ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಗುಣಾತ್ಮಕ ಶಿಕ್ಷಣ: ಬೇಕು ಭದ್ರ ಬುನಾದಿ

Last Updated 16 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಬುನಾದಿ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಾಜ್ಯದ ಪರಿಸ್ಥಿತಿಗೆ ಸರಿಹೊಂದುವಂತೆ ಮಾಡುವ ಸವಾಲು ನಮ್ಮ ಮುಂದಿದೆ

ಪ್ರಾಥಮಿಕ ಶಾಲಾ ಶಿಕ್ಷಣವನ್ನು ‘ಶಿಕ್ಷಣದ ಬುನಾದಿ’ ಎಂದು ಪರಿಗಣಿಸಲಾಗುತ್ತದೆ. ಬುನಾದಿ ಅಥವಾ ತಳಪಾಯ ಗಟ್ಟಿ ಇದ್ದರೆ ಭವಿಷ್ಯದ ಶಿಕ್ಷಣ ಸರಾಗ ಎಂಬರ್ಥದ ಮಾತುಗಳು ಸಾಮಾನ್ಯವಾಗಿ ಚಾಲ್ತಿಯಲ್ಲಿವೆ. ಈ ಬುನಾದಿಯನ್ನು ಭದ್ರವಾಗಿ ಹೇಗೆ ನಿರ್ಮಿಸಬೇಕು ಎಂಬ ಕುರಿತ ಚಿಂತನೆ, ಚರ್ಚೆಗಳು ದೇಶದಲ್ಲಿ ನಡೆಯಬೇಕಾದಷ್ಟು ಪ್ರಮಾಣದಲ್ಲಿ ನಡೆದಿಲ್ಲ ಎನ್ನಬಹುದು.

ಅನೇಕ ರಾಷ್ಟ್ರಗಳಲ್ಲಿ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಉಳಿದ ಹಂತದ ಶಿಕ್ಷಣಕ್ಕಿಂತ ಅಧಿಕ ಪ್ರಾಮುಖ್ಯ ನೀಡಲಾಗುತ್ತದೆ. ಈ ಹಂತದ ಶಿಕ್ಷಕರ ವಿದ್ಯಾರ್ಹತೆ, ಅವರಿಗೆ ನೀಡುವ ವೇತನ ಮತ್ತು ಅವರನ್ನು ಸಿದ್ಧಗೊಳಿಸಲು ಅಧಿಕ ಶ್ರಮ, ಹಣ ವೆಚ್ಚ ಮಾಡಲಾಗುತ್ತದೆ. ಉದಾಹರಣೆಗೆ, ಸ್ವಿಟ್ಜರ್‌ಲೆಂಡ್‌, ಜರ್ಮನಿ, ಡೆನ್ಮಾರ್ಕ್ ದೇಶಗಳಲ್ಲಿ ಪ್ರಾಥಮಿಕ ಹಂತದ ಶಿಕ್ಷಕರಿಗೆ ಅಧಿಕ ವೇತನ ನೀಡಲಾಗುತ್ತಿದೆ. ಇದರಿಂದ ಅಂತಹ ದೇಶಗಳ ಶಿಕ್ಷಣ ವ್ಯವಸ್ಥೆಯು ಪರಿಣಾಮಕಾರಿಯಾಗಿ ಹಾಗೂ ಗುಣಾತ್ಮಕವಾಗಿ ರಚನೆಗೊಂಡಿದೆ.

ನಮ್ಮ ದೇಶದಲ್ಲಿ ಬುನಾದಿ ಹಂತದ ಶಿಕ್ಷಣವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಯಾವ ರೀತಿ ಕಟ್ಟಬಹುದು ಎಂಬ ಕುರಿತಾದ ಚಿಂತನೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ– 2020ರಲ್ಲಿ ಮಾಡಲಾಗಿದೆ. ಪೂರ್ವ ಪ್ರಾಥಮಿಕ ಹಂತದ ಮೂರು ವರ್ಷ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣದ ಒಂದು ಮತ್ತು ಎರಡನೇ ತರಗತಿಗಳನ್ನು ಒಳಗೊಂಡಂತೆ ಮಕ್ಕಳ ಬೆಳವಣಿಗೆಯ 3ರಿಂದ 8 ವರ್ಷದೊಳಗಿನ 5 ವರ್ಷಗಳ ಶಿಕ್ಷಣವನ್ನು ‘ಬುನಾದಿ ಹಂತ’ ಎನ್ನಲಾಗುತ್ತದೆ. ಈ ತಳಪಾಯದ ಮೇಲೆ 3ರಿಂದ 5ರವರೆಗಿನ ತರಗತಿಗಳನ್ನು ಒಳಗೊಂಡ ಪೂರ್ವಸಿದ್ಧತಾ ಹಂತವನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

ಬುನಾದಿ ಹಂತದ ಶಿಕ್ಷಣ ಹೇಗಿರಬೇಕು ಎಂಬ ಕುರಿತಂತೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅ. 15ರಂದು ಬಿಡುಗಡೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಸುಗಮವಾಗಿ ಜಾರಿಗೊಳಿಸಲು ಅನುಕೂಲ ಕಲ್ಪಿಸುವ 360 ಪುಟಗಳ ದಾಖಲೆಯನ್ನು ಬಹಳ ಉತ್ತಮವಾಗಿ ರಚಿಸಲಾಗಿದೆ. ಮಗುವಿನ ಬೆಳವಣಿಗೆಯ ಮೊದಲ 6 ವರ್ಷದೊಳಗೆ ಶೇ 85ರಷ್ಟು ಮೆದುಳಿನ ಬೆಳವಣಿಗೆ ಆಗುತ್ತದೆ.

ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ದೊರೆಯುವ ಆರೈಕೆ, ಗಮನ, ಪ್ರೀತಿ, ಭದ್ರತೆ, ಆಹಾರವು ಮಕ್ಕಳ ಭವಿಷ್ಯದ ಆರೋಗ್ಯ, ಶಿಕ್ಷಣದ ಮೇಲೆ ಪ್ರಭಾವ ಬೀರುತ್ತವೆ. ಗರ್ಭಿಣಿಗೆ ದೊರೆಯುವ ಆರೈಕೆ, ಆಹಾರ, ಮನಃಸ್ಥಿತಿಯು ಗರ್ಭದಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಜನನ ನಂತರದ ಮೊದಲ ಮೂರು ವರ್ಷಗಳಲ್ಲಿ ತಾಯಿ ಮತ್ತು ಮಗುವಿನ ಆರೈಕೆ ಹೇಗಿರಬೇಕು ಎಂಬ ಬಗ್ಗೆ ವಿವರವಾದ ಮಾರ್ಗಸೂಚಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹೊರಡಿಸುವ ಪ್ರಸ್ತಾವವನ್ನು ಪಠ್ಯಕ್ರಮ ಚೌಕಟ್ಟಿನಲ್ಲಿ ಮಾಡಲಾಗಿದೆ. 3 ವರ್ಷದಿಂದ 6 ವರ್ಷದೊಳಗಿನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಯಾವ ರೀತಿ ನೀಡಬೇಕು ಹಾಗೂ ಈ ಹಂತದಲ್ಲಿ ಮಕ್ಕಳು ಯಾವ ರೀತಿ ವಿವಿಧ ರೀತಿಯ ಆಟಗಳು, ಚಟುವಟಿಕೆಗಳ ಮೂಲಕ ಕಲಿಯುತ್ತಾರೆ ಎಂಬುದನ್ನು ವಿವರಿಸಲಾಗಿದೆ. ಒಂದು ಮತ್ತು ಎರಡನೇ ತರಗತಿಗಳಿಗೂ ಪಠ್ಯಪುಸ್ತಕಗಳ ಅಳವಡಿಕೆಯ ಅಗತ್ಯ ಇಲ್ಲ. ಮಕ್ಕಳು ಸಂತಸ, ಖುಷಿಯಿಂದ ಆಟ, ಪಾಠಗಳ ಮೂಲಕ ಕಲಿಯುವ ವಿಧಾನಗಳ ಬಗ್ಗೆ ವಿವರಿಸಲಾಗಿದೆ.

ಭಾರತೀಯ ತರಗತಿಗಳಲ್ಲಿ ಬಹುಭಾಷಾ ಪರಿಸರ ಸಾಮಾನ್ಯ. ಇಂತಹ ಸನ್ನಿವೇಶದಲ್ಲಿ ಮಾತೃಭಾಷೆಯ ಮೂಲಕ ಮಕ್ಕಳೊಂದಿಗೆ ಒಡನಾಡುವ ಪ್ರಾಮುಖ್ಯವನ್ನು ಚೌಕಟ್ಟಿನಲ್ಲಿ ತಿಳಿಸಲಾಗಿದೆ. ತರಗತಿಯಲ್ಲಿ ಬೇರೆ ಬೇರೆ ಮಾತೃಭಾಷೆಗಳಿಗೆ ಸಂಬಂಧಿಸಿದ ಮಕ್ಕಳು ಇರುವ ಸನ್ನಿವೇಶದಲ್ಲಿ ಶಿಕ್ಷಕರು ಹೆಚ್ಚು ಸಂಪದ್ಭರಿತರಾಗಿ ಹಲವು ಭಾಷೆಗಳನ್ನು ತಿಳಿದುಕೊಂಡು, ಸಂಬಂಧಿಸಿದ ಭಾಷೆಯನ್ನು ಸಂಬಂಧಿಸಿದ ಮಕ್ಕಳೊಂದಿಗೆ ಆಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾ, ಹಂತ ಹಂತವಾಗಿ ಮಕ್ಕಳನ್ನು ಪಠ್ಯದ ಭಾಷೆ ಅಥವಾ ಸ್ಥಳೀಯ ಭಾಷೆಗೆ ಹೊಂದಿಕೊಳ್ಳುವಂತೆ ಮಾಡಬೇಕು. ಈ ವಿಧಾನದಲ್ಲಿ ಮಕ್ಕಳ ಆರಂಭಿಕ ಓದು, ಬರವಣಿಗೆ, ಲೆಕ್ಕಾಚಾರಗಳನ್ನು ಪರಿಣಾಮಕಾರಿಯಾಗಿ ಕಲಿಸುವ ವಿಧಾನಗಳನ್ನು ಚೌಕಟ್ಟು ವಿವರಿಸಿದೆ.

ಅಂಗನವಾಡಿ ಕಾರ್ಯಕರ್ತೆಯರ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸುವ ದಿಸೆಯಲ್ಲಿ ಸ್ಪಷ್ಟ ಯೋಜನೆಗಳು ರೂಪುಗೊಳ್ಳುತ್ತಿವೆ. ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತಿರುವ ಶಾಲೆಗಳ ಕಡೆ ಗಮನ ನೀಡಿ, ಅಲ್ಲಿನ ಕಲಿಕಾ ಚಟುವಟಿಕೆಗಳನ್ನು ಉತ್ತಮ ಪಡಿಸುವ ಮತ್ತು ನಿಯಂತ್ರಣ ಮಾಡುವ ಸ್ಪಷ್ಟ ಆಡಳಿತ ವ್ಯವಸ್ಥೆ ಸದ್ಯ ಇಲ್ಲ. ಇಂತಹ ಒಂದು ವ್ಯವಸ್ಥೆಯನ್ನು ಸೃಷ್ಟಿಸುವ ಅಗತ್ಯ ಇದೆ. ಇದರ ಜೊತೆ ಅಂಗನವಾಡಿಗಳ ಗುಣಮಟ್ಟ ಉತ್ತಮಪಡಿಸುವುದು ಸಹ ಅಗತ್ಯ. ಇದಕ್ಕಾಗಿ ಅವುಗಳ ಆಡಳಿತ ಮತ್ತು ಕಲಿಕಾ ಚಟುವಟಿಕೆಗಳ ಉಸ್ತುವಾರಿಯನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರಬೇಕಿದೆ.

ಬುನಾದಿ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರಾಜ್ಯದ ಪರಿಸ್ಥಿತಿಗೆ ಸ್ಥಳೀಯವಾಗಿ ಸರಿ ಹೊಂದುವಂತೆ ಮಾಡಲು ಆಯಾ ಜಿಲ್ಲೆ, ತಾಲ್ಲೂಕು, ಗ್ರಾಮ ಮಟ್ಟದಲ್ಲಿನ ಸ್ಥಳೀಯ ಅಂಶಗಳನ್ನು ಒಳಗೊಳ್ಳುವಂತೆ ಮಾಡುವ ಸವಾಲೂ ನಮ್ಮ ಮುಂದಿದ್ದು, ಈ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT