ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಣ ಕಿವುಡ’ರನ್ನು ಮುಟ್ಟಲಿ ಕೂಗು

ತಮಗೆ ಪುರುಷಪ್ರಧಾನ ವ್ಯವಸ್ಥೆ ಬೇಕಾಗಿಲ್ಲ ಎಂದು ಪುರುಷರು ಕೂಗಿ ಹೇಳುವವರೆಗೂ ಅವರ ಬದುಕು ಅಪೂರ್ಣವಾಗಿಯೇ ಇರುತ್ತದೆ
Last Updated 3 ಡಿಸೆಂಬರ್ 2019, 17:17 IST
ಅಕ್ಷರ ಗಾತ್ರ

‘ನನ್ನ ದೇಹ ನನ್ನದು. ಅದನ್ನು ಹುಟ್ಟುವ ಮೊದಲೇ ಕೊಲ್ಲಬೇಡಿ. ಹುಟ್ಟಿದ ಮೇಲೆ ನಿಮ್ಮ ಕಾಮದಾಹಕ್ಕೆ, ಅಧಿಕಾರ ಸ್ಥಾಪನೆಗೆ, ಪುರುಷತ್ವದ ಪ್ರತಿಪಾದನೆಗೆ, ಧರ್ಮಸಾಧನೆಗೆ ನನ್ನನ್ನು ಬಳಸಬೇಡಿ. ನಿಮ್ಮೆಲ್ಲರ ಜೀವಗಳಿಗೆ ತಾಯಿಯಾಗಿ, ಅಕ್ಕ–ತಂಗಿಯಾಗಿ, ಹೆಂಡತಿ ಯಾಗಿ, ಮಗಳಾಗಿ, ಸ್ನೇಹಿತೆಯಾಗಿ ತಂಪೆರೆಯಬಲ್ಲ ನನಗೆ ಬೇಕಿರುವುದು ನಿಮ್ಮ ಔದಾರ್ಯವಲ್ಲ, ಅಧಿಕಾರವಲ್ಲ, ಸಾಂಸ್ಥಿಕ ಧರ್ಮಗಳೂ ಅಲ್ಲ. ಜೀವಜಗತ್ತಿನಲ್ಲಿ ಪ್ರಕೃತಿ ನನಗೆ ನೀಡಿರುವ ಯೋಗ್ಯವಾದ ಸ್ಥಾನವನ್ನು ಮಾತ್ರ ನಾನು ಗಳಿಸಿಕೊಳ್ಳಲೇ
ಬೇಕು. ಇದಕ್ಕಾಗಿ ನಾನು ನಿಧಾನವಾಗಿಯಾದರೂ ಹೋರಾಡಿಯೇ ತೀರುತ್ತೇನೆ’.

ಇದು ತಲೆತಲಾಂತರಗಳಿಂದ ಕೇಳುತ್ತಿರುವಸ್ತ್ರೀ ಹೃದಯಗಳ ಕೂಗು. ಆದರೆ ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ರಾಜಕೀಯವ್ಯವಸ್ಥೆಗಳೆಲ್ಲಾ ಸಂಪೂರ್ಣ ಕಿವುಡಾಗಿವೆ ಈ ಕೂಗಿಗೆ. ಮತ್ತೆ ದೇಶದ ತುಂಬೆಲ್ಲಾ ಹೆಣ್ಣು ಹೃದಯಗಳ ಈ ಕೂಗು ಎದ್ದಿದೆ. ನಿರ್ಭಯಾ ಪ್ರಕರಣವು ಯಾವುದಾದರೂ ಮೂಲಭೂತ ಬದಲಾವಣೆಗಳಿಗೆ ಕಾರಣವಾಗಬಹುದೇನೋ ಎಂದು ನಂಬಿದ್ದ
ವರಿಗೆ ನಿರಾಸೆಯಾಗಿದೆ. ಪುರುಷಪ್ರಧಾನ ಸಮಾಜ ಮತ್ತು ಆಡಳಿತ ವ್ಯವಸ್ಥೆ ಎಲ್ಲಾ ಸೂಕ್ಷ್ಮವನ್ನೂ ಕಳೆದುಕೊಂಡು ಜಡ್ಡುಗಟ್ಟಿಹೋಗಿದೆ. ಸಾಂಸ್ಥಿಕ ಧರ್ಮಗಳು ಮೂಕಪ್ರೇಕ್ಷಕವಷ್ಟೇ ಅಲ್ಲ ಸಾಕಷ್ಟು ಪ್ರಕರಣಗಳಲ್ಲಿ ಸಕ್ರಿಯ ಪಾಲುದಾರಿಕೆಯನ್ನೂ ಹೊಂದಿವೆ.

ಅತ್ಯಾಚಾರದ ಘಟನೆಗಳ ನಂತರ ಕೆಲವು ದಿನ ದೀರ್ಘ ಚರ್ಚೆಗಳಾಗುತ್ತವೆ. ನಮ್ಮ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗೆ ಗೊತ್ತಿರುವುದು ಕಾನೂನಿನ ಬದಲಾವಣೆ ಮಾತ್ರ. ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಗಣನೀಯ ಸಂಖ್ಯೆಯ ಜನರು ಜೈಲು ಸೇರಬೇಕಾಗುತ್ತದೆ. ಹಾಗಾಗಿ ಕಾನೂನಿನ ಬದಲಾವಣೆಯ ಕಣ್ಣೊರೆಸುವ ತಂತ್ರ ಅನುಸರಿಸಿ, ತಕ್ಷಣಕ್ಕೆ ಬಚಾವಾಗುತ್ತಾರೆ. ಅದಕ್ಕಾಗಿ ಸ್ತ್ರೀಸ್ವಾತಂತ್ರ್ಯದ ಹರಿಕಾರರ ಮುಖವಾಡವನ್ನೂ ತೊಡುತ್ತಾರೆ.

ಶಿಕ್ಷೆಯ ಭಯದಿಂದ ದುಷ್ಕೃತ್ಯಗಳನ್ನು ತಡೆಯಲು ಅಸಾಧ್ಯ ಎಂದು ಬಹಳಷ್ಟು ಅಧ್ಯಯನಗಳು ಹೇಳುತ್ತವೆ. ಸಾಮಾಜಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಯೊಂದೇ ಇದಕ್ಕೆ ದೂರಗಾಮಿ ಮದ್ದು. ಆದರೆ ಹಾಗೆ ಮಾಡುವುದು ತಮ್ಮ ರಾಜಕೀಯ ಹಿತಾಸಕ್ತಿಗೆ ಅಡ್ಡಿಯಾಗುವ ಸಾಧ್ಯತೆಗಳಿದ್ದಾಗಲೆಲ್ಲಾ ಪಕ್ಷಗಳು ಚುನಾವಣೆ ಗೆಲ್ಲುವ ಬಗೆಗೆ ಮಾತ್ರ ಯೋಚಿಸುತ್ತವೆ. ತಮಗೆ ಅನುಕೂಲವಾಗದ ಸಾಮಾಜಿಕ ಬದಲಾವಣೆಗಳಿಗೆ ನಯವಾಗಿ ಪ್ರತಿರೋಧಗಳನ್ನು ಒಡ್ಡುತ್ತವೆ. ಖಾಪ್ ಪಂಚಾಯತ್‍ಗಳನ್ನು ಖಂಡತುಂಡವಾಗಿ ವಿರೋಧಿಸುವ ಧೈರ್ಯವನ್ನು ಯಾವುದಾದರೂ ಪಕ್ಷ ತೋರಿಸಬಹುದೇ? ಘೋಷಣೆಗಳು, ಯೋಜನೆಗಳನ್ನು ಮೀರಿ ಚಿಂತಿಸುವುದು ನಮ್ಮನ್ನು ಆಳುವವರಿಗೆ ಸಾಧ್ಯವೇ ಆಗುವುದಿಲ್ಲ.

ಇಂದು ಸ್ತ್ರೀಯರ ಗೌರವದ ಬದುಕಿನ ಹೋರಾಟವನ್ನು ಹೆಚ್ಚಾಗಿ ಮಹಿಳೆಯರು ಮಾತ್ರ ಮಾಡುತ್ತಿದ್ದಾರೆ. ಇದೆಂತಹ ವಿಪರ್ಯಾಸ? ಮಹಿಳೆ ಯರಿಗೆ ಸಿಗುವ ಗೌರವಯುತ ಸಮಬಾಳ್ವೆಯಿಂದ ತಮ್ಮ ಬದುಕು ಹೆಚ್ಚು ಹಸನಾಗಬಲ್ಲದು ಎಂದು ಅರಿಯಲಾರದಷ್ಟು ಪುರುಷಪ್ರಧಾನ ವ್ಯವಸ್ಥೆ ಕುರುಡಾಗಿದೆ. ಕಾರ್ಯೇಶು ದಾಸಿ, ಕರಣೇಶು ಮಂತ್ರಿ, ಭೋಜೇಶು ಮಾತಾ, ಶಯನೇಶು ರಂಭಾ... ಎನ್ನುವಂಥ ಚಿಂತನೆಗಳಿಗೆ ಜೋತುಬಿದ್ದಿರುವ ಪುರುಷರು, ಸ್ತ್ರೀ ಎಂದರೆ ತಮ್ಮ ಅಗತ್ಯಗಳಿಗಾಗಿ ತಿರುಚಬಲ್ಲ ವಸ್ತು ಎಂದುಕೊಂಡಂತಿದೆ. ಇಂತಹ ಸ್ಥಿತಿಯಿಂದ ನಿಧಾನವಾಗಿಯಾದರೂ ವ್ಯವಸ್ಥಿತ ಬದಲಾವಣೆಗಳಾಗಬೇಕಾದರೆ ಇಡೀ ನಾಗರಿಕ ಸಮಾಜ ಎದ್ದುನಿಲ್ಲಬೇಕಾಗಿದೆ. ಮಹಿಳಾ ಹಕ್ಕುಗಳ ಹೋರಾಟವನ್ನು ಮಾನವೀಯ ಹಕ್ಕುಗಳ ಹೋರಾಟವೆಂಬ ಹೆಸರಿನಿಂದ ಸಮಾನ
ಮನಸ್ಕರು ಕೈಗೆತ್ತಿಕೊಳ್ಳಬೇಕಾಗಿದೆ.

ಇದಕ್ಕೂ ಮೊದಲು ಪುರುಷವರ್ಗ ತಮ್ಮ ಮನಗಳಲ್ಲಿ ಮತ್ತು ಮನೆಗಳಲ್ಲಿ ಮಹಿಳೆಯರ ಸ್ಥಾನವನ್ನು ಎತ್ತರಕ್ಕೇರಿಸಬೇಕಾಗಿದೆ. ಮನೆಯ ಯಜಮಾನ ಎನ್ನಿಸಿಕೊಳ್ಳುವ ಪುರುಷ ತನ್ನ ತಾಯಿ, ಅಕ್ಕತಂಗಿಯರು, ಹೆಂಡತಿ, ಹೆಣ್ಣುಮಕ್ಕಳು ಮತ್ತು ಇತರ ಮಹಿಳೆಯರ ಬಗೆಗೆ ತೋರುವ ಧೋರಣೆಯನ್ನೇ ಅಲ್ಲಿರುವ ಗಂಡುಮಕ್ಕಳು ಕಲಿಯುತ್ತಾರೆ ಎನ್ನುವ ಎಚ್ಚರ ಪುರುಷವರ್ಗಕ್ಕೆ ಇರಬೇಕು. ಗಂಡುಮಕ್ಕಳಿಗೆ ಲಿಂಗಸಮಾನತೆಯ ಪ್ರಾಥಮಿಕ ಪಾಠಗಳನ್ನು ಕುಟುಂಬದಲ್ಲೇ ಕಲಿಸಬೇಕು.

ಮಹಿಳೆಯರ ಮಾನವೀಯ ಹಕ್ಕುಗಳ ಹೋರಾಟವು ಹಲವಾರು ಸಾಂಸ್ಥಿಕ ಬದಲಾವಣೆಗಳನ್ನು ಸರ್ಕಾರ ಒಪ್ಪಿಕೊಳ್ಳುವಂತಹ ಅನಿವಾರ್ಯ ಸೃಷ್ಟಿಸಬೇಕಾಗಿದೆ. ಶಾಲಾ ಪಠ್ಯಗಳಲ್ಲಿ ಲಿಂಗಸಮಾನತೆ ಮತ್ತು ಲೈಂಗಿಕತೆಯ ಶಿಕ್ಷಣ ಕಡ್ಡಾಯವಾಗಬೇಕಿದೆ. ಯಾವುದೇ ಸರ್ಕಾರ ಅಥವಾ ಪಕ್ಷಗಳ ಹುದ್ದೆಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಆರೋಪ ಹೊತ್ತವರು ಇದ್ದರೆ ಅಂತಹ ಪಕ್ಷಕ್ಕೆ ತಮ್ಮ ಮತ ಇಲ್ಲ ಎಂದು ನಾಗರಿಕ ಸಮಾಜ ಒಕ್ಕೊರಲಿನಿಂದ ಹೇಳಬೇಕಾಗಿದೆ. ಧರ್ಮಗ್ರಂಥಗಳು ಏನೇ ಹೇಳಿರಲಿ, ಸ್ತ್ರೀಯರ ಮೇಲಿನ ಎಲ್ಲಾ ಅಮಾನವೀಯ ಆಚರಣೆ, ಪದ್ಧತಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ.

ನಾಗರಿಕ ಸಮಾಜ, ಅದರಲ್ಲೂ ಹೆಚ್ಚಾಗಿ ಪುರುಷರು ತಮಗೆ ಇಂತಹ ಪುರುಷಪ್ರಧಾನ ವ್ಯವಸ್ಥೆ ಬೇಕಾಗಿಲ್ಲ ಎಂದು ಕೂಗಿ ಹೇಳುವವರೆಗೆ ಪುರುಷರ ಬದುಕು ಅಪೂರ್ಣವಾಗಿಯೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT