ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಖರೀದಿ ಬೆಲೆ ಕಡಿಮೆಯಾದರೂ ಹೆಚ್ಚುತ್ತಲೇ ಇದೆ ಮಾರಾಟದ ಬೆಲೆ!

ಸಂಗತ | ಬೆಳಕು ಆಗದಿರಲಿ ‘ಭಾರ’

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಕೃಷ್ಣಾ ನದಿಗೆ ಅವಿಭಜಿತ ಆಂಧ್ರಪ್ರದೇಶದಲ್ಲಿ ನಾಗಾರ್ಜುನ ಸಾಗರ ಹಾಗೂ ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯ ಕಟ್ಟಲು ಏಕಕಾಲಕ್ಕೆ ಚಾಲನೆ ನೀಡಲಾಯಿತು. ನಾಗಾರ್ಜುನ ಸಾಗರದ ನಿರ್ಮಾಣ ಕೆಲಸ 1967ರಲ್ಲಿ ಪೂರ್ಣಗೊಂಡಿತು. ಆದರೆ ಆಲಮಟ್ಟಿ ಕೆಲಸ ಇನ್ನೂ ಬಾಕಿ ಉಳಿದಿದೆ.

‘ನಾಗಾರ್ಜುನ ಕೆಲಸ ಪೂರ್ಣಗೊಂಡ ಬಳಿಕ ಅಲ್ಲಿ ಅತಿಥಿಗೃಹ ಕಟ್ಟಲಾಯಿತು. ಆಲಮಟ್ಟಿಯಲ್ಲಿ ಮೊದಲು ಅತಿಥಿಗೃಹ ಕಟ್ಟಿ ನಂತರ ಕೆಲಸ ಆರಂಭಿಸಲಾಯಿತು. ನಾಗಾರ್ಜುನಕ್ಕೆ ಬಂದ ಕಬ್ಬಿಣ, ಸಿಮೆಂಟ್ ದಕ್ಷತೆ ಯಿಂದ ಬಳಸಿದರು. ಆಲಮಟ್ಟಿಗೆ ಬಂದ ಕಬ್ಬಿಣ, ಸಿಮೆಂಟ್ ಕಳ್ಳರ ಪಾಲಾಯಿತು’ ಎಂದು ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ವಿಷಾದದಿಂದ ಹೇಳುತ್ತಿದ್ದರು. ರಾಜ್ಯದ ವಿದ್ಯುತ್ ಬೆಲೆ ಏರಿಕೆಯ ಕಾರಣಗಳು ಇದೇ ಮಾದರಿಯ ವಿಷಾದದ ಕಥೆ ಹೇಳುತ್ತವೆ.

ರಾಜ್ಯ ಹಾಗೂ ದೇಶದಲ್ಲಿ ಬಹಳಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೇಳಿದಷ್ಟು ಕಡಿಮೆ ಬೆಲೆಗೆ ದೊರಕುತ್ತಿದೆ. ಹೀಗಿದ್ದೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರವನ್ನು ಹೆಚ್ಚಿಸಿ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ. ಕೋವಿಡ್ ಸಂಕಷ್ಟದ ಈ ದಿನಗಳಲ್ಲೂ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಪ್ರತೀ ಯುನಿಟ್‍ಗೆ 30 ಪೈಸೆ ಹೆಚ್ಚಿಸಲಾಗಿದೆ. ಹಾಗೆಯೇ ಕೈಗಾರಿಕೆಗಳು ಬಳಸುವ ವಿದ್ಯುತ್ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ.

ಈ ಉದಾಹರಣೆಗಳು ಗಮನಾರ್ಹ- ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್‍ ಅನ್ನು ವಿದ್ಯುತ್ ಪ್ರಸರಣ ನಿಗಮವು 2010- 11ರಲ್ಲಿ ಪ್ರತೀ ಯುನಿಟ್‍ಗೆ ₹ 5.50ಕ್ಕೆ ಖರೀದಿಸುತ್ತಿತ್ತು. ಈಗ ಬೆಲೆಯನ್ನು ₹ 3.10ಕ್ಕೆ ಇಳಿಸಲಾಗಿದೆ. ಸೋಲಾರ್ ವಿದ್ಯುತ್‍ ಅನ್ನು ಯುನಿಟ್‍ಗೆ ₹ 17ಕ್ಕೆ ಖರೀದಿಸುತ್ತಿತ್ತು. ಈಗ ಅದನ್ನು ₹ 2ಕ್ಕೆ ಇಳಿಸಲಾಗಿದೆ. ಪವನ ವಿದ್ಯುತ್ ಬೆಲೆಯಲ್ಲಿ ₹ 2 ಕಡಿಮೆ ಮಾಡಲಾಗಿದೆ. ಖರೀದಿ ಬೆಲೆ ಕಡಿಮೆಯಾದರೆ ಮಾರಾಟದ ಬೆಲೆಯೂ ಕಡಿಮೆಯಾಗಬೇಕು. ಇದು ವ್ಯವಹಾರದ ಸೂತ್ರ ಮತ್ತು ನೀತಿ. ಅದು ವಿದ್ಯುತ್ ವಿಷಯದಲ್ಲಿ ಉಲ್ಟಾ ಪಲ್ಟಾ ಆಗಿ ನಿಂತಿದೆ.

ವಿದ್ಯುತ್ ಉತ್ಪಾದನೆಯ ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ನೈಸರ್ಗಿಕವಾಗಿ ದೊರಕುವ ಗಾಳಿ, ನೀರು, ಸೂರ್ಯನ ಬಿಸಿಲು, ಸಮುದ್ರದ ತೆರೆಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗು ತ್ತಿದೆ. ಗುಜರಾತ್‌ ಸರ್ಕಾರ ಹೆಚ್ಚುವರಿ ವಿದ್ಯುತ್‍ ಅನ್ನು ಕರ್ನಾಟಕಕ್ಕೆ ಮಾರಲು ರಾಜಕೀಯ ಒತ್ತಡ ಹೇರುತ್ತಿದೆ, ಮಾತ್ರವಲ್ಲ ಕೇಳಿದಷ್ಟು ಕಡಿಮೆ ಬೆಲೆಗೆ ಪೂರೈಸಲು ಸಿದ್ಧವಾಗಿದೆ.

ವಿದ್ಯುತ್‌ ಕೊಳ್ಳುವವರಿಲ್ಲದ ಕಾರಣ ರಾಜ್ಯದ ಕೆಲವು ವಿದ್ಯುತ್ ಉತ್ಪಾದನಾ ಘಟಕಗಳು ತಾತ್ಕಾಲಿಕ ವಾಗಿ ಸ್ಥಗಿತಗೊಂಡಿವೆ. ಅಭಾವ ಅನೇಕ ಸಂಕಟಗಳಿಗೆ ಕಾರಣವಾದರೆ ಅತೀ ಹೆಚ್ಚು ಉತ್ಪಾದನೆ ಕೂಡ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ರೈತರ 10 ಎಚ್‍ಪಿವರೆಗಿನ ನೀರಾವರಿ ಪಂಪ್‍ಸೆಟ್, ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಗಳಿಗೆ ಉಚಿತವಾಗಿ ವಿದ್ಯುತ್‍ ಪೂರೈಕೆ ಮಾಡಲಾಗುತ್ತಿದೆ. ಇದು ಸರ್ಕಾರದ ಯೋಜನೆಯಾಗಿದ್ದರಿಂದ ಉಚಿತವಾಗಿ ಪೂರೈಸಿದ ವಿದ್ಯುತ್ತಿಗೆ, ಸಂಬಂಧಿಸಿದ ಸಂಸ್ಥೆ ಅಥವಾ ಕಂಪನಿಗಳಿಗೆ ಪೂರ್ಣ ಹಣವನ್ನು ಸರ್ಕಾರ ಪಾವತಿ ಮಾಡುತ್ತಿದೆ. ಇದರಿಂದ ಸರಬರಾಜು ಸಂಸ್ಥೆಗೆ ಯಾವುದೇ ಭಾರ ಬೀಳುವುದಿಲ್ಲ.

ವಿದ್ಯುತ್ ನಿಗಮವು 2010-11ರಲ್ಲಿ ಖರೀದಿಸಿದ ಒಟ್ಟು ವಿದ್ಯುತ್ ಸರಾಸರಿ ಬೆಲೆ ಪ್ರತೀ ಯುನಿಟ್‍ಗೆ
₹ 7 ಇತ್ತು. ಅದು ಈಗ ₹ 3.75ಕ್ಕೆ ಇಳಿದಿದೆ. ವಾಸ್ತವ ಸಂಗತಿಗಳು ಇಷ್ಟು ನಿಚ್ಚಳವಾಗಿರುವಾಗ ಗ್ರಾಹಕರಿಗೆ ಪೂರೈಸುವ ವಿದ್ಯುತ್ ಬೆಲೆಯನ್ನು ಹೆಚ್ಚಿಸುತ್ತ ನಡೆದದ್ದು ಯಾಕೆ?

ವಿದ್ಯುತ್ ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗು ವುದು ಹಾನಿಗೆ ಮುಖ್ಯ ಕಾರಣ. ವಿದ್ಯುತ್ ವಿಚಕ್ಷಕ ದಳಗಳಿದ್ದರೂ ಅವುಗಳ ಅಧಿಕಾರದ ಮಿತಿ ತುಂಬಾ ಕಡಿಮೆ. ವಿದ್ಯುತ್ ಕಳ್ಳತನದ ಪ್ರಕರಣಗಳು ದಾಖಲಾದರೆ ದಂಡ ತುಂಬಿ ದಾಟಿಕೊಳ್ಳಲು ಅವಕಾಶ ವಿದೆ. ವಿದ್ಯುತ್ ಪ್ರಸರಣ ಹಾಗೂ ವಿತರಣೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸುವುದರಿಂದ ನಷ್ಟದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು.

ಮಧ್ಯಪ್ರದೇಶದಲ್ಲಿ 5 ವರ್ಷಗಳ ಹಿಂದೆ ಶೇ 50ರಷ್ಟು ವಿದ್ಯುತ್ ಕಳ್ಳತನವಾಗುತ್ತಿತ್ತು. ಅಲ್ಲಿಯ ಸರ್ಕಾರ ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ಕಳ್ಳತನವನ್ನು ಪೂರ್ಣ ನಿಯಂತ್ರಣ ಮಾಡಿದೆ. ದೆಹಲಿ ರಾಜ್ಯದಲ್ಲಿ ಭಾರಿ ವಿದ್ಯುತ್ ಚೋರರು ತಳ ಊರಿದ್ದರು. ಈಗ ಅಲ್ಲಿಯೂ ವಿದ್ಯುತ್ ಕಳ್ಳತನಕ್ಕೆ ಪೂರ್ಣ ಬ್ರೇಕ್ ಹಾಕಲಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ವಿದ್ಯುತ್ ಕಳ್ಳತನ ಮಾಡುವ ಉದ್ದಿಮೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ವಿದ್ಯುತ್ ಬಳಕೆ ಲೆಕ್ಕ ಪರಿಶೋಧನೆ ಕಾರ್ಯ ಸರಿಯಾಗಿ ನಡೆಯುವುದಿಲ್ಲ. ವಿದ್ಯುತ್ ಖರೀದಿ ಮತ್ತು ವಿತರಣೆ ನಡುವಿನ ವ್ಯತ್ಯಾಸವನ್ನು ಪ್ರತಿದಿನ ಲೆಕ್ಕ ಹಾಕಬೇಕು. ಸೋರಿಕೆ ಕಂಡುಹಿಡಿಯಲು ಇದರಿಂದ ಅನುಕೂಲವಾಗುತ್ತದೆ. ವಿದ್ಯುತ್ ಖರೀದಿಗೆ ಬಹಿರಂಗ ಟೆಂಡರ್ ವಿಧಾನ ಅಳವಡಿಸಬೇಕು. ಇದರಿಂದ ಸ್ಪರ್ಧಾತ್ಮಕ ವ್ಯವಹಾರ ಮತ್ತು ಪಾರದರ್ಶಕತೆ ಹೆಚ್ಚುವುದು. ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು
ಆಧುನೀಕರಣಗೊಳಿಸಬೇಕು.

ಮನುಷ್ಯಕುಲಕ್ಕೆ ದೊರೆತ ಮಾಯಾದೇವತೆ ವಿದ್ಯುತ್ ಎಂದು ವಿಜ್ಞಾನಿಗಳು ಹೆಮ್ಮೆಯಿಂದ ಹೇಳು ತ್ತಾರೆ. ಮನುಕುಲದ ಬದುಕನ್ನೇ ಆವರಿಸಿರುವ ಡಿಜಿಟಲ್ ಲೋಕ ವಿದ್ಯುತ್ ದೇವತೆಯ ಕೊಡುಗೆ. ಇದು ನ್ಯಾಯವಾದ ಬೆಲೆಯಲ್ಲಿ ದೊರಕುವಂತೆ ನೋಡಿಕೊಳ್ಳಬೇಕು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.