ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಗುರುಗಳಿಗೆ `ಕಾಯಂ' ಯೋಗ ಇಲ್ಲವೇ?

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗುರುವಿನ ಗುಲಾಮನಾಗದೆ ದೊರೆಯಲಾರದು ಮುಕ್ತಿ ಎಂಬ ಯುಕ್ತಿ ಇದೆ. ಆದರೆ ಅತಿಥಿ ಉಪನ್ಯಾಸಕ ಎಂಬ ಗುರುಗಳು `ಮುಕ್ತಿ'ಗಾಗಿ ಹಪಹಪಿಸುತ್ತಿದ್ದಾರೆ. ಮುಂಬರುವ ಶಿಕ್ಷಕರ ದಿನದ ಹೊತ್ತಿಗಾದರೂ ಅದು ದೊರೆಯುವುದೇ?

ಸೆಪ್ಟೆಂಬರ್ 5, ಶಿಕ್ಷಕ ಸಮುದಾಯಕ್ಕೆ ಸಂಭ್ರಮದ ದಿನ. ಭಾರತದಲ್ಲಿ ಗುರು-ದೇವರ ಸಮಾನ. ಜಗತ್ತನ್ನೇ ಗೆಲ್ಲಬೇಕೆಂಬ ಮಹದಾಸೆ ಹೊಂದಿದ್ದ ಅಲೆಕ್ಸಾಂಡರ್‌ನಂತಹವರು, ತನ್ನ ಗುರುವಿಗೆ ಮಾತ್ರ ತಲೆತಗ್ಗಿಸುವ ಸಂಪ್ರದಾಯವಿರುವುದು ಭರತ ಖಂಡದಲ್ಲಿ ಮಾತ್ರ ಎಂದಿದ್ದಾನೆ. 

ರಾಷ್ಟ್ರಪತಿಯಾಗಿದ್ದ ಡಾ.ರಾಧಾಕೃಷ್ಣನ್ ರಷ್ಯಾ ಪ್ರವಾಸದಲ್ಲಿ ತಾನೊಬ್ಬ ಶಿಕ್ಷಕ ಎಂದು ಹೇಳಿಕೊಂಡಿದ್ದು, ಈ ವೃತ್ತಿಯ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಶಿಕ್ಷಕರ ದಿನ ಸರ್ಕಾರ ಕೂಡ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತದೆ. ಬಹುಪಾಲು ಶಿಕ್ಷಕವರ್ಗ ಅಂದು ಸಂತಸದಿಂದ ಇರುತ್ತದೆ. ಆದರೆ ಒಂದು ವರ್ಗದ ಬೋಧಕರು ಮಾತ್ರ ಶಿಕ್ಷಕರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸಂತಸ ತಮಗಲ್ಲ ಎಂದೇ ಭಾವಿಸುತ್ತಾರೆ. ಅವರು ಪಾರ್ಟ್ ಟೈಮ್ ಅಥವಾ ಅತಿಥಿ ಉಪನ್ಯಾಸಕರು. 

ಅವರ ವೃತ್ತಿ ಮಾತ್ರ ಪಾರ್ಟ್ ಟೈಮ್ ಅಲ್ಲ; ಅವರ ಬದುಕೇ ಪಾರ್ಟ್ ಟೈಮ್ ಆಗಿಬಿಟ್ಟಿದೆ. ಅವರನ್ನು ವರ್ಷದ ಪ್ರಾರಂಭದಿಂದ ವರ್ಷದ ಅಂತ್ಯದವರೆಗೂ ದುಡಿಸಿಕೊಂಡು, ವರ್ಷಾಂತ್ಯದಲ್ಲಿ ವೃತ್ತಿಯಿಂದ ಬಿಡುಗಡೆ ಮಾಡಲಾಗುತ್ತದೆ. ಯಾಕೆಂದರೆ ಅವರಿಗೆ, ಅವರ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ. ಹೆಸರಿಗೆ ಪಾರ್ಟ್ ಟೈಮ್, ಆದರೆ ಪ್ರಭಾವಿ ಮತ್ತು ಹಿರಿಯ ಉಪನ್ಯಾಸಕರ ಬಹುತೇಕ ತರಗತಿಗಳನ್ನು ಅವರ ಮೇಲೆಯೇ ಹೇರಲಾಗುತ್ತದೆ. ಅಂದರೆ  ಪಾರ್ಟ್ ಟೈಮ್ ವೃತ್ತಿಯ ಹೆಸರಿನಲ್ಲಿ ಫುಲ್ ಟೈಮ್ ಉದ್ಯೋಗ.

ಅವರಿಗೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಂದೇ ಬಾರಿ ಸಂಬಳ ಬಿಡುಗಡೆ ಮಾಡುತ್ತಾರೆ. ಇದು ಆಧುನಿಕ ಜೀತ ಪದ್ಧತಿ ಅಲ್ಲದೆ ಬೇರೇನೂ ಅಲ್ಲ. ಜೀವನೋಪಾಯಕ್ಕೆ  ವರ್ಷವಿಡೀ ಸಾಲ ಮಾಡಿ ಪಾಠ ಮಾಡಬೇಕು. ವರ್ಷದ ಕೊನೆಯಲ್ಲಿ ಬರುವ ಒಂದಿಷ್ಟು ಸಂಬಳ, ವರ್ಷದ ಸಾಲದ ಬಡ್ಡಿಯ ಮೊತ್ತವನ್ನೂ ಮೀರುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ. ಹಳ್ಳಿಗಾಡು ಪ್ರದೇಶಗಳಲ್ಲಿ ಹತ್ತಾರು ಹಬ್ಬಗಳ ಆಚರಣೆಗಳು ಇರುತ್ತವೆ. ಆದರೆ ಈ ವರ್ಗಕ್ಕೆ ಕೇವಲ ವರ್ಷಕ್ಕೊಮ್ಮೆ ಮಾತ್ರ ಹಬ್ಬ. ಅದು ಸಂಬಳ ಬಟವಾಡೆಯಾದ ದಿವಸ. ಉಳಿದ ಹಬ್ಬಗಳಲ್ಲಿ ತಂಗಿ, ತಾಯಂದಿರಿಗೆ ಒಂದು ಡಜನ್ ಬಳೆ ಕೊಡಿಸುವ ಸಾಮರ್ಥ್ಯ ಅವರ ಬಳಿ ಇಲ್ಲದಿರುವುದು ವಾಸ್ತವ ಸತ್ಯ. 

ಕಾಲೇಜಿನಲ್ಲಿ ಅವರ ಬಗ್ಗೆ ನಿರ್ಲಕ್ಷ್ಯವೇ ಸರಿ. ಬೋಧಕ ವರ್ಗ, ಬೋಧಕೇತರ ವರ್ಗದವರ ಜತೆಗೆ ವಿದ್ಯಾರ್ಥಿಗಳು ಕೂಡ `ಲೇ ಅವನು ಪಾರ್ಟ್ ಟೈಮ್ ಟೀಚರ್, ಅವನೇನು ಲೆಕ್ಕಕ್ಕೆ ಇಲ್ಲ, ಎಲ್ಲಾ ಎಚ್.ಒ.ಡಿ. ಕೈಯಲ್ಲೇ ಇರುತ್ತೆ' ಎಂದು ಛೇಡಿಸುವ ಎಷ್ಟೋ ಪ್ರಸಂಗಗಳು ನಡೆದಿವೆ.

ವರ್ಷಕ್ಕೊಮ್ಮೆ  ಸಂಬಳ ಪಡೆಯುವ ವ್ಯವಸ್ಥೆ ಬೇರಾವ ರಾಷ್ಟ್ರದಲ್ಲಿದೆ? ವರ್ಷವಿಡೀ ಜೀವನ ಸಾಗಿಸಲು ಅವರಿಗೆ ಆಧಾರವೇನು? ದಿನನಿತ್ಯದ ಸವಲತ್ತುಗಳಿಂದ ಸದಾ ವಂಚಿತರಾಗಿಯೇ ಇರಬೇಕೇ? ಅವರಿಗೂ ಒಂದು ಬದುಕು ಎಂಬುದು ಇಲ್ಲವೇ? ವಿದ್ಯಾರ್ಥಿಗಳಿಗೆ ಸೃಜನಶೀಲವಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಶಿಕ್ಷಕರ ಬದುಕು ಇಷ್ಟೊಂದು ದಯಾನೀಯವಾಗಿರಬೇಕೇ?

ರಾಜ್ಯದಲ್ಲಿ ಈ ವರ್ಗಕ್ಕೆ ಸೇರಿದ ಒಟ್ಟು 10,350 ನತದೃಷ್ಟ ಜೀವಿಗಳಿದ್ದಾರೆ. ಅವರಲ್ಲಿ ಪಿಎಚ್‌ಡಿ, `ನೆಟ್', `ಸ್ಲೆಟ್' ಆದವರಿಗೆ ತಿಂಗಳಿಗೆ ರೂ 10,000, ಇತರರಿಗೆ ತಿಂಗಳಿಗೆ ರೂ 8,000 ಸಂಬಳ ನಿಗದಿ ಮಾಡಲಾಗಿದೆ. ಗುಜರಾತ್, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಯು.ಜಿ.ಸಿ ನಿಯಮಾವಳಿಯಂತೆ ತಿಂಗಳಿಗೆ ರೂ 25,000 ಸಂಬಳ ನೀಡಲಾಗುತ್ತಿದೆ. ನಮ್ಮಲ್ಲಿಯೂ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ರೂ 20,000  ಸಂಬಳ ನೀಡಲಾಗುತ್ತಿದೆ (16 ಗಂಟೆಗಳ ಕಾರ್ಯಭಾರ ಇದ್ದರೆ ಮಾತ್ರ). ಆದರೆ ಇವರಿಗೆ ನೀಡುವ ಸಂಬಳ ಆಯಾ ತಿಂಗಳ ಖರ್ಚಿಗೆ ಸಾಲುವುದಿಲ್ಲ ಎಂಬುದೇ ದುರಂತ. ಇಲ್ಲಿ 10-15 ವರ್ಷಗಳವರೆಗೆ ಸೇವೆ ಸಲ್ಲಿಸಿದವರಿದ್ದಾರೆ. ಕೆಲವರಂತೂ ತಮ್ಮ ಬದುಕನ್ನು ಪಾರ್ಟ್ ಟೈಮ್ ಶಿಕ್ಷಕರಾಗಿಯೇ ಮುಕ್ತಾಯಗೊಳಿಸುವ ಅಪಾಯ ಮತ್ತು ಸಂಭವವಿದೆ.  ಜೊತೆಗೆ ಪ್ರತೀ ವರ್ಷ ಸಂದರ್ಶನವೆಂಬ ಭೂತ ಬೇರೆ. ಅದನ್ನೆಲ್ಲ ಒಪ್ಪಿಕೊಂಡೇ ಸೇರಿರುತ್ತಾರೆ ಎಂಬುದು ನಿಜವಾದರೂ 8-10 ವರ್ಷ ಸೇವೆ ಸಲ್ಲಿಸಿಯೂ, ಪ್ರತೀ ವರ್ಷ ಸಂದರ್ಶನಕ್ಕೆ ಹಾಜರಾಗುವುದು ತುಸು ಇರಿಸುಮುರಿಸು ವಿಚಾರ. ವಿಪರ್ಯಾಸವೆಂದರೆ ತಮ್ಮಿಂದ ಪಾಠ ಕಲಿತ ವಿದ್ಯಾರ್ಥಿಗಳೇ ತಮಗೆ ಪ್ರತಿಸ್ಪರ್ಧಿಗಳಾಗಿ ಸಂದರ್ಶನಕ್ಕೆ  ಹಾಜರಾಗುವಾಗ ಆ ಮುಜುಗರ ಅವರ್ಣನೀಯ.

ಪ್ರಭಾವಿಗಳ ಮಕ್ಕಳು ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ಈ ನತದೃಷ್ಟರನ್ನು ದೂರ ಸರಿಸಿ ಉದ್ಯೋಗ ಗಿಟ್ಟಿಸಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಉದ್ಯೋಗ ಭದ್ರತೆ ಕೊಡಿ, ಸೇವೆಯನ್ನು ಹಂತಹಂತವಾಗಿ ಕಾಯಂಗೊಳಿಸಿ, ತಿಂಗಳ ಮೊದಲನೇ ವಾರದಲ್ಲಿ ಸಂಬಳ ಬಿಡುಗಡೆ ಮಾಡಿ, ವರ್ಷದ 12 ತಿಂಗಳೂ ಉದ್ಯೋಗ ನೀಡಿ ಎನ್ನುವುದು ಇವರ ಬೇಡಿಕೆ.

ಸಾಂವಿಧಾನಿಕ ರಕ್ಷಣೆ: ಸಂವಿಧಾನದ 14ನೇ ಕಲಂ ಅನ್ವಯ ಕಾನೂನಿನ ಮುಂದೆ ಎಲ್ಲರೂ ಸಮಾನರು, 16(1) ಸಾರ್ವತ್ರಿಕ ನಿಯೋಜನೆಯಲ್ಲಿ ಸಮಾನತೆ, 15(1) ತಾರತಮ್ಯ ನಿಷಿದ್ಧ, 39(ಎ) ಸಮಾನ ನ್ಯಾಯ- ಈ ಮೊದಲಾದ ಕಲಂಗಳ ಅನ್ವಯ ಅವರ ಸೇವೆಗೆ ಭದ್ರತೆ ಒದಗಿಸಬಹುದಾಗಿದೆ. ಆದರೆ, ಇದಕ್ಕೆ ಇಚ್ಛಾಶಕ್ತಿ ಬೇಕಾಗಿದೆ. ಗುರುವಿನ ಗುಲಾಮನಾಗದೆ ದೊರೆಯಲಾರದು ಮುಕ್ತಿ ಎಂಬ ಯುಕ್ತಿ ಇದೆ. ಆದರೆ ಈ ಗುರುಗಳು ಮುಕ್ತಿಗಾಗಿ ಹಪಹಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT