ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಲಪ್ರೇಮಿ’ಯೂ ನಮ್ಮ ಆತ್ಮಸಾಕ್ಷಿಯೂ

ಬಾಲಪ್ರೇಮಿಯ ಆತ್ಮಹತ್ಯೆ ಪ್ರಸಂಗವು ಹದಿಹರೆಯದವರ ಸಮಸ್ಯೆಗಳ ಬಗೆಗೆ ಆತ್ಮಾವಲೋಕನದ ತುರ್ತು ಅಗತ್ಯವ‌ನ್ನು ಸಮಾಜಕ್ಕೆ ನೆನಪಿಸುವಂತಿದೆ
Last Updated 19 ಫೆಬ್ರುವರಿ 2019, 19:53 IST
ಅಕ್ಷರ ಗಾತ್ರ

‘ಪ್ರೇಮಿಗಳ ದಿನ’ದ ಬಗ್ಗೆ ನಮ್ಮ ಮಾಧ್ಯಮಗಳು ಸುದ್ದಿ ಮಾಡಿದಷ್ಟು ಸುದ್ದಿಯೇ ಆಗದೆ, ಒಂದು ಮುಖ್ಯ ಸುದ್ದಿಯು ಪತ್ರಿಕೆಗಳಲ್ಲಿ ಮಿಂಚಿ, ವಾಹಿನಿಗಳಲ್ಲಿ ಸ್ವಲ್ಪ ಮಟ್ಟಿಗಷ್ಟೇ ಸದ್ದು ಮಾಡಿ ಮರೆಯಾಗಿ ಹೋಯಿತು. ಅದೆಂದರೆ 8ನೇ ತರಗತಿಯ, 13 ವರ್ಷದ ಬಾಲಕನೊಬ್ಬ ಬರೆದ ಪ್ರೇಮಪತ್ರ ಶಿಕ್ಷಕರ ಕೈಗೆ ಸಿಕ್ಕಿ, ಅಪ್ಪ-ಅಮ್ಮನನ್ನು ಕರೆತರುವಂತೆ ಹೇಳಿದ್ದಕ್ಕೆ ಹೆದರಿ, ಆತ ನೇಣು ಹಾಕಿಕೊಂಡ ಸಂಗತಿ. ಆ ಬಾಲಕನ ಅಪ್ಪ-ಅಮ್ಮ ದಿನಗೂಲಿ ಕಾರ್ಮಿಕರು. ಕೆಲವು ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಪ್ರಕಟವಾದರೆ, ಟಿ.ವಿ. ವಾಹಿನಿಗಳು ಒಂದಿಷ್ಟು ಕಿರುಚಾಡಿ, ವೈಭವೀಕರಿಸಿ, ಅದು ಈಗಾಗಲೇ ಹಳೆಯ ಸುದ್ದಿಯಾಗಿ ಹೋಗಿದೆ!

‘ಪ್ರೇಮಿಗಳ ದಿನ’ದ ಬಗೆಗೆ ಟಿ.ವಿ.ಯಲ್ಲಿ ನೋಡಿ, ಆಕರ್ಷಿತನಾದ ನಂತರ ತನ್ನ ಶಾಲೆಯ ಬಾಲಕಿಗೆ ಪ್ರೇಮಪತ್ರ ಬರೆದ ಬಾಲಕನ ಪ್ರಸಂಗ ಏಕಕಾಲಕ್ಕೆ ಹಲವು ವಿಷಯಗಳ ಬಗೆಗೆ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ.

ಮೊದಲನೆಯದು, ಭಾರತವನ್ನೂ ಒಳಗೊಂಡಂತೆ ಜಗತ್ತಿನಾದ್ಯಂತ ಹದಿಹರೆಯದ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿರುವುದು. ಆತ್ಮಹತ್ಯೆಯ ಪ್ರಮಾಣದಲ್ಲಿ ಜಗತ್ತಿನಲ್ಲೇ ಮುಂದಿರುವ ಭಾರತದಲ್ಲಿ ಪ್ರತಿ 40 ಸೆಕೆಂಡುಗಳಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಪ್ರತಿ ಗಂಟೆಗೆ ಒಬ್ಬ ಹದಿಹರೆಯದ ಬಾಲಕ ಅಥವಾ ಬಾಲಕಿ ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಾರೆ. ದಕ್ಷಿಣದ ರಾಜ್ಯಗಳಲ್ಲಿ ಇದರ ಪ್ರಮಾಣ ಹೆಚ್ಚು. ಆತ್ಮಹತ್ಯೆಯಲ್ಲಿ ಚೆನ್ನೈ ನಂತರದ ಸ್ಥಾನ ಪಡೆದಿರುವ ಬೆಂಗಳೂರು, ಪ್ರಥಮ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದೆ!

ಮಕ್ಕಳ ಯೋಗಕ್ಷೇಮಕ್ಕಾಗಿ ಅವರ ಚೀಲ-ಪುಸ್ತಕಗಳನ್ನು ಶಿಕ್ಷಕರು ಪರೀಕ್ಷಿಸಬೇಕಾದ್ದು ಸರಿಯಾದ ಕ್ರಮವೇ. ಅಪ್ರಬುದ್ಧ- ಅಕಾಲಿಕ ‘ಪ್ರೇಮ’ವನ್ನು ತಡೆಯಬೇಕಾದ್ದೂ ಸೂಕ್ತವೇ. ಅಪ್ಪ-ಅಮ್ಮನನ್ನು ಕರೆಸಲು ಹೇಳಿದ್ದು ಕೂಡ ಅವರ ಕರ್ತವ್ಯಪಾಲನೆಯನ್ನು ಸೂಚಿಸುತ್ತದೆ. ಇನ್ನು ಅಪ್ಪ-ಅಮ್ಮ, ತಮ್ಮ ಮಗ ಶಾಲೆಯಿಂದ ಬರದೆ ಪ್ರಾಣವನ್ನೇ ಕಳೆದುಕೊಂಡು ಬಿಡಬಹುದೆಂದು ನಿರೀಕ್ಷಿಸುವುದಾದರೂ ಹೇಗೆ? ಇದರ ಪರಿಣಾಮವೆಂದರೆ ಶಾಲೆಗಳಲ್ಲಿ ಶಿಕ್ಷಕರು ಮತ್ತೂ ಹೆದರುವ, ಮಕ್ಕಳನ್ನು ನಿಯಂತ್ರಿಸದೆ ಅವರ ಪಾಡಿಗೆ ಬಿಡುವುದನ್ನು ರೂಢಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಅಪ್ಪ-ಅಮ್ಮಂದಿರು ಸಹ ಮಕ್ಕಳಿಗೆ ಏನು ಹೇಳಿದರೆ ಹೇಗೋ ಎಂದು ಆತಂಕಕ್ಕೆ ಒಳಗಾಗುತ್ತಾರೆ. ಇನ್ನು, ಮಾಧ್ಯಮ ಪ್ರತಿನಿಧಿಗಳು ಆತ್ಮಹತ್ಯೆ ಕುರಿತು ವರದಿ ಮಾಡುವ ಬಗೆಗಿನ ನೀತಿಸಂಹಿತೆಯ ಬಗೆಗೆ ತಲೆಕೆಡಿಸಿಕೊಳ್ಳದಿರುವುದು. ಸೂಕ್ಷ್ಮ ಸಂವೇದನೆಯಿಂದ, ವೈಭವೀಕರಿಸದೆ, ಕುಟುಂಬದವರ ನೋವನ್ನು ಗಮನದಲ್ಲಿ ಇರಿಸಿಕೊಂಡು ವರದಿ ಸಾಗಬೇಕು.

ಮೂರನೆಯ ಬಹುಮುಖ್ಯ ಅಂಶ, ಆತ್ಮಹತ್ಯೆಗೆ ಕಾರಣವಾಯಿತು ಎನ್ನಲಾದ ಪ್ರೇಮಪತ್ರ. ಮಕ್ಕಳು ಇಂದು ಮಾತಿಗಿಂತ ಹೆಚ್ಚು ಸಾಮಾಜಿಕ ಮಾಧ್ಯಮಗಳ ಮುಖಾಂತರ ಹೊರಜಗತ್ತಿನೊಡನೆ ವ್ಯವಹರಿಸುತ್ತಿದ್ದಾರೆ. ಸಹಜವಾಗಿ ಆಕರ್ಷಣೆ, ಮನಸ್ಸನ್ನು ಮುಗ್ಧತೆಯಿಂದ ವಿಮುಖವಾಗಿಸಬಲ್ಲ ಎಳೆತಗಳು ಹೆಚ್ಚಾಗಿವೆ. ‘ಹದಿಹರೆಯದ ಪ್ರೇಮ ಪ್ರಕರಣ’ಗಳು ಎಂದೇ ಹೆಸರಿಸಬಹುದಾದಷ್ಟು ಬಲವಾಗಿ ಈ ಸಮಸ್ಯೆ ಬೆಳೆದು ನಿಂತಿದೆ. ಕೆಲವು ಮಕ್ಕಳಲ್ಲಿ ಆತ್ಮಹತ್ಯೆಯ ಹಂತಕ್ಕೆ ಇದು ಹೋದರೆ, ಇನ್ನು ಎಷ್ಟೋ ಮಕ್ಕಳಲ್ಲಿ ಅಕಾಲಿಕ ಮದುವೆಗಳು, ಹದಿಹರೆಯದವರಲ್ಲಿ ಗರ್ಭಧರಿಸುವಿಕೆ- ಗರ್ಭಪಾತ, ವಿದ್ಯಾಭ್ಯಾಸಕ್ಕೆ ತಿಲಾಂಜಲಿಗೆ ಕಾರಣವಾಗುತ್ತದೆ.

ಹದಿಹರೆಯದ ಇಂತಹ ಆತ್ಮಹತ್ಯೆಗಳನ್ನು ಸರ್ಕಾರ-ಮಾಧ್ಯಮ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಒಂದು ಆತ್ಮಹತ್ಯೆಯನ್ನು ವಿಶ್ಲೇಷಿಸಿ ನಡೆಸುವ ‘ಸೈಕಲಾಜಿಕಲ್‌ ಅಟಾಪ್ಸಿ’ ಎಂಬ ಮಾನಸಿಕ ಮರಣೋತ್ತರ ಪರೀಕ್ಷೆಯ ವಿವರವು ಪ್ರಚೋದನಾತ್ಮಕವಾದ ಆತ್ಮಹತ್ಯೆ ಘಟನೆಯ (ಎಲ್ಲಿ - ಹೇಗೆ ನೇಣುಹಾಕಿಕೊಂಡ ಇತ್ಯಾದಿ) ವಿವರಕ್ಕಿಂತ ಮುಖ್ಯವಾಗುತ್ತದೆ. ಹಾಗೆ ವಿಶ್ಲೇಷಣೆ ನಡೆಸಿದಾಗ, ಬಹಳಷ್ಟು ಆತ್ಮಹತ್ಯೆಗಳಿಗೆ ಕಾರಣವಾಗುವ ಮನಸ್ಥಿತಿಯು ವ್ಯಕ್ತಿತ್ವ- ಕೌಟುಂಬಿಕ- ಸಾಮಾಜಿಕ ಒತ್ತಡಗಳಿಂದ ರೂಪುಗೊಂಡಿರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಅಂದರೆ ಮಕ್ಕಳೊಂದಿಗೆ ಅಪ್ಪ-ಅಮ್ಮಂದಿರಿಗೆ ಮಾತನಾಡಲು ಸಮಯವಿರುವುದು, ಶಾಲೆಯಲ್ಲಿ ಏನೇ ನಡೆದರೂ ಅಪ್ಪ-ಅಮ್ಮನೊಂದಿಗೆ ಹೇಳಿಕೊಳ್ಳುವ ಅವಕಾಶ ಇಲ್ಲಿ ಮಹತ್ವದ್ದು. ನಾವು ಮಕ್ಕಳಿಗೆ ಪರೀಕ್ಷೆಯಲ್ಲಿ ಜಯಶಾಲಿಗಳಾಗುವುದು ಹೇಗೆ ಎಂದು ಹೇಳಿಕೊಟ್ಟಷ್ಟು, ದೂಷಣೆ- ವೈಫಲ್ಯಗಳನ್ನು ಹೇಗೆ ಎದುರಿಸಬೇಕು, ಅಪಮಾನ- ಅವಹೇಳನಗಳನ್ನು ಹೇಗೆ ನಿಭಾಯಿಸಬೇಕು ಎಂದು ಹೇಳಿಕೊಡದಿರುವುದು ದುರಂತ.

ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯದವರಿಗೆಂದು ಶಿಫಾರಸು ಮಾಡಿರುವ ಜೀವನ ಕೌಶಲಗಳಾಗಲೀ, ಶಾಲೆಗಳು ನಡೆಸುವ ‘ಜೀವನ ಕೌಶಲ ಶಿಕ್ಷಣ’ವಾಗಲೀ ಎಷ್ಟು ಯಶಸ್ವಿ ಎಂಬ ಅನುಮಾನವನ್ನು ಪ್ರತಿ ಆತ್ಮಹತ್ಯೆಯೂ ನಮ್ಮಲ್ಲಿ ಮೂಡಿಸುತ್ತದೆ.

‘ಪ್ರೇಮಿಗಳ ದಿನ’ ಎಂಬ ಫೆ.14ರ ಮರುದಿನವೇ ಈ ಆತ್ಮಹತ್ಯೆ ನಡೆದಿರುವುದು ಹದಿಹರೆಯದ ಮಕ್ಕಳಲ್ಲಿ, ಅವರ ತಂದೆ-ತಾಯಿ-ಶಿಕ್ಷಕರಲ್ಲಿ ಈ ಬಗ್ಗೆ ಅರಿವನ್ನು ಮೂಡಿಸುವಂತಾಗಬೇಕು. ಸರ್ಕಾರದ ಕ್ರಮಗಳಿಗೆ ಕಾಯುವಷ್ಟು ಸಮಯ ನಮಗಿಲ್ಲ! ನಮ್ಮ ಸುತ್ತಮುತ್ತಲಲ್ಲಿ, ಆತ್ಮೀಯರ ನಡುವಣ ಆತ್ಮಹತ್ಯೆಯ ವಿರುದ್ಧ, ಅಕಾಲಿಕ - ಅಪ್ರಬುದ್ಧ ಪ್ರೇಮದ ವಿರುದ್ಧ ಸಮರ ಸಾರಬೇಕಾದ ತುರ್ತುಪರಿಸ್ಥಿತಿ ಇದು! ಜೀವನ ಕೌಶಲಗಳೆಂಬ ಅಸ್ತ್ರಗಳನ್ನು ಪ್ರಯೋಗಿಸಲೇಬೇಕು, ಜಯ ಗಳಿಸಲೇಬೇಕು.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT