ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ|ಪೋಷಕರೇ ಶಿಕ್ಷಕರು, ಮನೆಯೇ ಶಾಲೆ

ಕೊರೊನಾ ಸೋಂಕು ತಂದೊಡ್ಡಿರುವ ಲಾಕ್‌ಡೌನ್‌ನಂತಹ ವಿಷಮ ಸನ್ನಿವೇಶಗಳನ್ನು ಅನುಕೂಲಕರ ಅವಕಾಶಗಳಾಗಿ ಮಾರ್ಪಡಿಸಿಕೊಳ್ಳಬೇಕಿದೆ
Last Updated 18 ಮೇ 2020, 21:58 IST
ಅಕ್ಷರ ಗಾತ್ರ

ಕೋವಿಡ್-19ರ ಕಾರಣದಿಂದ ವಿಶ್ವದ 186 ದೇಶಗಳಲ್ಲಿನ ಶಾಲಾ ಕಾಲೇಜುಗಳು ಮುಚ್ಚಿದ್ದು, 130 ಕೋಟಿಗೂ ಅಧಿಕ ವಿದ್ಯಾರ್ಥಿಗಳು (ಜಗತ್ತಿನ ಶೇ 72ರಷ್ಟು) ಶಾಲಾ ಶಿಕ್ಷಣದಿಂದ ವಂಚಿತರಾಗಿರುವುದು ಮಾಧ್ಯಮ ವರದಿಗಳಿಂದ ತಿಳಿಯುತ್ತದೆ. ಥಾಯ್ಲೆಂಡ್‌, ನೆದರ್‌ಲ್ಯಾಂಡ್ಸ್‌, ಜಪಾನ್, ಆಸ್ಟ್ರೇಲಿಯಾ, ಸ್ಕಾಟ್‌ಲೆಂಡ್ ಮುಂತಾದ ಕೆಲವು ದೇಶಗಳಲ್ಲಿ ಭಯದ ನೆರಳಿನಲ್ಲಿಯೇ ಶಾಲೆಗಳು ಪುನರಾ
ರಂಭವಾಗಿವೆ. ಸಂತಸ, ಉತ್ಸಾಹದ ಚಿಲುಮೆಯಂತೆ ಇರಬೇಕಾದ ಮಕ್ಕಳು ಅಸಹಜ ಭಯ, ಆತಂಕ, ದುಗುಡದ ಮಧ್ಯೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯ ಉಂಟಾಗಿದೆ.

ನಮ್ಮ ದೇಶದಲ್ಲಿ ಶಾಲೆಗಳು ಪುನರಾರಂಭವಾದರೂ ಒಂದಷ್ಟು ಹೆಚ್ಚಿನ ರೀತಿಯ ಮುಂಜಾಗ್ರತಾ ಹೆಜ್ಜೆಗಳನ್ನು ಇಡಬೇಕಾದುದು ಅನಿವಾರ್ಯವಾಗಿದೆ. ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳಲ್ಲಿ ಮಕ್ಕಳನ್ನು ದೂರ ದೂರ ಕೂರಿಸಬಹುದು. ಆದರೆ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಶಾಲೆಗಳಲ್ಲಿ ಎರಡು ಪಾಳಿಗಳಲ್ಲಿ ಶಾಲೆಗಳನ್ನು ನಡೆಸಬೇಕಾಗಬಹುದು. ಆದಾಗ್ಯೂ ಮಕ್ಕಳು ಇತರ ಮಕ್ಕಳೊಂದಿಗೆ ಸೇರಿ ಆಟ, ಪಾಠಗಳನ್ನು ಸಹಜವಾಗಿ ಆಡುವ ಮನೋಭಾವ ಉಳ್ಳವರಾಗಿರುತ್ತಾರೆ. ಅವರಿಗೆ ಇತರ ಮಕ್ಕಳೊಂದಿಗೆ ಸ್ಪರ್ಶ ಸಾಧಿಸದೇ ಬೆರೆತು, ಎಚ್ಚರಿಕೆಯ ಸಹಿತ ಒಡನಾಡುವುದನ್ನು ಕಲಿಸುವುದು ಸವಾಲೇ ಸರಿ. ಅದರಲ್ಲೂ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಈ ಕುರಿತ ತಿಳಿವಳಿಕೆ, ಜಾಗೃತಿ ಮೂಡಿಸುವುದು ಇನ್ನೂ ಕಠಿಣ. ಹೀಗೆ ನೀಡುವ ತಿಳಿವಳಿಕೆ ಹಾಗೂ ಮಾಹಿತಿಯು ಮಕ್ಕಳಲ್ಲಿ ಭಯ ಹುಟ್ಟಿಸದೇ ಅರಿವು ಮೂಡಿಸುವಂತೆ ಮಾಡುವ ಗುರುತರ ಹೊಣೆ ಶಿಕ್ಷಕರದ್ದಾಗಿದೆ. ಜೊತೆಗೆ ಇದಕ್ಕೆ ಪೂರಕವಾಗಿ ಪೋಷಕರೂ ಈ ಕುರಿತು ಒಂದಷ್ಟು ತಿಳಿವಳಿಕೆಯನ್ನು ಮನೆಯಿಂದಲೇ ನೀಡುವುದು ನೆರವಾಗಲಿದೆ.

ಶಾಲೆಗಳ ಪುನರಾರಂಭವು ದೀರ್ಘ ಅವಧಿಯವರೆಗೆ ಆಗದಿದ್ದಲ್ಲಿ ಮಕ್ಕಳ ಕಲಿಕೆಯ ನಿರಂತರತೆಗೆ ಧಕ್ಕೆಯಾಗುತ್ತದೆ. ಅದರಲ್ಲೂ ಮನೆಯಲ್ಲಿ ಯಾವುದೇ ರೀತಿಯ ಶೈಕ್ಷಣಿಕ ಬೆಂಬಲ ನೀಡಲು ಸಾಧ್ಯವಾಗದ ಕೂಲಿ ಕಾರ್ಮಿಕರು ಹಾಗೂ ಅನಕ್ಷರಸ್ಥ ಕುಟುಂಬಗಳ ಮಕ್ಕಳಿಗೆ ತೀವ್ರತರನಾದ ಶೈಕ್ಷಣಿಕ ನಷ್ಟ ಉಂಟಾಗುತ್ತದೆ. ಕಡಿಮೆ ಶೈಕ್ಷಣಿಕ ಸಾಧನೆ ತೋರುವ ವಿದ್ಯಾರ್ಥಿಗಳು ಕಷ್ಟಪಟ್ಟು ಗಳಿಸಿದ ಕಲಿಕೆಯಲ್ಲಿ ಉಂಟಾಗುವ ನಷ್ಟವನ್ನು ಸರಿದೂಗಿಸುವುದು ಶಿಕ್ಷಕರಿಗೆ ಸಮಸ್ಯೆ ಹಾಗೂ ಸವಾಲಾಗಿಯೂ ಪರಿಣಮಿಸುತ್ತದೆ.

ಲಾಕ್‍ಡೌನ್‍ಗೂ ಪೂರ್ವದಲ್ಲಿ ಶಾಲೆ ತೊರೆದವರನ್ನು ಮತ್ತೆ ಶಾಲೆಗಳತ್ತ ಮುಖ ಮಾಡುವಂತೆ ಮಾಡುವುದು ಕಠಿಣ ಕೆಲಸವಾಗಬಹುದು. ಅವರ ಜೊತೆಗೆ ಇನ್ನಷ್ಟು ಮಕ್ಕಳು ಹೊಸದಾಗಿ ಶಾಲೆಯಿಂದ ಹೊರಗುಳಿಯಲೂಬಹುದು. ಈ ಹಿನ್ನೆಲೆಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೋಷಕರ ಬಳಿಯಿರಬಹುದಾದ ಮೊಬೈಲ್ ಫೋನ್, ರೇಡಿಯೊ ಇತ್ಯಾದಿಗಳನ್ನು ಬಳಸಿಕೊಂಡು ಶಿಕ್ಷಕರ ನೆರವಿ
ನಿಂದ ಮಕ್ಕಳಿಗೆ ಮನೆಯಲ್ಲಿಯೇ ಕಲಿಕಾ ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸಲು ಎನ್‌ಸಿಇಆರ್‌ಟಿ ಮಾರ್ಗಸೂಚಿ ನೀಡಿದೆ. ಆನ್‍ಲೈನ್ ಮೂಲಕ ಗೃಹಾಧಾರಿತವಾಗಿ ನೀಡುವ ಶಿಕ್ಷಣವು ಅನೇಕ ಮಿತಿಗಳನ್ನು ಹೊಂದಿದ್ದಾಗ್ಯೂ ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ತಾತ್ಕಾಲಿಕ, ಅನಿವಾರ್ಯ ಕ್ರಮವಾಗಿ ಮಾರ್ಪಟ್ಟಿದೆ.

ನಮ್ಮ ರಾಜ್ಯದಲ್ಲಿ ಈಗಾಗಲೇ ಮಕ್ಕಳವಾಣಿ ಯುಟ್ಯೂಬ್ ಚಾನೆಲ್ ಆರಂಭಿಸಿ, ಆ ಮೂಲಕ ಮಕ್ಕಳಿಗೆ ಮನರಂಜನಾತ್ಮಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಚಂದನ ವಾಹಿನಿ ಮೂಲಕವೂ ಬಿತ್ತರ ಮಾಡಲಾಗುತ್ತಿದೆ. ಈ ವಾಹಿನಿಯ ಮೂಲಕ ಹತ್ತನೇ ತರಗತಿಗೆ ಪ್ರಸಾರ ಮಾಡಲಾಗುತ್ತಿರುವ ಪರೀಕ್ಷಾ ಸಿದ್ಧತೆಯ ಪಾಠಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂತರ್ಜಾಲ ಸೌಲಭ್ಯ ಇಲ್ಲದ ಕುಟುಂಬಗಳು ದೂರದರ್ಶನ ಹಾಗೂ ರೇಡಿಯೊ ಬಳಕೆಯ ಮೂಲಕ ಕೈಗೊಳ್ಳಬಹುದಾದ ಪೂರಕ ಪಾಠ ಬೋಧನೆಯ ಚಟುವಟಿಕೆಗಳಿಂದ ಅನುಕೂಲ ಪಡೆಯಬಹುದಾಗಿದೆ. ಆದರೆ ಈ ವಿಧಾನದಲ್ಲಿ ಕಿರಿಯ ಹಂತದ ತರಗತಿಗಳ ಮಕ್ಕಳ ಕಲಿಕೆಯು ನಿಜಕ್ಕೂ ಸವಾಲೇ ಸರಿ. ಆದಾಗ್ಯೂ ಕೆಲವೊಮ್ಮೆ ವಿಷಮ ಸನ್ನಿವೇಶಗಳನ್ನು ಅನುಕೂಲಕರ ಅವಕಾಶಗಳಾಗಿ ಮಾರ್ಪಡಿಸಿಕೊಳ್ಳುವ ಜಾಣ್ಮೆ ತೋರಬಹುದಾಗಿದೆ. ಈ ನಿಟ್ಟಿನಲ್ಲಿ ದೂರದರ್ಶನ ಹಾಗೂ ಇತರ ಮೂಲಗಳಿಂದ ಬಿತ್ತರವಾಗುವ ಪಾಠಗಳ ಮೂಲಕ ಅನಕ್ಷರಸ್ಥ ಪೋಷಕರು ತಮ್ಮ ಮಕ್ಕಳ ಜೊತೆ ಸೇರಿ ಓದು, ಬರಹ, ಲೆಕ್ಕಾಚಾರ, ಜೀವನ ಕೌಶಲ ಇತ್ಯಾದಿ ಕೆಲವು ಮೂಲ ಕಲಿಕಾಂಶಗಳನ್ನು ತಾವೂ ಕಲಿತು, ಮಕ್ಕಳಿಗೆ ಕಲಿಸುವ ರೀತಿಯ ‘ಕಲಿ-ಕಲಿಸು ಯೋಜನೆ’ ರೂಪಿಸಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯ ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ.

ಪೋಷಕರ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರಲ್ಲಿ ಇರಬಹುದಾದ ಆತಂಕ, ಭಯ ನೀಗಿಸಿ, ಅವರನ್ನು ಕಲಿಕೆಯಲ್ಲಿ ಹಾಗೂ ಅನುಪಾಲನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೋವಿಡ್ ಆತಂಕ ದೂರ ಆಗುವವರೆಗೆ ಪೋಷಕರು ಅನಿವಾರ್ಯವಾಗಿ ತಾವೇ ಶಿಕ್ಷಕರಾಗಿ ಹಾಗೂ ತಮ್ಮ ಮನೆಯನ್ನೇ ಶಾಲೆಯನ್ನಾಗಿಸುವ ಕಾರ್ಯ ನಿರ್ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT