ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪರೀಕ್ಷೆ ಎಂಬ ಉದ್ವಿಗ್ನ ಸ್ಥಿತಿ!

ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಲು, ಅವರ ನಡವಳಿಕೆಯಲ್ಲಿ ದಿಢೀರ್‌ ಬದಲಾವಣೆ ಕಾಣಿಸಿಕೊಳ್ಳಲು ಶಿಕ್ಷಕರು ಮತ್ತು ಪೋಷಕರ ವರ್ತನೆಯೇ ಪ್ರಮುಖ ಕಾರಣ
Published 19 ಫೆಬ್ರುವರಿ 2024, 19:21 IST
Last Updated 19 ಫೆಬ್ರುವರಿ 2024, 19:21 IST
ಅಕ್ಷರ ಗಾತ್ರ

ಆಪ್ತ ಸಲಹೆಗಾಗಿ ಬಂದ ಆ ಮಹಿಳೆ ತಮ್ಮ ಮಾನಸಿಕ ದುಗುಡ ಬಿಚ್ಚಿಡುತ್ತಾ ಜೋರಾಗಿ ಅಳಲು ಆರಂಭಿಸಿದರು. ಅವರಿಗೆ ಒಬ್ಬನೇ ಪುತ್ರ. ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಮೊದಲೆಲ್ಲಾ ಉತ್ತಮವಾಗಿ ಅಂಕಗಳಿಸುತ್ತಿದ್ದವನು ಈಗ ಹಿಂದೆ ಬಿದ್ದಿದ್ದಾನೆ. ಅಭ್ಯಾಸದಲ್ಲಿ ಆಸಕ್ತಿ ತೋರುತ್ತಿಲ್ಲ. ಪೂರ್ವಸಿದ್ಧತಾ ಪರೀಕ್ಷೆಗಳಲ್ಲಂತೂ ಅಂಕಗಳು ತುಂಬಾ ಕಡಿಮೆ ಬಂದಿರುವುದ ರಿಂದ ಮುಖ್ಯೋಪಾಧ್ಯಾಯರು ಮೂರ್ನಾಲ್ಕು ಬಾರಿ ಆ ಮಹಿಳೆಯನ್ನು ಕರೆಸಿ, ಮಗನ ಕಳಪೆ ಸಾಧನೆಯ ಬಗ್ಗೆ ದೂರಿದ್ದಾರೆ. ಅಲ್ಲದೆ, ಟ್ಯೂಷನ್‌ಗೆ ಹಾಕಿ ಸರಿಯಾಗಿ ಓದಿಸಬೇಕೆಂದು ತಾಕೀತು ಮಾಡಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ತಮ್ಮ ಶಾಲೆಗೆ ಶೇ 100 ಫಲಿತಾಂಶ ತಪ್ಪುವುದೆಂಬ ಚಿಂತೆ.

ಹಿಂದಿನ ತರಗತಿಯಲ್ಲೇ ಹೀಗಾಗಿದ್ದರೆ ಟಿ.ಸಿ. ತೆಗೆದುಕೊಂಡು ಹೋಗುವಂತೆ ಒತ್ತಡ ಹೇರಬಹುದಿತ್ತು. ಮುಖ್ಯ ಪರೀಕ್ಷೆ ಹೊಸ್ತಿಲಿನಲ್ಲಿ ನಿಂತಿರುವ ಈ ಹೊತ್ತಿನಲ್ಲಿ ಹಾಗೇನೂ ಮಾಡಲಾಗದು. ಶಿಕ್ಷಕರ ಪ್ರತಿನಿತ್ಯದ ಕಠಿಣ ಎಚ್ಚರಿಕೆಗಳ ಹೊರತಾಗಿಯೂ ಸುಧಾರಣೆ ಕಾಣದಾದಾಗ ಮಗನನ್ನು ಸರಿದಾರಿಗೆ ತರುವಂತೆ ಹೆತ್ತವರ ಮೇಲೆ ಈ ರೀತಿಯ ಒತ್ತಡ ಶುರುವಾಗಿತ್ತು!

‘ಸ್ಕೂಲಲ್ಲಿ ಸರ್ಯಾಗಿ ಪಾಠನೇ ಕೇಳಲ್ವಂತೆ. ಅಕ್ಕಪಕ್ಕದ ಹುಡುಗರಿಗೂ ತೊಂದ್ರೆ ಕೊಡ್ತಾನಂತೆ. ಪ್ರತಿದಿನ ಶಿಕ್ಷಕರ ದೂರು. ನಂಗಂತೂ ಕೇಳಿ ಕೇಳಿ ಹುಚ್ಚು ಹಿಡ್ದಂಗೆ ಆಗಿದೆ. ಬೆಳೆದ ಹುಡುಗನಿಗೆ ಎಷ್ಟೂಂತ ಬುದ್ಧಿಮಾತು ಹೇಳೋದು? ನಾವು ಏನು ಅಂದ್ರೂ ಸಿಟ್‌ ಮಾಡ್ಕೊಂಡು ಕೂಗಾಡ್ತಾನೆ. ಜಾಸ್ತಿ ಬಯ್ಯಕ್ಕೂ ಹೆದ್ರಿಕೆ ಆಗುತ್ತೆ, ಏನಾದ್ರೂ ಹೆಚ್ಚುಕಮ್ಮಿ ಮಾಡ್ಕೊಂಡ್ರೆ ಗತಿ? ಒಂದು ಕಡೆ ಇವನ ಟಾರ್ಚರ್,‌ ಮತ್ತೊಂದು ಕಡೆ ಟೀಚರ್ಸ್‌ ಟಾರ್ಚರ್.‌ ಈ ಟೆನ್ಷನ್‌ನಲ್ಲಿ ನಂಗೂ ಮೈಗ್ರೇನ್‌ ಶುರುವಾಗಿದೆ…’ ಎನ್ನುತ್ತಾ ಕಣ್ಣೀರು ಹಾಕಿದರು ಆ ತಾಯಿ.

ವಿದ್ಯಾಭ್ಯಾಸದ ಈ ಮಹತ್ವದ ಘಟ್ಟದಲ್ಲಿ ಶಿಕ್ಷಕರು, ಪೋಷಕರ ಅತಿಯಾದ ಒತ್ತಡ, ನಿರೀಕ್ಷೆಗಳನ್ನು ಸಂಭಾಳಿಸಲಾಗದೆ ಆತನ ವರ್ತನೆ ಬದಲಾಗಿತ್ತು. ಹತಾಶೆ, ನಿರಾಸೆಯಿಂದ ಪ್ರತಿಭಟನಾ ಮನಃಸ್ಥಿತಿ ರೂಪುಗೊಂಡಿತ್ತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಖ್ಯ ಪರೀಕ್ಷೆಗಳು ಹತ್ತಿರ ಬರುತ್ತಿರುವಂತೆಯೇ ಬರೀ
ವಿದ್ಯಾರ್ಥಿಗಳಷ್ಟೇ ಅಲ್ಲ ಅವರ ಹೆತ್ತವರೂ ವಿಪರೀತ ಒತ್ತಡ ಅನುಭವಿಸುತ್ತಾರೆ. ಇತ್ತ ಶಿಕ್ಷಕರಿಗೂ ಫಲಿ ತಾಂಶದ ಟೆನ್ಷನ್.‌ ಅದರಲ್ಲೂ ಕೆಲವು ಖಾಸಗಿ ಶಾಲೆ ಗಳಲ್ಲಿ ಒತ್ತಡದ್ದು ಮತ್ತೊಂದು ಮಜಲು. ಶೇ 100 ಫಲಿ ತಾಂಶ, ರ್‍ಯಾಂಕ್, ಗ್ರೇಡ್‌ಗಳಿಗಾಗಿ ತುರುಸಿನ ಪೈಪೋಟಿ. ಉನ್ನತ ಸಾಧನೆಗಾಗಿ ಶಿಕ್ಷಕರ ಮೇಲೆ ವಿಪರೀತ ಒತ್ತಾಯ. ಫಲಿತಾಂಶ ನಿರೀಕ್ಷೆಯಷ್ಟು ಇರದಿದ್ದರೆ ಶಿಕ್ಷಕರ ಇನ್‌ಕ್ರಿಮೆಂಟ್‌ ಕಟ್‌, ಒಮ್ಮೊಮ್ಮೆ ಉದ್ಯೋಗಕ್ಕೂ ಸಂಚಕಾರ. ಹಾಗಾಗಿ, ಮಕ್ಕಳ ಸಾಧನೆ ತೃಪ್ತಿಕರವಾಗಿ ಇರದಿದ್ದರೆ ಶಿಕ್ಷಕರು ಗದರುತ್ತಾರೆ. ಸಹಪಾಠಿಗಳ ಎದುರಲ್ಲಿ ಅವಮಾನಿಸುತ್ತಾರೆ. ಪೋಷಕರನ್ನು ಕರೆಸಿ ಸರಿಯಾಗಿ ಓದಿಸುವಂತೆ ಆಗ್ರಹಿಸುತ್ತಾರೆ.

ಶಾಲೆ, ಮನೆಯಲ್ಲಿ ಪದೇಪದೇ ಹೀಯಾಳಿಕೆಗೆ ತುತ್ತಾಗುವ ಮಕ್ಕಳು ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾರೆ. ಕೆಲವರು ಖಿನ್ನತೆಯತ್ತಲೂ ಜಾರಬಹುದು. ಇನ್ನು ಕೆಲವು ವಿದ್ಯಾರ್ಥಿಗಳು ಭಂಡತನ ಬೆಳೆಸಿಕೊಳ್ಳುತ್ತಾರೆ. ತಮ್ಮನ್ನು ಹೀಗಳೆಯುವ ಶಿಕ್ಷಕರು, ಹೆತ್ತವರಿಗೆ ಬುದ್ಧಿ ಕಲಿಸಲು ಅಭ್ಯಾಸದಿಂದ ದೂರವಾಗುತ್ತಾರೆ. ತಮ್ಮ ಸಹಪಾಠಿಗಳಿಗೂ ವಿವಿಧ ರೀತಿಯಲ್ಲಿ ತೊಂದರೆ ಕೊಡುವುದೂ ಉಂಟು. ಅತ್ತ ಶಾಲೆಯಿಂದಲೂ ಒತ್ತಡ ಇತ್ತ ಬುದ್ಧಿವಾದಕ್ಕೂ ಬಗ್ಗದೆ ದಿನೇ ದಿನೇ ಕಗ್ಗಂಟಾಗುವ ಮಕ್ಕಳು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನರಳುವ ಹೆತ್ತವರು ದೈಹಿಕ, ಮಾನಸಿಕ ತೊಂದರೆಗಳಿಗೆ ತುತ್ತಾಗುತ್ತಿರುವ ವಿದ್ಯಮಾನ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ!

ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಮನಃಸ್ಥಿತಿಯ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಸರ್ಕಾರಿ ಶಾಲೆಗಳ ಮಕ್ಕಳ ಮೇಲೆ ಒತ್ತಡದ ಮಟ್ಟ ಅತಿ ಎನಿಸು ವಷ್ಟಿಲ್ಲ. ಅವರೊಟ್ಟಿಗೆ ತುಸು ಹೊತ್ತು ಆತ್ಮೀಯವಾಗಿ ಒಡನಾಡಿದರೆ ಸಾಕು ತುಂಬಾ ಖುಷಿಯಿಂದಲೇ
ಮಾತಿಗಿಳಿಯುತ್ತಾರೆ. ತಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸ್ಪರ್ಧೆಗಿಳಿಯುತ್ತಾರೆ. ಆದರೆ ಕೆಲವು ಖಾಸಗಿ ಶಾಲೆಗಳ ಮಕ್ಕಳ ಮನಃಸ್ಥಿತಿ ತೀರಾ ವಿಭಿನ್ನ. ಅವರಲ್ಲಿ ಭಯ, ಒತ್ತಡ ಜಾಸ್ತಿ. ಅತೀವ ಆತಂಕದ ಕಾರಣದಿಂದ, ಏನು ಕೇಳಿದರೂ ಬಾಯಿ ಬಿಡರು!

ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಲು, ಅಭ್ಯಾಸದಲ್ಲಿ ಅನಾಸಕ್ತಿ, ನಿರಾಸಕ್ತಿ ತೋರಲು, ಅವರ ನಡವಳಿಕೆ ಯಲ್ಲಿ ದಿಢೀರ್‌ ಬದಲಾವಣೆ ಕಾಣಿಸಿಕೊಳ್ಳಲು ಶಿಕ್ಷಕರು, ಪೋಷಕರ ವರ್ತನೆಯೇ ಪ್ರಮುಖ ಕಾರಣ. ಹದಿ ಹರೆಯದ ಮಕ್ಕಳನ್ನು ಸದಾ ಗದರುವುದು, ಅವಮಾನ ಮಾಡುವುದು, ಹೀಯಾಳಿಸುವುದು, ಇತರರೊಂದಿಗೆ ಹೋಲಿಸಿ ಹೀಗಳೆಯುವುದು, ನಕಾರಾತ್ಮಕ ಒಡನಾಟವು ಕೀಳರಿಮೆ ಹುಟ್ಟಿಸಿ ಪ್ರಗತಿಯನ್ನು
ಕುಂಠಿತಗೊಳಿಸುತ್ತದೆ.

ಪ್ರತಿ ಮಗುವೂ ವಿಶಿಷ್ಟ, ವಿಭಿನ್ನ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು  ತಪ್ಪು. ಮಕ್ಕಳಿಗೆ ನಿಜಕ್ಕೂ ಬೇಕಿರುವುದು ಪ್ರೀತಿ, ವಿಶ್ವಾಸ, ಗುರುತಿಸುವಿಕೆ, ಪ್ರಶಂಸೆ, ಹುರಿದುಂಬಿಸುವಿಕೆ, ಪ್ರೋತ್ಸಾಹದ ಮಾತುಗಳು. ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ಸಕಾರಾತ್ಮಕ ವಾತಾವರಣದಲ್ಲಿ ಬೆಳೆಯುವ ಎಳೆಯರು ಅಭ್ಯಾಸದಲ್ಲಷ್ಟೇ ಅಲ್ಲ ನಡವಳಿಕೆಯಲ್ಲೂ ಉತ್ತಮ ಪ್ರಗತಿ ದಾಖಲಿಸಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT