ಸೋಮವಾರ, ಜುಲೈ 4, 2022
24 °C
ತಂತ್ರಜ್ಞಾನದ ವ್ಯಾಪಕತೆಯನ್ನೇ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಮಾರುಕಟ್ಟೆ ವಲಯವು ಬಳಕೆದಾರರನ್ನೇ ಬಂಡವಾಳವನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ

ತಂತ್ರಜ್ಞಾನ ಹಾಗೂ ನಮ್ಮತನದ ಮಾರಾಟ

ಗೀತಾವಸಂತ್ ಇಜಿಮಾನ್ Updated:

ಅಕ್ಷರ ಗಾತ್ರ : | |

ಇತಿಹಾಸ ತರಗತಿಯಲ್ಲೋ ಅರ್ಥ ಶಾಸ್ತ್ರದ ತರಗತಿಯಲ್ಲೋ ವಸ್ತುವಿನಿಮಯ ಪದ್ಧತಿಯ (ಬಾರ್ಟರ್‌) ಸ್ವರೂಪ ಹಾಗೂ ಪ್ರಕ್ರಿಯೆಗಳ ಬಗ್ಗೆ ಎಲ್ಲರೂ ಓದಿರುತ್ತೇವೆ. ಹಸು ಕೊಟ್ಟರೆ ಭತ್ತ, ಬೆಳೆದ ಬೆಳೆಯ ಜೊತೆಗೆ ಗೃಹೋಪಯೋಗಿ ವಸ್ತುಗಳ ವಿನಿಮಯ... ಇತ್ಯಾದಿ. ಇದೀಗ ಅತ್ಯಾಧುನಿಕ ಬಂಡವಾಳಶಾಹಿ ವಸ್ತುವಿನಿಮಯ ಕಾಲಘಟ್ಟದಲ್ಲಿ ನಾವಿದ್ದೇವೆ. ಒಂದೊಮ್ಮೆ ನಾವು ಮೊಬೈಲ್, ಕಂಪ್ಯೂಟರ್ ಹಾಗೂ ಅದನ್ನು ಬಳಕೆಗೆ ಯೋಗ್ಯಮಾಡುವ ಆ್ಯಪ್, ಸಾಫ್ಟ್‌ವೇರ್‌ಗಳನ್ನು ಖರೀದಿ ಮಾಡಿದೆವೆಂದರೆ ಅದರ ಜೊತೆಗೆ ನಾವೂ ಬಿಕರಿಯಾಗಿದ್ದೇವೆ ಎಂದರ್ಥ. ಕೊಂಡುಕೊಂಡ ವಸ್ತುವಿನ ಬದಲಾಗಿ ನಮ್ಮ ಸಮಯ, ಚಿಂತನೆ, ಯೋಚನೆ, ಖರೀದಿ ನಿರ್ಧಾರ ಎಲ್ಲವನ್ನೂ ನಮಗರಿವಿಲ್ಲದೆ ವಿನಿಮಯ ಮಾಡಿಕೊಂಡಾಗಿರುತ್ತದೆ. ಈ ಎಲ್ಲಾ ತಂತ್ರಜ್ಞಾನ ಮಾರುಕಟ್ಟೆಗಳು ತಮ್ಮ ಗ್ರಾಹಕರ ಮಾಹಿತಿಯನ್ನು ವಿವಿಧ ಕಂಪನಿಗಳ ಜೊತೆ ‘ಶೇರ್’ (ಮಾರಾಟ ಅನ್ನೋದಕ್ಕೆ ಅವರು ಬಳಸುವ ಪರ್ಯಾಯ ಪದ) ಮಾಡಿಯಾಗಿರುತ್ತದೆ. ಗ್ರಾಹಕರ ಡೇಟಾಬೇಸ್ ಅವರ ಅತ್ಯಮೂಲ್ಯ ಆಸ್ತಿಯಾಗಿರುತ್ತದೆ. ಗ್ರಾಹಕರು ಬಳಕೆ ಮಾಡುವ ತಂತ್ರಜ್ಞಾನದ ಮೂಲಕವೇ ಅವರನ್ನು ಇನ್ನಷ್ಟು ಖರೀದಿಗೆ ಇಳಿಸಲು ಇತರ ಕಂಪನಿಗಳು ಪೈಪೋಟಿಗೆ ಇಳಿಯುತ್ತವೆ.

ಕೊಡು– ಕೊಳ್ಳುವಿಕೆ ಎಂಬ ಅರ್ಥಶಾಸ್ತ್ರ ಆರಂಭವಾದುದೇ ವಸ್ತುವಿನಿಮಯ ಪದ್ಧತಿಯ ಮೂಲಕ. ಕಾಲ ಸರಿದಂತೆ ಅರ್ಥವ್ಯವಸ್ಥೆಯ ಸ್ವರೂಪ ಬದಲಾಯಿತು. ಹಣವೆಂಬ ‘ಮೌಲ್ಯ’ ಬಳಕೆಗೆ ಬಂತು. ಬೇಡಿಕೆ ಹಾಗೂ ಪೂರೈಕೆ ಥಿಯರಿಗಳು ಹುಟ್ಟಿಕೊಂಡವು, ಕಾಲಾಂತರದಲ್ಲಿ ಹೊಸ ತಂತ್ರಜ್ಞಾನದ ಜೊತೆಗೆ ಬೃಹತ್ ಪ್ರಮಾಣದಲ್ಲಿ ವಸ್ತುಗಳನ್ನು ಉತ್ಪಾದನೆ ಮಾಡುವ ಕೈಗಾರಿಕೆಗಳು ಹುಟ್ಟಿಕೊಂಡವು, ಬಂಡವಾಳಶಾಹಿ ಮಾರುಕಟ್ಟೆಯ ಬಿರುಗಾಳಿಗೆ ಚಿಲ್ಲರೆ ವ್ಯಾಪಾರಿಗಳು ಬೇರುಸಹಿತ ಕಿತ್ತುಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.

1991ರ ಸುಮಾರಿಗೆ ಚಾಲ್ತಿಗೆ ಬಂದ ಜಾಗತೀಕರಣ ಎಂಬ ‘ಭವ ಬಂಧನ’ವಿಲ್ಲದ ಅಂತರರಾಷ್ಟ್ರಿಯ ನೀತಿಯ ಜೊತೆಜೊತೆಗೆ ಕಾಲಿಟ್ಟದ್ದು ಮಾಹಿತಿ ತಂತ್ರಜ್ಞಾನವೆಂಬ ಮಹಾನ್ ಜಾಲ. ಈ ಜಾಲದೊಳಗೆ ಎಲ್ಲರೂ ಬೀಳಲೇ ಬೇಕಾದ ಅನಿವಾರ್ಯತೆ. ಇಲ್ಲದಿದ್ದರೆ ‘ಔಟ್ ಆಫ್ ರೇಸ್’ ಅಥವಾ ‘ನಾಗರಿಕ ಅನಕ್ಷರಸ್ಥ’ ಎನ್ನುವ ಹಣೆಪಟ್ಟಿ ಹೊತ್ತುಕೊಳ್ಳಬೇಕಾದ ಪರಿಸ್ಥಿತಿ. ಹೊಸ ತಂತ್ರಜ್ಞಾನ ನನ್ನದಾಗಬೇಕು ಎಂಬ ಹುಮ್ಮಸ್ಸಿನಿಂದ ಖರೀದಿಗಿಳಿದವರು ಕೆಲವರಾದರೆ, ಗುಂಪಿನಲ್ಲಿ ಗೋವಿಂದ ಎನ್ನುವಂತೆ ಓಟದಿಂದ ನಾನ್ಯಾಕೆ ಹೊರಗಿರಲಿ ಎಂದು ಜಾಲದೊಳಗೆ ಸಿಲುಕಿದವರು ಹಲವರು.

ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಸೇವಾ ಕಂಪನಿಗಳು ಈ ಪಟ್ಟಿಯಲ್ಲಿ ಮೊದಲಿಗಿವೆ. 2018ರ ಜನವರಿವರೆಗಿನ ಅಂಕಿಅಂಶದ ಪ್ರಕಾರ, ಜಗತ್ತಿನಲ್ಲಿ 402.10 ಕೋಟಿ ಅಂತರ್ಜಾಲದ ಬಳಕೆದಾರರು ಇದ್ದಾರೆ. ಸುಮಾರು 319.60 ಕೋಟಿ ಜನರು ಸಾಮಾಜಿಕ ಜಾಲತಾಣದಲ್ಲಿದ್ದರೆ, 513.50 ಕೋಟಿ ಮಂದಿ ಮೊಬೈಲ್ ಬಳಸುತ್ತಾರೆ. ಭಾರತದಲ್ಲಿ 46.20 ಕೋಟಿ ಜನರು ಅಂತರ್ಜಾಲ ಬಳಸುತ್ತಾರೆ. ಅವರಲ್ಲಿ 43 ಕೋಟಿ ಮಂದಿ ಮೊಬೈಲ್ ಮೂಲಕ ಅಂತರ್ಜಾಲ ಬಳಕೆ ಮಾಡುತ್ತಾರೆ. 25 ಕೋಟಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರು. ಫೇಸ್‌ಬುಕ್ ಬಳಕೆಯಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ.

ಈ ಅಂಕಿ ಅಂಶಗಳನ್ನು ನೋಡಿದರೆ ಗಾಬರಿಯಾಗಬೇಕೋ ಸಂತಸ ಪಡಬೇಕೋ ಗೊತ್ತಿಲ್ಲ. ತಂತ್ರಜ್ಞಾನ ಬಳಕೆಯಲ್ಲಿ ಮುಂದುವರೆದಿದ್ದೇವೆ ಎಂದು ಖುಷಿಪಟ್ಟರೆ, ಬಳಕೆದಾರರ ಪಟ್ಟಿಯಲ್ಲಿ ಸಿಂಹಪಾಲು ಇರುವ ಯುವಜನರು ತಮ್ಮ ಅತ್ಯಮೂಲ್ಯ ಸಮಯವನ್ನು ಮೊಬೈಲ್ ಎಂಬ ಮಾಯಾ ಸ್ಕ್ರೀನ್‍ನೊಳಗೆ ನುಗ್ಗಿ ವ್ಯರ್ಥ ಮಾಡುತ್ತಿದ್ದಾರಲ್ಲಾ ಎಂಬ ನೋವೂ ಕಾಡುತ್ತದೆ. ಮಾರ್ಶಲ್ ಮ್ಯಾಕ್ಲುಹಾನ್ ಎಂಬ ಸಂವಹನ ಪಂಡಿತನ ಕಲ್ಪನೆಯಂತೆ, ‘ಒಂದೆಡೆ ಜಗತ್ತೇ ಹಳ್ಳಿಯಾಗುತ್ತಿದ್ದರೆ (global village) ಇನ್ನೊಂದೆಡೆ ನಮ್ಮ ಯುವ ಜನಾಂಗ ಮತ್ತೆ ‘ಬುಡಕಟ್ಟು ಸಂಸ್ಕೃತಿಯನ್ನು ನವೀಕರಣ’ (retribalization) ಮಾಡುತ್ತಿದೆ. ಎಲ್ಲರೂ ಕಸ್ಟಮೈಸ್ಡ್ ಕಾಟೇಜ್‍ನ ಒಳಗೆ ತಮ್ಮ ಸುತ್ತಲೂ ಅದೃಶ್ಯ ಗೋಡೆ ನಿರ್ಮಿಸಿಕೊಂಡಿರುತ್ತಾರೆ. ವರ್ಚುವಲ್ ಜಗತ್ತಿನೊಳಗೆ ಬದುಕುವ ಇವರು ಪ್ರಾಚೀನ ಬುಡಕಟ್ಟು ಜನರಂತೆ ಹೊರಜಗತ್ತಿನೊಂದಿಗೆ ಸಂವಹನ ಸಂಪರ್ಕವನ್ನು ಕಳೆದುಕೊಂಡಿರುತ್ತಾರೆ’. ಇವರಿಗೆ ತಮ್ಮ ಮನೆಯವರೊಂದಿಗೂ ಮಾತನಾಡಲು ಸಮಯವಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಶಾಂತವಾಗಿವೆ. ಡಿಪಾರ್ಟ್‌ಮೆಂಟ್‌ಗಳಲ್ಲಿ ವಿದ್ಯಾರ್ಥಿ– ಅಧ್ಯಾಪಕರ ನಡುವೆ ಚರ್ಚೆ ನಡೆಯುತ್ತಿಲ್ಲ, ತರಗತಿಯ ಬಿಡುವಿನಲ್ಲಿ ಹಾಸ್ಯ, ನಗು, ಹರಟೆಗಳು ಮರೆಯಾಗಿ ವರ್ಷಗಳೇ ಕಳೆದಿವೆ. ಸಂಪರ್ಕವೆಲ್ಲವೂ ಮೊಬೈಲ್‍ನಲ್ಲೇ. ತಂತ್ರಜ್ಞಾನಕ್ಕೆ ತಮ್ಮನ್ನು ತಾವೇ ಮಾರಿಕೊಂಡಿದ್ದರ ಪರಿಣಾಮವಿದು.

ತಂತ್ರಜ್ಞಾನದ ಈ ವ್ಯಾಪಕತೆಯನ್ನೇ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಮಾರುಕಟ್ಟೆ ವಲಯವು ಬಳಕೆದಾರರನ್ನೇ ಬಂಡವಾಳವನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ. ಬಳಕೆದಾರರು ಹಂಚಿಕೊಳ್ಳುವ ಮಾಹಿತಿಯು ಈಗ ಕೇವಲ ಅವರ ಒಡೆತನದಲ್ಲಿಲ್ಲ. ಯಾವುದೋ ಕಂಪನಿಯ ಪ್ರಚಾರ ವಿಭಾಗವು ತನ್ನ ಸಂಭಾವ್ಯ ಬಳಕೆದಾರರ ಪಟ್ಟಿಯಲ್ಲಿಟ್ಟು ಅವರಿಗೆ ದಿನನಿತ್ಯ ಪ್ರೊಮೋಷನಲ್ ಇ- ಮೇಲ್‌, ಸಂದೇಶಗಳನ್ನು ಕಳುಹಿಸುತ್ತಾ ಅವರನ್ನು ನಂಬಿಕಸ್ಥ ಗಿರಾಕಿಗಳನ್ನಾಗಿ ಮಾಡುತ್ತಿವೆ.

ಗ್ರಾಹಕರ ಅನುಮತಿಯಿಲ್ಲದೆ ಅವರಿಗೆ ಟೆಲಿಮಾರ್ಕೆಟಿಂಗ್ ಕರೆ ಮಾಡುವಂತಿಲ್ಲ ಎಂಬ ನಿಯಮ ರೂಪಿಸುವತ್ತ ‘ಟ್ರಾಯ್‌’ ಇತ್ತೀಚೆಗೆ ಹೆಜ್ಜೆಯೇನೋ ಇಟ್ಟಿದೆ. ಆದರೆ ಅದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತದೆ ಎಂಬುದು ಪ್ರಶ್ನೆ. ಈ ಕುರಿತು ಲೇಖಕಿ ಶಕುಂತಲಾ ನರಸಿಂಹನ್ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದರು. ಅವರು ಟೆಲಿಮಾರ್ಕೆಟಿಂಗ್ ಕರೆಯಕಿರಿಕಿರಿ ಹಾಗೂ ಖಾಸಗಿ ಸಮಯವನ್ನು ವ್ಯರ್ಥ ಮಾಡಿದ ಕರೆಯ ಬಗ್ಗೆ ‘ಟ್ರಾಯ್’ಗೆ ದೂರು ನೀಡಲು ಮುಂದಾದಾಗ, ದೂರಿನ ಜೊತೆಗೆ ಟೆಲಿಮಾರ್ಕೆಟಿಂಗ್ ಕರೆಯಪೂರ್ತಿ ವಿವರಗಳ ಜೊತೆಗೆ ಕರೆಯ ವಸ್ತು ವಿಷಯವನ್ನೂ ಪ್ರಸ್ತುತ ಪಡಿಸಬೇಕೆಂದು ಸಂಬಂಧಪಟ್ಟವರು ಅವರಿಗೆಸೂಚನೆ ನೀಡಿದ್ದರು. ಖಾಸಗಿತನಕ್ಕೆ ಭಂಗ ಬಂತೆಂದು ದೂರು ನೀಡಲು ಹೋದರೆ, ಕರೆಯ ಪ್ರತಿಯೊಂದು ವಿಷಯವನ್ನು ಆಲಿಸಿ ಅದನ್ನು ದಾಖಲಿಸಿ ದೂರಿನ ಜೊತೆಗೆ ನೀಡಲು ಇನ್ನಷ್ಟು ಸಮಯ ವ್ಯಯಿಸಬೇಕಾಗಿ ಬಂದಿರುವುದು ವಿಪರ್ಯಾಸ. ತಂತ್ರಜ್ಞಾನದೊಂದಿಗೆ ನಮ್ಮನ್ನೇ ವಿನಿಮಯ ಮಾಡಿಕೊಂಡ ಮೇಲೆ ನಮ್ಮ ಖಾಸಗಿತನದ ಮೇಲಿನ ಹಕ್ಕನ್ನು ಕಳೆದುಕೊಂಡಿರುವುದಕ್ಕೆ ಉತ್ತಮ ಉದಾಹರಣೆ ಇದು. ತಂತ್ರಜ್ಞಾನವೇ ನಮ್ಮ ಒಡೆಯನಾಗುವ ಬದಲು ನಾವದರ ಒಡೆಯರಾಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು