ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿಗಳೆಂಬ ಮಾಯಾ ಜಿಂಕೆಗಳ ಬೆಂಬತ್ತಿ

Last Updated 24 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ವಿಶ್ವ ಆತ್ಮಹತ್ಯಾ ತಡೆ ದಿನವಾದ ಸೆಪ್ಟೆಂಬರ್ 10ರಂದು, ವಿವಿಧ ಪತ್ರಿಕೆಗಳಲ್ಲಿ ಆತ್ಮಹತ್ಯೆ ಕುರಿತ ಅಂಕಿ- ಅಂಶಗಳು, ಆತ್ಮಹತ್ಯೆಗೆ ಇರಬಹುದಾದ ಕಾರಣಗಳು ಹಾಗೂ ಆತ್ಮಹತ್ಯೆಗಳನ್ನು ತಡೆಯುವುದನ್ನು ಕುರಿತ ವರದಿಗಳು ಪ್ರಕಟವಾದವು. ಭಾರತದಲ್ಲಿ ಕರ್ನಾಟಕವೇ ಆತ್ಮಹತ್ಯೆಗಳ ರಾಜಧಾನಿ ಎಂಬ ಸುದ್ದಿಯು ಖುಷಿ ಕೊಡುವಂಥದ್ದಲ್ಲ. ಆತ್ಮಹತ್ಯಾ ತಡೆ ದಿನಾಚರಣೆಯ ಬೆನ್ನಲ್ಲೇ ರಾಜ್ಯದ ಬಾಲೆಯರ ಆತ್ಮಹತ್ಯೆ ಪ್ರಕರಣಗಳು ತಲ್ಲಣ ಉಂಟುಮಾಡಿದವು.

ದೂರದ ಅಸ್ಸಾಂನಲ್ಲಿ ಐಐಟಿಯಲ್ಲಿ ಓದುತ್ತಿದ್ದ, ರಾಜ್ಯದ ಹೊಸನಗರ ತಾಲ್ಲೂಕಿನ ಪ್ರತಿಭಾವಂತೆ ಹಾಗೂ ಆಟೋಟ, ಎನ್‌ಸಿಸಿಗಳಂಥ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಾಗಶ್ರೀ, ಸೆಪ್ಟೆಂಬರ್ 12 ರಂದು ಸ್ವಹತ್ಯೆಗೆ ಶರಣಾದಳು. ಇತ್ತ ಮೂಡುಬಿದಿರೆಯಲ್ಲಿ ಓದುತ್ತಿದ್ದ ಬೆಂಗಳೂರಿನ ಹುಡುಗಿ ವಿನುತಾ ಸಹ ಅದೇ ದಿನ ಆತ್ಮಹತ್ಯೆ ಮಾಡಿಕೊಂಡಳು. ಒಂದೆರಡು ದಿನ ಕಳೆಯುವುದರೊಳಗೆ ಬೆಂಗಳೂರಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸುಶ್ಮಿತಾ ತನ್ನ ಮನೆಯಲ್ಲಿಯೇ ಸಾವು ತಂದುಕೊಂಡಳು. ಅರಳಿ, ಬೆಳೆದು ಮನೆಗೆ ಬೆಳಕಾಗಬಹುದಾದ ಕಿರಿಯ ಜೀವಗಳು ಹೀಗೆ ತಮ್ಮ ಬದುಕನ್ನು ಕೊನೆಗಾಣಿಸಿದ ಘಟನೆಗಳು ದಿಗ್ಭ್ರಮೆ ಉಂಟು ಮಾಡದಿರವು.

ಈ ಆತ್ಮಹತ್ಯೆಗಳಲ್ಲಿ ಒಗಟಾಗಿ ಕಂಡುಬಂದಿದ್ದು ನಾಗಶ್ರೀಯ ಸಾವು. ಐಐಟಿಯಂತಹ ಸಂಸ್ಥೆಯಲ್ಲಿ ಸೀಟು ಪಡೆದ ಕೆಲವೇ ದಿನಗಳಲ್ಲಿ ‘ನಾನು ಶಿಕ್ಷಕಿಯಾಗಬೇಕಾಗಿತ್ತು, ಹೆತ್ತವರ ಮತ್ತು ಸಂಬಂಧಿಕರ ನಿರೀಕ್ಷೆ, ಆಕಾಂಕ್ಷೆಗಳನ್ನು ಈಡೇರಿಸದ ಮೇಲೆ ಬದುಕಬಾರದು’ ಎಂಬ ಸಾಲುಗಳನ್ನು ಬರೆದು ಸಾವಿನೆಡೆಗೆ ಸರಿದಳು. ಸ್ಫೂರ್ತಿಯ ಸೆಲೆಯಾಗಿದ್ದ, ಎಲ್ಲರಿಗೂ ಮಾದರಿ ಎನ್ನುವಂತಿದ್ದ ಜೀವನ ಕೌಶಲಗಳನ್ನು ಹೊಂದಿದ್ದ ನಾಗಶ್ರೀ, ಐಐಟಿಗೆ ಸೇರಿದ ಕೆಲವೇ ದಿನಗಳಲ್ಲಿ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಅರ್ಥವಾಗದ ಸಂಗತಿ. ಶಿಕ್ಷಕಿಯಾಗಬೇಕಿದ್ದರೆ ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕವೂ ಆಗಬಹುದಿತ್ತು. ತನಗೆ ಇಚ್ಛೆ ಇಲ್ಲದ ಶಿಕ್ಷಣದಲ್ಲಿ ಮುಂದುವರಿಯಲು ಸಮಸ್ಯೆಯಾಯಿತೋ ಅಥವಾ ಐಐಟಿಯ ಕಠಿಣ ಪಠ್ಯಕ್ರಮ, ಊರು– ಮನೆಯ ಪರಿಸರಗಳಿಂದ ದೂರದ ವಾಸ್ತವ್ಯಗಳು ತರಬಹುದಾದ ಒತ್ತಡಗಳನ್ನು ತಾಳದೆ ಆತ್ಮಹತ್ಯೆ ಮಾಡಿಕೊಂಡಳೋ ಎಂಬುದು ತಿಳಿಯದು.

ಐಐಟಿಗಳಂಥ ಪ್ರತಿಷ್ಠಿತ ಸಂಸ್ಥೆಗಳೆಡೆಗೆ ಪೋಷಕರ ಮತ್ತು ಮಕ್ಕಳ ತುಡಿತ ಎಣೆಯಿಲ್ಲದ್ದು. ಎಲ್‌ಕೆಜಿಗೆ ಸೇರಿಸುವ ಸಂದರ್ಭದಲ್ಲೇ ಪೋಷಕರು ತಮ್ಮ ಮಗು ಮುಂದೆ ಐಐಟಿಯಲ್ಲಿ ಓದಬೇಕು ಎಂದು ಆಸೆಪಡುತ್ತಾರೆ. ಐಐಟಿ ಮತ್ತು ಎನ್‍ಐಟಿಗಳ ಮೇಲೆ ಇರುವ ಇಂಥ ಮೋಹಕ್ಕೆ ಕಾರಣವೇನು ಹಾಗೂ ಈ ಮೋಹ ತಂದೊಡ್ಡುವ ಸಮಸ್ಯೆಗಳೇನು ಎಂಬುದನ್ನು ಆಳವಾಗಿ ನೋಡಿದರೆ ಹಲವು ಸಂಗತಿಗಳು ಬಿಚ್ಚಿಕೊಳ್ಳುತ್ತವೆ. ಐಐಟಿಯಲ್ಲಿ ಓದು ಪೂರೈಸಿ, ‘ಕ್ಯಾಂಪಸ್ ಆಯ್ಕೆ’ಯಾಗುವವರ ಮೇಲೆ ಡಾಲರ್‌ಗಳ ಮಳೆ ಸುರಿಯುತ್ತದೆ ಎಂಬಂತೆ ಮಾಧ್ಯಮಗಳು ವೈಭವೀಕರಿಸುತ್ತವೆ. ಇದರಿಂದಾಗಿ 6ನೇ ತರಗತಿಯಿಂದಲೇ ಐಐಟಿಗೆ ತಯಾರಿ ಆರಂಭಿಸುವ ಕೋಚಿಂಗ್ ಕೇಂದ್ರಗಳು ಹುಟ್ಟಿಕೊಂಡಿವೆ. ಪೋಷಕರ ಐಐಟಿ ಮೋಹವು ಕೋಚಿಂಗ್ ಕೇಂದ್ರಗಳ ಖಜಾನೆಯನ್ನು ಭರ್ತಿ ಮಾಡುತ್ತಿರುವುದು ಸುಳ್ಳಲ್ಲ. ಆದರೆ ವಾಸ್ತವ ಬೇರೆಯೇ ಇದೆ. ಎಲ್ಲರಿಗೂ ಸುಂದರ್ ಪಿಚೈ ತರಹ ಕೋಟಿಗಟ್ಟಲೆ ಸಂಬಳದ ನೌಕರಿ ಸಿಗುವುದಿಲ್ಲ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪೂರೈಸಿರುವ ಕೆಲವರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ದೊರೆಯುವ ನೌಕರಿಯು ಐಐಟಿಯಲ್ಲಿಯೇ ಇತರ ವಿಭಾಗದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದೊರೆಯುವುದಿಲ್ಲ ಎಂಬುದು ಎಲ್ಲೂ ವರದಿಯಾಗುವುದಿಲ್ಲ. ಎರಡು– ಮೂರು ವರ್ಷಗಳಿಗೆ ಕಂಪನಿಗಳಿಗೆ ಬಾಂಡ್ ಬರೆದುಕೊಟ್ಟು, ವಾರ್ಷಿಕ ₹ 4 ಲಕ್ಷದಿಂದ 5 ಲಕ್ಷ ವೇತನ ದೊರೆಯುವ ಉದ್ಯೋಗಗಳಿಗೆ ಸೇರುವ ಯುವಕ– ಯುವತಿಯರ ಸಂಖ್ಯೆ ಕಡಿಮೆ ಇಲ್ಲ. ಆದಾಗ್ಯೂ ಐಐಟಿಗಳೆಂಬ ಮಾಯಾ ಜಿಂಕೆಯ ಬೆನ್ನು ಹತ್ತುವವರ ಸಂಖ್ಯೆ ಕಡಿಮೆ ಇಲ್ಲ. ಇದನ್ನು ಗಮನಿಸಿಯೇ, ‘ಐಐಟಿಗಳಿಗೆ ಇರುವ ವಿಪರೀತ ಒತ್ತಡ, ನಿರೀಕ್ಷೆಗಳನ್ನು ಕಡಿಮೆ ಮಾಡಿ, ಇತರ ಸಂಸ್ಥೆಗಳ ಕಡೆ ಗಮನ ಹೆಚ್ಚಿಸುವಂತೆ ಮಾಡಬೇಕು’ ಎನ್ನುತ್ತಾರೆ ಐಐಟಿ ಕಾನ್ಪುರದ ಪ್ರೊ. ಸಂಜಯ್ ದಾಂಡೆ.

ಐಐಟಿಯಲ್ಲಿ ಆಗಾಗ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಸ್ಸಾಂನ ಐಐಟಿಯಲ್ಲಿ ನಾಗಶ್ರೀಯ ಆತ್ಮಹತ್ಯೆ ಐದನೆಯದು. ಹೆಚ್ಚು ಕಡಿಮೆ ದೇಶದ ಎಲ್ಲಾ ಐಐಟಿಗಳಲ್ಲೂ ಆತ್ಮಹತ್ಯೆಗಳು ನಡೆದಿವೆ ಎನ್ನಬಹುದು. 2017ರಲ್ಲಿ ಆರು ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಮತ್ತು ಐದು ವರ್ಷಗಳಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡದ್ದು ದೊಡ್ಡ ಸುದ್ದಿಯಾಗಿತ್ತು.

ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಅನೇಕ ಕಾರಣಗಳನ್ನು ಅಲ್ಲಿಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಟ್ಟಿ ಮಾಡುತ್ತಾರೆ. ಐಐಟಿಗಳ ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್‌ಗೆ ಸಂಬಂಧಿಸಿದ ಕೋಡಿಂಗ್ ತಂತ್ರಜ್ಞಾನ ಕಲಿಸುವ ಪಠ್ಯದ ಅಧ್ಯಯನ ಮಾಡಲೇಬೇಕು. ಕೋಡಿಂಗ್‍ನ ಜ್ಞಾನ ಇಲ್ಲದ ವಿದ್ಯಾರ್ಥಿಗಳ ಮೇಲೆ ಇದು ಒತ್ತಡ ಸೃಷ್ಟಿಸುತ್ತದೆ. ಐಐಟಿಗಳು ವಿದ್ಯಾರ್ಥಿಗಳ ಆನ್ವಯಿಕತೆಯ ಕೌಶಲ, ತಾರ್ಕಿಕ ಆಲೋಚನೆಯ ಜೊತೆಗೆ ಕಲಿಕಾ ವಿಷಯವನ್ನು, ನೈಜ ಆಸಕ್ತಿಯ ಕಾರಣಗಳನ್ನು ಬೇಡುತ್ತವೆ. ಈ ಅಂಶಗಳಿಲ್ಲದಿರುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಕಠಿಣವೆನಿಸುತ್ತದೆ. ಸಹಪಾಠಿಗಳ ನಡುವಿನ ಪೈಪೋಟಿಯ ಜೊತೆ ಐಐಟಿಗಳ ಆಡಳಿತವು ಉಸಿರುಗಟ್ಟಿಸುವಷ್ಟು ಬಿಗಿಯಾಗಿರುತ್ತದೆ. ಉಪನ್ಯಾಸಕರು ಸಹ ಕಠಿಣವಾಗಿ ವರ್ತಿಸುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತವೆ. ಕೆಲವು ವಿದ್ಯಾರ್ಥಿಗಳು ಮಾದಕ ವಸ್ತುಗಳ ಜಾಲಕ್ಕೂ ಬೀಳುತ್ತಾರೆ. ಉಪನ್ಯಾಸಕರ ಪಕ್ಷಪಾತ... ಇತ್ಯಾದಿಗಳು ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ತಳ್ಳುತ್ತವೆ ಎನ್ನಲಾಗಿದೆ.

ಇವೆಲ್ಲವುಗಳಿಗಿಂತ ಹೆಚ್ಚಾಗಿ ಪೋಷಕರ ಅತಿಯಾದ ಒತ್ತಡ, ನಿರೀಕ್ಷೆಗಳೇ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣ ಎನ್ನಲಾಗುತ್ತದೆ. ಪೋಷಕರು ಮಕ್ಕಳ ಆಸೆ, ಆಸಕ್ತಿಗಳ ಅನುಸಾರ ಶಿಕ್ಷಣದ ಆಯ್ಕೆ ಮಾಡುವುದು ಒಳಿತು. ಮಕ್ಕಳು ತಮ್ಮ ಶಿಕ್ಷಣ, ವೃತ್ತಿಯ ಆಯ್ಕೆಗಳಲ್ಲಿ ಬದಲಾವಣೆ ಬಯಸಿದಲ್ಲಿ ಅದಕ್ಕೆ ಅವಕಾಶ ಮಾಡಿಕೊಡಬೇಕು. ತಮ್ಮ ಮಕ್ಕಳು ನೀಡುವ ಸಂದೇಶಗಳನ್ನು ಪೋಷಕರು ಅರ್ಥ ಮಾಡಿಕೊಳ್ಳುವುದು ಇಂದಿನ ತುರ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT