ಶುಕ್ರವಾರ, ಡಿಸೆಂಬರ್ 6, 2019
26 °C
ಗೋಡೆಯ ಮೇಲೆ ಚಿತ್ರವಾಗಿ ಉಳಿದಿರುವ ಗಾಂಧಿಯನ್ನು ಮನೆ- ಮನಗಳಿಗೆ ಕರೆತರುವ ಕೆಲಸವಾದರೆ ಗಾಂಧಿ ಚಿಂತನೆಗಳಿಗೆ ನಿಜವಾದ ಹೊಳಪು ಸಿಗುತ್ತದೆ

ಗಾಂಧಿಯನ್ನು ಅರಿಯುವ ತುರ್ತು

Published:
Updated:

ಸಾಮಾನ್ಯ ಮನುಷ್ಯನೊಬ್ಬ ಅಸಾಮಾನ್ಯನಾಗಿ ಬೆಳೆಯಲು ಬೇಕಿರುವುದು ಸತ್ಯ, ಪ್ರಾಮಾಣಿಕತೆ, ಮೌಲ್ಯಗಳು ಮತ್ತು ಒಳಗಿನ ನೈತಿಕತೆಯನ್ನು ಅಲುಗಾಡಿಸಲಾಗದ ದೃಢ ನಿಲುವು ಎಂಬುದಕ್ಕೆ ಬಹುದೊಡ್ಡ ಸಾಕ್ಷಿ ‘ಗಾಂಧಿ’ ಎಂಬ ವ್ಯಕ್ತಿತ್ವ.

ಬಡಕಲು ದೇಹದ ಒಳಗಿರುವ ಅದಮ್ಯ ಧೀಶಕ್ತಿಯನ್ನು ನೆನೆಯುವಾಗೆಲ್ಲ ಆ ಅಜ್ಜ ನಮ್ಮ ಆತ್ಮವಂಚನೆಯ ಬದುಕಿಗಿಂತ ಎಷ್ಟು ದೊಡ್ಡವರಿದ್ದಾರೆ ಎನಿಸುತ್ತದೆ. ಗಾಂಧಿಯ ಸರಳ ಬದುಕಿನ ಸೂತ್ರಕ್ಕೆ, ಗ್ರಾಮರಾಜ್ಯ ಪರಿಕಲ್ಪನೆಗೆ, ಚರಕದ ಸಿದ್ಧಾಂತಕ್ಕೆ, ಬೃಹತ್ ಕೈಗಾರಿಕೆಗಳನ್ನು ತಿರಸ್ಕರಿಸಿದ್ದಕ್ಕೆ ಈ ಹೊತ್ತಿಗೂ ಗಾಂಧಿಯನ್ನು ಒಪ್ಪಿಕೊಳ್ಳದ, ನಾಮಕಾವಾಸ್ತೆ ಗಾಂಧಿ ಜಯಂತಿಯನ್ನು ಆಚರಿಸುವ ಸಾಕಷ್ಟು ಜನರು ನಮ್ಮ ನಡುವೆ ಇದ್ದಾರೆ. ನಾವು ಸಹ ಗಾಂಧಿಯನ್ನು ನೋಡಬೇಕಿರುವುದು ಮಹಾತ್ಮನಾಗಿ ಅಲ್ಲ, ಒಬ್ಬ ಮನುಷ್ಯನಾಗಿ. ಏಕೆಂದರೆ ನನ್ನ– ನಿಮ್ಮಂತೆ ಬದುಕಬಹುದಾಗಿದ್ದ ಆ ಮನುಷ್ಯ, ತೀರ ಸಾಮಾನ್ಯನಾಗಿಯೂ ಉಳಿದು ಅಸಾಮಾನ್ಯವಾಗಿ ಬೆಳೆದ ಪರಿಯಿದೆಯಲ್ಲಾ ಅದು ನಮ್ಮ ಟೀಕೆ ಅಥವಾ ಆರಾಧನೆಗಳಿಗಿಂತ ಬಹುದೊಡ್ಡದು. ಗಾಂಧಿ ಅನುಸರಿಸಿದ ಸತ್ಯ, ಅಹಿಂಸೆ, ಉಪವಾಸ, ಹಳ್ಳಿಗಳ ಉದ್ಧಾರ, ಹಣದ ವಿಕೇಂದ್ರೀಕರಣ ನೀತಿ, ಗೃಹ ಕೈಗಾರಿಕೆಗಳಿಗೆ ಆದ್ಯತೆ ಮುಂತಾದ ಬದುಕಿನ ರೀತಿಗಳಲ್ಲಿ ಒಂದನ್ನಾ
ದರೂ ಅನುಸರಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕುರ್ಚಿಗಳಿರುವುದೇ ದರ್ಪದ ದರ್ಬಾರ್ ನಡೆಸಿ, ಐದು ವರ್ಷ ಸುಖಪಟ್ಟು ಹಣ ಮಾಡಿಕೊಳ್ಳುವುದಕ್ಕೆ ಎಂದು ಬದುಕುವ ರಾಜಕಾರಣಿಗಳು ಮತ್ತು ಲಂಚ, ಭ್ರಷ್ಟಾಚಾರ, ಹಗರಣಗಳ ವಾಸ್ತವದ ನಡುವೆ ಇಂದು ನಾವಿದ್ದೇವೆ. ಸತ್ಯ ಹೇಳಿದರೆ ನಾಳೆ ನಮಗೇನಾಗುತ್ತದೋ ಎಂಬ ಆತಂಕದಲ್ಲಿ ಬಾಯಿಮುಚ್ಚಿಕೊಂಡಿರುವ ಅಥವಾ ಬಾಯಿ ಮುಚ್ಚಿಸುತ್ತಿರುವ ಕೆಲವರ ಅಜೆಂಡಾಗಳ ನಡುವೆ ಗಾಂಧಿ ದೊಡ್ಡ ಮೌಲ್ಯವಾಗಿ ಕಾಣಿಸುತ್ತಾರೆ.

‘ಬೆತ್ತಲೆ ಜಗತ್ತಿನಲ್ಲಿ ಬಟ್ಟೆ ಹಾಕಿದವನೇ ಅಪರಾಧಿ’ ಎಂಬ ಮಾತಿದೆ. ಸತ್ಯ, ಪ್ರಾಮಾಣಿಕತೆ, ಮಾನವೀಯತೆ, ಬದ್ಧತೆಗಳ ಮುಂದೆ ಅಸತ್ಯ, ಅರ್ಧಸತ್ಯಗಳು ಮೇಲುಗೈ ಸಾಧಿಸಿವೆ. ಕಾರ್ಪೊರೇಟ್ ಜಗತ್ತೊಂದು ಸೃಷ್ಟಿಸುವ ಹುಸಿ ಹಸಿವಿಗೆ ಯುವಜನಾಂಗ ತನ್ನ ತಲೆಯನ್ನೇ ಮಾರಿಕೊಳ್ಳುವ ಅಪಾಯ ಕಾಣಿಸುತ್ತಿದೆ. ಕೈಗಾರಿಕೀಕರಣ ತಂದೊಡ್ಡಬಹುದಾದ ದೊಡ್ಡ ಸಮಸ್ಯೆಗಳೇನೆಂಬುದರ ಬಗ್ಗೆ ಗಾಂಧಿ ಪ್ರತಿಪಾದಿಸಿದ ವಿಚಾರಗಳು ಈಗ ಅರಿವಾಗುತ್ತಿವೆ. ಗುಡಿ ಕೈಗಾರಿಕೆಗಳು, ಸಣ್ಣ ಯಂತ್ರಗಳು, ಹೆಚ್ಚು ಶ್ರಮ ಯಾಕೆ ಮುಖ್ಯ ಎಂಬುದು ಅರಿವಾಗದೆ ಹೋಗಿದ್ದಕ್ಕೆ ವ್ಯವಸಾಯದ ಜಮೀನು- ರೆಸ್ಟೊರೆಂಟ್‌ಗಳಾಗಿ ಬದಲಾಗುತ್ತಿದೆ. ಕೈಕಸುಬುಗಳು ಮೂಲೆಗುಂಪಾಗಿ, ಅವನ್ನೇ ನಂಬಿ ಬದುಕಿದವರ ಮೇಲೆ ಯಂತ್ರಗಳು ಸವಾರಿ ಮಾಡುತ್ತಿವೆ.

ಗಾಂಧಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿದ್ದಿದ್ದರೆ ನಿಜವಾದ ‘ವಿಕಾಸ’ ನಮಗೆ ಸಾಧ್ಯವಾಗುತ್ತಿತ್ತು. ಹಣದ ಬಲದಿಂದ, ಬಹುಮಹಡಿ ಕಟ್ಟಡಗಳಿಂದ, ತಂತ್ರಜ್ಞಾನದಿಂದ, ಅಣೆಕಟ್ಟುಗಳಿಂದ ನಮ್ಮ ಬದುಕುಗಳನ್ನು ಕಟ್ಟಿಕೊಂಡು ಅದನ್ನೇ ‘ಅಭಿವೃದ್ಧಿ’ ಎಂದು ಕರೆದುಕೊಂಡಿದ್ದೇವೆ. ಆದರೆ ‘ವಿಕಾಸ’ವೆಂದು ಗಾಂಧಿ ಕರೆದದ್ದು ಇದನ್ನಲ್ಲ. ಆ ಕಾರಣಕ್ಕೆ ಗಾಂಧಿ ಚಿಂತನೆ ನಮಗೆ ಒಣ ಸಿದ್ಧಾಂತವಾಗಿ ಕಾಣಿಸುತ್ತದೆ. ‘ನಾವೆಲ್ಲ ಹಾಗೆ ಬದುಕಲು ಸಾಧ್ಯವೇ’ ಎಂಬ ಅನುಮಾನ ಮೂಡುತ್ತದೆ. ಅದು ನಮ್ಮ ಮಿತಿಯೇ ಹೊರತು ಗಾಂಧಿಯ ಸಿದ್ಧಾಂತಗಳ ಸಮಸ್ಯೆಯಲ್ಲ.

ಈ ದೇಶ ಕಂಡ, ಈ ನೆಲದಲ್ಲಿ ಓಡಾಡಿದ ಬಹುದೊಡ್ಡ ಸಾಧ್ಯತೆಗಳ ಜೀವಂತ ಸಾಕ್ಷಿ ಗಾಂಧಿಯನ್ನು ಸಾಮಾನ್ಯ ಮನುಷ್ಯನೆಂದೇ ನೋಡಿ, ಆ ವ್ಯಕ್ತಿಯ ಪರಿಚಯಕ್ಕೆ ಇಳಿದರೆ ಬಹುಶಃ ಅಸಾಮಾನ್ಯ ಗಟ್ಟಿ ಹೆಜ್ಜೆಗಳು ನಮ್ಮನ್ನು ಎಚ್ಚರಿಸುತ್ತವೆ. ಗೋಡೆಯ ಮೇಲೆ ಚಿತ್ರವಾಗಿ ಉಳಿದಿರುವ ಗಾಂಧಿಯನ್ನು ಮನೆ- ಮನಗಳಿಗೆ ಕರೆತರುವ ಕೆಲಸ ತುರ್ತಾಗಿ ಆಗಬೇಕಿದೆ. ಆಗ ಚಿಂತನೆಗಳಿಗೆ ನಿಜವಾದ ಹೊಳಪು ಸಿಗುತ್ತದೆ. ಆ ಕಾರಣಕ್ಕೆ ಗಾಂಧಿ ಕುರಿತ ಮರು ಓದಿನ, ಮರು ಅಧ್ಯಯನದ ಅಗತ್ಯವಿದೆ ಎಂದೆನಿಸುತ್ತದೆ.

ಹರ್ಷಿತ ಕೆ., ಶಿವಮೊಗ್ಗ

 

ಗಾಂಧಿಯನ್ನು ಬಿತ್ತಬೇಕು

ಜಗತ್ತು ಗಾಂಧಿಯನ್ನು ಭಾರತದ ರಾಷ್ಟ್ರಪಿತ ಎಂದು ಗುರುತಿಸುತ್ತದೆ. ಆದರೆ ಗಾಂಧಿ ಬದುಕಿನುದ್ದಕ್ಕೂ ಸಾಮಾನ್ಯ ವ್ಯಕ್ತಿಯಾಗಿ, ಸಂತನಾಗಿ ಮತ್ತು ಹೋರಾಟಗಾರನಾಗಿ... ಕೊನೆಗೆ ಕೆಲವರ ದೃಷ್ಟಿಯಲ್ಲಿ ಕೊಲ್ಲಲೇಬೇಕಾದ ಮನುಷ್ಯನಾಗಿ ಬದುಕಿಬಿಟ್ಟಿದ್ದರು!

ಅಹಿಂಸೆ, ಸತ್ಯಾಗ್ರಹ ಎಂಬ ಸಾತ್ವಿಕ ಅಸ್ತ್ರಗಳನ್ನು ಹಿಡಿದ ವ್ಯಕ್ತಿಯೊಬ್ಬ ಅದು ಹೇಗೆ ಕೋಟ್ಯಂತರ ಜನರಿಗೆ ಆದರ್ಶವಾದರು ಎಂಬುದೇ ಸೋಜಿಗದ ಸಂಗತಿ. ಗಾಂಧಿ ಬದುಕಿನುದ್ದಕ್ಕೂ ಪ್ರತಿಪಾದಿಸಿದ್ದು ವ್ಯಕ್ತಿ ಘನತೆ ಮತ್ತು ಮನುಷ್ಯ ಸ್ವಾತಂತ್ರ್ಯವನ್ನು. ಭಾರತದಂತಹ ಬಹು
ಸಂಸ್ಕೃತಿಯ ದೇಶದಲ್ಲಿ ಆ ತತ್ವಗಳು ನೆಲೆಗೊಳ್ಳಬೇಕಾದರೆ ಸಮುದಾಯಗಳ ನಡುವಿನ ಸಾಮರಸ್ಯ ಅಗತ್ಯ ಎಂದು ಗಾಂಧಿ ಅರಿತಿದ್ದರು. ಅವರ ಈ ತಿಳಿವಿಗೆ ಅವರ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ ಕಾರಣರು.

ಗಾಂಧಿ 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ತಕ್ಷಣ ಗೋಖಲೆ ಅವರು ಗಾಂಧಿಗೆ ನೀಡಿದ ಜವಾಬ್ದಾರಿ, ‘ಮೊದಲು ಭಾರತವನ್ನು ಸುತ್ತಾಡಿ ಇಲ್ಲಿನ ಜನಸಮುದಾಯಗಳ ಕುರಿತು ಅರಿವನ್ನು ಬೆಳೆಸಿಕೊಳ್ಳಬೇಕು’ ಎಂಬುದಾಗಿತ್ತು. ಆ ಸಲಹೆಯನ್ನು ಪಾಲಿಸಿದ ಗಾಂಧಿ, ಸ್ವಾತಂತ್ರ್ಯ ಚಳವಳಿಗಾಗಿ ಜನರನ್ನು ಸಂಘಟಿಸಿದ ರೀತಿ ಅನನ್ಯವಾದುದು. ಗಾಂಧಿ ಹೋದಲ್ಲೆಲ್ಲಾ ಸಾವಿರ ಸಾವಿರ ಜನ ಅವರ ಮಾತನ್ನು ಕೇಳಲು ಬರುತ್ತಿದ್ದರು. ಜನರ ದನಿಯನ್ನೇ ಅವರೆದುರು ಗಾಂಧಿ ಆಡುತ್ತಿದ್ದದ್ದು ಆದಕ್ಕೆ ಕಾರಣ.

ವರ್ತಮಾನದ ಭಾರತವು ಚಲಿಸುತ್ತಿರುವ ದಾರಿಯನ್ನು ನೋಡುತ್ತಿದ್ದರೆ ಗಾಂಧಿಯ ಚಿಂತನೆಯನ್ನು ನಾವು ಹೆಚ್ಚು ಯುವಜನರ ನಡುವೆ ಚರ್ಚಿಸಬೇಕು ಅನ್ನಿಸುತ್ತಿದೆ. ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳ ಯುವಕರು ಗಾಂಧಿಯ ಆಲೋಚನೆಗಳನ್ನು ಕಲಿತು, ಹಿಂಸೆಯಿಂದ ಹೊರತಾದ ರಾಜಕೀಯ ಸಿದ್ಧಾಂತವೊಂದನ್ನು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಭಾರತದ ಕೆಲವು ಯುವಕರು ಗೋಡ್ಸೆಯ ದೇವಾಲಯಗಳನ್ನು ಕಟ್ಟುತ್ತಿದ್ದಾರೆ. ಕಾಲದ ಈ ವಿಸಂಗತಿಯನ್ನು ನಾವು ಗಮನಿಸಬೇಕು. ಜೊತೆಗೆ ಈ ಮಾದರಿ ಬೆಳವಣಿಗೆಗಳು ಯುವ ಮನಸ್ಸುಗಳ ಮೇಲೆ ಮಾಡುವ ಆಪಾಯವನ್ನು ಅರ್ಥಮಾಡಿಕೊಳ್ಳಬೇಕಿದೆ. ಪ್ರತಿ ಮನಸ್ಸಿನಲ್ಲೂ ಗಾಂಧಿಯನ್ನು ಬಿತ್ತುವುದು ಇಂದಿನ ಅಗತ್ಯವಾಗಿದೆ.

ಡಾ. ಕಿರಣ್ ಎಂ. ಗಾಜನೂರು, ಬೆಂಗಳೂರು

ಪ್ರತಿಕ್ರಿಯಿಸಿ (+)