‘ಅಚ್ಛೇದಿನ್‍’ಗೆ ಪೂರಕ ವಾತಾವರಣ!

7
ಕಾರ್ಮಿಕವರ್ಗವನ್ನು ಮಾರುಕಟ್ಟೆ ದಮನ ಮಾಡುತ್ತದೆಂಬ ಭವಿಷ್ಯ ಸುಳ್ಳಾಗಿದೆ

‘ಅಚ್ಛೇದಿನ್‍’ಗೆ ಪೂರಕ ವಾತಾವರಣ!

Published:
Updated:

ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‍ ಅವರು ಇತ್ತೀಚೆಗೆ ತಮ್ಮ ವಿದಾಯದ ಸಂದರ್ಭದಲ್ಲಿ ನಮ್ಮ ಪದಸಂಪತ್ತಿಗೆ ಹೊಸದೊಂದು ನುಡಿಗಟ್ಟು ಸೇರಿಸಿದ್ದಾರೆ. ಅದು ‘ಕಳಂಕಿತ
ಬಂಡವಾಳಶಾಹಿ’. ಈಗಲೂ ಭಾರತದಲ್ಲಿ ಮುಕ್ತ ಮಾರುಕಟ್ಟೆ ಸುಲಲಿತವಾಗಿ ನೆಲೆಯಾಗಿಲ್ಲ ಎಂದು ಈ ಮೂಲಕ ಸೂಚಿಸಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, ಆರ್ಥಿಕ ಪ್ರಗತಿಯನ್ನು ಪ್ರಶ್ನಿಸುವ ಪಶ್ಚಿಮದ ದೇಶಗಳ ಜನರ ಹೊಸ ಖಯಾಲಿಯನ್ನು ನಮ್ಮ ದೇಶದ ಹಲವರು ಯೋಚನೆಯೇ ಮಾಡದೆ ಅಪ್ಪಿಕೊಂಡುಬಿಟ್ಟಿದ್ದಾರೆ.

ಭಾರಿ ಆರ್ಥಿಕ ಪ್ರಗತಿಯಿಂದ ಮಾತ್ರ ಬಡ ದೇಶವೊಂದು ಶ್ರೀಮಂತವಾಗುವ ಭರವಸೆ ಇಟ್ಟುಕೊಳ್ಳಬಹುದು ಎಂಬ ಅರ್ಥಶಾಸ್ತ್ರದ ಮೊದಲ ಪಾಠವನ್ನು ನಾವು ಮರೆತಂತೆ ಕಾಣಿಸುತ್ತದೆ. ತಲಾ ಆದಾಯ ₹ 25 ಲಕ್ಷಕ್ಕಿಂತ ಹೆಚ್ಚು ಇದ್ದರೆ ಇಂತಹ ಶಂಕೆ ಸರಿಯಾಗಿರಬಹುದೇನೋ, ಆದರೆ, ಒಂದೂವರೆ ಲಕ್ಷ ರೂಪಾಯಿಗಿಂತ ಕಡಿಮೆ ಇರುವಾಗ ಅಲ್ಲ. ಸಮಾನತೆಗಾಗಿ ಅಭಿವೃದ್ಧಿಯನ್ನು ಬಲಿಕೊಟ್ಟದ್ದೇ ಯುಪಿಎ-2 ಅಧಿಕಾರ ಕಳೆದುಕೊಳ್ಳಲು ಕಾರಣ. ಆದರೆ, ‘ಅಚ್ಛೇ ದಿನ’ವನ್ನು ಜಾರಿಗೆ ತರಲು ನರೇಂದ್ರ ಮೋದಿ ಅವರಿಗೆ ಸಾಧ್ಯವಾಗಿಲ್ಲ. ಯಾಕೆಂದರೆ, ಉದ್ಯೋಗ ಸೃಷ್ಟಿ ಮತ್ತು ತೀವ್ರ ಪ್ರಗತಿಯನ್ನು ಏಕಾಗ್ರಚಿತ್ತದಿಂದ ಸಾಧಿಸಲು ಅವರಿಗೆ ಆಗಿಲ್ಲ.

2010ರಲ್ಲಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ, ಅದಕ್ಕಿಂತ ಹಿಂದಿನ ತ್ರೈಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಪ್ರಗತಿಯು ಶೇ 10 ದಾಟಿದ್ದರ ಬಗ್ಗೆ ಸಂಭ್ರಮದಿಂದ ಮಾತನಾಡಿದ್ದೆ. ಸುಮಾರು ಒಂದು ದಶಕ ಕಾಲ ದೇಶದ ಜಿಡಿಪಿ ಹಿಂದೆಂದೂ ಇಲ್ಲದ ರೀತಿಯಲ್ಲಿ ನಿರಂತರವಾಗಿ ಶೇ 8ರ ಪ್ರಗತಿ ಸಾಧಿಸಿತ್ತು. 1991ರ ಆರ್ಥಿಕ ಸುಧಾರಣೆಯ ಫಲ ಸಿಗತೊಡಗಿತ್ತು ಮತ್ತು ಅದು ಇನ್ನೆರಡು ದಶಕ ಹೀಗೆಯೇ ಮುಂದುವರಿದಿದ್ದರೆ ಭಾರತ ಗೌರವಾರ್ಹ ಮಧ್ಯಮ ವರ್ಗದ ದೇಶವಾಗಿ ಬದಲಾಗಬಹುದಿತ್ತು. ಆದರೆ ಚರ್ಚೆಯಲ್ಲಿ ಭಾಗವಹಿಸಿದ್ದ ಇತರರು ನನ್ನ ಮೇಲೆ ಮುಗಿಬಿದ್ದಿದ್ದರು. ಇದು ಉದ್ಯೋಗರಹಿತ ಪ್ರಗತಿ ಎಂದು ಅವರು ನನ್ನ ವಾದವನ್ನು ಅಲ್ಲಗಳೆದರು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ‍್ಧಿ ನಮ್ಮ ಅಗತ್ಯ ಎಂದು ಅವರು ನನಗೆ ಬೋಧಿಸಿದರು. ನನಗೆ ಬೇಸರ ಅನಿಸಿತು.

ಸೋನಿಯಾ ಗಾಂಧಿ ನೇತೃತ್ವದ ಸಲಹಾ ಮಂಡಳಿಯ ದಿನಗಳಲ್ಲಿ ಪ್ರಗತಿಯ ಬಗೆಗಿನ ಶಂಕೆ ಉತ್ತುಂಗದಲ್ಲಿತ್ತು. ಅದರ ಪರಿಣಾಮವಾಗಿ, ನರೇಗಾ, ಆಹಾರ ಭದ್ರತೆ ಮತ್ತು ಬಡವರಿಗೆ ಸೌಲಭ್ಯಗಳನ್ನು ಕೊಡುವತ್ತ ಸರ್ಕಾರ ಗಮನಹರಿಸಿತು. ಇದು ನೀತಿ ನಿಷ್ಕ್ರಿಯತೆಗೆ ಕಾರಣವಾಯಿತು. 2011ರ ನಂತರ ಪ್ರಗತಿ ಕುಸಿಯಲಾರಂಭಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾರಿ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯಿರುವ ವಿಕಾಸದ ಭರವಸೆ ಕೊಟ್ಟ ಮೋದಿ ಪ್ರಧಾನಿಯಾಗಲು ಇದು ಅವಕಾಶ ಮಾಡಿಕೊಟ್ಟಿತು. ಆದರೆ ಮೋದಿ ತಮ್ಮ ಭರವಸೆಗಳನ್ನು ಈಡೇರಿಸಿಲ್ಲ.

ಶ್ರೀಮಂತ ದೇಶಗಳಲ್ಲಿ ಜಿಡಿಪಿ ವೃದ್ಧಿ ಬಗ್ಗೆ ಪ್ರಶ್ನೆಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಯಾಕೆಂದರೆ ಇತ್ತೀಚಿನ ದಶಕಗಳಲ್ಲಿ ಪ್ರಗತಿ ಪ್ರಯೋಜನಗಳು ಅಲ್ಲಿ ಸಮಾನವಾಗಿ ಹಂಚಿಕೆಯಾಗಿಲ್ಲ. ಅಮೆರಿಕದಲ್ಲಿ  ಟ್ರಂಪ್‍ ಅಧಿಕಾರಕ್ಕೆ ಬರಲು ಇದೂ ಒಂದು ಕಾರಣ. ಭಾರತಕ್ಕೆ ಎಚ್ಚರಿಕೆಯ ಪಾಠವಾಗಬೇಕಾದದ್ದು ಇದಲ್ಲ; ಪಶ್ಚಿಮ ಮತ್ತು ಪೂರ್ವ ಏಷ್ಯಾ ದೇಶಗಳು ಶ್ರೀಮಂತವಾದದ್ದು ಹೇಗೆ ಎಂಬುದನ್ನು ಗಮನಿಸಬೇಕು. ಮಾನವ ಇತಿಹಾಸದ ಬಹುಭಾಗದಲ್ಲಿ ಪ್ರತಿ ದೇಶವೂ ಬಡವಾಗಿಯೇ ಇತ್ತು. 18ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯ ಜತೆಗೆ ನಿಜವಾದ ಪ್ರಗತಿ ಆರಂಭಗೊಂಡಿತು. ಈ ಪ್ರಗತಿಯನ್ನು ಅನುಭವಿಸಿದ ಮೊದಲ ದೇಶ ಗ್ರೇಟ್‍ಬ್ರಿಟನ್‍. ಒಂದನೇ ಇಸವಿಯಿಂದ 1800ರವರೆಗೆ ಜಾಗತಿಕ ಜಿಡಿಪಿ ಬೆಳವಣಿಗೆ ಸ್ಥಗಿತಗೊಂಡಿತ್ತು. ವ್ಯಕ್ತಿಯತಲಾ ಆದಾಯ 200 ಡಾಲರ್‍ ಆಗಿತ್ತು (ಈಗಿನ ಮೌಲ್ಯದಲ್ಲಿ ಸುಮಾರು ₹ 13 ಸಾವಿರ). 2000 ಇಸವಿಯ ಹೊತ್ತಿಗೆ ಇದು 6,539 ಡಾಲರ್ ತಲುಪಿತು (ಸುಮಾರು ₹ 4.44 ಲಕ್ಷ). ಅಭೂತಪೂರ್ವ ಆರ್ಥಿಕ ಪ್ರಗತಿಯೇ ಜೀವನ ಮಟ್ಟದಲ್ಲಿ ಈ ಮಟ್ಟದ ಸುಧಾರಣೆಗೆ ಕಾರಣ. 1950ರಲ್ಲಿ ಭಾರತದಲ್ಲಿ ವ್ಯಕ್ತಿಯ ಆರ್ಥಿಕ ಪ್ರಗತಿಯ ಪ್ರಮಾಣ ₹ 4,800 ಇತ್ತು. ಆದರೆ 2018ರಲ್ಲಿ ಅದು ಸುಮಾರು ₹ 1.35 ಲಕ್ಷ ತಲುಪಿದೆ. ಜಿಡಿಪಿ ಪರಿಕಲ್ಪನೆಯನ್ನೇ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಪ್ರಶ್ನಿಸಿದ್ದ ಡೇವಿಡ್‍ ಪೈಲಿಂಗ್‍ ಕೂಡ ‘ನೀವು ಬಡವರಾಗಿದ್ದರೆ ಆರ್ಥಿಕ ಪ್ರಗತಿಯು ನಿಮ್ಮಲ್ಲಿ ಪರಿವರ್ತನೆ ತರುತ್ತದೆ’ ಎಂದಿದ್ದಾರೆ.

ಪ್ರಗತಿಯ ಬಗ್ಗೆ ಅನುಮಾನ ಇರುವವರಿಗೆ ನನ್ನ ಪ್ರಶ್ನೆಇದು: ಜಗತ್ತಿನ ಸರಾಸರಿ ಜೀವನಮಟ್ಟದಲ್ಲಿ ಆಗಿರುವ ಈ ಭಾರಿ ಏರಿಕೆ ಕೆಟ್ಟ ವಿಚಾರವೇ? ಜಿಡಿಪಿ ಪರಿಕಲ್ಪನೆಗೆ ಹಲವು ಮಿತಿಗಳಿವೆ. ಆದಾಯದ ಹಂಚಿಕೆ, ಸರ್ಕಾರಿ ಸೇವೆಗಳ ಮೌಲ್ಯ, ಶುದ್ಧವಾದ ಗಾಳಿ, ಜಗತ್ತಿನ ಶೇ 25ರಷ್ಟಿರುವ ಸಣ್ಣ ರೈತರು ಮತ್ತು ಅನೌಪಚಾರಿಕ ಅರ್ಥವ್ಯವಸ್ಥೆ ಜಿಡಿಪಿಯಲ್ಲಿ ಪ್ರತಿಫಲನಗೊಳ್ಳುವುದಿಲ್ಲ. ಮುಖ್ಯವಾಗಿ ಮಹಿಳೆಯರು ಮಾಡುವ ಮನೆಕೆಲಸ, ಮಕ್ಕಳು ಮತ್ತು ವೃದ‍್ಧರ ಆರೈಕೆಗಳೂ ಇದರ ವ್ಯಾಪ್ತಿಯಲ್ಲಿ ಇಲ್ಲ. ಜಿಡಿಪಿಯಲ್ಲಿ ಭಾರಿ ಬೆಳವಣಿಗೆ ಇದ್ದರೂ ಬಹುಸಂಖ್ಯಾತರಿಗೆ ಪ್ರಯೋಜನವಾಗುತ್ತಿಲ್ಲ ಎನ್ನಬಹುದು. ಆದರೆ, ತೀವ್ರವಾದ ಆರ್ಥಿಕ ಪ್ರಗತಿಯು ಬಡದೇಶಗಳಿಗೆ ಅಪಾರ ಪ್ರಯೋಜನಗಳನ್ನು ನೀಡಿದೆ. ಮಾರುಕಟ್ಟೆಯು ಕಾರ್ಮಿಕ ವರ್ಗವನ್ನು ದಮನ ಮಾಡುತ್ತದೆ ಎಂಬ ಎಡಚಿಂತನೆಯ ಭವಿಷ್ಯ ಸುಳ್ಳಾಗಿದೆ.

ಹೆಚ್ಚಿನ ನೀರು ಬಳಕೆ, ಕಾರ್ಬನ್‍ ಡೈ ಆಕ್ಸೈಡ್‍ ಹೊರಸೂಸುವಿಕೆ, ಹೆಚ್ಚು ಕಲ್ಲಿದ್ದಲು ಸುಡುವಿಕೆ ಬಗ್ಗೆ ಪರಿಸರವಾದಿಗಳ ಕಳಕಳಿಗೆ ನನಗೆ ಸಹಮತವಿದೆ. ಆದರೆ,ಮಾಲಿನ್ಯ ಮತ್ತು ಆರ್ಥಿಕ ಪ್ರಗತಿಯನ್ನು ಸಮೀಕರಿಸುವುದು, ಪ್ರಗತಿಯ ಆದ್ಯತೆ ಬದಲಾಯಿಸಬೇಕು ಎನ್ನುವುದು ತಪ್ಪು. ಶುದ್ಧ ವಾತಾವರಣದಲ್ಲಿ ಅಮಿತವಾದ ಆರ್ಥಿಕ ಪ್ರಗತಿ ಸಾಧ್ಯ ಎಂಬುದು ಸೈದ್ಧಾಂತಿಕವಾಗಿ ಸರಿ. ಸಮಸ್ಯೆ ಇರುವುದು ಜಿಡಿಪಿಯಲ್ಲಿ ಅಲ್ಲ, ಬದಲಿಗೆ ನೀತಿ ನಿರೂಪಣೆಯಲ್ಲಿ ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದರಲ್ಲಿ. ಮಾನವ ಅಭಿವೃದ್ಧಿ ಅಥವಾ ಸಂತೃಪ್ತಿ ಸೂಚ್ಯಂಕಗಳ ಜತೆಗೆ ಇದನ್ನು ಬಳಸಿದರೆ ಮನುಷ್ಯನ ಸ್ಥಿತಿ ಇನ್ನಷ್ಟು ಉತ್ತಮಗೊಳ್ಳುತ್ತದೆ. ಪ್ರಗತಿಯ ಅಸಮಾನತೆಯ ಬಗ್ಗೆ ಚಿಂತೆ ಮಾಡುವ ಬದಲಿಗೆ, ಉತ್ತಮ ಶಾಲೆಗಳು, ಆಸ್ಪತ್ರೆಗಳಿಂದಾಗಿ ಎಲ್ಲರಿಗೂ ದೊರೆತ ಅವಕಾಶಗಳ ಮೂಲಕ ಪ್ರಗತಿಯನ್ನು ಅಳೆಯಬೇಕು.

ಮೋದಿ ಅವರು ಭರವಸೆ ನೀಡಿದ್ದ ‘ಅಚ್ಛೇ ದಿನ್‍’ ಬಂದಿಲ್ಲ. ಆದರೆ, ಜಿಎಸ್‍ಟಿ, ದಿವಾಳಿ ಕಾಯ್ದೆ, ಸುಲಲಿತ ವ್ಯಾಪಾರ ಅವಕಾಶಗಳ ಮೂಲಕ ಅಚ್ಛೇದಿನ್‍ಗೆ ಪೂರಕವಾದ ವಾತಾವರಣವನ್ನು ಅವರು ಸೃಷ್ಟಿಸಿದ್ದಾರೆ. 2019ರ ಚುನಾವಣೆಯಲ್ಲಿ ಯಾರೇ ಗೆದ್ದರೂ ಮುಂದಿನ 5-10 ವರ್ಷ ನಿರಂತರವಾದ ಉತ್ತಮ ಬೆಳವಣಿಗೆ ಸಾಧ್ಯವಾಗಲಿದೆ.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !