ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾನುಪಾತ ಕುಸಿತ: ಧೋರಣೆಯೇ ಶತ್ರು

Last Updated 20 ಫೆಬ್ರುವರಿ 2019, 20:14 IST
ಅಕ್ಷರ ಗಾತ್ರ

ನಾಗರಿಕ ನೋಂದಣಿ ವ್ಯವಸ್ಥೆಯ (ಸಿಆರ್‌ಎಸ್‌) ಮಾಹಿತಿ ಆಧರಿಸಿ ಪ್ರಕಟಿಸಿರುವ ವರದಿಯಲ್ಲಿ ದೇಶದ ರಾಜ್ಯ ಮತ್ತು ಜಿಲ್ಲಾವಾರು ಲಿಂಗಾನುಪಾತದ ವಿವರಗಳಿವೆ.

ಪತ್ರಿಕೆಗಳಲ್ಲಿ ರಾಜ್ಯವಾರು ಲಿಂಗಾನುಪಾತದ ಬಗ್ಗೆ ಚರ್ಚೆ ನಡೆದಿದೆ (ಪ್ರ.ವಾ., ಫೆ. 19). ಕರ್ನಾಟಕದಲ್ಲಿನ ಜನನ ಸಂದರ್ಭದ ಲಿಂಗಾನುಪಾತ 2007ರಲ್ಲಿ ಪ್ರತಿ ಸಾವಿರ ಗಂಡು ಮಕ್ಕಳ ಜನನಕ್ಕೆ ಎದುರಾಗಿ 1,004 ಹೆಣ್ಣು ಮಕ್ಕಳ ಜನನವಾಗಿದ್ದರೆ, 2016ರಲ್ಲಿ ಇದು 896ಕ್ಕೆ ಆಘಾತಕಾರಿಯಾಗಿ ಕುಸಿದಿದೆ. ಅಂದರೆ, 10 ವರ್ಷಗಳಲ್ಲಿ ಲಿಂಗಾನುಪಾತ 108 ಅಂಶಗಳಷ್ಟು ಕಡಿಮೆಯಾಗಿದೆ.

ಲಿಂಗಾನುಪಾತ ಕುಸಿತವು ಲಿಂಗ ಅಸಮಾನತೆಯ ಪರಮೋಚ್ಚ ಸೂಚಿ. ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಲಿಂಗಾನುಪಾತ ಕುಸಿಯುತ್ತಿರುವುದು ಹೊಸ ಸಂಗತಿಯೇನಲ್ಲ. ಆದರೆ ಜನನದ ಸಂದರ್ಭದಲ್ಲಿ ಈಗ ಉಂಟಾಗಿರುವ ಕುಸಿತವು ಲಿಂಗಾನುಪಾತದ ಕುಸಿತ ತಡೆಯಲು ಸರ್ಕಾರಗಳು ತೆಗೆದುಕೊಂಡ ಕ್ರಮಗಳ (ಉದಾ: ಕರ್ನಾಟಕ 2006ರಲ್ಲಿ ಆರಂಭಿಸಿದ ಭಾಗ್ಯಲಕ್ಷ್ಮಿ) ವೈಫಲ್ಯದ ಸೂಚಿಯೂ ಆಗಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಜನನ ಸಂದರ್ಭದ ಲಿಂಗಾನುಪಾತದ ಸ್ಥಿತಿಯಲ್ಲಿ ಕೆಲವು ವಿಚಿತ್ರ ಅಂಶಗಳು ಬೆಳಕಿಗೆ ಬಂದಿವೆ.

ಅತ್ಯಂತ ಹಿಂದುಳಿದ ಪ್ರದೇಶದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣದ ಲಿಂಗಾನುಪಾತ ದಾಖಲಾಗಿರುವುದು ಆಶ್ಚರ್ಯದ ಸಂಗತಿ. ಮತ್ತೊಂದು ಆಶ್ಚರ್ಯದ ಸಂಗತಿಯೆಂದರೆ, ಅತ್ಯಂತ ಕೆಳಮಟ್ಟದ ಲಿಂಗಾನುಪಾತವೂ ಇದೇ ವಿಭಾಗದ ಬೀದರ್ ಜಿಲ್ಲೆಯಲ್ಲಿ ದಾಖಲಾಗಿದೆ. ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ 2016ರ ಲಿಂಗಾನುಪಾತ ಕ್ರಮವಾಗಿ 998 ಮತ್ತು 989ರಷ್ಟಿದ್ದರೆ ಬೀದರ್‌ನಲ್ಲಿ ಇದು 743 ಇದೆ. ಎರಡು ಅತಿಗಳು ಕಲಬುರ್ಗಿ ವಿಭಾಗದಲ್ಲಿ ಕಂಡುಬಂದಿವೆ.

ರಾಜ್ಯದಲ್ಲಿನ 30 ಜಿಲ್ಲೆಗಳ ಪೈಕಿ 18ರಲ್ಲಿ ಲಿಂಗಾನುಪಾತ 2016ರಲ್ಲಿ 900ಕ್ಕಿಂತ ಅಧಿಕವಾಗಿದ್ದರೆ, ಉಳಿದ 12 ಜಿಲ್ಲೆಗಳಲ್ಲಿ 900ಕ್ಕಿಂತ ಕಡಿಮೆಯಿದೆ. ಲಿಂಗಾನುಪಾತ 900ಕ್ಕಿಂತ ಅಧಿಕವಿರುವ ಜಿಲ್ಲೆಗಳಲ್ಲಿ 12 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ, 6 ಜಿಲ್ಲೆಗಳು ಮಾತ್ರ ಉತ್ತರ ಕರ್ನಾಟಕಕ್ಕೆ ಸೇರಿವೆ. ಆದರೆ ಲಿಂಗಾನುಪಾತ 900ಕ್ಕಿಂತ ಕಡಿಮೆಯಿರುವ 12 ಜಿಲ್ಲೆಗಳಲ್ಲಿ 5 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ, 7 ಉತ್ತರ ಕರ್ನಾಟಕಕ್ಕೆ ಸೇರಿವೆ. ಇದಕ್ಕೆ ಪ್ರತಿಯಾಗಿ ಲಿಂಗಾನುಪಾತ ಅತ್ಯಂತ ಕೆಳಮಟ್ಟದಲ್ಲಿರುವ ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಿದ್ದರೆ ಅವು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಕಡಿಮೆಯಿವೆ.

ಈ ವರದಿಯ ಮುಖ್ಯಾಂಶಗಳು ಹೆಣ್ಣು ಭ್ರೂಣ ಹತ್ಯೆ ರಾಜ್ಯದಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವುದನ್ನು ತೋರಿಸುತ್ತವೆ. ಲಿಂಗಾನುಪಾತದ ಆಘಾತಕಾರಿ ಕುಸಿತಕ್ಕೆ ವಿವಿಧ ಬಗೆಯ ಲಿಂಗ ತಾರತಮ್ಯಗಳ ಜೊತೆಗೆ ಒಂದು ಮುಖ್ಯ ಕಾರಣ ಹೆಣ್ಣು ಭ್ರೂಣ ಹತ್ಯೆ. ಗರ್ಭಾವಸ್ಥೆಯಲ್ಲಿ ಭ್ರೂಣದ ಲಿಂಗ ಪತ್ತೆ ಮಾಡುವ ತಂತ್ರಜ್ಞಾನ ಸಂಸ್ಥೆಗಳು ಇಂದು ಬೃಹತ್‌ ಉದ್ದಿಮೆಯಾಗಿ ಬೆಳೆದಿವೆ. ಸಂತಾನೋತ್ಪತ್ತಿ ತಂತ್ರಜ್ಞಾನದ ದುರುಪಯೋಗ ತಡೆಗೆ ಸರ್ಕಾರವು ಬಹಳ ಹಿಂದೆಯೇ ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರಜ್ಞಾನ (ಲಿಂಗ ಆಯ್ಕೆ ನಿಷೇಧ) ಕಾನೂನನ್ನು ಜಾರಿಗೆ ತಂದಿದ್ದರೂ ಅದೊಂದು ದಂಧೆಯಾಗಿ ಬೆಳೆಯುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಗಂಡು ಮಗುವಿನ ಬಗೆಗಿನ ಅತಿಯಾದ ವ್ಯಾಮೋಹವು ಲಿಂಗ ತಾರತಮ್ಯದ ಮೂಲದಲ್ಲಿದೆ. ಇದನ್ನು ಸರಿಪಡಿಸದೆ ಶಾಸನಗಳ ಮೂಲಕ ಲಿಂಗತಾರತಮ್ಯ ಸರಿಪಡಿಸುವುದು ಅಸಾಧ್ಯ. ಸರ್ಕಾರದ ಕ್ರಮಗಳಿಗೆ ಸಾಮಾಜಿಕ ಸಂಗತಿಗಳು ಪೂರಕವಾಗಿದ್ದರೆ ಮಾತ್ರ ಇದು ಸಾಧ್ಯ.

ಮೇಲಿನ ವಿವರಗಳಿಂದ ಒಡಮೂಡಿರುವ ಒಳನೋಟ:

* ಲಿಂಗಾನುಪಾತ ಕುಸಿತದ ಸಮಸ್ಯೆಯು ರಾಜ್ಯವ್ಯಾಪಿಯಾಗಿದೆ.

* ಸರ್ಕಾರಗಳು ಹೆಣ್ಣು ಮಕ್ಕಳ ಜನನ ಮತ್ತು ರಕ್ಷಣೆಗೆ ಏನೆಲ್ಲ ಕ್ರಮಗಳನ್ನು ತೆಗೆದುಕೊಂಡರೂ ಸಮಸ್ಯೆ ಉಲ್ಬಣಿಸುತ್ತಿರುವುದು ಸದರಿ ಕ್ರಮಗಳ ವೈಫಲ್ಯವನ್ನು ತೋರಿಸುತ್ತದೆ. ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತದೆ.

* ಈ ಸಮಸ್ಯೆಯು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರವಾಗಿದೆ. ನಿವಾರಣೆಗೆ ವಿಶೇಷ ಆಸ್ಥೆ ಬೇಡುತ್ತದೆ.

* ಗರ್ಭಾವಸ್ಥೆಯಲ್ಲಿಯೇ ಭ್ರೂಣದ ಲಿಂಗ ಪತ್ತೆ ಮಾಡುವ ಮತ್ತು ಹೆಣ್ಣು ಭ್ರೂಣ ಹತ್ಯೆ ಮಾಡುವ ತಂತ್ರಜ್ಞಾನದ ದುರುಪಯೋಗ ವ್ಯಾಪಕವಾಗಿದೆ. ಇದನ್ನು ತಡೆಗಟ್ಟಲು ಜಾರಿಗೆ ತಂದಿರುವ ಕಾನೂನುಗಳ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇದನ್ನು ಬಿಗಿಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತಿಸಬೇಕಾಗಿದೆ.

ಕೊನೆಯದಾಗಿ, ಲಿಂಗಾನುಪಾತದ ಈ ವಿವರಗಳು ಕಳವಳಕಾರಿಯಾಗಿರುವುದು ಕೌಟುಂಬಿಕ ಸಂಬಂಧದ ಮತ್ತು ಭಾವನಾತ್ಮಕವಾದ ಸಂಗತಿಯಾಗಿದೆ. ಇದನ್ನು ಸರಿಪಡಿಸುವುದಕ್ಕೆ ಶಾಸನಾತ್ಮಕ ಕ್ರಮಗಳು ಅಗತ್ಯ. ಇವು ಒಂದು ಹಂತದವರೆಗೆ ಕೆಲಸ ಮಾಡಬಹುದು.

ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ತಾರತಮ್ಯ ಧೋರಣೆಯಲ್ಲಿ ಬದಲಾವಣೆಯಾಗಬೇಕು. ಈ ವಿಷಯದಲ್ಲಿ ಸಾಮಾಜಿಕ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲವು. ಇವು ದೀರ್ಘಾವಧಿ ಕ್ರಮ ನಿಜ. ಇದರ ಜೊತೆಗೆ ಶಾಸನಾತ್ಮಕ ಕ್ರಮಗಳನ್ನೂ ಬಿಗಿಗೊಳಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT