ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಶೈಕ್ಷಣಿಕ ಸಮ್ಮೇಳನ; ಉದ್ದೇಶ ನೇಪಥ್ಯಕ್ಕೆ?

ಶೈಕ್ಷಣಿಕ ಆಸಕ್ತಿ ಹಿನ್ನೆಲೆಗೆ ಸರಿದು ಪ್ರವಾಸದ ಉಮೇದು ಮುನ್ನೆಲೆಗೆ ಬಂದಿದೆ
Published 17 ಜನವರಿ 2024, 20:04 IST
Last Updated 17 ಜನವರಿ 2024, 20:04 IST
ಅಕ್ಷರ ಗಾತ್ರ

ಬೆಳಿಗ್ಗೆ ವಾಕಿಂಗ್ ವೇಳೆ ಎದುರಾದ ಸ್ನೇಹಿತರು, ತಮ್ಮ ಬೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಮ್ಮೇಳನದಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡರು. ಮಾತಿನುದ್ದಕ್ಕೂ ತಾವು ಭೇಟಿ ನೀಡಿದ ನಗರದ ವಿಶೇಷ, ಪ್ರೇಕ್ಷಣೀಯ ಸ್ಥಳಗಳು, ಕಡಲ ಕಿನಾರೆ, ಅಲ್ಲಿನ ಜನಪ್ರಿಯ ತಿಂಡಿ ತಿನಿಸು ಮತ್ತು ದೇವಸ್ಥಾನಗಳ ಕುರಿತು ಆಸಕ್ತಿಯಿಂದ ವಿವರಿಸಿದರು. ಸಮ್ಮೇಳನದಲ್ಲಿ ನಡೆದ ಚರ್ಚೆ, ಸಂವಾದ, ಗೋಷ್ಠಿಗಳ ಕುರಿತು ಏನನ್ನೂ ಹೇಳಲಿಲ್ಲ. ನಾನೇ ಮುಂದಾಗಿ ವಿಚಾರಿಸಿದಾಗ, ‘ಅಯ್ಯೋ ಅದೇನು ಹೇಳಿಕೊಳ್ಳುವಂತಹದ್ದಲ್ಲ. ಸಮ್ಮೇಳನಕ್ಕೆ ಬಂದವರಲ್ಲಿ ಹೆಚ್ಚಿನವರು ಪ್ರವಾಸಕ್ಕೆಂದೇ ಬಂದಿದ್ದರು. ಕೆಲವರು ಕುಟುಂಬಸಮೇತರಾಗಿ ಬಂದು ಮೋಜು ಮಸ್ತಿ ಮಾಡಿದರು’ ಎಂದರು.

ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ವಿಫಲವಾಗುತ್ತಿರುವುದಕ್ಕೆ ಪ್ರತಿನಿಧಿಗಳು ತಮ್ಮ ಪೂರ್ಣ ಸಮಯವನ್ನು ಸಮ್ಮೇಳನದ ಚಟುವಟಿಕೆಗಳಿಗೆ ವಿನಿಯೋಗಿಸದಿರುವುದೇ ಕಾರಣ. ಆಯೋಜಕರು ಕೂಡ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕೆಂಬ ಕಾರಣಕ್ಕೆ ಹಾಜರಾತಿಯಲ್ಲಿ ವಿನಾಯಿತಿ ಕೊಡುವುದರಿಂದ, ಸಮ್ಮೇಳನಗಳು
ಪ್ರವಾಸಕೇಂದ್ರಿತ ಆಗುತ್ತಿವೆ. ಸಾಮಾನ್ಯವಾಗಿ ಪ್ರತಿನಿಧಿಗಳಿಗೆ ಕುಟುಂಬದ ಸದಸ್ಯರನ್ನೂ ಜೊತೆಗೆ ಕರೆತರಲು ಆಯೋಜಕರು ಅವಕಾಶ ಕೊಡುವುದುಂಟು. ಹೀಗೆ ಬರುವವರು ಹೆಚ್ಚಿನ ಸಮಯವನ್ನು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯಲ್ಲಿ ಕಳೆದು, ಕೊನೆಯ ದಿನ ಪ್ರಮಾಣ
ಪತ್ರವನ್ನು ಸ್ವೀಕರಿಸಿ ತೆರಳುತ್ತಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನಂತಹ ಸಂಸ್ಥೆಗಳು ಬೋಧಕರು ಸಮ್ಮೇಳನಗಳಲ್ಲಿ ಭಾಗವಹಿಸುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದನ್ನು ಕಡ್ಡಾಯಗೊಳಿಸಿವೆ. ಹೀಗಾಗಿ, ಹೆಚ್ಚಿನ ಸಂಖ್ಯೆಯ ಬೋಧಕರು ಆಸಕ್ತಿಗಿಂತ ಹೆಚ್ಚಾಗಿ ಇದನ್ನೊಂದು ಅನಿವಾರ್ಯ ನಿಯಮ ಎನ್ನುವಂತೆ ಪಾಲಿಸುತ್ತಾರೆ. ಇನ್ನು ವೃತ್ತಿನಿರತರ ಸಂಘಗಳು ಆಯೋಜಿಸುವ ಸಮ್ಮೇಳನಗಳು ಜಗಳ, ಕಿರುಚಾಟ, ಪರಸ್ಪರ ನಿಂದನೆಯಲ್ಲಿ ಕೊನೆಗೊಳ್ಳುವುದೇ ಹೆಚ್ಚು. ಮೊದಲ ದಿನ ಮಾತ್ರ ಒಂದಿಷ್ಟು ಶೈಕ್ಷಣಿಕ ವಾತಾವರಣ ನೆಲೆಗೊಂಡಿರುತ್ತದೆ. ಕೊನೆಯ ದಿನವು ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಹಾಗೂ ನೇಮಕಾತಿ ಪ್ರಕ್ರಿಯೆಗೆ ಮೀಸಲಾಗಿರುತ್ತದೆ. ವರ್ಷದ ಖರ್ಚು-ವೆಚ್ಚದ ವರದಿ ಓದುವಾಗ ವೇದಿಕೆಯು ಅಕ್ಷರಶಃ ರಣಾಂಗಣದ ರೂಪು ತಳೆಯುತ್ತದೆ. ಸದಸ್ಯರು ಮತ್ತು ಪದಾಧಿಕಾರಿಗಳ ನಡುವೆ ವಾಗ್ವಾದ ತಾರಕಕ್ಕೇರಿ, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಸಮ್ಮೇಳನದ ಮೂಲ ಉದ್ದೇಶವೇ ಮೂಲೆಗುಂಪಾಗುತ್ತದೆ.

ಪುಸ್ತಕ ಪ್ರಕಾಶಕರು ಮತ್ತು ಶೈಕ್ಷಣಿಕ ಸಾಮಗ್ರಿಗಳ ಉತ್ಪಾದಕರು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಸಮ್ಮೇಳನಗಳ ಪ್ರಾಯೋಜಕರಾಗುವುದುಂಟು. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಗಲುವ ಪೂರ್ಣ ವೆಚ್ಚವನ್ನು ಪ್ರಾಯೋಜಕರು ಭರಿಸುವುದರಿಂದ, ಬೋಧಕರು ಮತ್ತು ಸಂಶೋಧಕರು ಇದರ ಲಾಭ ಪಡೆದು
ಧನ್ಯರಾಗುತ್ತಾರೆ. ಒಟ್ಟಾರೆ, ಉಚಿತ ಪ್ರಾಯೋಜಕತ್ವದ ಪರಿಣಾಮವಾಗಿ, ಶೈಕ್ಷಣಿಕ ಆಸಕ್ತಿ ಹಿನ್ನೆಲೆಗೆ ಸರಿದು ಪ್ರವಾಸದ ಉಮೇದು ಮುನ್ನೆಲೆಗೆ ಬರುತ್ತದೆ.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯು (ನ್ಯಾಕ್) ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗಾಗಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಪದವಿ ಕಾಲೇಜುಗಳಲ್ಲಿ ಪ್ರತಿವರ್ಷ ಶೈಕ್ಷಣಿಕ ಸಮ್ಮೇಳನಗಳ ಆಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಉಪನ್ಯಾಸಕರು ವರ್ಷದಲ್ಲಿ ನಿರ್ದಿಷ್ಟ ಸಂಖ್ಯೆಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದು ಅಗತ್ಯವಾಗಿದೆ. ಪರಿಣಾಮವಾಗಿ, ಮಂಡಳಿಯ ನಿಯಮಗಳನ್ನು ಅನುಸರಿಸುವ ಒತ್ತಡದಲ್ಲಿ ಸಮ್ಮೇಳನಗಳ ಆಯೋಜನೆ ಮತ್ತು ಪಾಲ್ಗೊಳ್ಳುವಿಕೆ ಅನಿವಾರ್ಯ ಎನ್ನುವಂತಾಗಿರುವುದು ದುರ್ದೈವದ ಸಂಗತಿ.

ಈ ನಡುವೆ, ಹೆಚ್ಚು ಅಂಕಗಳು ಲಭ್ಯವಾಗುವ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುವ ವ್ಯಾಮೋಹ ಈಗ ಸೋಂಕಿನಂತೆ ವ್ಯಾಪಕವಾಗುತ್ತಿದೆ. ನೆರೆಯ ಶ್ರೀಲಂಕಾ, ನೇಪಾಳ, ಸಿಂಗಪುರದಿಂದ ಒಂದಿಬ್ಬರು ಪ್ರತಿನಿಧಿಗಳು ಭಾಗವಹಿಸಿದರೂ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಪ್ರಾಪ್ತವಾಗುತ್ತದೆ. ಪರಿಣಾಮವಾಗಿ, ಹೋಬಳಿಯಂಥ ಸಣ್ಣ ಊರುಗಳಲ್ಲಿನ ಪದವಿ ಕಾಲೇಜುಗಳಲ್ಲಿ ಕೂಡ ಈಗ ಅಂತರರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಶೈಕ್ಷಣಿಕ ಸಮ್ಮೇಳನಗಳನ್ನು ಆನ್‍ಲೈನ್ ಮೂಲಕ ಆಯೋಜಿಸಲಾಯಿತು. ಪ್ರತಿನಿಧಿಗಳೂ ನೋಂದಣಿ ಶುಲ್ಕದಂತಹ ಖರ್ಚುಗಳಿಲ್ಲದೆ ಇರುವುದರಿಂದ ಬಹಳ ಉಮೇದಿನಿಂದಲೇ ಈ ವೆಬಿನಾರ್‌ಗಳಲ್ಲಿ ಪಾಲ್ಗೊಂಡು ಪ್ರಮಾಣಪತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರೇ ವಿನಾ ಶೈಕ್ಷಣಿಕವಾಗಿ ಯಾವ ಉನ್ನತಿಯನ್ನೂ ಸಾಧಿಸಲಿಲ್ಲ.

‘ಈ ನೆಲದ ಮೇಲಿನ ಅತಿದೊಡ್ಡ ಕಸವೆಂದರೆ, ಪ್ರಶ್ನಿಸುವ ಸಾಮರ್ಥ್ಯವನ್ನು ಕಳೆದುಕೊಂಡ ಮೆದುಳು’ ಎಂದಿದ್ದಾರೆ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್. ಪ್ರಶ್ನೆ, ಚರ್ಚೆ, ಸಂವಾದದ ಮೂಲಕವೇ ಹೊಸ ಚಿಂತನೆಗಳು ಮತ್ತು ಸಾಧ್ಯತೆಗಳು ಹುಟ್ಟುತ್ತವೆ. ವಿಪರ್ಯಾಸವೆಂದರೆ, ಚರ್ಚೆ ಮತ್ತು ಸಂವಾದ ಇಂದಿನ ಬಹುಪಾಲು ಶೈಕ್ಷಣಿಕ ಸಮ್ಮೇಳನಗಳಲ್ಲಿ ಗೋಚರಿಸುತ್ತಿಲ್ಲ. ಹೊಸ ಹೊಳಹುಗಳು ಹಾಗೂ ಚಿಂತನೆಗಳು ಸಮ್ಮೇಳನಗಳ ಫಲಶ್ರುತಿಯಾಗಬೇಕು. ಆಗಮಾತ್ರ ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ಸಾಕಾರಗೊಂಡು ಅವುಗಳಿಗೆ ಒಂದು ಘನತೆ ಮತ್ತು ಅರ್ಥ ಪ್ರಾಪ್ತವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT