ಶುಕ್ರವಾರ, ಅಕ್ಟೋಬರ್ 18, 2019
23 °C
ನಾವು ಪ್ರಪಾತಕ್ಕೆ ಬೀಳದಂತೆ ತಡೆದು ನಿಲ್ಲಿಸುವ ನಂಬಿಕೆಯ ಗಿಡವೊಂದು ಬೇಕಲ್ಲ? ನಾರಾಯಣಗುರು ಅಂಥ ನಂಬಿಕೆಯ ಗಿಡ. ಇಂದು ಅವರ ಜಯಂತಿ

ಹೆಬ್ಬಂಡೆಯನ್ನೂ ತಡೆಯುವ ವಿಶ್ವಾಸದ ಗಿಡ ನಾರಾಯಣ ಗುರು

Published:
Updated:

1925ರ ಮಾರ್ಚ್ 12. ಮಹಾತ್ಮ ಗಾಂಧಿ, ಕೇರಳದ ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾದರು. ಗಾಂಧೀಜಿಗೆ ಗುರುಗಳ ಜೊತೆ ಕೀಟಲೆ ಮಾಡೋಣ ಅನಿಸುತ್ತದೆ. ‘ಗುರುಗಳಿಗೆ ಇಂಗ್ಲಿಷ್ ಗೊತ್ತಿಲ್ಲ
ವಂತೆ, ಹೌದಾ?’ ಎಂದು ಕೇಳುತ್ತಾರೆ. ನಾರಾಯಣ ಗುರುಗಳು, ‘ಮಹಾತ್ಮರಿಗೆ ಸಂಸ್ಕೃತ ಬರುವುದಿಲ್ಲ, ಅಲ್ವಾ?’ ಎಂದು ಉತ್ತರಿಸುತ್ತಾರೆ. ಅದೇ ಭೇಟಿಯಲ್ಲಿ ನಾರಾಯಣ ಗುರುಗಳ ಬಳಿ ಗಾಂಧೀಜಿ ತಮ್ಮ ಧ್ಯೇಯ
ವನ್ನೆಲ್ಲ ಹೇಳಿ, ‘ಇದೆಲ್ಲ ಸಾಧ್ಯವಾದೀತೇ?’ ಎಂದು ಕೇಳುತ್ತಾರೆ. ಅದಕ್ಕೆ ಗುರುಗಳು, ‘ಸಾಧ್ಯ ಆದೀತು. ಆದರೆ ಅದಕ್ಕಾಗಿ ಮಹಾತ್ಮರು ಇನ್ನೊಂದು ಜನ್ಮ ಎತ್ತಿ ಬರಬೇಕು’ ಎಂದರು. ‘ಸಾಧ್ಯವಿಲ್ಲ’ ಎನ್ನುವುದನ್ನು ಅವರು ಎಷ್ಟು ಚಂದದಲ್ಲಿ ಹೇಳಿದರು!

ನಾರಾಯಣ ಗುರುಗಳು 1856ರಲ್ಲಿ ತಿರುವನಂತಪುರ ಸಮೀಪದ ಚೆಂಬಳಾಂತಿ ಎಂಬಲ್ಲಿ ಮಾಡನಾಶಾನ್ ಮತ್ತು ಕುಟ್ಟಿಯಮ್ಮ ಅವರ ಮಗನಾಗಿ ಜನಿಸಿದರು.ಅವರ ಕಾಲದ ಕೇರಳ ಬಹಳ ವಿಕ್ಷಿಪ್ತವಾಗಿತ್ತು. ಒಂದು
ಕಡೆ ಜಾತಿ ಪದ್ಧತಿ, ಮತ್ತೊಂದು ಕಡೆ ಚರ್ಮ ಸುಲಿದುನೇತು ಹಾಕುವಂತಹ ಶಿಕ್ಷೆಗಳು, ಇನ್ನೊಂದು ಕಡೆ ಒಬ್ಬಳನ್ನೇ ಸಹೋದರರೆಲ್ಲರೂ ಮದುವೆಯಾಗುವ ಆಚರಣೆ… ಇಂತಹ ಸಮಾಜದ ಸುಧಾರಣೆಗೆ ಮುಂದಾದರು ನಾರಾಯಣ ಗುರುಗಳು.

ನಾರಾಯಣ ಪ್ರತಿಭಾವಂತನೆಂದು ಅರಿತ ಅವರ ಸೋದರಮಾವ ಕೃಷ್ಣ ವೈದ್ಯರ್, ಅವರನ್ನು ರಾಮನ್ ಪಿಳ್ಳೆ ಬಳಿ ವ್ಯಾಸಂಗಕ್ಕೆ ಸೇರಿಸಿದರು. ಅಲ್ಲಿ ಅವರು ಸಂಸ್ಕೃತ ಕಲಿತರು. ವ್ಯಾಸಂಗದ ಅವಧಿಯಲ್ಲಿ ನಾರಾಯಣರ ಮೇಲೆ ಉಪನಿಷತ್ತುಗಳು ಹೆಚ್ಚು ಪ್ರಭಾವ ಬೀರಿ ಅವರೊಳಗೆ ವಿಶ್ವಕುಟುಂಬದ ಭಾವನೆಗಳು ಬರತೊಡಗಿದವು. ಅನಾರೋಗ್ಯ ನಿಮಿತ್ತ ಅವರು ಗುರುಕುಲದಿಂದ ಹೊರಡುವಾಗ ‘ನಮ್ಮ ನೆನಪಾಗಿ ಏನನ್ನು ಕೊಡಲಿ’ ಎಂದು ಕೇಳಿದ ಸಹಪಾಠಿಗಳಿಗೆ, ‘ತಾಮ್ರದ ಬಿಂದಿಗೆಯನ್ನು ಕೊಡಿ. ನಾನು ಸಾಗರವನ್ನು ಪ್ರವೇಶಿಸುತ್ತೇನೆ. ಅಲ್ಲಿ ನನಗೇನಾದರೂ ಸಿಕ್ಕಿದರೆ ನಿಮಗೂ ಸ್ವಲ್ಪ ತೆಗೆದು ಬಿಂದಿಗೆಯಲ್ಲಿಟ್ಟಿರುತ್ತೇನೆ’ ಎಂದರು. ಈ ಸಮಯಕ್ಕಾಗಲೇ ನಾರಾಯಣರು ಗಾಢ ಚಿಂತನೆಗಳಿಂದ ಅಂತರ್ಮುಖಿ ಕೂಡ ಆಗಿದ್ದರು.

ಕೆಲವು ಕಾಲ ನಾರಾಯಣರು ಅಧ್ಯಾಪಕರೂ ಆಗಿದ್ದರು. ಶಾಲೆಗೆ ಈಳವರ ಮಕ್ಕಳು ಮಾತ್ರ ಬರುತ್ತಿದ್ದರು. ನಾರಾಯಣರು ಶಾಲೆ ಮುಗಿದ ಮೇಲೆ ಅಸ್ಪೃಶ್ಯರ ಕೇರಿಗೆ ಹೋಗಿ ಕಲಿಸತೊಡಗಿದರು. ಇದು ಆಕ್ಷೇಪಕ್ಕೆ ಕಾರಣವಾಯಿತು. ಮತ್ತೆ ಬೇರೆ ಶಾಲೆ. ಮತ್ತೆ ಇದೇ ಕಥೆ.

ನಾರಾಯಣರು ಅಂತರ್ಮುಖಿಯಾಗುತ್ತಿದ್ದಂತೆ‘ಇವನು ಕೈತಪ್ಪಿ ಹೋಗಬಾರದು’ ಎಂದು ಮನೆಯವರು ಅವರಿಗೆ ಕಾಳಿಯಮ್ಮ ಎಂಬುವರನ್ನು ಮದುವೆ ಮಾಡಿಸಿದರು. ಆದರೆ ಅವರು ಸಂಸಾರ ಮಾಡಲಿಲ್ಲ. ಕಡೆಗೆ ಕಾಳಿಯಮ್ಮ ತವರಿಗೆ ಹೋದರು. ಮನೆಯವರ ಒತ್ತಾಯದಂತೆ ನಾರಾಯಣರು ಕಾಳಿಯಮ್ಮನ ಮನೆಗೆ ಹೋದರು. ಗಂಡ ಬರುತ್ತಿದ್ದಾನೆಂದು ಕಾಳಿಯಮ್ಮ ಸಂಭ್ರಮದಿಂದ ಕಾಯುತ್ತಿದ್ದರೆ ಮಾವನ ಮನೆಗೆ ಹೋದ ನಾರಾಯಣರು ಎಲ್ಲರಿಗೂ ಕೈಮುಗಿದು, ‘ನೀವು ನನ್ನನ್ನು
ಸಂಸಾರದಿಂದ ಮುಕ್ತನನ್ನಾಗಿ ಮಾಡಿ’ ಎಂದು ಕೇಳಿಕೊಂಡು ತಾವು ಮಾಡಿದ್ದ ವೀಳ್ಯದೆಲೆ ತೋಟವನ್ನು ಕಾಳಿಯಮ್ಮನಿಗೆ ಬಿಟ್ಟುಕೊಟ್ಟು ಹೊರಟೇಬಿಟ್ಟರು.

ನಾರಾಯಣ ಗುರುಗಳ ಮೊದಲ ಬಂಡಾಯ ಅರವಿಪ್ಪುರಂನಲ್ಲಿ ದೇವಾಲಯ ನಿರ್ಮಾಣ. 1888ರಲ್ಲಿ ಅವರು ಅಲ್ಲಿ ಶಿವಾಲಯ ಕಟ್ಟಿಸಿದರು. ಬ್ರಾಹ್ಮಣರಿಲ್ಲದೆ ಸ್ಥಾಪಿಸಲ್ಪಟ್ಟ ದೇವಾಲಯವಿದು. ಅವರ ಅನುಯಾಯಿಗಳಲ್ಲೇ ಕೆಲವರು ‘ಬ್ರಾಹ್ಮಣರಿಂದಲೇ ಪ್ರತಿಷ್ಠಾಪನೆ ಮಾಡಿಸೋಣ’ ಎಂದರೂ ಗುರುಗಳು ಕೇಳಲಿಲ್ಲ. ಬದಲಿಗೆ ‘ನಾನು ಸ್ಥಾಪಿಸಿದ್ದು ಶೂದ್ರ ಶಿವನನ್ನು’ ಎಂದರು.

ದೇವಸ್ಥಾನಗಳು ಪರಿವರ್ತನೆಯ ಕೇಂದ್ರಗಳಾಗಬೇಕು. ಅಲ್ಲಿ ಕಾಲಬಾಹಿರ, ಅಮಾನವೀಯ ಆಚರಣೆಗಳನ್ನು ಬಿಡುವ ಜನಜಾಗೃತಿ ಆಗಬೇಕು. ದುರ್ನಡತೆ, ಮಾಲಿನ್ಯದಿಂದ ಹೊರಬರಲು ದೇವಸ್ಥಾನಗಳು ಕೇಂದ್ರ
ಗಳಾಗಬೇಕು. ದೇವಸ್ಥಾನವನ್ನು ಆಧರಿಸಿ ಶಿಕ್ಷಣ ಬೆಳೆಯಬೇಕು. ಅಲ್ಲಿ ವೃತ್ತಿ ಕೇಂದ್ರಗಳು ಬೆಳೆಯಬೇಕು ಎಂಬುದು ಗುರುಗಳ ಯೋಜನೆಯಾಗಿತ್ತು. ನಂತರ ಸ್ಥಾಪನೆಯಾದ, ಈಗ ಶಿವಗಿರಿಯಲ್ಲಿರುವ ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ ಎಂಬ ಸಂಸ್ಥೆಯು ಗುರುಗಳ ಆಲೋಚನೆಗಳನ್ನು ಕಾರ್ಯಗತಗೊಳಿಸಿತು.

ಶಿಕ್ಷಣ ಮತ್ತು ಸಂಘಟನೆಯಿಂದ ಸಮಾಜದ ಅಭ್ಯುದಯ ಎಂಬ ತತ್ವಕ್ಕೆ ಬದ್ಧರಾಗಿದ್ದ ಗುರುಗಳು, ಹಲವು ಸಂಘಟನೆಗಳನ್ನು ರೂಪಿಸಿದರು. ಅವರಿಂದ ಪ್ರೇರಣೆ ಪಡೆದು ಹಲವು ಸಂಘಟನೆಗಳು ಹುಟ್ಟಿದವು. ಹಲವು
ಬಾರಿ ಗುರುಗಳನ್ನು ಆಕ್ಷೇಪಿಸಿದ್ದ ನಂಬೂದರಿ ಬ್ರಾಹ್ಮಣರೇ ತಮ್ಮ ಸಮುದಾಯದ ಸಮಸ್ಯೆಗಳನ್ನು ತೊಡೆಯುವುದಕ್ಕಾಗಿ ಗುರುಗಳ ಪ್ರೇರಣೆಯಿಂದ ಸಂಘಟನೆ ರೂಪಿಸಿದರು. ಗುರುಗಳ ಮೆರವಣಿಗೆಯನ್ನೂ ಮಾಡಿಸಿದರು.

ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತಂದ ಗುರುಗಳು ಮಾತೃಭಾಷೆ, ಸಂಸ್ಕೃತ ಮತ್ತು ಇಂಗ್ಲಿಷ್ ಕಲಿಯಬೇಕೆಂದು ಪ್ರತಿಪಾದಿಸಿದರು. ವೃತ್ತಿ ಶಿಕ್ಷಣವನ್ನು ಪ್ರತಿಪಾದಿಸಿದ ಅವರು ಶಿವಗಿರಿಯಲ್ಲಿ ನೇಯ್ಗೆ ಘಟಕ ಸ್ಥಾಪಿಸಿದರು. ಅವರ ಶಿಷ್ಯ ಕೇಶವನ್ ವೈದ್ಯರ್ ಸ್ಥಾಪಿಸಿದ ಸಾಬೂನು ತಯಾರಿಕಾ ಘಟಕ ಇವತ್ತು ಚಂದ್ರಿಕಾ ಸೋಪ್ ಆಗಿ ಪ್ರಸಿದ್ಧವಾಗಿದೆ. ಜಾತಿಭೇದ ಹೋಗಲಾಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಸತಿ ಶಾಲೆಗಳನ್ನೂ ತೆರೆದರು. ಆದರ್ಶಾತ್ಮಕ ಸಣ್ಣ ಕುಟುಂಬಗಳ ರಚನೆಯಾಗಬೇಕೆಂಬುದು ಗುರುಗಳ ಆಲೋಚನೆಯಾಗಿತ್ತು.

ಇಳಿವಯಸ್ಸಿನಲ್ಲಿ ಕಾಯಿಲೆಗಳನ್ನೂ ಲೆಕ್ಕಿಸದೆ ಕೆಲಸಮಾಡಿದ ಗುರುಗಳು, 1928ರ ಸೆಪ್ಟೆಂಬರ್ 20ರಂದು ಆಶ್ರಮದಿಂದ ಶಾಲೆಗೆ ಹೊರಟ ಮಕ್ಕಳನ್ನು ಆಶೀರ್ವದಿಸಿ ಕಣ್ತುಂಬಿಕೊಂಡರು. ಮಧ್ಯಾಹ್ನ ಊಟ ಬಡಿಸಿದರು. ಮೂರು ಗಂಟೆಯ ವೇಳೆಗೆ ಧ್ಯಾನಸ್ಥರಾದರು. ಗುರುಗಳ ಶಿಷ್ಯ ಸ್ವಾಮಿ ವಿದ್ಯಾನಂದರು ‘ಯೋಗಾ ವಾಸಿಷ್ಠ’ ದ ಆತ್ಮಮುಕ್ತಿ ಶ್ಲೋಕ ಪಠಿಸಿದರು. ನಾರಾಯಣ ಗುರುಗಳು ಧ್ಯಾನದಲ್ಲಿ ಲೀನವಾದರು.

ಭಾಗವತದಲ್ಲಿ ಉದ್ದವ ಗೀತೆ ಎಂಬುದಿದೆ. ಅಲ್ಲಿ ಒಂದು ಕಥೆ ಬರುತ್ತದೆ. ಕಥೆಯ ಕೊನೆಯಲ್ಲಿ ಶ್ರೀಕೃಷ್ಣ ಒಂದು ವಿವರಣೆ ನೀಡುತ್ತಾನೆ: ‘ಕಲಿಯುಗದಲ್ಲಿ ಪುರೋಹಿತರು ನವಿಲಿನಂತೆ ನಯವಾಗಿರುತ್ತಾರೆ. ಆದರೆ ಭಕ್ತರನ್ನು ಕುಕ್ಕಿ ಕುಕ್ಕಿ ತಿನ್ನುತ್ತಾರೆ. ಮಕ್ಕಳಿಗೆ ಸತ್ಯದರ್ಶನ ಮಾಡಿಸಬೇಕಾದ ತಂದೆ- ತಾಯಿ ಮಕ್ಕಳನ್ನು ಮೋಹಿಸಿ ಮಕ್ಕಳ ನಾಶವನ್ನೂ ಮಾಡುತ್ತಾರೆ. ವ್ಯಕ್ತಿತ್ವಗಳು ಹೆಬ್ಬಂಡೆಗಳು ಉರುಳಿದಂತೆ ಕುಸಿದರೂ, ನಂಬಿಕೆಯ ಸೂಚಕವಾದ ಸಣ್ಣದೊಂದು ಗಿಡ ಹೆಬ್ಬಂಡೆಯನ್ನೂ ಕುಸಿಯದಂತೆ ನಿಲ್ಲಿಸುವ ಶಕ್ತಿ ಹೊಂದಿರುತ್ತದೆ’.

ಕಲಿಯುಗದ ಸಂದರ್ಭದಲ್ಲಿ ನಾವು ಪ್ರಪಾತಕ್ಕೆ ಬೀಳದಂತೆ ತಡೆದು ನಿಲ್ಲಿಸುವ ನಂಬಿಕೆಯ ಗಿಡವೊಂದು ಬೇಕಲ್ಲ? ನಾರಾಯಣ ಗುರುಗಳಂತಹವರು ಅಂತಹ ನಂಬಿಕೆಯ ಗಿಡ.

Post Comments (+)