ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಶಾಲೆ, ಓದು ಮತ್ತು ಜೀವನಮೌಲ್ಯ

ಬದುಕಿನ ಪಾಠವನ್ನು ಕಲಿಸದ ಕೊರತೆಯಿಂದಾಗಿ, ಅಕ್ಷರವಂತರು ಕೂಡ ಕಲಿತ ವಿದ್ಯೆಯ ಸಾರವನ್ನು ಮರೆತು ತಪ್ಪೆಸಗುವ ಪ್ರಸಂಗಗಳು ಹೆಚ್ಚಾಗುತ್ತಿವೆ
Last Updated 20 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಬದುಕಿನ ಪಾಠವನ್ನು ಕಲಿಸದ ಕೊರತೆಯಿಂದಾಗಿ, ಅಕ್ಷರವಂತರು ಕೂಡ ಕಲಿತ ವಿದ್ಯೆಯ ಸಾರವನ್ನು ಮರೆತು ತಪ್ಪೆಸಗುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ವರಕವಿ ಬೇಂದ್ರೆ ಅವರು ಒಂದೆಡೆ, ‘ಸಾಲಿ ಮನುಷ್ಯಗ ಅಕ್ಷರಜ್ಞಾನ ಕೊಡ್ತದ, ಅನುಭವ ಬಾಳಿನ ಪಾಠ ಕಲಿಸ್ತದ’ ಎಂದು ಹೇಳಿದ್ದಾರೆ. ಇತ್ತೀಚಿನ ಘಟನೆ ಯೊಂದನ್ನು ಕಂಡಾಗ ಇದು ನಿಜ ಅನಿಸಿತು.

ಸರ್ಕಾರಿ ಬಸ್ಸೊಂದು ಮೊದಲೇ ಜನರಿಂದ ತುಂಬಿ ತುಳುಕುತ್ತಿತ್ತು. ಅದು ಒಂದು ಊರಲ್ಲಿ ಹೋಗಿ ನಿಂತ ಕೂಡಲೇ ಶಾಲೆಗೆ ಹೋಗುವ ಮಕ್ಕಳು, ನಾ ಮುಂದು ತಾ ಮುಂದು ಎಂಬಂತೆ ಶರವೇಗದಿಂದ ಒಳಗೆ ನುಗ್ಗಿದರು. ಆಗ ಒಬ್ಬ ವಿದ್ಯಾರ್ಥಿಯ ಬೆನ್ನಿಗೆ ಕಟ್ಟಿಕೊಂಡಿದ್ದ ಭಾರವಾದ ಚೀಲ ವಯೋವೃದ್ಧೆಯೊಬ್ಬರ ಮೂಗಿಗೆ ಅಪ್ಪಳಿಸಿ ಮೂಗಿನಿಂದ ರಕ್ತ ಸುರಿದು ಪ್ರಜ್ಞಾಹೀನರಾದರು. ವಿದ್ಯಾರ್ಥಿ ಉದ್ದೇಶಪೂರ್ವಕವಾಗಿ ಅದನ್ನು ಮಾಡಿರಲಿಲ್ಲ. ಆದರೆ ಆತ ಇದರ ಕಡೆಗೆ ಗಮನವನ್ನೇ ಹರಿಸದೆ ಮುಂದೆ ಹೋಗಿಬಿಟ್ಟ.

ಹೀಗೆ ಬಸ್ಸಿಗೆ ನುಗ್ಗಿ ತಮ್ಮ ಆಸನ ಹಿಡಿಯುವುದನ್ನೇ ಜೀವನದ ಪರಮ ಗುರಿಯಾಗಿಸಿಕೊಂಡ ವಿದ್ಯಾರ್ಥಿಗಳ ಮೂಟೆಯಂತಹ ಚೀಲಗಳ ಹಿಂಸೆ ಒಂದೆಡೆಯಾದರೆ, ಅವರು ಕುಳಿತವರ ಕಾಲು ತುಳಿಯುವುದು, ಚೀಲಗಳಿಂದ ಚುಚ್ಚುವುದು ಬೇರೆಯವರಿಗೆ ತೊಂದರೆಯಾಗುತ್ತದೆಂದು ಭಾವಿಸಿದ ಹಾಗೆಯೇ ಕಾಣುವುದಿಲ್ಲ. ಸಾಮಾನ್ಯವಾಗಿ ಬಸ್ಸುಗಳಲ್ಲಿ ಒಂದು ಆಸನ ಹಿರಿಯ ನಾಗರಿಕರಿಗೇ ಮೀಸಲಾಗಿರುತ್ತದೆ. ಅಂಗವಿಕಲರು, ಮಹಿಳೆಯರು ಎಂದು ಬೇರೆ ಬೇರೆ ಆಸನಗಳ ಮೇಲ್ಭಾಗದ ಫಲಕ ಗಳಲ್ಲಿ ಬರೆದಿಡಲಾಗಿದೆ. ತನ್ನ ಆಸನವನ್ನು ಅಲ್ಲಿ ಹಿಡಿದಿಟ್ಟುಕೊಳ್ಳುವ ಒಬ್ಬ ವಿದ್ಯಾರ್ಥಿ ಕೂಡ ಅರ್ಹರು ಬಂದಾಗ ಅದನ್ನು ಅವರಿಗೆ ಬಿಟ್ಟುಕೊಡುವ ಕರ್ತವ್ಯಪ್ರಜ್ಞೆಯನ್ನು ಪ್ರದರ್ಶಿಸುವುದಿಲ್ಲ.

ಬಸ್ಸಿನ ನಿರ್ವಾಹಕರು ಅವಿದ್ಯಾವಂತರಲ್ಲ. ತಾವು ಉಣ್ಣುವ ಅನ್ನ ಬಸ್ಸಿನಲ್ಲಿ ಪ್ರಯಾಣಿಸುವ ಜನರಿಂದ ಬರುತ್ತದೆ ಎಂಬ ಸತ್ಯ ಅವರಿಗೆ ಗೊತ್ತಿರಬೇಕು. ಅವರ ಮುಂದೆಯೇ ಸರ್ಕಾರಿ ಬಸ್ಸುಗಳಲ್ಲಿ, ‘ಹಿರಿಯರನ್ನು ಗೌರವಿಸಿದರೆ ದೇವರನ್ನು ಗೌರವಿಸಿದಂತೆ’ ಎಂಬ ವಾಕ್ಯ ಬರೆದಿರುತ್ತದೆ. ಆದರೂ ಎಷ್ಟೋ ಸಂದರ್ಭಗಳಲ್ಲಿ ಅವರು ವಯಸ್ಸನ್ನೂ ನೋಡದೆ ಹಿರಿಯರಿಗೆ ದಬಾಯಿಸಿಬಿಡುತ್ತಾರೆ.

ಶಾಲೆಗಳು ಅಕ್ಷರವನ್ನು ಕಲಿಸುವ ಕಮ್ಮಾರಶಾಲೆಗಳಾಗುತ್ತವೆಯೇ ವಿನಾ ಬದುಕಿನ ಕತ್ತಲು ಕಳೆಯುವ ದಾರಿದೀಪಗಳಾಗುವುದಿಲ್ಲ ಎಂದು ಹಲವು ಸಲ ಭಾವಿಸಬೇಕಾಗುತ್ತದೆ. ಕನಿಷ್ಠ ನಾಗರಿಕ ಪ್ರಜ್ಞೆಯಾದರೂ ಓದಿನಿಂದ ಪ್ರಾಪ್ತವಾಗಿದ್ದರೆ, ‘ಇಲ್ಲಿ ಕಸ ಹಾಕಬಾರದು’ ಎಂಬ ಫಲಕದ ಕೆಳಗೆ ವಿದ್ಯಾವಂತರು ಕೂಡ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಹಾಕುತ್ತಿರಲಿಲ್ಲ. ‘ದೇಶಕ್ಕಾಗಿ ಉಳಿಸಿ, ಮಿತವ್ಯಯವನ್ನು ಬೆಳೆಸಿ’ ಎಂದು ಫಲಕ ಹಾಕಿರುವ ಸರ್ಕಾರಿ ಕಚೇರಿಯಲ್ಲಿ ಮಧ್ಯಾಹ್ನ ಎಲ್ಲ ನೌಕರರೂ ಭೋಜನಕ್ಕಾಗಿ ಹೊರಗೆ ಹೋಗುತ್ತಾರೆ. ಆಗ ಖಾಲಿ ಯಾಗಿರುವ ಕಚೇರಿಯ ಹತ್ತಾರು ಕೋಣೆಗಳ ಒಳಗೆ ತಿರುಗುವ ಫ್ಯಾನುಗಳನ್ನು ನಿಲ್ಲಿಸಿ ಹೋದರೆ ಕನಿಷ್ಠ ಅಲ್ಲಿರುವ ಮಿತವ್ಯಯವನ್ನು ಸಾರುವ ಫಲಕವನ್ನಾದರೂ ಗೌರವಿಸಿದಂತೆ ಆಗುತ್ತದೆಂಬ ಭಾವನೆ ಅವರಲ್ಲಿ ಇರುವುದಿಲ್ಲ.

ಸರ್ಕಾರದ ಕೆಲಸ ದೇವರೆನ್ನುವ ಉದ್ಯೋಗಿಗಳು ಸಾರ್ವಜನಿಕರ ಕಡೆಗೆ ತಲೆಯೆತ್ತಿಯೂ ನೋಡುವುದಿಲ್ಲ. ಮಧ್ಯವರ್ತಿಗಳ ಮೂಲಕ ಅವರು ಹೇಳುವಷ್ಟು ಹಣ ಕೊಟ್ಟ ಮೇಲೆ ಕಡತ ಸುಖಾಂತ್ಯವಾಗುತ್ತದೆ.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ದಯೆಯಿಂದ ವರ್ತಿಸಿದ ಫಲವಾಗಿ ರೋಗಿಯೊಬ್ಬನ ಪ್ರಾಣ ಹೋಗುತ್ತದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಹೊಲ ಮೇಯುತ್ತಾರೆ. ಶಿಕ್ಷಕನೇ ವಿದ್ಯಾರ್ಥಿನಿಯರನ್ನು ಕಾಡುತ್ತಾನೆ. ಕಾಯ್ದೆಯನ್ನು ರೂಪಿಸುವ ಮಂತ್ರಿಮಾಗಧರ ಮಗನೇ ಹಿಟ್ ಆ್ಯಂಡ್‌ ರನ್ ಮಾಡಿ ಅಮಾಯಕರ ಜೀವಹರಣಕ್ಕೆ ಕಾರಣನಾಗುತ್ತಾನೆ... ಹೀಗೆ ಎಷ್ಟೋ ವೇಳೆ ಕಲಿತವರೇ ಎಸಗುವ ಅಪಚಾರಗಳನ್ನು ಹೇಳುವುದಾದರೆ ಮುಗಿಯುವುದಿಲ್ಲ.

ಎಲ್ಲವನ್ನೂ ಗಮನಿಸಿದರೆ, ಕೇವಲ ಶಾಲೆಯ ಓದುವಿಕೆಯು ಬದುಕಿನ ನಡೆಯನ್ನು ಹೇಳಿಕೊಡುವುದಿಲ್ಲ, ನಡತೆಯನ್ನು ರೂಪಿಸುವುದಿಲ್ಲ ಎಂಬ ಕಹಿ ಸತ್ಯದ ಅರಿವಾಗುತ್ತದೆ. ‘ಶಾಲೆಯಲ್ಲಿ ಕಲಿತದ್ದು ಮನೆತನಕ ಬರಲಿಲ್ಲ, ಬೀದಿಯಲ್ಲಿ ದೊರಕಿದ್ದು ಕೊನೆತನಕ ಬಿಡಲಿಲ್ಲ’ ಎಂಬ ಹಾಗೆ ಕೇವಲ ಓದು, ಬರಹಗಳಷ್ಟೇ ಮಾನವೀಯ ಕರ್ತವ್ಯಪ್ರಜ್ಞೆಯ ಪಾಠ ಕಲಿಸುವುದಿಲ್ಲ ಎನಿಸುತ್ತದೆ.

ವಿದ್ಯಾರ್ಥಿ ದೆಸೆಯಿಂದಲೇ ಬದುಕಿನ ಅಮೂಲ್ಯ ಪಾಠವನ್ನು ಮನದಟ್ಟು ಮಾಡುವ ಪ್ರಯತ್ನ ಬೇಕಾಗಿದೆ. ಅಕ್ಷರವಂತರು ಕೂಡ ಕಲಿತ ವಿದ್ಯೆಯ ಸಾರವನ್ನು ಮರೆತು ತಪ್ಪೆಸಗುವ ಪ್ರಸಂಗಗಳೇ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಎಲ್ಲ ಕಡೆಯೂ ವ್ಯತಿರಿಕ್ತ ಅನುಭವವೇ ಆಗುವ ಕಾರಣ ಎಲ್ಲೋ ಒಂದೆಡೆ ಜೀವನಮೌಲ್ಯವನ್ನು ಪ್ರತಿಪಾದಿಸುವ ವ್ಯಕ್ತಿ ಗೋಚರಿಸಿದಾಗ, ‘ಓಹ್, ಓಯಸಿಸ್!’ ಎಂಬ ಉದ್ಗಾರ ಹೊರಡುತ್ತದೆ.

ಬದುಕಿನ ಪಾಠವನ್ನು ಕಲಿಸದ ಕೊರತೆಯಿಂದಾಗಿ ಕೌಟುಂಬಿಕ ಸೌಖ್ಯವೂ ಮಾಯವಾಗುತ್ತಿದೆ. ಮಕ್ಕಳಿಂದ ದೂರವಾಗಿ ವೃದ್ಧಾಶ್ರಮಗಳಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿರುವ ಹಿರಿಯರ ಕಂಬನಿಯು ಎದೆಹಾಲು ಕುಡಿದ ಮಕ್ಕಳ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುವುದಿಲ್ಲ. ಪತಿ, ಪತ್ನಿ ಸಾಮರಸ್ಯವೆಂಬುದು ಮರೀಚಿಕೆಯಾಗುತ್ತಿದೆ. ಅಮೆರಿಕದಲ್ಲಿ ಬೆಳಿಗ್ಗೆ ಮದುವೆ, ಸಂಜೆ ವಿಚ್ಛೇದನ ಎಂಬ ಲೇಖನ ಅರವತ್ತು ವರ್ಷಗಳ ಹಿಂದೆ ನಮ್ಮಲ್ಲಿನ ಮಾಸಿಕವೊಂದರಲ್ಲಿ ಬಂದಿತ್ತು. ಓದಿ ನಕ್ಕವರಿದ್ದರು. ಆದರೆ ಈಗ ಭಾರತವೂ ಅಲ್ಲಿಗೆ ತಲುಪಿದೆ.

ನಾವು ಕಲಿಯುವ ಓದು ಮನುಷ್ಯತ್ವದ ಪ್ರಜ್ಞೆಯನ್ನು ಜಾಗೃತಗೊಳಿಸದಿದ್ದಲ್ಲಿ ಓದಿದ್ದು ವ್ಯರ್ಥ ಎಂದೇ ಪರಿಗಣಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT