ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಡಿಜಿಟಲ್‌ ಪಯಣ: ಖೆಡ್ಡಾಕ್ಕೆ ಬಿದ್ದೀರಿ

ಸೈಬರ್‌ ಲೋಕದಲ್ಲಿ ಮೋಸಕ್ಕೆ ಒಳಗಾದವರು ತಕ್ಷಣ ದೂರು ದಾಖಲಿಸಿದರೆ ಮಾತ್ರ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ
Published 6 ಮಾರ್ಚ್ 2024, 0:23 IST
Last Updated 6 ಮಾರ್ಚ್ 2024, 0:23 IST
ಅಕ್ಷರ ಗಾತ್ರ

ಹೆಚ್ಚುವರಿ ವಿದ್ಯುತ್‌ ಬಿಲ್ಲು ಕಟ್ಟಲು ಬಂದಿದ್ದ ‘ಗೃಹಜ್ಯೋತಿ’ ಫಲಾನುಭವಿಯಾದ ಪರಿಚಿತ ರೈತನೊಬ್ಬನನ್ನು ಕೇಳಿದೆ. ‘ಇದೊಂದು ಬಿಲ್ಲಿಗೆ ಇಷ್ಟು ದೂರ ಬಂದಿದ್ದಾ? ಆನ್‌ಲೈನ್‌ನಲ್ಲೇ ಸುಲಭವಾಗಿ ಕಟ್ಟಬಹುದಿತ್ತಲ್ಲಾ?’ ನನ್ನ ಕುತೂಹಲದ ಪ್ರಶ್ನೆಗೆ ಅವರು ‘ಮೊದ್ಲು ಕರೆಂಟ್‌, ಫೋನು, ಡಿಶ್‌, ಎಲ್‌ಐಸಿ ಅಂತೆಲ್ಲಾ ಎಲ್ಲಾ ಬಿಲ್ಲುಗಳನ್ನು ಆನ್‌ಲೈನ್‌ನಲ್ಲೇ ಕಟ್ತಿದ್ದೆ. ಇತ್ಲಾಗೆ ಮೋಸ ಹೋದ್ಮೇಲೆ ಎಲ್ಲವನ್ನೂ ತೆಗೆದುಹಾಕ್ದೆ. ಈಗ ನನ್‌ ಹತ್ರ ಫೋನ್‌ಪೇ, ಗೂಗಲ್‌ಪೇ ಯಾವ್ದೂ ಇಲ್ಲ’ ಎನ್ನುತ್ತಾ ತನಗಾದ ವಂಚನೆಯ ಕತೆಯನ್ನು ಬಿಚ್ಚಿಟ್ಟಿದ್ದ.

‘ಕಾರಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸ್ಬೇಕಿತ್ತು. ಮೊಬೈಲ್‌ಗೆ ಬಂದಿದ್ದ ಲಿಂಕ್‌ ಬಳಸಿ ಸಾವ್ರ ರೂಪಾಯಿ ಹಾಕಿದೆ. ರೆಡಿಯಾಗಲು ಮೂರು ತಿಂಗಳು ಆಗುತ್ತೆ, ಮೇಲೆ ಮತ್ತೊಂದು ಸಾವ್ರ ಕಟ್ಟಿದ್ರೆ ಹದಿನೈದು ದಿನದೊಳಗೆ ಮನೆ ವಿಳಾಸಕ್ಕೆ ಕಳುಹಿಸ್ತೀವಿ ಅಂದ್ರು. ಹಾಗೇ ಆಗ್ಲಿ ಅಂತ ಮತ್ತೆ ಒಂದು ಸಾವ್ರ ಹಾಕಿದೆ. ದುಡ್ಡು ಹೋಗಿದ್ದೇ ತಡ, ಆ ಸಂಪರ್ಕನೇ ಕಡಿದುಹೋಯ್ತು. ಆಮೇಲೇ ಗೊತ್ತಾಗಿದ್ದು ಅದು ನಕಲಿ ಸೈಟ್‌ ಅಂತ! ಅಷ್ಟರೊಳಗೆ ನನ್ನ ಫೋನ್‌ ನಂಬರ್‌, ಆಧಾರ್‌, ಇ-ಮೇಲ್‌ ಐಡಿ ಎಲ್ಲಾ ತಗೊಂಡಿದ್ರು. ಈಗೇನೋ ಹೋಗಿದ್ದು ಎರಡು ಸಾವ್ರ. ಮುಂದೆ ನನ್ನ ಬ್ಯಾಂಕ್‌ ಅಕೌಂಟಿಂದ ಗೊತ್ತಾಗ್ದಂಗೆ ಹಣ ಲಪಟಾಯಿಸಕ್ಕೆ ಶುರು ಮಾಡಿದ್ರೆ ಅಂತ ವಿಪ್ರೀತ ಹೆದ್ರಿಕೆ ಶುರುವಾಯ್ತು. ಅದಕ್ಕೆ ನನ್ನ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿದ್ದ ಎಲ್ಲಾ ಆ್ಯಪ್‌ಗಳನ್ನೂ ತೆಗೆದುಹಾಕ್ಬಿಟ್ಟೆ. ಇನ್ನು ಎಷ್ಟು ಕಷ್ಟ ಆದ್ರೂ ತೊಂದ್ರೆ ಇಲ್ಲ, ಈ ಫೋನ್ ವ್ಯವಹಾರದ ಸಹವಾಸನೇ ಬೇಡ ಅಂತ ನಿರ್ಧಾರ ಮಾಡಿದ್ದೇನೆ’ ವಿಷಾದದಿಂದಲೇ ವಿವರಿಸಿದ್ದ ಆ ಯುವ ಕೃಷಿಕ!

ಹೌದು, ಮೊಬೈಲ್‌, ನೆಟ್‌ ಬ್ಯಾಂಕಿಂಗ್‌, ಯುಪಿಐ ಮೂಲಕ ಹಣದ ವ್ಯವಹಾರ ಮಾಡುತ್ತಿರುವ ಬಹುತೇಕರ ಚಿಂತೆ ಈ ಥರದ್ದೇ. ಸರಿಯಾದ ತಿಳಿವಳಿಕೆ ಇಲ್ಲದೆ ನಕಲಿ ಜಾಲಕ್ಕೆ ಬಿದ್ದ ಹಲವರು ದೊಡ್ಡ ಮೊತ್ತದ ದುಡ್ಡು ಕಳೆದುಕೊಂಡು ಕಂಗೆಟ್ಟಿದ್ದಾರೆ. ಹಣ, ಸಮಯ, ಶ್ರಮ ಉಳಿಸುವ, ಒಂದಿನಿತೂ ಒತ್ತಡವಿಲ್ಲದೆ ಕುಳಿತಲ್ಲಿಂದಲೇ ಅತಿ ಸುಲಭದಲ್ಲಿ ನಿರ್ವಹಿಸಬಹುದಾದ ಡಿಜಿಟಲ್‌ ವ್ಯವಹಾರಗಳು ಏರುಗತಿಯಲ್ಲಿವೆ. ಬೆನ್ನಲ್ಲೇ ವಿವಿಧ ನಮೂನೆಯ ಸೈಬರ್‌ ವಂಚನೆಯ ಪ್ರಕರಣಗಳೂ ಹೆಚ್ಚುತ್ತಾ ಆತಂಕ ತಂದೊಡ್ಡುತ್ತಿವೆ!

ಅದರಲ್ಲೂ ಸರ್ಕಾರದ ಯೋಜನೆಗಳು, ನೇಮಕಾತಿ ಪರೀಕ್ಷೆಗಳು ಘೋಷಣೆಯಾದ ಹೊತ್ತಿನಲ್ಲಿ ಆನ್‌ಲೈನಿನಲ್ಲಿಯೇ ಅರ್ಜಿ ಹಾಕುವುದು, ಶುಲ್ಕ ಪಾವತಿಸುವುದು ಕಡ್ಡಾಯ. ಜನರ ಅನಿವಾರ್ಯ, ಧಾವಂತ, ಮುಗ್ಧತೆ, ಸೈಬರ್ ಅನಕ್ಷರತೆಯನ್ನೇ ಬಂಡವಾಳವಾಗಿಸಿಕೊಳ್ಳುವ ಖದೀಮರು ನಕಲಿ ಲಿಂಕ್‌, ತಾಣಗಳೆಂಬ ಖೆಡ್ಡಾಕ್ಕೆ ಬೀಳಿಸಿ ಹಣ ಎಗರಿಸುವ ಮಾರ್ಗ ಕಂಡುಕೊಂಡಿರುವುದು ಚಿಂತೆಯ ವಿಷಯ.

ಮನುಕುಲದ ವಿಕಾಸದ ಉದ್ದೇಶದಿಂದ ಹೊಸ ಹೊಸ ಆವಿಷ್ಕಾರಗಳೊಂದಿಗೆ ವೇಗವಾಗಿ ಮುನ್ನಡೆಯುತ್ತಿರುವ ಡಿಜಿಟಲ್ ತಂತ್ರಜ್ಞಾನವು ಹಣಕಾಸು ವಂಚನೆ, ಮಾಹಿತಿ ಕಳ್ಳತನ, ಅನೈತಿಕ ಚಟುವಟಿಕೆಗಳಿಗೆ ದುರ್ಬಳಕೆಯಾಗುತ್ತಾ ವಿನಾಶಕ್ಕೂ ಕಾರಣವಾಗುತ್ತಿರುವುದು ದುರ್ದೈವ. ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಅನಿವಾರ್ಯವಾಗಿರುವ ಈ ದಿನಗಳಲ್ಲಿ ನಮ್ಮ ಸೈಬರ್‌ ಜಗತ್ತನ್ನು ಹೆಚ್ಚು ಸುರಕ್ಷಿತವಾಗಿ ಇಟ್ಟುಕೊಳ್ಳುವುದೇ ದೊಡ್ಡ ಸವಾಲು.

ಸೈಬರ್‌ ಲೋಕದಲ್ಲಿ ನಡೆಯುವ ತರತರಹದ ಮೋಸ, ಕಾನೂನುವಿರೋಧಿ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು, ಜಾಗೃತಿ ಶಿಬಿರಗಳು ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದರೂ ವಂಚಕರು ವಂಚಿಸಲು ಹೊಸ ಹೊಸ ವಿಧಾನಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುವ ಅಪರಾಧಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ವಂಚನೆಯ ಸಾಧ್ಯತೆಗಳ ಬಗ್ಗೆ ಚೆನ್ನಾಗಿ ಅರಿವಿದ್ದವರೂ ಖೆಡ್ಡಾಕ್ಕೆ ಬೀಳುತ್ತಿರುವುದು ಮತ್ತೊಂದು ಆತಂಕಕಾರಿ ವಿಷಯ.

ಮೋಸಕ್ಕೊಳಗಾದವರು ತಕ್ಷಣ ದೂರು ದಾಖಲಿಸಿದರೆ ಮಾತ್ರ ಅಪರಾಧಗಳಿಗೆ ಕಡಿವಾಣ ಸಾಧ್ಯ. ಮಾಹಿತಿ ಕೊರತೆಯ ಕಾರಣ ಈ ಪ್ರಮಾಣವಂತೂ ತುಂಬಾ ಕಡಿಮೆಯಿದೆ.

ಸೈಬರ್‌ ಅಪರಾಧಗಳ ಕುರಿತಾಗಿ ಜನಸಾಮಾನ್ಯರಲ್ಲಿ ಎಚ್ಚರ ಮೂಡಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಹೊರತಂದಿರುವ ‘ಸೈಬರ್‌ ಸುರಕ್ಷಾ ಕ್ಯಾಲೆಂಡರ್‌- 2024’ ಒಂದು ವಿನೂತನ ಹೆಜ್ಜೆ. ಸೈಬರ್‌ ವಂಚನೆಯ ಇತಿಹಾಸ, ವಂಚನೆಯ ನಮೂನೆಗಳು, ಮೋಸ ಹೋದಾಗ ಯಾರನ್ನು ಸಂಪರ್ಕಿಸಬೇಕು, ಆನ್‌ಲೈನ್‌ನಲ್ಲಿ ಸರಳವಾಗಿ ದೂರು ದಾಖಲಿಸುವ ಕ್ರಮ, ಸಹಾಯವಾಣಿ ಸಂಖ್ಯೆ, ಕಳೆದುಹೋದ ಮೊಬೈಲ್‌ ಫೋನ್‌, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ವಿಧಾನ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ವಿವಿಧ ಅಪರಾಧಗಳಿಗೆ ನಿಗದಿಯಾದ ಶಿಕ್ಷೆಯ ಪ್ರಮಾಣ, ಸೈಬರ್‌ ವಂಚನೆಯಿಂದ ಪಾರಾಗಲು ವಹಿಸಬೇಕಾದ ಮುನ್ನೆಚ್ಚರಿಕೆ… ಹೀಗೆ ಸೈಬರ್‌ ಸುರಕ್ಷತೆ ಕುರಿತಾದ ಅಮೂಲ್ಯ ಮಾಹಿತಿಗಳ ಕಣಜ ಈ ಡಿಜಿಟಲ್ ಕ್ಯಾಲೆಂಡರ್.‌ ಇದನ್ನು ಬಳಕೆದಾರಸ್ನೇಹಿಯಾಗಿ ವಿನ್ಯಾಸಗೊಳಿಸಿದ ಪೊಲೀಸ್‌ ಅಧಿಕಾರಿ ಮಂಜುನಾಥ ಲಿಂಗಾರೆಡ್ಡಿ ಅವರಿಗೊಂದು ಸಲಾಂ. ಈ ಕ್ಯಾಲೆಂಡರ್‌ ಪ್ರತಿ ಮನೆಯನ್ನೂ ತಲುಪಿದರೆ ಸೈಬರ್‌ ಅಪರಾಧಗಳಿಗೆ ಕಿಂಚಿತ್ತಾದರೂ ಬ್ರೇಕ್‌ ಬೀಳಬಹುದು!

ಹೌದು, ಶೂನ್ಯ ನಂಬಿಕೆ, ತಾಳಿಕೆ, ದೃಢೀಕರಣದ ನಂತರವಷ್ಟೇ ಮುಂದುವರಿಯುವ ಮೂಲ ತತ್ವವನ್ನು ಪಾಲಿಸಿದಾಗಷ್ಟೇ ನಮ್ಮ ಡಿಜಿಟಲ್‌ ಪಯಣ ಸುಖಕರವಾಗಿ ಇರಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT