ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೀರಿನ ಕಣಜ ಕಾಪಿಡೋಣ

ಇಚ್ಛಾಶಕ್ತಿಯಿದ್ದರೆ ಮನೆಮನೆಗಳಲ್ಲೂ ಬೇಸಿಗೆಯಲ್ಲಿ ಬಂಗಾರಕ್ಕಿಂತ ಅಮೂಲ್ಯವಾಗುವ ನೀರಿನ ಮರುಬಳಕೆ ಮಾಡಬಹುದು
Last Updated 30 ಮಾರ್ಚ್ 2021, 1:52 IST
ಅಕ್ಷರ ಗಾತ್ರ

ಬೇಸಿಗೆ ಬಂದರೆ ನೆತ್ತಿ ಸುಡುವ ಬಿಸಿಲು ಎಲ್ಲ ಕಡೆ ಹಾಹಾಕಾರ ಉಂಟು ಮಾಡುತ್ತದೆ. ನದಿಗಳು ಬತ್ತಿಹೋಗುತ್ತವೆ. ಗ್ರಾಮ ಪಂಚಾಯಿತಿಗಳ ಕೊಳವೆ ಬಾವಿಗಳಿಂದ ನೀರೆತ್ತುವ ಕಾರ್ಯ ನಡೆಸಿದರೂ ಗ್ರಾಮಗಳ ನಿವಾಸಿಗಳಿಗೆ ಸಾಕೆನಿಸುವಷ್ಟು ನೀರು ಕೊಡಲಾಗದೆ ಸಿಬ್ಬಂದಿ ಪರಿತಪಿಸುತ್ತಾರೆ.

ಇನ್ನೊಂದೆಡೆ, ಸರ್ಕಾರ ಉಚಿತವಾಗಿ ವಿದ್ಯುತ್ ಸೌಕರ್ಯ ನೀಡಿರುವ ಕಾರಣ, ಕೃಷಿಯ ಹೆಸರಿನಲ್ಲಿ ರಾತ್ರಿ ಹಗಲಿನ ಭೇದವರಿಯದೆ ನದಿಗಳು ಮತ್ತು ಕೊಳವೆಬಾವಿಗಳಿಂದ ನೀರು ಹರಿಸಿ ತೋಟಗಳನ್ನು ನೆನೆಸುವ ಕಾಯಕ ನಡೆಯುತ್ತದೆ.

ನೀರು ಸಿಗದವರು ಅನಿವಾರ್ಯವಾಗಿ ನೀರಿನ ಮಿತ ಬಳಕೆ ಮಾಡುತ್ತಿದ್ದರೆ ನೀರಿನ ಪೋಲು ಮಾಡುವ ವರಿಗೆ ಯಾವ ನೀತಿಪಾಠವೂ ಮನಃಪರಿವರ್ತನೆ ಮಾಡುವುದಿಲ್ಲ.

ಅಭಿವೃದ್ಧಿಶೀಲ ದೇಶಗಳ ಪಟ್ಟಣಗಳಲ್ಲಿ ಸ್ನಾನ, ಶೌಚ ಇತ್ಯಾದಿಗಳಿಗೆ ಉಪಯೋಗಿಸಿದ ನೀರು ಒಳಚರಂಡಿಗಳಲ್ಲಿ ಹರಿಯುತ್ತದೆ. ಶೇ 80ರಷ್ಟು ದೇಶಗಳು ಇದನ್ನು ನೇರವಾಗಿ ನೈಸರ್ಗಿಕ ಪರಿಸರಕ್ಕೆ ಹರಿಸಿಬಿಡುತ್ತವೆ ವಿನಾ ಇನ್ನೊಂದು ವಿಧದ ಸದ್ಬಳಕೆಯ ಕಡೆಗೆ ಚಿಂತನೆ ಮಾಡುವುದಿಲ್ಲ. ಆದರೆ ಎಷ್ಟೇ ನೀರಿನ ಅನುಕೂಲವಿದ್ದರೂ ನೀರಿನ ಮಿತ ಬಳಕೆ ಮಾಡು ವುದು ಮಾತ್ರ ಭವಿಷ್ಯದ ದಿನಗಳಲ್ಲಿ ಅಂತರ್ಜಲದ ಸುರಕ್ಷಿತ ಠೇವಣಿಯನ್ನು ರಕ್ಷಿಸಬಹುದು ಎಂಬ ಕಾಳಜಿ ಇರುವವರಿಗೆ ಇಸ್ರೇಲ್ ಮತ್ತು ಕತಾರ್ ದೇಶಗಳು ಮಾದರಿಯಾಗುವ ಯೋಜನೆ ರೂಪಿಸಿವೆ.

ಕತಾರ್ ಪುಟ್ಟ ದೇಶವಾದರೂ ತನ್ನಲ್ಲಿರುವ ತೈಲ ಸಂಪತ್ತಿನ ಕಾರಣದಿಂದಾಗಿ ಸಿರಿವಂತಿಕೆಯಿಂದ ಮೆರೆ ಯುತ್ತಿದೆ. ಅಲ್ಲಿ ಕುಡಿಯುವ ನೀರು ಪೆಟ್ರೋಲಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಸಮುದ್ರದ ನೀರಿನಿಂದ ಲವಣಾಂಶವನ್ನು ಪ್ರತ್ಯೇಕಿಸಿ ಸಿಹಿನೀರನ್ನಾಗಿ ಬದಲಾ ಯಿಸಲು ಪ್ರತಿಯೊಂದು ಲೀಟರ್ ನೀರು ಕೂಡ ಗಮನಾರ್ಹ ಪ್ರಮಾಣದ ವಿದ್ಯುತ್ ಬಳಸಿಕೊಳ್ಳಬೇಕಾಗಿದೆ. ಒಬ್ಬ ಕತಾರ್ ಪ್ರಜೆ ದಿನವೊಂದರಲ್ಲಿ ಬಳಸುವ ಸರಾಸರಿ ನೀರಿನ ಪ್ರಮಾಣ 400 ಲೀಟರ್‌ಗಳಷ್ಟಿದೆ. ವರ್ಷದಲ್ಲಿ 24 ದಶಲಕ್ಷ ಕ್ಯೂಬಿಕ್ ಮೀಟರ್ ಪ್ರಮಾಣದ ನೀರು ಒಳಚರಂಡಿಗಳಲ್ಲಿ ಹರಿಯುತ್ತದೆ.

ಬಳಸಿದ ಈ ನೀರನ್ನು ಏನು ಮಾಡೋಣ? ಸಮುದ್ರಕ್ಕೆ ಹರಿಸಿದರೆ ಜಲಚರಗಳಿಗೆ ಅಹಿತಕರ, ದುರ್ಗಂಧಯುಕ್ತವಾಗಿರುತ್ತದೆ. ಜಪಾನಿನ ತಂತ್ರಜ್ಞರ ನೆರವಿನಿಂದ ಕತಾರ್‌ ಇಷ್ಟು ನೀರನ್ನೂ ತೊಟ್ಟಿಗಳಲ್ಲಿ ಸಂಗ್ರಹವಾಗುವಂತೆ ಮಾಡಿ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಶುದ್ಧೀಕರಣಗೊಳಿಸುತ್ತದೆ. ಪರಿಶುದ್ಧಗೊಂಡ ಬಳಿಕ ಶೇ 47ರಷ್ಟು ಪ್ರಮಾಣದ ನೀರನ್ನು ಕೃಷಿಕ್ಷೇತ್ರಕ್ಕೆ ಉಪಯೋಗಿಸುತ್ತದೆ. ಉದ್ಯಾನಗಳು, ಅರಣ್ಯಗಳು ಮತ್ತು ಹಸಿರು ಮನೆಗಳಲ್ಲಿ ಕೃಷಿ ಸಂಪನ್ನವಾಗುವುದು ಇದೇ ನೀರಿನಿಂದ. ಖರ್ಜೂರ, ಕಲ್ಲಂಗಡಿ, ಟೊಮ್ಯಾಟೊ, ಬಿಳಿ ಬದನೆ ಮತ್ತು ಸ್ಕ್ವಾಷ್ ವ್ಯವಸಾಯ ಮಾಡಿ ದೇಶಕ್ಕೆ ಬೇಕಾದಷ್ಟು ಉಪಯೋಗಿಸಿ, ನೆರೆಯ ಕೊಲ್ಲಿ ರಾಷ್ಟ್ರಗಳಿಗೂ ರಫ್ತು ಮಾಡುವ ಮೂಲಕ ಶುದ್ಧೀಕರಣದ ವಿದ್ಯುತ್ ವೆಚ್ಚವನ್ನು ಪೂರ್ಣವಾಗಿ ಸಂಪಾದಿಸಿ ಲಾಭವನ್ನೂ ಪಡೆಯಲಾಗುತ್ತಿದೆ. ರಾಜಧಾನಿ ದೋಹಾದ ಒಳಚರಂಡಿಗಳು, ಕೈಗಾರಿಕಾ ಪ್ರದೇಶಗಳ ತ್ಯಾಜ್ಯನೀರು ಮರುಭೂಮಿಯಲ್ಲಿ ಹಸಿರಿನ ನಂದನ ಬೆಳೆಸಲು ಬಳಕೆಯಾಗುತ್ತಿದೆ.

ಮರುಭೂಮಿಯಲ್ಲಿ ಮಾಡುವ ಕೃಷಿಯ ಮೂಲಕ ದೇಶದ ಆದಾಯದಲ್ಲಿ ಬಹು ದೊಡ್ಡ ಪಾಲು ಗಳಿಸು ತ್ತಿರುವ ಇಸ್ರೇಲ್ ಕೂಡ ನೀರಿನ ಮಿತ ಬಳಕೆಗೆ ಪ್ರಸಿದ್ಧಿ ಗಳಿಸಿದೆ. ಅಲ್ಲಿ ಸಾರ್ವಜನಿಕರಿಗೆ ನಗರ ಆಡಳಿತ ಒದಗಿಸುವ ನೀರಿನಲ್ಲಿ ಶೇ 80ರಷ್ಟನ್ನು ತ್ಯಾಜ್ಯನೀರಿನ ರೂಪದಲ್ಲಿ ಮರಳಿ ಕೊಡದಿದ್ದರೆ ದಂಡನಾರ್ಹವಾಗುತ್ತದೆ. ಈ ನೀರನ್ನು ಶುದ್ಧೀಕರಣಗೊಳಿಸಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಇಸ್ರೇಲ್ ವಿದೇಶಗಳಿಗೂ ರಫ್ತು ಮಾಡುವುದಲ್ಲದೆ ಬಳಸಿದ ನೀರಿನ ಮರುಬಳಕೆಯ ಮೂಲಕವೂ ಗಮನ ಸೆಳೆಯುತ್ತದೆ.

ಹೀಗೆಂದು ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ತಂತ್ರ ಭಾರತಕ್ಕೆ ಹೊಸದಂತೂ ಅಲ್ಲ. ಸ್ನಾನದ ನೀರನ್ನು ನೇರವಾಗಿ ತೆಂಗು ಮತ್ತು ತೊಂಡೆಕೃಷಿಯ ಹೊಂಡಕ್ಕೆ ಹರಿಸಿದರೆ ಯಾವ ಗೊಬ್ಬರವನ್ನೂ ಹಾಕದೆ ಧಾರಾಳವಾಗಿ ಕಾಯಿಗಳನ್ನು ಕೊಯ್ಯಬಹುದೆಂಬುದನ್ನು ಕರಾವಳಿಯ ರೈತರು ಬಹು ಹಿಂದಿನಿಂದಲೇ ಅರಿತವರು. ದಕ್ಷಿಣ ಕನ್ನಡದ ಅಡ್ಯನಡ್ಕದಂತಹ ಪುಟ್ಟ ಊರಲ್ಲಿರುವ ಸಾವಯವ ಕೃಷಿಕ ವಾರಾಣಸಿ ಕೃಷ್ಣಮೂರ್ತಿ ತ್ಯಾಜ್ಯ ನೀರಿನ ಸಂಸ್ಕರಣೆಗೊಂದು ಮಾದರಿಯಾದದ್ದು ಒಂದು ದಶಕಕ್ಕೂ ಹಿಂದೆ. ಹಾಗೆಯೇ ಧರ್ಮಸ್ಥಳ ಕ್ಷೇತ್ರದಲ್ಲಿ ದಿನಕ್ಕೆ 30 ಲಕ್ಷ ಲೀಟರ್ ಪ್ರಮಾಣದ ತ್ಯಾಜ್ಯ ನೀರು ಒಳಚರಂಡಿಗಳಲ್ಲಿ ಹರಿಯುತ್ತದೆ. ಯಾಂತ್ರಿಕ ವಿಧಾನದಿಂದ ಇದನ್ನು ಸ್ಫಟಿಕಸದೃಶ ಶುದ್ಧ ನೀರನ್ನಾಗಿ ಪರಿವರ್ತಿಸುವ ಕಾಯಕ ಹಗಲಿರುಳೂ ನಡೆಯುತ್ತದೆ. ಸುಮಾರು ಎಂಬತ್ತು ಎಕರೆ ವಿಸ್ತಾರದ ಅಡಿಕೆತೋಟಕ್ಕೆ ಹನಿ ನೀರಾವರಿಯಾಗಿ ಜೀವದಾಯಿಯಾಗಿ ಪೊರೆಯುತ್ತಿರುವುದು ಇದೇ ನೀರು.

ಶುದ್ಧೀಕರಣಕ್ಕೊಳಗಾದ ನೀರಿನಿಂದ ಬೇರ್ಪಡಿಸಿದ ತ್ಯಾಜ್ಯ ಒಂದು ಅತ್ಯುತ್ತಮ ಸಾವಯವ ಗೊಬ್ಬರವಾಗಿರುವುದರಿಂದ ಅದನ್ನು ಬಳಸಿ ಸಮೃದ್ಧವಾಗಿ ಬೆಳೆಯುವ ರಸಮೇವಿನ ಹುಲ್ಲು ಗೋಶಾಲೆಯ ಹಸುಗಳಿಗೆ ಆಹಾರವಾಗುತ್ತದೆ.

ಇಚ್ಛಾಶಕ್ತಿಯಿದ್ದರೆ ಮನೆಮನೆಗಳಲ್ಲೂ ಬೇಸಿಗೆ ಯಲ್ಲಿ ಬಂಗಾರಕ್ಕಿಂತ ಅಮೂಲ್ಯವಾಗುವ ನೀರಿನ ಮರುಬಳಕೆ ಮಾಡಬಹುದು. ಇಂದು ನಾವು ಮಿತವಾಗಿ ನೀರನ್ನು ಬಳಸಿ ಅದನ್ನು ಮತ್ತೊಮ್ಮೆ ಉಪಯೋಗಿಸುವ ಮೂಲಕ ಇತರರಿಗೂ ಪಾಠವಾಗಬಹುದು, ನೀರಿನ ಕಣಜವನ್ನು ಕಾಪಿಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT