ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹೊನ್ನು ಬಿತ್ತಿದ್ದೇವೆ, ಪೊರೆಯೋಣ!

ಕಾಲದ ಒತ್ತಡ, ಜನರೇಷನ್ ಗ್ಯಾಪ್‍ ಅನ್ನು ಅರ್ಥೈಸಿಕೊಂಡು ಬೆಳೆಯುವ ಭವಿಷ್ಯದ ಕುಡಿಗಳನ್ನು ತಿದ್ದುವ ನೈತಿಕತೆಯನ್ನು ಸಮಾಜ ಉಳಿಸಿಕೊಳ್ಳುವುದು ಮುಖ್ಯ
ಅಕ್ಷರ ಗಾತ್ರ

ಜಗತ್ತು ವಿಸ್ತರಿಸುತ್ತಿದೆ. ಆಕಾಶಕಾಯಗಳು ದೂರದೂರ ಸರಿಯುತ್ತಿವೆ. ಜೀವ ವಿಕಾಸಗೊಳ್ಳುತ್ತಲೇ ಇದೆಯಾದರೂ ಅನುಬಂಧಗಳು ಸಡಿಲಗೊಳ್ಳುತ್ತಾಸಾಗಿವೆ. ವಿಜ್ಞಾನ- ತಂತ್ರಜ್ಞಾನಗಳಂತೆ ಮೈಮನಸುಗಳಿಗೂ ಈಗ ನೂರ್ಮಡಿ ವೇಗ. ಎಲ್ಲೆಡೆ ಗೆಲ್ಲುವ, ನಿಸರ್ಗಚಕ್ರವನ್ನು ತಿರುಚುವ ಧಾವಂತ. ಕಾರಣ, ಇದು ವೇಗದ ಜಮಾನ!

ಯೌವನವೊಂದು ಸಂದಿಗ್ಧ ಕಾಲ. ಪ್ರೌಢ ಹಂತ ದಾಟಿಯಾದ ಮೇಲೆ ಬದುಕು ಕಲಿಸುವ ಕುಲುಮೆಯಾಗಿ, ಸ್ಪರ್ಧಾ ಜಗತ್ತಿನ ಬೆಳಕಿಂಡಿಯಾಗಿ ನಿಲ್ಲಬೇಕಿರುವುದು ಕಾಲೇಜು ಶಿಕ್ಷಣ. ವಿದ್ಯಾರ್ಥಿಕೇಂದ್ರಿತ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಪ್ರಗತಿಗೀಗ ವಿಪುಲ ಅವಕಾಶಗಳಿವೆ. ಜ್ಞಾನಾರ್ಜನೆ, ವಿಷಯದ ತಾತ್ವಿಕ ಅಧ್ಯಯನಕ್ಕೆ ಸರ್ಕಾರ- ಸ್ವಯಂಸೇವಾ ಸಂಸ್ಥೆಗಳ ಪ್ರೇರಣೆ- ಪ್ರೋತ್ಸಾಹಗಳಿಗೇನೂ ಕೊರತೆಯಿಲ್ಲ.

ಕೊಠಾರಿ ಶಿಕ್ಷಣ ಸುಧಾರಣಾ ಆಯೋಗವು ‘ದೇಶದ ಭವಿಷ್ಯವು ತರಗತಿ ಕೋಣೆಗಳಲ್ಲಿ ರೂಪುಗೊಳ್ಳುತ್ತದೆ...’ ಎಂದು ಹೇಳಿತ್ತು. ಆದರೆ, ಹದ
ಗೊಂಡ ನೆಲದಲ್ಲಿ ಶ್ರಮ ಬಿತ್ತಿ ಯಶಸ್ಸಿನ ಫಸಲುಣ್ಣ ಬೇಕಾದ ಕೃಷಿಕನೀಗ ಅಲ್ಲಿ ಕಾಣೆಯಾಗುತ್ತಿದ್ದಾನೆ. ಅವನಲ್ಲಿ ಕಲಿಕೆಗಿಂತ ಅನ್ಯವಿಚಾರಗಳೇ ಮುಂಚೂಣಿಯಲ್ಲಿವೆ ಅನ್ನುವುದು ವಿದ್ಯಾರ್ಥಿಗಳ ಮೇಲಿನ ಗಂಭೀರ ಆರೋಪ.

ಯುವ ಮನಸುಗಳ ಅಸಹಜ ನಡೆಗೆ ಇರಬಹುದಾದ ಕಾರಣಗಳನ್ನು ವಿಭಿನ್ನ ಆಯಾಮಗಳಲ್ಲಿ ಚಿಕಿತ್ಸಕ ದೃಷ್ಟಿಯಲ್ಲಿ ಗ್ರಹಿಸಬೇಕಿದೆ. ಕೊರೊನಾ ಕಾಲದಲ್ಲಂತೂ ತುರ್ತು ಎಂಬಂತೆ ಕೈಸೇರಿದ ಬೈಕು- ಮೊಬೈಲುಗಳ ಗೀಳು- ಮೋಜಲ್ಲಿ ಅಜಾಗರೂಕವಾಗಿ ಆಹ್ವಾನಿಸಿದ ಅಪಘಾತಗಳ ಚಿತ್ರ, ಸಂಯಮ ಕಳೆದುಕೊಂಡು ಮೊರೆಹೋದ ಆತ್ಮಹತ್ಯೆಗಳಲ್ಲಿ ಎಳೆಯ ಜೀವಗಳು ಅರಳುವ ಮೊದಲೇ ಅಂತ್ಯಗೊಂಡದ್ದು, ಮಹಾನಗರಗಳಿಗೆ ಸೀಮಿತವಾಗಿದ್ದ ಮಾದಕವಸ್ತು ಜಾಲ ಈಗೀಗ ಮಲೆನಾಡಲ್ಲೂ ಲೀಲಾಜಾಲ. ಯುವಕರಲ್ಲಿ ಹೆಚ್ಚುತ್ತಿರುವ ಮಾದಕವ್ಯಸನ, ಸಿಗರೇಟ್- ಮದ್ಯ ಸೇವನೆ, ಮೊಬೈಲ್ ಗೇಮ್‍ನಲ್ಲಿಯ ಮೈಮರೆವು ದಿನಬೆಳಗಾದರೆ ಹೆತ್ತವರನ್ನು ಬೆಚ್ಚಿಬೀಳಿಸುತ್ತದೆ.

ಮನೋವಿಜ್ಞಾನದ ಪ್ರಕಾರ, ‘ವರ್ತನೆಯಲ್ಲಾಗುವ ಬದಲಾವಣೆಯೇ ಕಲಿಕೆ’. ಆದರೆ ಕಲಿಕೆಯು ಬುದ್ಧಿ-ಭಾವಗಳ ಪರಿಧಿಯನ್ನು ವಿಸ್ತರಿಸುವ, ಜೀವನ ಕೌಶಲಗಳನ್ನು ಹರಿತಗೊಳಿಸುವ, ಅನ್ನದ ಮೂಲ ಹುಡುಕುವ, ಬದುಕಿನ ಮೌಲ್ಯಗಳನ್ನು ಒಳಗೊಳ್ಳುವಲ್ಲಿ ಸೋಲುತ್ತಿರುವುದು ಸ್ಪಷ್ಟ.

ಆದರ್ಶರಹಿತ ಸಮಾಜದಲ್ಲಿ ಹಣವೆಂಬುದು ಇನ್ನಿಲ್ಲದ ಮಾನ್ಯತೆ ಪಡೆಯುತ್ತಿರುವಾಗ, ಬೆವರುಬಸಿವ ಅಪ್ಪನ ಬಿಡಿಗಾಸು ಕೇವಲವೆನಿಸಿ, ಸತ್ಯ-ನಿಷ್ಠೆಗಳು ಅಪ್ರಸ್ತುತವೆನಿಸುತ್ತವೆ. ಬೆರಳತುದಿಯಲ್ಲಿ ಬ್ರಹ್ಮಾಂಡವೇ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ತರಗತಿಯ ಪಾಠಗಳು ಸಪ್ಪೆಸಪ್ಪೆ. ಕುಟುಂಬದ ಸಂಬಂಧ- ಆಚರಣೆಗಳಲ್ಲೂ ಒಲವಿಲ್ಲ. ವಿದ್ಯಾರ್ಥಿನೆಲೆಯಲ್ಲಿ ತಿಳಿಗೊಳ ಕದಡುತ್ತಿರುವುದಕ್ಕೆ ಕಾರಣಗಳಿವೆ. ಯುವಮನಸುಗಳ ಎದುರಿಗೆ ಆದರ್ಶಗಳಿಲ್ಲ. ಕೇವಲ ಆದಾಯ ಪ್ರಮಾಣ ಪತ್ರಕ್ಕೆಂದು ಕಚೇರಿ ಮೆಟ್ಟಿಲೇರಿದವನಿಗಾಗುವ ಕಹಿ ಅನುಭವಗಳು ತರಗತಿಯ ಆದರ್ಶಗಳನ್ನೆಲ್ಲ ಮಣ್ಣುಪಾಲು ಮಾಡಲು ಸಾಕಾಗುತ್ತವೆ.

ಮೂಲಭೂತ ಅಗತ್ಯಗಳಾದ ಆಹಾರ, ಆರೋಗ್ಯ ಮತ್ತು ವಿದ್ಯಾಕ್ಷೇತ್ರಗಳು ಲಾಭಕೋರರ ಕೈವಶವಾಗಿವೆ. ಬಲಿಷ್ಠರಾದವರು ಅನಾಚಾರ, ವೈಭೋಗಗಳಲ್ಲಿ ಮುಳುಗೇಳುತ್ತಿರುವ ವಿಚಾರ ತಿಳಿಯುವ ಕುದಿಮನಸುಗಳಲ್ಲಿ ಭ್ರಮನಿರಸನ. ಬಿಸಿರಕ್ತಗಳ ಹೃದಯ ಬೆಸೆಯಬೇಕಾದ ಹೊತ್ತಲ್ಲಿ ಅವುಗಳ ಮನಸು ಒಡೆಯುವ ಪ್ರಕ್ರಿಯೆಗಳು ಸದಾ ಚಾಲ್ತಿಯಲ್ಲಿರುತ್ತವೆ. ತಾರುಣ್ಯವೆಂದರೆ ಮೊದಲೇ ಗೊಂದಲದ ಗೂಡು. ಯುವಕರನ್ನು ಮುತ್ತಿಕೊಳ್ಳುತ್ತಿರುವ ವಿಷಮ ಪ್ರಭಾವಳಿಗಳಿಂದ ಬಿಡಿಸಿಕೊಳ್ಳುವ ದಾರಿ ಹುಡುಕಬೇಕಿದೆ. ಎಲ್ಲ ಕಾಲಕ್ಕೂ ದೇಶದ ಆಸ್ತಿಯೂ ಶಕ್ತಿಯೂ ಆಗಿರುವ ಯುವಜನತೆ, ಬೆಳಕಿನ ಬೀಜಗಳಾಗಿ ಮೊಳೆಯಬೇಕು. ನಾಳಿನ ಭರವಸೆಗಳಾಗಿ ಬೆಳೆಯಬೇಕು.

ಯುವಸಮೂಹವನ್ನು ದೂರುತ್ತಾ ಕೂತರೆ ಪ್ರಯೋಜನವಿಲ್ಲ. ಸಮಸ್ಯೆಯ ತಾಯಿಬೇರು ಇರುವುದು ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ. ಬೆಳೆಯುವ ಭವಿಷ್ಯದ ಕುಡಿಗಳನ್ನು ‘ಹೊನ್ನ ಬಿತ್ತೇವ ಹೊಲಕೆಲ್ಲಾ...’ ಎಂಬಂತೆ ಆಸ್ಥೆಯಿಂದ ಪೊರೆಯಬೇಕು. ಅದು ಜಾಗೃತ ಸಮಾಜದ ಜವಾಬ್ದಾರಿಯೂ ಹೌದು. ಸಮಾಜವೀಗ ಜಾತಿ, ಹಣ, ಸ್ವಾರ್ಥ, ಭ್ರಷ್ಟಾಚಾರ, ಬಾಹ್ಯ ಸೌಂದರ್ಯಗಳ ಬೆನ್ನುಬೀಳದೆ, ತನ್ನ ಸಂತತಿಯನ್ನು ತಿದ್ದುವ ನೈತಿಕತೆಯನ್ನು ಉಳಿಸಿಕೊಳ್ಳುವುದು ಮುಖ್ಯ.

ಅಕ್ಷರಗಳ ಅರಿವನ್ನಷ್ಟೇ ಮಕ್ಕಳಿಗಿತ್ತರೆ ಸಾಲದು, ಸಂಸ್ಕಾರದ ತಳಹದಿಯ ಮೇಲೆ ಬದುಕು ಕಟ್ಟಿಕೊಡಬೇಕು. ಪ್ರೀತಿಯ ತುಂತುರನ್ನು ಅಲ್ಲಿ ಸದಾಕಾಲ ಹನಿಸಬೇಕು. ಮಕ್ಕಳಿಗೆ ಕ್ರೀಡೆ, ಸಾಹಿತ್ಯ-ಸಂಗೀತ, ಪುಸ್ತಕ ಓದುವಂತಹ ಆರೋಗ್ಯಕರ ಹವ್ಯಾಸಗಳ ಹುಚ್ಚು ಹಿಡಿಸಬೇಕಿದೆ. ಸಾವಧಾನದ-ಧ್ಯಾನದ ಮಹತ್ವವನ್ನು ಮನಗಾಣಿಸುವುದು ಈಗ ಮೊದಲಿಗಿಂತ ಹೆಚ್ಚು ಅಗತ್ಯ.

ತಮ್ಮದೇ ಆರೋಗ್ಯ, ನೆಮ್ಮದಿ, ಬಾಂಧವ್ಯ ಮರೆತು ಸಂಪತ್ತು ಕ್ರೋಡೀಕರಣಕ್ಕೆ ಹಗಲಿರುಳು ಹೊಯ್ದಾಡುವ ಪೋಷಕವರ್ಗದ ಆತ್ಮಾವಲೋಕನಕ್ಕೆ ಇದು ಸಕಾಲ. ಹಿರಿಯರೆಲ್ಲ ಸರಳ ಜೀವನವಿಧಾನ ಮತ್ತು ಸಮಷ್ಟಿ ಪ್ರಜ್ಞೆಯಲ್ಲಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದಲ್ಲಿ ಮಾತ್ರ ಕನಸಿನ ನಾಳೆಗಳಲ್ಲಿ ಕರುಳಕುಡಿಗಳು ಸಾರ್ಥಕವಾಗಿ, ಸಂತುಷ್ಟರಾಗಿ ಬಾಳುವುದು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT