ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾರ್ಯದ ಸಂಕಟಗಳಾಗಿ ವಿದ್ಯಾರ್ಥಿನಿಲಯಗಳು

Last Updated 12 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಚಿನ್ನದ ನೀರುಣಿಸಿದ ಲೋಹದ ಅಕ್ಷರಗಳನ್ನು ಹೊತ್ತ ನಾಮಫಲಕದಾಚೆ ದೃಷ್ಟಿ ಹಾಯಿಸಿದರೆ ಒಂದನ್ನೊಂದು ಮೀರುವ ಅಂದದ ಇಮಾರತುಗಳು. ಭೂರಮೆಯ ಹಚ್ಚಹಸಿರು ಹುಲ್ಲುಹಾಸಿನ ನಡುವೆ ನುಣುಪಾದ ಸಿಮೆಂಟಿನ ರಸ್ತೆಗಳು.
 
ಅಲ್ಲಲ್ಲಿ ನಾಜೂಕಾಗಿ ಸರಿದಾಡುವ ಹರೆಯದ ವಿದ್ಯಾರ್ಥಿಗಳು. ಇದೊಂದು ನಾಡಿನ ಹೊಸ ಖಾಸಗಿ ತಾಂತ್ರಿಕ ಕಾಲೇಜು ಆವರಣ.ಕಣ್ಣಳತೆಯಲ್ಲಿ ರೂಪುಗೊಂಡಿರುವ ಈ ಥಳುಕನ್ನು ಒಳಹೊಕ್ಕು ಕೆದಕಿದರೆ ಕ್ಯಾಂಪಸ್ಸಿನ ಕಾರ್ಯವೈಖರಿ ಅಸಹ್ಯ ಹುಟ್ಟಿಸುತ್ತದೆ.

ಈ ತಾಂತ್ರಿಕ ಕಾಲೇಜು ಪ್ರಾರಂಭವಾದ ಮೊದಲೆರಡು ವರ್ಷಗಳಲ್ಲಿ ಶೇ 100 ಫಲಿತಾಂಶ ತೋರಿಸಿ, ರಾಜ್ಯದಾದ್ಯಂತ ಹೆಸರು ಪಡೆಯಿತು. ಮೂರನೆ ವರ್ಷ ದಂಡು ದಂಡು ಪಾಲಕರು ತಮ್ಮ ಮಕ್ಕಳನ್ನು ಸಿಇಟಿ ಇಲ್ಲವೇ ನೇರ ಆ ಕಾಲೇಜಿಗೆ ಸೇರಿಸಲು ಮುಗಿಬಿದ್ದರು.

ಪರಿಣಾಮವಾಗಿ ನಾಲ್ಕನೆ ವರ್ಷ ಬರೀ ಪರಸ್ಥಳದ ವಿದ್ಯಾರ್ಥಿಗಳಿಂದ ತುಂಬಿ, ಇರುವ ಹಾಸ್ಟೆಲ್ಲು ಹಿಡಿಸದಾಯಿತು. ಮೂರು ಮಂಚ ಇರುವಲ್ಲಿ ನಾಲ್ಕೈದು ಮಕ್ಕಳನ್ನು (ಗಂಡು ಅಥವ ಹೆಣ್ಣು ) ತುಂಬಿದರು.

ನನ್ನ ಪರಿಚಿತರ ಮಗಳೊಬ್ಬಳು ಇದೇ ಕಾಲೇಜಿನಲ್ಲಿ ಎರಡು ವರ್ಷ ಹಾಗೂ ಹೀಗೂ ಓದು ಮುಗಿಸಿದ್ದಳು. ಕಳೆದ ಸಾಲಿನ ಐದನೇ ಸೆಮಿಸ್ಟರ್‌ಗಾಗಿ ಹೋದಾಗ ಆದ ಆನುಭವವೇ ಬೇರೆ . ಇರುವ ಸುಸಜ್ಜಿತ ಹಾಸ್ಟೆಲ್ಲಿನಿಂದ ಅವರನ್ನು ತೆರವುಗೊಳಿಸಲಾಯಿತು. ಅವರ ಕಾಲೇಜು ಕಟ್ಟಡದ ಮೇಲಿನ ಅಂತಸ್ತಿನ ಕ್ಲಾಸ್‌ರೂಮಗಳನ್ನೇ ಕಾರ್ಡ್ ಬೋರ್ಡ್ ಇಟ್ಟು ವಿಭಾಗಿಸಿ ರೂಮುಗಳನ್ನಾಗಿಸಿದ್ದರು, ದೊಡ್ಡಿಯಲ್ಲಿ ದನ ತುಂಬಿದಂತೆ ಅಲ್ಲಿ ವಿದ್ಯಾರ್ಥಿನಿಯರನ್ನು ತುಂಬಿದರು.

ಸುಮಾರು ನೂರು ಹುಡುಗಿಯರಿಗಿದ್ದದ್ದು ಕೇವಲ ಐದು  ಬಾತ್‌ರೂಂಗಳು. ಮೊದಲಿನ ಸುಸಜ್ಜಿತ ಹಾಸ್ಟೆಲ್ಲನ್ನು ಡೊನೇಶನ್ ಕೊಟ್ಟ ಉತ್ತರ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟರು.
 
ಕೇಳಿದರೆ  ಕಾಲೇಜು ಹಿಂಭಾಗದಲ್ಲಿ ಇನ್ನೊಂದು ಹಾಸ್ಟೆಲ್ಲನ್ನು ಹೊಸದಾಗಿ ಕಟ್ಟಸುತ್ತಿದ್ದೇವೆ ಇನ್ನೇನು ಮುಗಿದ ಕೂಡಲೆ ಅಲ್ಲಿಗೆ ಸ್ಥಳಾಂತರಿಸುತ್ತೇವೆ. ಸ್ಪಲ್ಪದಿನ ಹೊಂದಾಣಿಕೆ ಮಾಡಿಕೊಳ್ಳಿ  ಎಂದು ಸಂಸ್ಥೆಯ ನಿರ್ದೇಶಕರೂ ಆದ ಪ್ರಿನ್ಸಿಪಾಲರ ಹೇಳಿಕೆಗೆ ಯಾರೂ ಮಾತಾಡುವಂತಿರಲಿಲ್ಲ.

ಅಂದರೆ ತಾರತಮ್ಯದ ಈ ವ್ಯವಸ್ಥೆಯಲ್ಲಿ ಡೊನೇಶನ್ ಪಡೆದು ಸೇರಿಸಿಕೊಂಡವರಿಗಾಗಿಯೇ ಹೆಚ್ಚಿನ ಸೌಲಭ್ಯವಿರುವುದು ಸ್ಪಷ್ಟ. ವಂಚಿತ ಸಿಇಟಿ ಫಲಾನುಭವಿಗಳಗೆ ಹಾಸ್ಟೆಲ್ ಶುಲ್ಕದಲ್ಲಿ ರಿಯಾಯಿತಿನೂ ಕೊಡಲಿಲ್ಲ. ಯಾರೂ ಕೇಳಲೇಇಲ್ಲ. ಸುಗಮ ಓದಿಗೆ ಅವಕಾಶ ಕಲ್ಪಿಸದಿದ್ದರೆ ಉತ್ತಮ ಸಾಧನೆ ಮಾಡಬೇಕೆನ್ನುವ ವರ್ತಮಾನದ ತಲ್ಲಣಕ್ಕೆ ಬೆಲೆ ಹೇಗೆ ಬಂದೀತು? ಈಗಾಗಲೆ ಆರನೇ ಸೆಮಿಸ್ಟರ್ ಮುಗಿಯುತ್ತ ಬಂದರೂ ಹಾಸ್ಟೆಲ್ಲು ನಿರ್ಮಾಣ ಪೂರ್ಣಗೊಂಡಿಲ್ಲ.

ಸದಾ ಒತ್ತಡದಲ್ಲೇ  ಬದುಕಬೇಕಾದ ಅನಿವಾರ್ಯತೆ ಇಲ್ಲಿನ ಅಮಾಯಕ ವಿದ್ಯಾರ್ಥಿನಿಯರದು. ಈ ಒಂದು ವರ್ಷದಲ್ಲಿ ಅನುಭವಿಸಿದ ಹತ್ತು ಹಲವು ಮಾನಸಿಕ ವೇದನೆಗಳನ್ನು ದೂರಿ ಪ್ರಯೋಜನವಿಲ್ಲವೆಂಬುದು ಪಾಲಕರ ಗೊಣಗು.

ಕಟ್ಟಿಸುತ್ತಿರುವ ಹಾಸ್ಟೆಲ್ಲು ಕಟ್ಟಡದ ಕ್ಯೂರಿಂಗ್‌ಗಾಗಿ ಲಭ್ಯ ನೀರಿನ ಸತತ ಬಳಕೆಯಿಂದ ಇವರ ಕಾಲೇಜು ಕಮ್ ಹಾಸ್ಟೆಲ್ಲಿನಲ್ಲಿ ಎಷ್ಟೋ ಮಧ್ಯರಾತ್ರಿಗಳಲ್ಲಿ ನೀರಿನ ತೊಟ್ಟಿ ಬರಿದಾದದ್ದಿದೆ.

ಬರಿ ಹಣ ಮಾಡುವುದೇ ಪರಮಗುರಿಯಾಗಿ  ಮನುಷ್ಯತ್ವಕ್ಕೆ ಬೆಲೆ ಇಲ್ಲದಾಗಿದೆ. ಇವರೆಂಥ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕಲಿಸಿಯಾರು ಎಂದು ಪಾಲಕರು ಸೇರಿಸುವ ಮೊದಲೆ ಯೋಚಿಸಬೇಕಿದೆ. ರಾಜ್ಯದ ಹಲವಾರು ವೈದ್ಯ ದಂತವೈದ್ಯ, ತಾಂತ್ರಿಕ ಮತ್ತು ಎಂ,ಬಿಎ. ಕಾಲೇಜುಗಳಲ್ಲಿ  ಅವ್ಯವಸ್ಥೆಗಳೇ ವ್ಯವಸ್ಥೆಯಾಗಿರುವುದು ಅರಗಿಸಿಕೊಳ್ಳಲಾಗದ ಕಹಿಸತ್ಯ.

24 ಗಂಟೆಯೂ ಬಿಸಿ - ತಣ್ಣೀರಿನ ಸೌಲಭ್ಯವಿದೆ; ಮಿನರಲ್ ವಾಟರ್ ಇದೆ ಎಂದು ಹೇಳಿಕೊಳ್ಳುವ ಕೆಲವು ಹಾಸ್ಟೆಲ್ಲುಗಳಲ್ಲಿ  ಹೆಚ್ಚಿನ ಸೌಲಭ್ಯಗಳು ಪ್ರಾರಂಭದ ಒಂದು ತಿಂಗಳು ಮಾತ್ರ. ಅನಂತರ ತಣ್ಣೀರೂ ಸಾಕಷ್ಟು ಸರಬರಾಜಿರುವುದಿಲ್ಲ. ವಿದ್ಯುತ್ ಕೈಕೊಟ್ಟರೆ ಇರುವ ವಿದ್ಯುತ್ ಜನಕ ಕೆಟ್ಟಿದೆ ಎಂಬ ಸಬೂಬು. ಖರ್ಚು ಹಂಚಿಕೊಳ್ಳುವ ವ್ಯವಸ್ಥೆಯಡಿ ಇಂಧನ ಬಾಬತ್ತು ಖರ್ಚಿಗೆ ಸೇರಿರುತ್ತದೆ; ಬಿಸಿ ನೀರು ಬರುವುದೇ ಇಲ್ಲ.

ಹೀಟಿಂಗ್‌ರಾಡ್ ಬಳಸಿದರೆ ಆವಾಜ್ ಇಡುತ್ತಾರೆ.  ಸಾಮಾನ್ಯವಾಗಿ ಊರ ಹೊರವಲಯಗಳಲ್ಲಿರುವ ಹಾಸ್ಟೆಲ್ಲು ಆವರಣಗಳಲ್ಲಿ ವಿಷಜಂತು, ಇಲಿ-ಹೆಗ್ಗಣಗಳು, ಜಿರಳೆ -ಸೊಳ್ಳೆಗಳೆಲ್ಲ ಸಹವಾಸಿಗಳು, ಹುಡುಗರ ಕೆಲವು ಹಾಸ್ಟೆಲ್ಲುಗಳಲ್ಲಿ ಹೇನು-ಚೀರುಗಳು ರೋಗಳಲ್ಲಿ ಸೇರಿ ಸದಾ ತುರಿಕೆ.

ಚರ್ಮರೋಗ ಕಾಡುವುದು ಸಾಮಾನ್ಯ, ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದಿಲ್ಲ.  ಸ್ವಸ್ಥ ಸಮಾಜದ ನಿರ್ಮಾಣದಲ್ಲಿ  ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದು. ಇವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯಾಗಾರಗಳು. ವಿಶ್ವಾಸವಿಟ್ಟು ಆಯ್ದುಕೊಂಡ ಯಾವುದೇ ಶಿಕ್ಷಣ ಸಂಸ್ಥೆಗಳು ಅನಿವಾರ್ಯ ಸಂಕಟಗಳಾಗಿ ಮಾರ್ಪಡುವುದು ನಿಜಕ್ಕೂ ಖಂಡನಾರ್ಹ.

ಅನ್ನ ,ವಿದ್ಯೆ ಮತ್ತು ಔಷಧವನ್ನು ದಾನವಾಗಿ ಮಾತ್ರ ನೀಡಬೇಕೆಂಬ ಈ ನೆಲದ ಸಂಸ್ಕೃತಿಯು ಇಂದು ಪಡೆದುಕೊಂಡಿರುವ ಆಯಾಮ ಹಾಸ್ಯಾಸ್ಪದವಾದದ್ದು. ವಿದ್ಯಾದಾನದ ಹೆಸರಿನಲ್ಲಿ ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳು ಆಳದಲ್ಲಿ ವ್ಯವಹಾರಿಕ ತಂತ್ರಗಳನ್ನು ಅಳವಡಿಸಿಕೊಂಡಿವೆ. ವ್ಯಾಪಾರವೆಂದರೆ ದ್ರೋಹ ಚಿಂತನೆಯಾಗಿ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ.
       -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT