಟುವಟಿಕೆ ಪಾಯಿಂಟ್‍ಗಳನ್ನು ಸಂಪಾದಿಸಬೇಕಿರುವುದು ಕಡ್ಡಾಯ.

ಲ್ಯಾಟರಲ್ ಎಂಟ್ರಿ ಮೂಲಕ ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ಪಡೆಯುವವರಿಗೆ 25 ಪಾಯಿಂಟ್‍ಗಳ ವಿನಾಯಿತಿ ಇದೆ. ವಿದ್ಯಾರ್ಥಿಯೊಬ್ಬ ಪದವಿಯ ಎಲ್ಲ ವಿಷಯಗಳಲ್ಲೂ ಉತ್ತೀರ್ಣನಾಗಿ ಒಂದುವೇಳೆ ನಿಗದಿತ ಪ್ರಮಾಣದಲ್ಲಿ ಎಐಸಿಟಿಇ ಚಟುವಟಿಕೆ ಪಾಯಿಂಟ್‍ಗಳನ್ನು ಸಂಪಾದಿಸಲು ವಿಫಲನಾಗಿದ್ದರೆ ಅಂತಹ ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಲಾಗುವುದಿಲ್ಲ.

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಚೈತನ್ಯ ಮತ್ತು ಸಾಫ್ಟ್ ಸ್ಕಿಲ್ಸ್ ಮೈಗೂಡಿಸುವ ಸಲುವಾಗಿ ಈ ಉಪಕ್ರಮವನ್ನುಜಾರಿಗೆ ತರಲಾಗಿದೆ. ಎಐಸಿಟಿಇ ಚಟುವಟಿಕೆ ಪಾಯಿಂಟ್‍ಗಳನ್ನು ಹೇಗೆ ಸಂಪಾದಿಸಬಹುದು ಎಂಬ ಕುರಿತು ಹೊರಡಿಸಲಾಗಿರುವ ಮಾರ್ಗಸೂಚಿಯಲ್ಲಿ 15 ಚಟುವಟಿಕೆಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಕೆಲವು: ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಗುಣ ಮಟ್ಟ ಸುಧಾರಿಸುವುದು, ಹಳ್ಳಿಯ ಆದಾಯ ದ್ವಿಗುಣಗೊಳಿಸುವುದು, ಸುಸ್ಥಿರ ನೀರು ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿ, ಹಳ್ಳಿಯ ಜನರ ಆರೋಗ್ಯ ಸುಧಾರಣೆ, ಕಡಿಮೆ ವೆಚ್ಚದ ನೈರ್ಮಲ್ಯ ಸೌಕರ್ಯಗಳ ಅಭಿವೃದ್ಧಿ ಮತ್ತು ಅನುಷ್ಠಾನ, ಸ್ಥಳೀಯ ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ವಿಧಾನಗಳನ್ನು ಕಂಡುಕೊಳ್ಳುವುದು.

ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಸುಧಾರಣೆ ತರಬೇಕಿದ್ದ ಈ ಉಪಕ್ರಮ ಅನುಷ್ಠಾನಕ್ಕೆ ಬಂದು ಐದು ವರ್ಷಗಳಾಗಿವೆ. ಕೊರೊನಾ ಸೋಂಕು ವ್ಯಾಪಕವಾಗಿದ್ದ ಸಂದರ್ಭದಲ್ಲಿ ಚಟುವಟಿಕೆ ಅಂಕಗಳನ್ನು ಸಂಪಾದಿಸು
ವುದಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ ಇದೀಗ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರತಿವರ್ಷ 25 ಪಾಯಿಂಟ್‍ಗಳನ್ನು ಗಳಿಸಬೇಕಿದೆ.

ದೇಶದಾದ್ಯಂತ ನಿಗದಿತ ಪ್ರಮಾಣದ ಎಐಸಿಟಿಇ ಚಟುವಟಿಕೆ ಪಾಯಿಂಟ್‍ಗಳನ್ನು ಸಂಪಾದಿಸಿ
ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆದರೆ, ಈ ಉಪಕ್ರಮ ಅಸಲಿಗೂ ಸಾಮಾಜಿಕ ಬದಲಾವಣೆ ತರುವ ದಿಸೆಯಲ್ಲಿ, ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವಲ್ಲಿ ಇನಿತಾದರೂ ಪರಿಣಾಮ ಬೀರತೊಡಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ.

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡು ನೋಡುವುದಾದರೂ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ
ವಿದ್ಯಾಲಯದಿಂದ ಹಿಂದಿನ ಮೂರ್ನಾಲ್ಕು ವರ್ಷಗಳಿಂದ ಪದವಿ ಪಡೆದಿರುವ ವಿದ್ಯಾರ್ಥಿಗಳೆಲ್ಲ ನಿಗದಿತ ಪ್ರಮಾಣದ ಎಐಸಿಟಿಇ ಚಟುವಟಿಕೆ ಪಾಯಿಂಟ್‍ಗಳನ್ನು ಗಳಿಸಿಯೇ ಇರುತ್ತಾರೆ. ಹೀಗೆ ಲಕ್ಷಾಂತರ ವಿದ್ಯಾರ್ಥಿಗಳು ಸಮಾಜ ಸುಧಾರಣೆಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿರುವುದು ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನರ ಗಮನಕ್ಕೆ ಬಾರದಿರಲು ಸಾಧ್ಯವೇ?

ಹಿಂದಿನ ನಾಲ್ಕು ವರ್ಷಗಳಲ್ಲಿ ಎಐಸಿಟಿಇ ಚಟುವಟಿಕೆ ಪಾಯಿಂಟ್‍ಗಳನ್ನು ಸಂಪಾದಿಸುವ ಸಲುವಾಗಿ ವಿದ್ಯಾರ್ಥಿಗಳು ಮಾಡಿದ ಗಮನಾರ್ಹ ಚಟುವಟಿಕೆಗಳು ಯಾವುವು ಎಂಬುದನ್ನು ವಿಶ್ವೇಶ್ವರಯ್ಯ
ತಾಂತ್ರಿಕ ವಿಶ್ವವಿದ್ಯಾಲಯ ಪಟ್ಟಿ ಮಾಡಿದರೆ, ಈ ಉಪಕ್ರಮ ತನ್ನ ಉದ್ದೇಶ ಸಾಧನೆಯಲ್ಲಿ ಯಾವ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದು ಮನದಟ್ಟಾಗಲಿದೆ.

ಎಐಸಿಟಿಇ ಜಾರಿಗೆ ತಂದ ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಬದಲಿಗೆ ಮಾಡದ ಕೆಲಸಕ್ಕೆ ದಾಖಲೆ ಹೊಂಚುವ ಕಸರತ್ತಾಗಿ ‍ಪರಿಣಮಿಸಿದೆ. ಈ ಉಪಕ್ರಮವನ್ನು ಕಾಟಾಚಾರಕ್ಕೆ ಮಾಡಿ ಮುಗಿಸಬೇಕಿರುವ ಪ್ರಕ್ರಿಯೆ ಎಂದೇ ಬಹುತೇಕ ವಿದ್ಯಾರ್ಥಿಗಳು ಹಾಗೂ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳು ಭಾವಿಸಿವೆ. ಹೀಗಾಗಿ, ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುತ್ತಿದ್ದಾರೆ ಎಂಬುದು ದಾಖಲೆಗಳಲ್ಲಿ ಇರುವುದಕ್ಕೂ ವಾಸ್ತವದಲ್ಲಿ ನಡೆಯುತ್ತಿರುವುದಕ್ಕೂ ಅಜಗಜಾಂತರ ಇದೆ.

ಉತ್ತಮ ಉದ್ದೇಶ ಇಟ್ಟುಕೊಂಡು ಜಾರಿಗೆ ತಂದ ಈ ಉಪಕ್ರಮದ ಅನುಷ್ಠಾನದ ವೇಳೆ ಎದುರಾಗಬಹುದಾದ ಸವಾಲುಗಳ ಕುರಿತು ಎಐಸಿಟಿಇ ಹೆಚ್ಚು ಗಮನಹರಿಸದ ಕಾರಣದಿಂದಾಗಿ, ಇದು ವಿದ್ಯಾರ್ಥಿಗಳಿಗೆ ಬೇಡವಾದ, ಆದರೆ ಪದವಿ ಗಳಿಸಿಕೊಳ್ಳಲು ಹೇಗಾದರೂ ದಾಖಲೆ ಹೊಂದಿಸಬೇಕಿರುವ ಕಸರತ್ತಾಗಿ ಮಾತ್ರ ಉಳಿದುಕೊಂಡಿದೆ. ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆ ಹೊಂದಲು ಪ್ರೇರೇಪಿಸುವ ಕೆಲ ವಿಷಯಗಳು ಈಗಾಗಲೇ ಎಂಜಿನಿಯರಿಂಗ್ ಪದವಿ ಪಠ್ಯದ ಭಾಗವಾಗಿವೆ.

ಚಟುವಟಿಕೆ ಪಾಯಿಂಟ್ಸ್ ಗಳಿಸಬೇಕೆನ್ನುವ ಉಪಕ್ರಮಕ್ಕಿಂತ ‘ಸಾಮಾಜಿಕ ಸಂಪರ್ಕ ಮತ್ತು ಹೊಣೆಗಾರಿಕೆ’
(ಸೋಷಿಯಲ್‌ ಕನೆಕ್ಟಿವಿಟಿ ಆ್ಯಂಡ್‌ ರೆಸ್ಪಾನ್ಸಿಬಿಲಿಟಿ) ಎಂಬ ವಿಷಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವುದರೆಡೆಗೆ ತಾಂತ್ರಿಕ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಮತ್ತು ಅವುಗಳಿಗೆ ಮಾರ್ಗದರ್ಶಿ
ಸೂತ್ರಗಳನ್ನು ಹಾಕಿಕೊಡುವ ಎಐಸಿಟಿಇ ಗಮನಹರಿಸುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT