ಭಾನುವಾರ, ಸೆಪ್ಟೆಂಬರ್ 20, 2020
23 °C

ನೇಮಕಾತಿಗೆ ಬೇಕು ಕಾಲಮಿತಿ

ಮಂಜುನಾಥ ಸ್ವಾಮಿ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ದೇಶದ ಎಲ್ಲಾ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಇತ್ತೀಚೆಗೆ ಸುತ್ತೋಲೆಯೊಂದನ್ನು ಕಳುಹಿಸಿ, ಖಾಲಿ ಇರುವ ಹುದ್ದೆಗಳನ್ನು ಆರು ತಿಂಗಳ ಕಾಲಮಿತಿಯೊಳಗೆ ಭರ್ತಿ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಇದನ್ನು, ಉದ್ಯೋಗ ಆಕಾಂಕ್ಷಿಗಳ ದೃಷ್ಟಿಯಿಂದ ಗಮನಿಸಿದಾಗ ಸಂತಸವೂ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬದ ದೃಷ್ಟಿಯಿಂದ ಗಮನಿಸಿದಾಗ ಸಿನಿಕ ಭಾವವೂ ಮೂಡುತ್ತದೆ. ಏಕೆಂದರೆ, ಈ ಒಂದು ದಶಕದ ಅವಧಿಯಲ್ಲಿ ನಮ್ಮ ರಾಜ್ಯದಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆಗಳು ಕಾಲಮಿತಿಯೊಳಗೆ ಪೂರ್ಣಗೊಂಡಿರುವುದು ವಿರಳಾತಿವಿರಳ.

ನಿಯಮಗಳಲ್ಲಿ ಗೊಂದಲ, ಪರೀಕ್ಷೆಯಲ್ಲಿ ಅಕ್ರಮ, ಅಭ್ಯರ್ಥಿಗಳು ಕೋರ್ಟ್‌ಗೆ ಎಡತಾಕುವುದು, ಆಯ್ಕೆ ಪ್ರಾಧಿಕಾರಗಳ ಇಚ್ಛಾಶಕ್ತಿಯ ಕೊರತೆ... ಮುಂತಾದ ಕಾರಣಗಳಿಂದ, ಕಾಲಮಿತಿಯೊಳಗೆ ನೇಮಕಾತಿ ಎಂಬುದು ಕನ್ನಡಿಯೊಳಗಿನ ಗಂಟಿನಂತಾಗಿದೆ. 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಗಳ ನೇಮಕ ಪ್ರಕ್ರಿಯೆಯು ಅವ್ಯವಹಾರದ ಕಾರಣದಿಂದ ರದ್ದಾಯಿತು. 2015ರಲ್ಲಿ ಆರಂಭಗೊಂಡ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು 2017ರ ಆಗಸ್ಟ್ ಅಂತ್ಯದಲ್ಲಿ. 2015ರ ಮೇ ತಿಂಗಳಲ್ಲಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿತ್ತು. ಆದರೆ, ಅದರ ಅಂತಿಮ ಪಟ್ಟಿ ಇನ್ನೂ ಪ್ರಕಟಗೊಳ್ಳದೆ, ಆ ಪ್ರಕ್ರಿಯೆಯು ಕೀ ಉತ್ತರಗಳ ಗೊಂದಲದಿಂದ ಅಭ್ಯರ್ಥಿಗಳ ಪರ ಹಾಗೂ ವಿರೋಧದ ಹೊಯ್ದಾಟದ ನಡುವೆ ತೆವಳುತ್ತಾ ಸಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಜರುಗಿರುವ ಇತರ ಹಲವು ನೇಮಕ ಪ್ರಕ್ರಿಯೆಗಳ ಕಥೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಈ ನೇಮಕ ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಂಡಿದ್ದರೆ ಆಕಾಂಕ್ಷಿ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಸೇರಿ ವರ್ಷಗಳೇ ಆಗಿರುತ್ತಿತ್ತು. ಅದು ಆಗದೇ ಇರುವುದರಿಂದ ಅವರು ಇನ್ನೂ ಆತಂಕದಲ್ಲಿ ಮುಂದಿನ ಹಾದಿ ನೋಡುತ್ತಿರುವುದು ವಿಪರ್ಯಾಸ. ವಿಳಂಬಿತ ನ್ಯಾಯದಾನವು ನ್ಯಾಯ ನಿರಾಕರಣೆಗೆ ಸಮ ಎಂಬ ನೀತಿಯನ್ನು ಇಲ್ಲೂ ಅನ್ವಯಿಸಬೇಕು. ಆಕಾಂಕ್ಷಿಗಳು ಸಕಾಲದಲ್ಲಿ ನೇಮಕಗೊಂಡು ಪೊಲೀಸ್, ವೈದ್ಯ, ಶಿಕ್ಷಕ- ಉಪನ್ಯಾಸಕ, ಎಂಜಿನಿಯರ್, ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳಾಗಿ ಕಾರ್ಯಾಂಗದ ಭಾಗವಾಗಿದ್ದರೆ, ವಿವಿಧ ಪ್ರವರ್ಗಗಳ ಜನರು ಆಡಳಿತದಲ್ಲಿ ಒಳಗೊಳ್ಳುವಿಕೆಯ ಪ್ರಾತಿನಿಧ್ಯದ ಆಶಯ ಪೂರ್ಣಗೊಂಡಂತೆ ಆಗುತ್ತಿತ್ತು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಲಕಾಲಕ್ಕೆ ತೆರವಾಗುವ ಹುದ್ದೆಗಳನ್ನು ಇಲಾಖೆಯ ನಿಯಮಗಳಿಗೆ ಅನುಸಾರವಾಗಿ ಆಯ್ಕೆ ಮಾಡಲು ರಾಜ್ಯಗಳಲ್ಲಿ ರಾಜ್ಯ ಲೋಕಸೇವಾ ಆಯೋಗವನ್ನು ಹಾಗೂ ಅಖಿಲ ಭಾರತ ಮಟ್ಟದಲ್ಲಿ ಆಡಳಿತಾತ್ಮಕ ಹಾಗೂ ಇತರ ಹುದ್ದೆಗಳನ್ನು ತುಂಬಲು ಕೇಂದ್ರ ಲೋಕಸೇವಾ ಆಯೋಗದ ಸ್ಥಾಪನೆಗೆ ಸಂವಿಧಾನದಲ್ಲೇ ಅವಕಾಶ ಮಾಡಿಕೊಡಲಾಗಿತ್ತು.

ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯಾಯವನ್ನು ಒದಗಿಸುವುದರ ಮೂಲಕ, ದುರ್ಬಲ ವರ್ಗಗಳಿಗೆ ಅನ್ಯಾಯ ಆಗದಂತೆ ಆ ವರ್ಗಗಳ ಜನರೂ ಸರ್ಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯ ಹೊಂದಬೇಕು ಎಂಬುದು ಸಂವಿಧಾನ ನಿರ್ಮಾರ್ತೃಗಳ ಆಶಯವಾಗಿತ್ತು. ಆದರೆ, ಬರಬರುತ್ತಾ ಕರ್ನಾಟಕ ಲೋಕಸೇವಾ ಆಯೋಗದ ಮೇಲೆ ಕಾರ್ಯಬಾಹುಳ್ಯ ಹೆಚ್ಚಾಗಿ, ಆಯ್ಕೆ ಪ್ರಕ್ರಿಯೆ ನಿಧಾನಗೊಳ್ಳತೊಡಗಿತು. ಇದರಿಂದ ಸರ್ಕಾರದ ಕೆಲವು ಇಲಾಖೆಗಳು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿ, ತಮ್ಮ ಇಲಾಖೆಯ ಮೂಲಕವೇ ನೇಮಕ ಮಾಡಿಕೊಳ್ಳತೊಡಗಿದವು. ಇನ್ನು ಕೆಲವು ಇಲಾಖೆಗಳು ಕೇಂದ್ರೀಕೃತ ದಾಖಲಾತಿ ಘಟಕ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ನೆಚ್ಚಿಕೊಂಡವು. ಆದರೆ ಇಲ್ಲೂ ನಾನಾ ಕಾರಣಗಳಿಂದ ವಿಳಂಬ ಉಂಟಾಗಿದೆ. ಹಾಗಾದರೆ ಈ ಸಂವಿಧಾನಾತ್ಮಕ ಆಶಯವನ್ನು ಅಡೆತಡೆಗಳಿಲ್ಲದೇ ನೆರವೇರಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಪರಿಹಾರ ಮಾರ್ಗಗಳ ಕುರಿತು ವಿವೇಚಿಸಿದಾಗ ಅನೇಕ ಪರಿಹಾರಗಳು ಗೋಚರಿಸುತ್ತವೆ.

ಅಧಿಸೂಚನೆ ಹೊರಡಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ನೇಮಕ ನಿಯಮಗಳ ಗೊಂದಲ ನಿವಾರಣೆಗೆ ಆದ್ಯತೆ ನೀಡಬೇಕು. ಹಾಗೆಯೇ, ಬಹುತೇಕ ನೇಮಕ ಪ್ರಕ್ರಿಯೆಗಳಲ್ಲಿನ ಲೋಪಗಳನ್ನು ಮುಂದಿರಿಸಿಕೊಂಡು ಅಭ್ಯರ್ಥಿಗಳು ನ್ಯಾಯಾಲಯದ ಕದ ತಟ್ಟುತ್ತಿದ್ದಾರೆ. ಅಂತಹ ಪ್ರಕರಣಗಳು ಬೇಗ ಇತ್ಯರ್ಥ ಆಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ, ಎಲ್ಲಾ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳ ಕುರಿತು ವ್ಯವಹರಿಸಲು ಪ್ರತ್ಯೇಕ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬಹುದು. ವಿವಿಧ ಇಲಾಖೆಗಳ ನಡುವೆ ಸಮನ್ವಯವನ್ನು ಏಕಗವಾಕ್ಷಿ ವ್ಯವಸ್ಥೆ ಮೂಲಕ ಸಾಧಿಸಬಹುದು. ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸುವಲ್ಲಿ ಹಾಗೂ ಕೀ ಉತ್ತರಗಳ ಗೊಂದಲಕ್ಕೆ ಕಾರಣರಾಗುವ ವಿಷಯ ತಜ್ಞರನ್ನು ದಂಡಿಸಿ, ಕಪ್ಪುಪಟ್ಟಿಗೆ ಸೇರಿಸಬೇಕು. ನೇಮಕಾತಿಯಲ್ಲಿನ ವಿಳಂಬ ವ್ಯಾಧಿಯನ್ನು ಇಂತಹ ಉಪಕ್ರಮಗಳ ಮೂಲಕ ಗುಣಪಡಿಸುವ ಕೆಲಸ ತುರ್ತಾಗಿ ಆಗಬೇಕಾದುದು ಅಗತ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು