ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಮುಟ್ಟಿನ ರಜೆ ಕಲಿಕೆಗೆ ಅಡ್ಡಿಯಾಗದಿರಲಿ

ಈ ನಿರ್ಧಾರದ ಹಿಂದಿನ ಕಾಳಜಿ ಮೆಚ್ಚುವಂಥದ್ದೇ ಆದರೂ ಅದರ ಪರಿಣಾಮಗಳನ್ನೂ ಯೋಚಿಸಬೇಕು
Last Updated 23 ಜನವರಿ 2023, 19:30 IST
ಅಕ್ಷರ ಗಾತ್ರ

‘ವಿದ್ಯಾರ್ಥಿನಿಯರಿಗೆ ತಿಂಗಳಲ್ಲಿ ಮೂರರಿಂದ ನಾಲ್ಕು ದಿನ ಋತುಚಕ್ರದ ದಿನಗಳಾಗಿರುತ್ತವೆ. ಆಗ ಅವರ ಆರೋಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಆಗುವ ಸಾಧ್ಯತೆ ಇದೆ. ದೈಹಿಕವಾಗಿ ಮಾತ್ರವಲ್ಲ ಭಾವನಾತ್ಮಕ ರೋಲರ್ ಕೋಸ್ಟರ್ ದಿನಗಳಾಗಿರುತ್ತವೆ. ಹಾಗಾಗಿ ಶಾಲೆಗೆ ಬರಲು ಸಾಧ್ಯವಾಗದೇ ಇರಬಹುದು. ಹೀಗಿರುವಾಗ ಶಾಲಾ ಹಾಜರಾತಿ ಶೇಕಡ 75ರಷ್ಟನ್ನು ನಿರೀಕ್ಷಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಯ ಮೇರೆಗೆ ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ನಿರ್ಧರಿಸಲಾಗಿದೆ’ ಎಂದು ಇತ್ತೀಚೆಗೆ ವರದಿಯಾಗಿದೆ.

ಮುಟ್ಟು, ಹೆಣ್ಣಿನ ದೇಹದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಆದರೆ ಇಂದಿಗೂ ನಮ್ಮ ಸಮಾಜದಲ್ಲಿ ಅದು ಗುಟ್ಟಾಗಿಡಬೇಕಾದ, ಹೆಂಗಸರಿಗೆ ಸಂಬಂಧಿಸಿದ ವಿಷಯ ಎಂಬುದು ಅಲಿಖಿತ ನಿಯಮ. ಪರಿಸ್ಥಿತಿ ಸುಧಾರಿಸಿದೆ ಎಂಬುದು ನಿಜವಾದರೂ ಅದರ ಬಗ್ಗೆ ಮಾತು, ಚರ್ಚೆ, ಆರೋಗ್ಯಕರ ಸಂವಾದ ಇಂದಿಗೂ ಕಷ್ಟಸಾಧ್ಯ. ಇಂಥ ಸಮಾಜದಲ್ಲಿ ಹೆಣ್ಣುಮಕ್ಕಳ ಕಷ್ಟಗಳ ಬಗ್ಗೆ ಕಾಳಜಿ ವಹಿಸಿ, ಯಾವುದೇ ರೀತಿಯ ಪ್ರಮಾಣಪತ್ರ ಕೇಳದೇ ನೀಡಲಾಗುವ ಈ ರೀತಿಯ ರಜೆಯ ನಿರ್ಧಾರ ಮಹತ್ವದ್ದು! ಹಾಗಾಗಿಯೇ ಈ ಸೌಲಭ್ಯವನ್ನು ಇತರ ರಾಜ್ಯಗಳಲ್ಲೂ ಆರಂಭಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಇದರ ಹಿಂದಿನ ಕಾಳಜಿ ಮೆಚ್ಚುವಂಥದ್ದೇ ಆದರೂ ಅದರ ಪರಿಣಾಮಗಳನ್ನೂ ಯೋಚಿಸಬೇಕು.

ಮುಟ್ಟು ಎನ್ನುವುದು ಸಹಜ ಪ್ರಕ್ರಿಯೆಯಾಗಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ರಕ್ತಸ್ರಾವ, ಅವಧಿ, ಲಕ್ಷಣಗಳು ಭಿನ್ನವಾಗಿರುತ್ತವೆ. ಹಾಗೆ ನೋಡಿದರೆ ಋತುಚಕ್ರ ಆರಂಭವಾಗುವ ಕೆಲ ದಿನಗಳ ಮುನ್ನವೇ ಶೇಕಡ 70ರಷ್ಟು ಮಹಿಳೆಯರು ತಲೆಭಾರ, ಕೆಳಹೊಟ್ಟೆ
ಯಲ್ಲಿ ನೋವು, ಕಿರಿಕಿರಿ, ಮನಸ್ಸಿಗೆ ಬೇಸರ,
ಮೈಯ್ಯಲ್ಲಿ ನೀರು ತುಂಬಿ ಊದಿದ ಅನಿಸಿಕೆ, ಸ್ತನಗಳಲ್ಲಿ ನೋವು ಹೀಗೆ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ. ಆದರೆ ಇವೆಲ್ಲವೂ ದೈನಂದಿನ ಚಟುವಟಿಕೆಗೆ ತೊಂದರೆ ಉಂಟುಮಾಡುವಷ್ಟು ತೀವ್ರವಾಗಿರುವುದಿಲ್ಲ. ಮುಟ್ಟು ಶುರುವಾದ ತಕ್ಷಣ ತನ್ನಿಂತಾನೇ ಕಡಿಮೆಯಾಗು
ತ್ತವೆ. ಮುಟ್ಟಿನ ಸಮಯದಲ್ಲಿಯೂ ಅತಿ ರಕ್ತಸ್ರಾವ, ಸುಸ್ತು, ಹೊಟ್ಟೆನೋವು, ಕಾಲಿನ ಸೆಳೆತ, ಸೊಂಟದಲ್ಲಿ ಬಿಗಿತ, ವಾಕರಿಕೆ ಹೀಗೆ ಅನೇಕ ರೀತಿಯ ಸಮಸ್ಯೆಗಳು ಹೆಣ್ಣುಮಕ್ಕಳಿಗೆ ಇರಬಹುದು. ಕೆಲವರಿಗಂತೂ ನಿಲ್ಲಲೂ ಸಾಧ್ಯವಾಗದಷ್ಟು ಬಳಲಿಕೆ ಇರುತ್ತದೆ. ಈ ರೀತಿಯ ಸಮಸ್ಯೆಗಳು ಇರುವ ಪ್ರಮಾಣ ಶೇಕಡ 10ಕ್ಕಿಂತ ಕಡಿಮೆ. ಹೀಗಿದ್ದಾಗ ಶಾಲೆ, ಕಾಲೇಜಿಗೆ ಬರಲು, ಕೂರಲು, ಕಲಿಯಲು ಖಂಡಿತಾ ಸಾಧ್ಯವಿಲ್ಲ. ಇಂಥವರಿಗೆ ನಿಜಕ್ಕೂ ಈ ರಜೆಯ ಅವಶ್ಯಕತೆ ಇರುತ್ತದೆ. ಹಾಗಾಗಿಯೇ ರಜೆ ಸಿಗಲಿ, ಬೇಕಾದವರಿಗೆ ಮಾತ್ರ, ಎಲ್ಲರಿಗೂ ಅಲ್ಲ!

ಈ ರಜೆ ನಮ್ಮ ಸಮಾಜದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಈಗಾಗಲೇ ಮುಟ್ಟಿನ ಸಮಯದಲ್ಲಿ ಆಟ, ಡಾನ್ಸ್, ಓಟ ಇವೆಲ್ಲವನ್ನೂ ನಿರ್ಬಂಧಿಸುವ ಪ್ರವೃತ್ತಿ ನಮ್ಮಲ್ಲಿದ್ದು ಅದು ಹೆಚ್ಚಾಗಬಹುದು. ಇದನ್ನೇ ನೆಪವಾಗಿಟ್ಟು ಅನೇಕರು ಶಾಲೆಯನ್ನು ತಪ್ಪಿಸಿ ಓದಿನಲ್ಲಿ ಹಿಂದುಳಿಯುವ ಸಾಧ್ಯತೆ ಇದೆ. ಆಗಾಗ್ಗೆ ತೆಗೆದುಕೊಳ್ಳುವ ಇಂಥ ರಜೆಯಿಂದ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಶಂಕೆ ಮೂಡಬಹುದು. ಇದೆಲ್ಲದರ ಜತೆ ಈ ನೈಸರ್ಗಿಕ ಕ್ರಿಯೆಯನ್ನು ರೋಗ ಎಂದು ಭಾವಿಸುವ ಅಪಾಯವಿದೆ. ಮಕ್ಕಳಲ್ಲಿ ಮುಟ್ಟು ಎಂದರೆ ನೋವಿನ, ಕಷ್ಟದ ದಿನಗಳು, ಆ ದಿನಗಳಲ್ಲಿ ರಜೆ ಪಡೆಯುವುದು ಅಗತ್ಯ ಎಂಬ ತಪ್ಪುಕಲ್ಪನೆಯನ್ನು ಹುಟ್ಟುಹಾಕಬಹುದು. ಹೆಣ್ಣುಮಕ್ಕಳಿಗಂತೂ ಮುಟ್ಟಿನ ಕಾರಣದಿಂದ ತಾವು ಓದಲು, ಕೆಲಸ ಮಾಡಲು, ಅಂದುಕೊಂಡಿದ್ದನ್ನು ಸಾಧಿಸಲು ಕಷ್ಟ ಎಂಬ ಭಾವನೆ ಬೇರೂರಬಹುದು.

ರಜೆ ಇರಲಿ ಇಲ್ಲದಿರಲಿ ಮುಟ್ಟಿನ ಸಮಯದಲ್ಲಿ ಎಲ್ಲಾ ಮಹಿಳೆಯರಿಗೆ ಬೇಕಾದದ್ದು ಸ್ವಚ್ಛ ಶೌಚಾಲಯಗಳು ಮತ್ತು ನೀರಿನ ವ್ಯವಸ್ಥೆ. ಶಾಲಾ- ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡುಗಳು ಸುಲಭವಾಗಿ ಸಿಗಬೇಕು. ಸಂಕೋಚಪಡುತ್ತಾ ಪ್ಯಾಡ್‍ಗಳಿಗೆ ಶಿಕ್ಷಕರ ಬಳಿ ಕೈಚಾಚುವ ಬದಲು ತಾವಾಗಿ ತೆಗೆದುಕೊಳ್ಳುವ ವೆಂಡಿಂಗ್ ಮಶೀನ್‍ಗಳು ಉತ್ತಮ ಪರಿಹಾರ. ಪ್ಯಾಡ್‍ಗಳನ್ನು ಹೊತ್ತುಹೊತ್ತಿಗೆ ಬದಲಿಸಲು ಸಮಯ ನೀಡಬೇಕು. ರಕ್ತಸ್ರಾವ ಹೆಚ್ಚಾಗಿ ಸುಸ್ತಾದಾಗ ಸ್ವಲ್ಪ ವಿಶ್ರಾಂತಿ ಪಡೆಯಲು ಹಾಸಿಗೆ, ಶಾಖ ತೆಗೆದುಕೊಳ್ಳಲು ಬಿಸಿನೀರಿನ ಬ್ಯಾಗ್, ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ನೋವುನಿವಾರಕ ಮಾತ್ರೆ ಇಷ್ಟಿರುವ ಪುಟ್ಟ ಕೋಣೆ ಇದ್ದರೆ ಸಾಕು.

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇದೇ 18-24ರವರೆಗೆ ರಾಷ್ಟ್ರೀಯ ಹೆಣ್ಣುಮಕ್ಕಳ ಸಪ್ತಾಹ ಆಚರಿಸಲಾಗಿದೆ. ಮುಟ್ಟು, ಬಸಿರು, ಬಾಣಂತನ ಇವೆಲ್ಲದರ ಬಗ್ಗೆ ಆರೋಗ್ಯಶಿಕ್ಷಣ ಬರೀ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡುಮಕ್ಕಳಿಗೂ ಒಟ್ಟಿಗೇ ಸಿಗಬೇಕು. ಮಹಿಳಾ ಆರೋಗ್ಯದ ಬಗ್ಗೆ ಇಡೀ ಸಮಾಜದ ವರ್ತನೆ ಬದಲಾಗಬೇಕು.

ಮುಟ್ಟು ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ಸಹಜ ಕ್ರಿಯೆ ಎಂದು ಸ್ವೀಕರಿಸಿ, ಅದು ಹೆಣ್ಣುಮಕ್ಕಳ ಕಲಿಕೆಗೆ ಅಡ್ಡಿಯಾಗದ ವಾತಾವರಣ ಕಲ್ಪಿಸುವುದು ಮುಖ್ಯ. ನೆನಪಿನಲ್ಲಿ ಇಡಬೇಕಾದ ಅಂಶವೆಂದರೆ, ಮುಟ್ಟು ಗುಟ್ಟಾಗಿ ಇಡಬೇಕಾದ ವಿಷಯವಲ್ಲ, ರೋಗವೂ ಅಲ್ಲ. ಸಹಜವಾಗಿ ನಡೆಯುವ ಪ್ರಕ್ರಿಯೆ ಮಾತ್ರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT