ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ಚಿಂತಕ ಲಿಯೊ ಟಾಲ್‌ಸ್ಟಾಯ್: ಮಹಾಚೇತನದ ಮಹಾಬೆಳಕು

ಶ್ರೇಷ್ಠ ಚಿಂತಕ ಲಿಯೊ ಟಾಲ್‌ಸ್ಟಾಯ್‌ ಅವರ ಮಾನವೀಯ ಮೌಲ್ಯಗಳ ಚಿಂತನೆ ಈಗಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತ
Last Updated 18 ಸೆಪ್ಟೆಂಬರ್ 2020, 1:03 IST
ಅಕ್ಷರ ಗಾತ್ರ

ಯುವಕನೊಬ್ಬ ಕಾಲೇಜು ದಿನಗಳಲ್ಲಿ ತನ್ನ ಅಧ್ಯಾಪಕರಿಂದ ‘ಓದಲು ಅಸಮರ್ಥ ಹಾಗೂ ಓದಲು ಆಸಕ್ತಿ ಇಲ್ಲದವನು’ ಎಂಬ ಟೀಕೆಗೆ ಗುರಿಯಾಗುತ್ತಾನೆ. ಬಳಿಕ ಕಾಲೇಜು ತೊರೆದು, ಸ್ವಯಂ ಶಿಕ್ಷಣ ಪಡೆದು, ಉತ್ಕೃಷ್ಟ ಸಾಹಿತ್ಯ ಸೃಷ್ಟಿಸಿ, ಎಲ್ಲ ಕಾಲಕ್ಕೂ ಸಲ್ಲುವ, ಜಗತ್ತಿನ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲೊಬ್ಬನಾಗಿ ಪ್ರಖ್ಯಾತನಾಗುತ್ತಾನೆ.

ಸೈನ್ಯದಲ್ಲಿ ಸೇವೆ ಸಲ್ಲಿಸುವ ಅದೇ ಯುವಕ, ಯುದ್ಧದಲ್ಲಿ ತೋರಿದ ಉತ್ತಮ ಸಾಧನೆಯಿಂದಾಗಿ ಲೆಫ್ಟಿನೆಂಟ್ ಹುದ್ದೆಗೆ ಪದೋನ್ನತಿ ಪಡೆಯುತ್ತಾನೆ. ಆದರೆ ಯುದ್ಧದಲ್ಲಿ ಆದ ಸಾವು ನೋವು, ಹಿಂಸೆಯನ್ನು ನೋಡಲಾಗದೆ ಸೈನ್ಯ ತೊರೆದು, ಪ್ರೀತಿ, ಶಾಂತಿ, ಸಹಿಷ್ಣುತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಶಾಂತಿದೂತನಾಗುತ್ತಾನೆ.

ಕೊಂಚ ಅಶಿಸ್ತು ಹಾಗೂ ಮೋಜಿನ ಜೀವನ ನಡೆಸುತ್ತಿದ್ದ ಅದೇ ವ್ಯಕ್ತಿ ನಂತರ ಬದಲಾಗಿ, ಬದುಕಿನ ಗಂಭೀರ ವಿಷಯಗಳಿಗೆ ಸ್ಪಂದಿಸುತ್ತಾ ಜಗತ್ತಿನ ಶ್ರೇಷ್ಠ ಚಿಂತಕ, ವಿಶ್ವಗುರು ಎನಿಸಿಕೊಳ್ಳುತ್ತಾನೆ. ಆತನೇ ರಷ್ಯಾದ ಲಿಯೊ ಟಾಲ್‍ಸ್ಟಾಯ್. ಇತ್ತೀಚೆಗಷ್ಟೇ ಜನ್ಮದಿನದ ನೆಪದಲ್ಲಿ (ಸೆ. 9) ಜಗತ್ತು ಅವರನ್ನು ಸ್ಮರಿಸಿದೆ.

ಜಗತ್ತಿನ ಅನೇಕ ಸಾಹಿತಿಗಳು ಟಾಲ್‍ಸ್ಟಾಯ್ ಅವರಿಂದ ಪ್ರೇರಣೆ ಪಡೆದಿದ್ದಾರೆ. ಅವರಲ್ಲಿ ಪ್ರಮುಖರೆಂದರೆ, ಬ್ರಿಟಿಷ್ ಸಾಹಿತಿಗಳಾದ ಮ್ಯಾಥ್ಯೂ ಆರ್ನಾಲ್ಡ್, ವರ್ಜೀನಿಯಾ ವುಲ್ಫ್ ಹಾಗೂ ರಷ್ಯಾದ ಸಾಹಿತಿಗಳಾದ ಇಸಾಕ್ ಬಾಬೆಲ್, ವ್ಲಾಡಿಮಿರ್ ನಬೊಕೊವ್.

ಟಾಲ್‍ಸ್ಟಾಯ್ ಅವರ ಪ್ರೀತಿ, ಶಾಂತಿ, ಅಹಿಂಸೆ ಹಾಗೂ ಮಾನವತಾವಾದಿ ತತ್ವಗಳಿಂದ ಜಗತ್ತಿನ ಲಕ್ಷಾಂತರ ಜನ ಪ್ರಭಾವಿತರಾಗಿದ್ದಾರೆ. ಅವರಲ್ಲಿ ಮಹಾತ್ಮ ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಪ್ರಮುಖರು.

ಗಾಂಧಿಯವರು ಟಾಲ್‍ಸ್ಟಾಯ್ ಅವರ ಅನೇಕ ಪುಸ್ತಕಗಳಿಂದ ಪ್ರಭಾವಿತರಾಗುತ್ತಾರೆ. ಅದರಲ್ಲೂ ಟಾಲ್‍ಸ್ಟಾಯ್ ಅವರ ‘ದಿ ಕಿಂಗ್ಡಂ ಆಫ್ ಗಾಡ್ ಈಸ್ ವಿತಿನ್ ಯೂ’ ಪುಸ್ತಕವು ಗಾಂಧೀಜಿ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಟಾಲ್‍ಸ್ಟಾಯ್ ಅವರ ಪ್ರೀತಿ, ಶಾಂತಿ, ಅಹಿಂಸೆ, ಸಹಿಷ್ಣುತೆಯ ತತ್ವಗಳು ಬಹುವಾಗಿ ಇಷ್ಟವಾಗುತ್ತವೆ. ಗಾಂಧೀಜಿಯ ರಾಜಕೀಯ ಹಾಗೂ ಸಾಮಾಜಿಕ ಆಲೋಚನೆ, ತತ್ವಗಳ ಹಿಂದೆ ಟಾಲ್‍ಸ್ಟಾಯ್ ಅವರ ಚಿಂತನೆಯ ಗಾಢ ಪ್ರಭಾವ ಇದ್ದುದನ್ನು ಕಾಣಬಹುದು.

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳ ಪರವಾದ ಹೋರಾಟದಲ್ಲಿ ನಿರತರಾಗಿದ್ದ ಯುವ ಗಾಂಧಿಗೆ, ಟಾಲ್‍ಸ್ಟಾಯ್ ಅವರು ಪ್ರತಿಪಾದಿಸಿದ, ಅಹಿಂಸಾತ್ಮಕವಾಗಿ ಪ್ರತಿರೋಧ ತೋರುವ ಮೌಲ್ಯವು ಇಷ್ಟವಾಗುತ್ತದೆ. ಟಾಲ್‍ಸ್ಟಾಯ್ ಅವರ ಈ ಚಿಂತನೆಯಿಂದ ಸ್ಫೂರ್ತಿ ಪಡೆದ ಗಾಂಧೀಜಿ ತಮ್ಮ ಎಲ್ಲ ಹೋರಾಟಗಳಲ್ಲಿ ಅಹಿಂಸೆಯ ಮೂಲಕ ಪ್ರತಿರೋಧ ತೋರುವ ಸತ್ಯಾಗ್ರಹ ಚಳವಳಿಯನ್ನು ಮುನ್ನೆಲೆಗೆ ತಂದು, ಅದನ್ನು ಬ್ರಿಟಿಷರ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸುತ್ತಾರೆ.

ಗಾಂಧೀಜಿ ತಮ್ಮ ಸ್ನೇಹಿತರು ಹಾಗೂ ಒಡನಾಡಿಗಳ ಜೊತೆಗೂಡಿ ದಕ್ಷಿಣ ಆಫ್ರಿಕಾದಲ್ಲಿ ಒಂದು ಆಶ್ರಮ ಸ್ಥಾಪಿಸಿ, ಅದನ್ನು ‘ಟಾಲ್‍ಸ್ಟಾಯ್ ಆಶ್ರಮ’ ಎಂದು ಹೆಸರಿಸುತ್ತಾರೆ. ಆಶ್ರಮವಾಸಿಗಳು ಸ್ವತಃ ಹೊಲದಲ್ಲಿ ದುಡಿಮೆ ಮಾಡಿ, ಸ್ವಾವಲಂಬಿಯಾಗಿ ಬದುಕುವುದರ ಜೊತೆಗೆ ಸತ್ಯ, ಪ್ರೀತಿ, ಅಪರಿಗ್ರಹ, ಅಹಿಂಸೆಯ ತತ್ವಾಚರಣೆಯ ಮೂಲಕ ಜೀವಿಸುತ್ತಾರೆ. ಟಾಲ್‍ಸ್ಟಾಯ್ ಆಶ್ರಮದಲ್ಲಿನ ಅನುಭವಗಳು ಗಾಂಧೀಜಿಯಲ್ಲಿ ಸ್ವದೇಶಿ ಚಳವಳಿಯ ಹುಟ್ಟಿಗೆ ಕಾರಣವಾಗುತ್ತವೆ.

ಟಾಲ್‍ಸ್ಟಾಯ್ ಹಾಗೂ ಗಾಂಧೀಜಿಯ ನಡುವೆ ಅನೇಕ ಸಾಮ್ಯತೆಗಳನ್ನು ಗುರುತಿಸಬಹುದು. ಇಬ್ಬರೂ ಮಹಾನ್ ನಾಯಕರು ಜಾನ್ ರಸ್ಕಿನ್ ಅವರ ‘ಅನ್‍ಟು ದಿಸ್‌ ಲಾಸ್ಟ್’ ಪುಸ್ತಕದಿಂದ ಪ್ರಭಾವಿತರಾಗಿ ತಮ್ಮ ಸರ್ವೋದಯ, ಸಮಾನತೆ, ವಿಶ್ವಭ್ರಾತೃತ್ವದ ತತ್ವಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಟಾಲ್‍ಸ್ಟಾಯ್ ಮತ್ತು ಗಾಂಧಿ ಇಬ್ಬರೂ ಅನೇಕ ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರೂ ಅವರಿಗೆ ಪ್ರಶಸ್ತಿ ನೀಡದ ನೊಬೆಲ್ ಸಮಿತಿಯು ಭವಿಷ್ಯದಲ್ಲಿ ಪರಿತಪಿಸಿ, ಪಶ್ಚಾತ್ತಾಪಪಟ್ಟದ್ದು ಇತಿಹಾಸ.

ಗಾಂಧಿಯವರು ಟಾಲ್‍ಸ್ಟಾಯ್ ಅವರ ಸಂಪರ್ಕಕ್ಕೆ ಬಂದ ಪ್ರಸಂಗ ಕುತೂಹಲಕಾರಿಯಾಗಿದೆ. ಟಾಲ್‍ಸ್ಟಾಯ್ ಅವರು ಬರೆದಿದ್ದ ‘ಹಿಂದೂವೊಬ್ಬನಿಗೆ ಪತ್ರ’ ಎಂಬ ಬರಹವನ್ನು ಓದಿ ಇಷ್ಟಪಡುವ ಯುವ ಗಾಂಧಿ, ಆ ಬರಹದ ಪ್ರತಿ ಮಾಡಿ ಹಂಚಲು ಟಾಲ್‍ಸ್ಟಾಯ್ ಅವರ ಅನುಮತಿ ಕೋರಿ ಪತ್ರ ಬರೆಯುತ್ತಾರೆ. ಇದಕ್ಕೆ ಉತ್ತರ ಬರೆದ ಟಾಲ್‍ಸ್ಟಾಯ್, ಗಾಂಧಿಯವರನ್ನು ಸ್ನೇಹಿತ, ಸಹೋದರ ಎಂದು ಸಂಬೋಧಿಸುತ್ತಾರೆ. ಗಾಂಧಿಯವರು ಟಾಲ್‍ಸ್ಟಾಯ್ ಅವರನ್ನು ಗುರು, ಮಾರ್ಗದರ್ಶಕ ಎಂದು ಪರಿಗಣಿಸುತ್ತಾರೆ. ಹೀಗೆ ಜಗತ್ತಿನ ಶ್ರೇಷ್ಠ ವ್ಯಕ್ತಿತ್ವಗಳು ಹಲವು ಪತ್ರಗಳ ಮೂಲಕ ಪರಸ್ಪರ ಸಂವಾದಿಸುತ್ತವೆ. ಇಬ್ಬರ ಪತ್ರಗಳಲ್ಲಿ ಮಾನವೀಯ ಮೌಲ್ಯಗಳ ಕುರಿತ ಚಿಂತನೆಗಳು ಎದ್ದು ಕಾಣುತ್ತವೆ.

ಈಗಿನ ದುರಿತ ಕಾಲದಲ್ಲಿ, ಈ ಮಹಾನ್ ಚೇತನಗಳು ಪ್ರತಿಪಾದಿಸಿದ ಶಾಂತಿ, ಪ್ರೀತಿ, ಸಹಿಷ್ಣುತೆ, ವಿಶ್ವಭ್ರಾತೃತ್ವದ ಮೌಲ್ಯಗಳು ಈ ಜಗತ್ತನ್ನು ಬೆಳಕಿನ ಹಾದಿಯಲ್ಲಿ ಮುನ್ನಡೆಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT