ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕನ್ನಡವೂ ವಿಜ್ಞಾನ ಸಂವಹನವೂ

ಕನ್ನಡದಲ್ಲಿ ವಿಜ್ಞಾನದ ಫಲಪ್ರದ ಸಂವಹನಕ್ಕೆ ಸಂಕಲ್ಪಿಸೋಣ
Published 30 ಅಕ್ಟೋಬರ್ 2023, 19:30 IST
Last Updated 30 ಅಕ್ಟೋಬರ್ 2023, 19:30 IST
ಅಕ್ಷರ ಗಾತ್ರ

ವಿಜ್ಞಾನವು ಮನುಷ್ಯ ಜೀವನದ ಒಂದು ಮುಖ್ಯ ಭಾಗ. ಅದು ಜನಮಾನಸಕ್ಕೆ ಎಟುಕಬೇಕಾದ ಅನಿವಾರ್ಯ ಇದೆ. ಶಾಲೆ–ಕಾಲೇಜುಗಳಲ್ಲಿ ವಿಜ್ಞಾನ ಬೋಧನೆಯೆನೋ ಬಿರುಸಾಗಿದೆ. ಪ್ರಯೋಗಾಲಯಗಳು, ಭರಪೂರ ವಿಜ್ಞಾನ ಗ್ರಂಥಗಳುಳ್ಳ ಗ್ರಂಥಾಲಯಗಳು ಇವೆ, ಲ್ಯಾಪ್‍ಟಾಪ್‍ಗಳು ಮಿಂಚುತ್ತಿವೆ. ಆದರೆ, ವಿದ್ಯಾರ್ಥಿಗಳು ವಿಜ್ಞಾನವನ್ನು ಸಮರ್ಥವಾಗಿ ಕಲಿಯುತ್ತಿದ್ದಾರೆ ಎನ್ನುವುದನ್ನು ಈ ಅನುಕೂಲಗಳು ಸಾಬೀತುಪಡಿಸವು. ಶ್ರದ್ಧಾಸಕ್ತಿಯಿಂದ ವಿದ್ಯಾಲಯದಲ್ಲಿ ಕಲಿತದ್ದು, ಅಭ್ಯಾಸ ಮಾಡಿದ್ದು ಅವರಿಗೆ ಮನನವಾಗುವುದು ಮಾತ್ರವಲ್ಲದೆ, ಜನಸಾಮಾನ್ಯರ ಸಾಮಾನ್ಯ ಜ್ಞಾನವಾದಾಗಲೇ ಅದರ ಸಾರ್ಥಕ್ಯ.

ವಿಜ್ಞಾನ ನಿರಂತರ ಮುನ್ನಡೆಯುತ್ತಿದೆ. ವಿಜ್ಞಾನವು ಇಂಗ್ಲಿಷಿನಲ್ಲಿ ಮೊದಲು ಲಭಿಸುತ್ತದೆ. ತದನಂತರ ವಿಶ್ವದ ಇತರೆ ಭಾಷೆಗಳಿಗೆ ಸಲ್ಲುವುದು. ಅಷ್ಟು ಹೊತ್ತಿಗಾಗಲೆ ಇನ್ನಷ್ಟು ಸಂಶೋಧನೆಗಳು, ಆವಿಷ್ಕಾರಗಳು ಆಗಿರುತ್ತವೆ ಎನ್ನುವುದು ಬೇರೆ ಮಾತು. ಎಷ್ಟು ತ್ವರಿತವಾಗಿ ಅದು ತರ್ಜುಮೆಯಾಗಿ ಪ್ರಸರಣವಾಗುವುದೊ ಅಷ್ಟು ಉತ್ತಮ. ಭಾರತದಲ್ಲಿ ಶೇಕಡ 12ರಷ್ಟು ಜನ ಮಾತ್ರ ಇಂಗ್ಲಿಷ್ ಮಾತನಾಡಬಲ್ಲರು, ಬರೆಯಬಲ್ಲರು. ಹಾಗಾಗಿ ಭಾರತೀಯ ಭಾಷೆಗಳು ವಿಜ್ಞಾನ ಭಾಷೆಗಳೂ ಆಗಬೇಕಿವೆ. ಕನ್ನಡದ ಸಂದರ್ಭವನ್ನು ಅವಲೋಕಿಸಿದರೆ, ತರಗತಿಯ ಹೊರಗೆ ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳನ್ನೂ ಒಳಗೊಂಡಂತೆ ಎಲ್ಲವನ್ನೂ ಮಾತನಾಡುವುದು ಕನ್ನಡದಲ್ಲೇ! ವಿಜ್ಞಾನ ಕಲಿಕೆಗೆ ಇಂಗ್ಲಿಷ್ ಹೇಳಿಮಾಡಿಸಿದ ಭಾಷೆ ಎನ್ನುವುದು ಭ್ರಮೆ. ಕನ್ನಡಕ್ಕೆ ವಿಜ್ಞಾನ ಸಾಹಿತ್ಯಕ ಅಭಿವ್ಯಕ್ತಿಯಾಗುವ ಎಲ್ಲ ಅರ್ಹತೆಗಳಿದ್ದರೂ ಇಂಗ್ಲಿಷಿಗೆ ಜೋತುಬೀಳುವ ಪ್ರವೃತ್ತಿ ಮುಂದುವರಿದಿದೆ.

ಇಂಗ್ಲಿಷಿನಿಂದ ಅಥವಾ ಯಾವುದೇ ಅನ್ಯ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸುವಾಗ ಹಿನ್ನೆಲೆ ಗ್ರಹಿಸದಿದ್ದರೆ ಆಭಾಸ ಕಟ್ಟಿಟ್ಟ ಬುತ್ತಿ. ಎಷ್ಟೋ ವೇಳೆ, ಸಾಕ್ಷರರಿಗಿಂತ ನಿರಕ್ಷರರೇ ಕನ್ನಡದಲ್ಲಿ ಸೊಗಸಾಗಿ ವಿಜ್ಞಾನವನ್ನು ಪ್ರಸರಿಸಬಲ್ಲರು ಎನ್ನಿಸುತ್ತದೆ. ಗಾದೆಗಳ ಮೂಲಕ ಅವರು ವಿಜ್ಞಾನವನ್ನು ಸಂದರ್ಭಗೊಳಿಸುವ ಪರಿ ಅಚ್ಚರಿ ಮೂಡಿಸುತ್ತದೆ. 

ವಿಜ್ಞಾನ ಬೋಧಕರು ತೀರಾ ಪಠ್ಯಕ್ಕಂಟಿಕೊಳ್ಳದೆ ದಿನನಿತ್ಯದ ನಿದರ್ಶನಗಳನ್ನೇ ಆಡುಮಾತಿನಲ್ಲಿ ನೀಡಿದರೆ ಮಕ್ಕಳು ಸುಲಭವಾಗಿ ಗ್ರಹಿಸುತ್ತಾರೆ. ಹೊಲ, ಗದ್ದೆಗಳಲ್ಲಿ ಮಕ್ಕಳನ್ನು ರವಷ್ಟಾದರೂ ಅಡ್ಡಾಡಿಸದಿದ್ದರೆ ‘ಭತ್ತದ ಮರ’, ‘ಗೆಣಸಿನ ಗೊಂಚಲು’ ನಮೂನೆಯ ಎಡವಟ್ಟುಗಳು ಆದಾವು! ಅಕ್ಕಿಯ ಮೇಲೆ ಮೂರು ಬೆರಳು ನೀರಿನ ಮಟ್ಟವಿದ್ದರೆ ಅನ್ನ ಮಲ್ಲಿಗೆ ಹೂವಿನಂತೆ ಆಗುವುದೆಂಬ ಅನುಭವ ಪಾಕವಿಧಾನ ಮನೆಮಾತು.

1858ರಲ್ಲೇ ಕನ್ನಡದಲ್ಲಿ ‘ಗಣಿತ ವಿಜ್ಞಾನ’ ಎಂಬ ಕೃತಿಯನ್ನು ಮಂಗಳೂರಿನ ಜರ್ಮನ್ ಪ್ರೆಸ್ ಹೊರತಂದಿತ್ತು. ನಂತರ 1871ರಲ್ಲಿ ಪ್ರಾಣಿಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ. ಇತ್ತೀಚೆಗೆ ಯುವ ವಿಜ್ಞಾನ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ. ಸಾಹಿತ್ಯಾಂಕ ಮತ್ತು ವಿಜ್ಞಾನಾಂಕ ಜೋಡೆತ್ತಿನಂತೆ ಸಾಗಬಹುದೆಂಬ ಭರವಸೆ ಮೂಡಿದೆ. ನವಕರ್ನಾಟಕ ಪ್ರಕಾಶನ ಸಂಸ್ಥೆ ತನ್ನ ಐವತ್ತರ ಸಂಭ್ರಮಕ್ಕೆ ಕಳಶವಿಟ್ಟಂತೆ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ವನ್ನು 2011ರಲ್ಲಿ ಹೊರತಂದಿತು. 884 ಪುಟಗಳ ಈ ಕೃತಿ ನಿಘಂಟೆನ್ನುವುದಕ್ಕಿಂತಲೂ ಒಂದು ವಿಶ್ವಕೋಶವೇ ಆಗಿದೆ. ಇನ್ನಷ್ಟು ಪದಗಳ ಸೇರ್ಪಡೆಯಾಗಬೇಕೆನ್ನುವ ಸಂಸ್ಥೆಯ ಹಂಬಲ ಅದರ ಬದ್ಧತೆಗೆ ಹಿಡಿದ ಕನ್ನಡಿ. ವಿಜ್ಞಾನವನ್ನು ಜನಪ್ರಿಯಗೊಳಿಸುವುದೆಂದರೆ? ಬಗೆ ಬಗೆಯ ವಿಜ್ಞಾನದ ಹೊಳಹು, ಅರಿವು, ಗ್ರಹಿಕೆ ಹಾಗೂ ಸಂಶೋಧನೆಗಳನ್ನು ವಿಜ್ಞಾನ ತಿಳಿದವರು ವಿಜ್ಞಾನ ಪರಿಣತರಲ್ಲದವರಿಗೆ ಅರ್ಥವಾಗುವಂತೆ ಸಾದರಪಡಿಸುವುದು. ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮಹತ್ತರ ಸಾಂಸ್ಕೃತಿಕ ಹೊಣೆಗಾರಿಕೆ.

ವೈಜ್ಞಾನಿಕ ಚಿಂತನಾಮಾರ್ಗ ಹಸನಾಗುವಂತೆ ವಿಜ್ಞಾನವನ್ನು ಜನರಿಗೆ ತಲುಪಿಸುವ ಕ್ರಿಯೆಯ ಪರಿಷ್ಕರಣೆಯೂ ಆಗಿಂದಾಗ್ಗೆ ಆಗಬೇಕಿದೆ. ಇದು ಲಿಖಿತ ಸಾಹಿತ್ಯದ ಮೂಲಕವೇ ಆಗಬೇಕೆಂದಿಲ್ಲ. ಮೌಖಿಕ ಸಾಹಿತ್ಯದ ಮೂಲಕವೂ ಆದೀತು. ಬೀದಿನಾಟಕ, ಯಕ್ಷಗಾನ, ಲಾವಣಿ, ನೃತ್ಯ, ಕೇಳಿಕೆ, ಕಥೆ, ಹಾಡು ಮುಖಾಂತರವೂ ಆಗಬಹುದು.

ಕ್ರಿ.ಪೂ. 4ನೇ ಶತಮಾನದ ಖಗೋಳತಜ್ಞ ಯುಡೋಕ್ಷಸ್ ಎಂಬಾತನ ಸಾಧನೆ ಪ್ರಖರವಾದರೂ ಜನಪ್ರಿಯಗೊಳ್ಳಲಿಲ್ಲ. ಆದರೆ, ಒಂದು ಶತಮಾನದ ನಂತರ ಹಿಪ್ಪರ್ಕಸ್ ಎಂಬ ಹವ್ಯಾಸಿ ಕವಿ ರಚಿಸಿದ ‘ಫಿನೊಮೆನ’ ಎಂಬ ಹಾಡಿನ ಮೂಲಕವಷ್ಟೆ ಅದರ ಮೌಲ್ಯ ಅರ್ಥವಾಗಿದ್ದು. ವಿಜ್ಞಾನ ಲೇಖಕರಿಗೆ ಸ್ಪಷ್ಟತೆ ಇರಬೇಕು. ಸಂಕ್ಷಿಪ್ತತೆಗೆ ಭಂಗ ತರುವ ಅನಗತ್ಯ ರೂಪಕ ಮತ್ತು ಹೋಲಿಕೆಗಳಿಗೆ ಲಗತ್ತಾಗದಂತೆ ಎಚ್ಚರ ವಹಿಸಿಬೇಕು. ವಿಜ್ಞಾನ ಸಂವಹನ ಮುಖ್ಯವಾಗಬೇಕೆ ವಿನಾ ಪ್ರಭಾವ, ಪಾಂಡಿತ್ಯ ಪ್ರದರ್ಶನವಲ್ಲ. ಸರಳ ಭಾಷೆಯೇ ಜನಪ್ರಿಯ ವಿಜ್ಞಾನ ಭಾಷೆ. ಇಂಗ್ಲಿಷಿನಿಂದ ಕನ್ನಡಕ್ಕೆ ತರುವಾಗ ಪಾರಿಭಾಷಿಕ ಪದಗಳು ಸಮಸ್ಯೆಯೇನೂ ಅಲ್ಲ. ತೀರಾ ಮಡಿವಂತಿಕೆ ತೋರದೆ ಕೆಲವನ್ನು ಹಾಗೆಯೇ ಉಳಿಸಿಕೊಳ್ಳಬಹುದು. ‘ಅಯಾನು’, ‘ಐಸೊಟೋಪ್’, ‘ಫ್ರಿಜ್’... ಇದ್ದಂತೆ ಉಳಿಸಿಕೊಂಡ ಪದಗಳಿಗೆ ಉದಾಹರಣೆಗಳು. ಗಿಯರ್ ವ್ಹೀಲ್ ‘ಹಲ್ಲು ಚಕ್ರ’ ಆಗುವ ಆಭಾಸಕ್ಕಿಂತ ಅಂತೆಯೇ ಇದ್ದರಾಯಿತಲ್ಲ.

ವಿಜ್ಞಾನ ಸಂಗತಿಗಳನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳಲಾರರೆಂದೇ ಕೆಲವು ವಿಜ್ಞಾನಿಗಳು ಭಾವಿಸುತ್ತಾರೆ. ಆದರೆ, ವಿಜ್ಞಾನಿಗಳು ತಾಂತ್ರಿಕ ಪದಗಳ ಗಡಿಬಿಡಿಯಿಲ್ಲದೆ ಸಂವಹನವನ್ನು ಉಭಯಕುಶಲೋಪರಿಯಂತೆ ನಿರ್ವಹಿಸಿದರೆ ಖಂಡಿತ ಜನ ಇಷ್ಟಪಡುತ್ತಾರೆ. ಚಂದ್ರನ ಮೇಲೆ ಭಾರತವು ಅನ್ವೇಷಣಾ ವಾಹನ ಇಳಿಸಿರುವ ಯಶಸ್ಸಿನ ಹಾಗೂ ರಾಜ್ಯಕ್ಕೆ ಕರ್ನಾಟಕ ನಾಮಕರಣವಾಗಿ ಐದು ದಶಕಗಳು ಸಂದ ಸಡಗರ ಈಗ. ಈ ಉತ್ಸಾಹಕ್ಕೆ ಕನ್ನಡದಲ್ಲಿ ವಿಜ್ಞಾನದ ಫಲಪ್ರದ ಸಂವಹನಕ್ಕೆ ಸಂಕಲ್ಪಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT