ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಕ್ಕಳ ಹೊರೆ ಇಳಿಯಲಿ, ಹಗುರಾಗಲಿ

Published 23 ಜುಲೈ 2023, 19:24 IST
Last Updated 23 ಜುಲೈ 2023, 19:24 IST
ಅಕ್ಷರ ಗಾತ್ರ

ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್‌ ಹೊರೆ ಇಲ್ಲದೇ ಮಕ್ಕಳು ಖುಷಿಯಿಂದಿರಲು ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಸಂಭ್ರಮ ಶನಿವಾರ’ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಇತ್ತೀಚೆಗೆ ಮೊದಲ ‘ಸಂಭ್ರಮ ಶನಿವಾರ’ದಂದು ಬೆಂಗಳೂರಿನ ಕೆಲ ಶಾಲೆಗಳಿಗೆ ಭೇಟಿ ನೀಡಿ ಚಟುವಟಿಕೆಗಳನ್ನು ಗಮನಿಸಿದೆ. ಬ್ಯಾಗ್‌ ಇಲ್ಲದೇ ಆರಾಮಾಗಿ ಕೈಬೀಸಿಕೊಂಡು ಬರಬೇಕು ಎಂಬ ಸೂಚನೆ ಇದ್ದಾಗ್ಯೂ ಕೆಲವು ಮಕ್ಕಳು ಬ್ಯಾಗ್‌ ತಂದಿದ್ದರು. ಈ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರ ಕುತೂಹಲಕರವಾಗಿತ್ತು.

‘ಬ್ಯಾಗ್‌ ಇಲ್ಲದೇ ಇದ್ದರೆ ನಮಗೆ ಒಂಥರಾ ಆಗುತ್ತೆ. ಬ್ಯಾಗ್‌ ಬಿಡುವುದು ಕಷ್ಟ’ ಎಂದರು. ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಶಾಲೆಗಳಲ್ಲಿ ಪಠ್ಯಪುಸ್ತಕ, ಪಾಠ ಬೋಧನೆಯಿಲ್ಲದೆ ಮಕ್ಕಳನ್ನು ಸೂಚಿತ ಚಟುವಟಿಕೆಗಳಲ್ಲಿ ವ್ಯವಸ್ಥಿತವಾಗಿ ತೊಡಗಿಸಲು ಶಿಕ್ಷಕರು ಪ್ರಯಾಸಪಡುತ್ತಿದ್ದರು. ದೊಡ್ಡವರಾಗಲೀ ಅಥವಾ ಚಿಕ್ಕವರಾಗಲೀ ತಾವು ಹೊತ್ತುಕೊಂಡಿರುವ ಹೊರೆಯನ್ನು ಇಳಿಸಲು ಮನಸ್ಸು ಮಾಡರು.

ಸದಾ ಭವಿಷ್ಯದ ಕುರಿತು ಆತಂಕ, ಚಿಂತೆ, ಇತರರ ಬಗ್ಗೆ ಅನುಮಾನ, ಮಾತ್ಸರ್ಯದಂತಹ ಹೊರೆಗಳನ್ನು ವಯಸ್ಕರಾದ ನಾವು ಸದಾ ಮನದೊಳಗೆ ಹೊತ್ತುಕೊಂಡಿರುತ್ತೇವೆ. ನಿತ್ಯ ಕೊಂಡೊಯ್ಯುವ ಲ್ಯಾಪ್‌ಟಾಪ್‌ ಹೊಂದಿದ ಚೀಲ, ಛತ್ರಿ ಅಥವಾ ವ್ಯಾನಿಟಿ ಬ್ಯಾಗ್‌ನಂತಹವನ್ನು ಸದಾ ಜೊತೆಗೆ ತೆಗೆದುಕೊಂಡು ಹೋಗುವ ಅಭ್ಯಾಸ ಇರುವವರು, ಆ ವಸ್ತುಗಳ ಅವಶ್ಯಕತೆ ಇಲ್ಲದೇ ಇರುವಾಗಲೂ ಅವುಗಳನ್ನು ಬಿಡಲಾರರು. ಪ್ರಯಾಣದಲ್ಲಿ ನಾವೆಲ್ಲಾ ಗಮನಿಸಿದಂತೆ, ಕೆಲವರು ತಮ್ಮ ಕೈಲಿರುವ ಲಗೇಜು, ಸಾಮಾನುಗಳನ್ನು ಕೆಳಗಿರಿಸದೆ ಹೊತ್ತುಕೊಂಡೇ ಪ್ರಯಾಣಿಸುತ್ತಾರೆ. ಭೌತಿಕ, ಮಾನಸಿಕ, ಭಾವನಾತ್ಮಕ ಹೊರೆಯನ್ನು ಸದಾ ಹೊತ್ತು ತಿರುಗಿ ಅಭ್ಯಾಸ ಮಾಡಿಕೊಂಡ ವಯಸ್ಕರು, ಮಕ್ಕಳಿಗೂ ವಿವಿಧ ರೀತಿಯ ಹೊರೆಯನ್ನು ಸದ್ದಿಲ್ಲದೇ ಹೊರಿಸಿ, ಸಮಾಧಾನಪಟ್ಟುಕೊಳ್ಳುತ್ತಾರೆ.

ಪಠ್ಯಪುಸ್ತಕ, ನೋಟ್‌ ಪುಸ್ತಕ, ಜಾಮಿಟ್ರಿ ಬಾಕ್ಸ್‌, ಊಟದ ಡಬ್ಬಿ, ನೀರು ಎಲ್ಲವನ್ನೂ ಹೊಂದಿದ ಚೀಲವನ್ನು ಮಕ್ಕಳು ನಿತ್ಯ ಶಾಲೆಗೆ ತೆಗೆದುಕೊಂಡು ಹೋಗುತ್ತಾರೆ. ಮಕ್ಕಳು ಕೊಂಡೊಯ್ಯುವ ಬ್ಯಾಗ್‌ ಅನ್ನು ‘ಭೌತಿಕ ಹೊರೆ’ ಎಂದು ಪರಿಭಾವಿಸುವುದಾದರೆ, ಕಲಿಯಬೇಕಾದ ಪಾಠ, ಶಿಕ್ಷಕರಿಗೆ ಒಪ್ಪಿಸಬೇಕಿರುವ ಪದ್ಯ, ನೆನಪಿಡಬೇಕಿರುವ ಗಣಿತದ ಸೂತ್ರದಂತಹವು ಮಾನಸಿಕ ಹೊರೆ ಎನಿಸಿಕೊಳ್ಳುತ್ತವೆ. ತನ್ನ ಜೊತೆಗಾರ ಗೆಳೆಯ, ಗೆಳತಿಯರು ತನ್ನಲ್ಲಿರುವ ನ್ಯೂನತೆಯ ಬಗ್ಗೆ ಮಾಡುವ ಅವಮಾನ, ಕಡಿಮೆ ಅಂಕ ತೆಗೆದಾಗ ‘ನೀನೊಬ್ಬ ದಡ್ಡ’ ಎನ್ನುವ ಮೂದಲಿಕೆ ಮಾತುಗಳು, ಕುಟುಂಬದ ಸದಸ್ಯರಲ್ಲಿರುವ ಸಂಘರ್ಷದಂತಹವು ಭಾವನಾತ್ಮಕ ಹೊರೆ ಎನಿಸಿಕೊಳ್ಳುತ್ತವೆ. ಮಕ್ಕಳು ಹೊತ್ತುಕೊಂಡಿರಬಹುದಾದ ಈ ಎಲ್ಲಾ ಹೊರೆಗಳನ್ನು ಇಳಿಸಿ, ಅವರಲ್ಲಿ ಸಂಭ್ರಮ ತರುವುದು ನಿಜಕ್ಕೂ ಸವಾಲೇ ಸರಿ.

ಕುತೂಹಲ, ಆಸಕ್ತಿ, ಸಂತಸ, ಯಾವಾಗಲೂ ಜೊತೆಗಿರುವ ನಗು, ಸದಾ ಒಂದಿಲ್ಲೊಂದು ಪ್ರಶ್ನೆಯನ್ನು ಕೇಳುವುದು, ಎಲ್ಲವನ್ನೂ ಮುಟ್ಟಿ ನೋಡಿ ಪರೀಕ್ಷಿಸುವ ವೈಜ್ಞಾನಿಕ ದೃಷ್ಟಿಕೋನದಂತಹ ಮಕ್ಕಳ ಸಹಜ ಗುಣಗಳು ಅವರು ಶಾಲೆಗೆ ಸೇರಿದ ನಂತರ ಒಂದೊಂದೇ ಕಡಿಮೆ ಆಗುತ್ತಾ ಸಂಪೂರ್ಣ ಇಲ್ಲವಾಗುತ್ತವೆ. ಅವುಗಳ ಜಾಗದಲ್ಲಿ ಒತ್ತಡ, ಭಯ, ಆತಂಕ ಮನೆ ಮಾಡುತ್ತವೆ. ಈ ಹೊರೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಮಕ್ಕಳ ಹೊರೆಯನ್ನು ಒಂದು ದಿನದ ಮಟ್ಟಿಗಾದರೂ ತುಸು ಇಳಿಸಲು ಸಂಭ್ರಮ ಶನಿವಾರದಂತಹ ಕಾರ್ಯಕ್ರಮಗಳು ನೆರವಾಗುತ್ತವೆ.

ಮಕ್ಕಳ ಹೊರೆಯನ್ನು ಹಗುರಗೊಳಿಸಿ, ಅವರ ಮನದಲ್ಲಿ ಒಂದಿಷ್ಟು ನೈಜ ನಗು, ಸಂತಸವನ್ನು ಸಂಭ್ರಮ ಶನಿವಾರದಂದು ಮರಳಿ ತರುವಂತೆ ಮಾಡಲು ಶಿಕ್ಷಕರು ಒಂದಷ್ಟು ಯೋಜನೆ, ಪೂರ್ವ ತಯಾರಿ ಮಾಡುವುದು ಅಗತ್ಯ. ಬ್ಯಾಗ್‌ ಇಲ್ಲದ ದಿನ ಮಕ್ಕಳಿಗೆ ಒಂದಷ್ಟು ಹೆಚ್ಚೆನಿಸುವಷ್ಟು ಉತ್ಸಾಹ ಇರುತ್ತದೆ. ಈ ಕಾರಣ ಗಲಾಟೆ, ಗದ್ದಲವೂ ಹೆಚ್ಚೇ ಎನ್ನಬಹುದು. ಆದರೆ ಗದ್ದಲದಲ್ಲಿ ಈ ಕಾರ್ಯಕ್ರಮ ಮುಗಿದುಹೋಗಬಾರದು.

ಚಿತ್ರಕಲೆ, ಹಾಡು, ಕತೆ ಹೇಳುವುದು, ಕೇಳುವುದು, ನೃತ್ಯ, ನಾಟಕ, ಮಣ್ಣಿನಿಂದ ಆಕೃತಿ ಮಾಡುವುದು, ಕವನ ರಚನೆ, ಪ್ರಯೋಗ ಮಾಡುವುದು, ಕೈತೋಟದಲ್ಲಿ ಕೆಲಸ ಮಾಡುವಂತಹ ಚಟುವಟಿಕೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಯಾವ ಚಟುವಟಿಕೆ ಇಷ್ಟ ಎಂಬುದನ್ನು ಶಿಕ್ಷಕರು ಮೊದಲು ಕಂಡುಕೊಳ್ಳಬೇಕು. ಮಕ್ಕಳು ತಮ್ಮ ಇಷ್ಟದ ಚಟುವಟಿಕೆಗಳಲ್ಲಿ ಖುಷಿಯಿಂದ ಭಾಗವಹಿಸುವಂತೆ ಸ್ಪಷ್ಟ ಆಯೋಜನೆ ಮಾಡಬೇಕು. ಇತರ ದಿನಗಳಿಗೆ ಹೋಲಿಸಿದಲ್ಲಿ ಅಂದು ಮಕ್ಕಳು ಎಷ್ಟು ಸಂತಸದಿಂದಿದ್ದರು ಎಂಬುದೇ ಈ ಯೋಜನೆಯ ಯಶಸ್ಸಿನ ಸೂಚಕ ಎನ್ನಬಹುದು. ಈ ಕುರಿತು ಮಕ್ಕಳಿಂದಲೇ ಮಾಹಿತಿ ಸಂಗ್ರಹಿಸಿ, ನಂತರದ ಸಂಭ್ರಮ ಶನಿವಾರದಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು.

ಒಂದು ದಿನದ ಮಟ್ಟಿಗೆ ಮಕ್ಕಳ ಸಂಭ್ರಮವನ್ನು ಮರಳಿ ತರುವ ಯೋಜನೆ ಒಳ್ಳೆಯದೇ. ಇದಕ್ಕೂ ಮಿಗಿಲಾಗಿ, ಪ್ರತಿದಿನವೂ ಮಕ್ಕಳ ಸಂಭ್ರಮ, ಸಂತಸ ಕಸಿಯದೇ ಕುಗ್ಗಿಸದೇ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಬಹಳ ಪ್ರಮುಖವಾದ ಅಂಶವಾಗಿದೆ.

______________________________

ಲೇಖಕ: ಹಿರಿಯ ಉಪನ್ಯಾಸಕ, ಡಯಟ್
ಬೆಂಗಳೂರು ನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT