ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಳೆಗಾಲದ ಪ್ರವಾಸ ಮತ್ತು ಸಂಯಮ

Published 3 ಆಗಸ್ಟ್ 2023, 0:27 IST
Last Updated 3 ಆಗಸ್ಟ್ 2023, 0:27 IST
ಅಕ್ಷರ ಗಾತ್ರ

ರೀಲ್ಸ್‌ ಮಾಡುವ ಸಲುವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡು ಜೀವ ತೆರುತ್ತಿರುವ ಯುವಜನರು, ತಮ್ಮ ಕುಟುಂಬವನ್ನು ದುಃಖದ ಮಡುವಿಗೆ ದೂಡುತ್ತಿದ್ದಾರೆ

ಹಿಂದಿನ ವಾರ ಪೂರ್ತಿ ಬೇರೆ ಬೇರೆ ಪ್ರಕರಣಗಳಲ್ಲಿ ಸಮುದ್ರ, ನದಿ, ಕೃಷಿಹೊಂಡ, ಜಲಪಾತದಂತಹ ಕಡೆಗಳಲ್ಲಿ ಜನರು ಜೀವ ಕಳೆದುಕೊಂಡ ವಿಡಿಯೊಗಳು ಎಲ್ಲೆಡೆ ವೈರಲ್‌ ಆಗಿ ಆತಂಕ ಹುಟ್ಟಿಸಿದವು. ಮಕ್ಕಳೆದುರೇ ಕೊಚ್ಚಿಹೋದ ತಂದೆ ತಾಯಿ, ಸ್ನೇಹಿತನೆದುರಿಗೇ ಕಾಲು ಜಾರಿ ಜಲಪಾತದ ರಭಸದ ಹರಿವಿನಲ್ಲಿ ಮಾಯವಾಗಿ ಹೋದ ತರುಣ, ನೋಡನೋಡುತ್ತಲೇ ಸಮುದ್ರದ ಬೃಹತ್‌ ಅಲೆಯ ಪಾಲಾದ ಸೋದರಿಯರು! ಅಬ್ಬ, ಗುರುತು ಪರಿಚಯವಿಲ್ಲದ ನಮಗೇ ಜೀವ ನಡುಗುವಾಗ ತಮ್ಮವರದ್ದೇ ವಿಡಿಯೊಗಳನ್ನು ನೋಡಬೇಕಾದ ಜನರ ಪರಿಸ್ಥಿತಿ?

ಅವು ಆಕಸ್ಮಿಕ ಅವಘಡಗಳಾಗಿದ್ದರೆ ದಿಗಿಲಿನ ಪ್ರಮಾಣ ಈ ಮಟ್ಟದಲ್ಲಿ ಹೆಚ್ಚುತ್ತಿರಲಿಲ್ಲ. ಆದರೆ ಈ ಬಹುತೇಕ ಸಾವುಗಳು ಸಂಭವಿಸಿದ್ದು ಫೋಟೊ ತೆಗೆಯಲು ಮತ್ತು ವಿಡಿಯೊ ಮಾಡಲು ಹೋಗಿದ್ದರಿಂದ! ಅವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮೆಚ್ಚುಗೆ ಗಿಟ್ಟಿಸುವ ಹವ್ಯಾಸ ಅಪಾಯಕಾರಿ ಹುಚ್ಚಾಗಿ ಬದಲಾಗಿದೆ. ಹೀಗಾಗಿ, ದಿನವೂ ಒಂದಲ್ಲ ಒಂದು ಕಡೆ ಜನ ಅದರಲ್ಲೂ ಬಹುತೇಕ ಎಳೆಯ ಹುಡುಗ ಹುಡುಗಿಯರು ಸಾಯಬಾರದ ವಯಸ್ಸಿನಲ್ಲಿ ಜೀವ ತೆರುತ್ತಿರುವುದನ್ನು ಕಾಣುತ್ತಿದ್ದೇವೆ.

ಇದು ಮಳೆಗಾಲ. ಎಲ್ಲ ಕಡೆ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಮುದ್ರ ಯಾವಾಗ ಅಪಾಯಕಾರಿಯಾಗಿ ಬದಲಾಗುತ್ತದೆಯೋ ಹೇಳುವಂತಿಲ್ಲ. ಹಿಂದಿನ ವಾರ ಸಮತಟ್ಟಾಗಿದ್ದ ನದಿತೀರದ ಜಾಗ ಈ ವಾರ ದೊಡ್ಡ ಹೊಂಡವಾಗಿರಬಹುದು ಅಥವಾ ಸುಳಿಯಾಗಿರಬಹುದು. ಬಂಡೆಗಲ್ಲುಗಳ ಮೇಲೆ ಪಾಚಿ ಕಟ್ಟಿ, ಕಾಲಿಟ್ಟರೆ ಜಾರುತ್ತಿರುತ್ತವೆ. ಹಾಗಾಗಿ, ನೋಡಲು ಮನಮೋಹಕವಾಗಿ ಸೆಳೆಯುವ ನೀರಿನ ಮೂಲಗಳು ದುರಂತದ ತಾಣಗಳಾಗಿ ಮಾರ್ಪಡುತ್ತಿವೆ.

ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದು ಇತ್ತೀಚೆಗೆ ದೊಡ್ಡ ಗೀಳಾಗಿ ಹೋಗಿದೆ. ಈಗಿನ ಟ್ರೆಂಡ್‌ ಏನೆಂದರೆ, ಏನಾದರೂ ಮಾಡಿ ಜನಪ್ರಿಯತೆ ಪಡೆಯಬೇಕು, ಜನರಿಂದ ಶಹಬ್ಬಾಸ್‌ ಎನಿಸಿಕೊಳ್ಳಬೇಕು! ನಮ್ಮ ಯುವಜನರಲ್ಲಂತೂ ಈ ರೀಲ್ಸ್‌ನ ಹುಚ್ಚು ಎಷ್ಟು ತಾರಕಕ್ಕೇರಿದೆ ಎಂದರೆ, ಅವರು ಮಾಡುವ ಚಿತ್ರವಿಚಿತ್ರ ವಿಡಿಯೊಗಳನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಇದೀಗ ನೀರಿನಲ್ಲಿ, ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಮೇಲೆ ಜೀವಕ್ಕೇ ಅಪಾಯವಾಗುವ ರೀತಿಯಲ್ಲಿ ರಿಸ್ಕ್‌ ತೆಗೆದುಕೊಂಡಾದರೂ ಸರಿ ತಾವು ವಿಡಿಯೊ ಮಾಡಬೇಕು ಅನ್ನುವ ಮನೋಭಾವ ಅತ್ಯಂತ ವೇಗವಾಗಿ ಹಬ್ಬುತ್ತಿರುವುದು ಮಾತ್ರ ದುರ್ದೈವ. ಅಷ್ಟೇ ಅಲ್ಲ, ಯೋಲೋ (YOLO) ಅಂದರೆ ‘ಯು ಓನ್ಲಿ ಲಿವ್‌ ಒನ್ಸ್‌’ ಬದುಕುವುದು ಒಂದೇ ಸಲ ಅನ್ನುವ ಮನೋಭಾವ ಈಗಿನ ತಲೆಮಾರಿನವರದ್ದಾಗಿರುವುದು ಚಿಂತೆಗೀಡುಮಾಡುವ ವಿಷಯ.

ಪದವಿ ಓದುವ, ಅದರಲ್ಲೂ ವೃತ್ತಿಪರ ಕೋರ್ಸ್‌ಗಳ ಹಲವಾರು ವಿದ್ಯಾರ್ಥಿಗಳು ಪ್ರತಿ ತಿಂಗಳೂ ಮೂರು– ನಾಲ್ಕು ದಿನಗಳ ಕಾಲ ಹೊರಜಿಲ್ಲೆಗಳಿಗೋ ಹೊರರಾಜ್ಯಕ್ಕೋ ಕಡ್ಡಾಯವಾಗಿ ಪ್ರವಾಸ ಹೋಗುವುದೇ! ಕೆಲವೊಮ್ಮೆಯಂತೂ ಸಾವಿರಾರು ಕಿಲೊಮೀಟರ್‌ ದೂರವನ್ನು ಬೈಕಿನಲ್ಲಿಯೇ ಕ್ರಮಿಸುತ್ತಾರೆ. ಬೈಕ್‌ ಓಡಿಸುವಾಗ‌ಲೂ ತಮ್ಮ ಪ್ರವಾಸದ ವೀಕ್ಷಕ ವಿವರಣೆ ನೀಡುವ ವ್ಲಾಗಿಂಗ್ ಬೇರೆ. ಮತ್ತೂ ಆತಂಕ ಹುಟ್ಟಿಸುವ ಸಂಗತಿಯೆಂದರೆ, ಇವರಲ್ಲಿ ಬಹಳ ಮಂದಿ ತಮ್ಮ ಪಾಲಕರಿಗೆ ತಾವು ಪ್ರವಾಸ ಹೋಗುತ್ತಿರುವ ವಿಷಯವನ್ನೇ ಹೇಳಿರುವುದಿಲ್ಲ. ಪಿಯುಸಿಯವರೆಗೆ ತಂದೆತಾಯಿಗೆ ವಿಧೇಯರಾಗಿದ್ದ ಮಕ್ಕಳು ನಂತರ ಸಹಪಾಠಿಗಳ ಪ್ರಭಾವದಿಂದ ಬಹುಬೇಗ ಬದಲಾಗುವುದನ್ನು ಗಮನಿಸಬಹುದು. ಎಲ್ಲವೂ ಸರಿ ಇದ್ದರೆ ಸರಿ. ಇಲ್ಲದಿದ್ದರೆ, ಅಕಸ್ಮಾತ್‌ ಆಗಿ ಇಂತಹ ಪ್ರಕರಣಗಳು ನಡೆದಾಗಲೇ ವಿಷಯ ಗೊತ್ತಾಗುತ್ತದೆ. ಕೆಲವೊಮ್ಮೆ ಶವವೂ ಸಿಕ್ಕದೆ ತಂದೆತಾಯಿಗೆ ಕೊನೆಯ ಬಾರಿ ಮಕ್ಕಳ ಮುಖ ನೋಡಲೂ ಸಾಧ್ಯವಾಗದ ಪರಿಸ್ಥಿತಿ ಇದೆ.

ಹರೆಯದ ಮಕ್ಕಳ ಹಟದಿಂದ ಅತ್ತ ಅವರನ್ನು ತಡೆಯಲೂ ಆಗದೆ ಇತ್ತ ಅವರು ಅಪಾಯಕ್ಕೆ ಸಿಲುಕಿಕೊಳ್ಳುವುದನ್ನು ನೋಡಲೂ ಆಗದೆ ಪ್ರತಿ ಕ್ಷಣವನ್ನೂ ಆತಂಕದಲ್ಲಿ ಕಳೆಯುತ್ತಿರುವ ಪಾಲಕರು ಅದೆಷ್ಟು ಮಂದಿ ಇಲ್ಲ. ಸ್ವಯಂಕೃತಾಪರಾಧದಿಂದ ಅನ್ಯಾಯವಾಗಿ ಜೀವ ಕಳೆದುಕೊಂಡು ಕುಟುಂಬವನ್ನು ದುಃಖದ ಮಡುವಿಗೆ ದೂಡಿ ಹೋಗುವವರನ್ನು ನೋಡಿದರೆ ಎಂಥವರಿಗೂ ಮರುಕದ ಜತೆಗೆ ಕೋಪ ಉಕ್ಕದೇ ಇರದು.

ಇನ್ನು ಹುಚ್ಚೆದ್ದು ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋದವರ ಶವಗಳನ್ನು ಹುಡುಕಿ ತೆಗೆಯುವುದು ಹುಲ್ಲಿನ ಗೊಣವೆಯಲ್ಲಿ ಸೂಜಿ ಹುಡುಕುವುದಕ್ಕಿಂತ ಕಷ್ಟದ ಕೆಲಸ. ತಮ್ಮ ಸಮಯ, ಶ್ರಮ ಮಾತ್ರವಲ್ಲ, ಕೆಲವೊಮ್ಮೆ ಜೀವವನ್ನೂ ಪಣಕ್ಕಿಟ್ಟು ಎರಡು– ಮೂರು ದಿನಗಳ ಕಾಲ, ಕೆಲವೊಮ್ಮೆ ವಾರಗಟ್ಟಲೆ ಶವವನ್ನು ಹುಡುಕುವವರ ಸಂಕಷ್ಟ ಯಾರಿಗೂ ಬೇಡ. ಸ್ಥಳೀಯ ಯುವಕರು ಮತ್ತು ಅಗ್ನಿಶಾಮಕ ದಳದವರು ಅನುಭವಿಸುವ ಫಜೀತಿ ದೇವರಿಗೇ ಪ್ರೀತಿ.

ಈ ಎಲ್ಲ ಕಾರಣಗಳಿಂದ ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗೆ ಈಗ ಬರಬೇಡಿ ಎಂದು ಪತ್ರಿಕಾ ಪ್ರಕಟಣೆ ನೀಡುತ್ತಿದ್ದಾರೆ. ಇದರರ್ಥ ಎಲ್ಲಿಗೂ ಹೋಗಬಾರದು, ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಾರದು ಎಂದಲ್ಲ. ಅತಿ ಉತ್ಸಾಹವನ್ನು ಕೊಂಚ ತಗ್ಗಿಸಿ ಸ್ವಲ್ಪ ವಿವೇಚನೆಯಿಂದಲೂ ವಿವೇಕದಿಂದಲೂ ವರ್ತಿಸಿದರೆ, ಅದರಲ್ಲೂ ಮಳೆಗಾಲದಲ್ಲಿ ಒಂದಿನಿತು ಸಂಯಮ ತಂದುಕೊಂಡರೆ ಅದೆಷ್ಟೋ ಮನೆಗಳ ದೀಪಗಳು ಆರಿಹೋಗುವುದನ್ನು, ಕುಟುಂಬಸ್ಥರು ಜೀವನಪೂರ್ತಿ ಕಣ್ಣೀರು ಹಾಕುವುದನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT