ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು; ಮುಂದೇನು ಕಾದಿದೆಯೋ?

Last Updated 28 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಇದು ಪ್ರಜಾಪ್ರಭುತ್ವದ ಕಾಲ. ಈ ಕಾಲವನ್ನು ನಾವು ಈಗ ಸಂಖ್ಯಾಬಲದ ಆಡಳಿತದ ಕಾಲ ಎಂದೂ ಹೇಳಬಹುದು. ಪ್ರಜಾಪ್ರಭುತ್ವ ಹಿಂದೆ ಸರಿದು, ಸಂಖ್ಯೆಗಳು ಕುಣಿಯುತ್ತ ಇವೆ. ಈ ಸಂಖ್ಯಾಬಲ ನಮ್ಮ ಈ ಕನ್ನಡ ಸಾಹಿತ್ಯ ಪರಿಷತ್ತನ್ನೂ ಎಲ್ಲಿ ನುಂಗಿ ನೊಣೆದು ಬಾಚಿ ಬಿಡುತ್ತದೋ ಎನ್ನುವ ಹೆದರಿಕೆ ನನಗೆ.


ಒಂದಾನೊಂದು ಕಾಲದಲ್ಲಿ ಎನ್ನುವ ಹಾಗೆ ನಾನು, ಮೈಸೂರಿನಲ್ಲಿ ಒಂದು ಖಾಸಗಿ ಪ್ರೆಸ್ಸಿನ ಮೇಲ್ವಿಚಾರಕನಾಗಿದ್ದೆ. ಅದಕ್ಕೆ ಮೊದಲು ಬೆಂಗಳೂರಿನಲ್ಲಿ `ಚಿತ್ರಗುಪ್ತ~ ವಾರಪತ್ರಿಕೆಯಲ್ಲಿ ಸಹಾಯಕ ಸಂಪಾದಕ. ಹೆಸರಿಗೆ ಸಹಾಯಕ ಅಷ್ಟೇ. ಪ್ರಿಂಟಿಂಗ್ ಪ್ರೆಸ್ಸಿನ ಕಡೆಗೇ ಹೆಚ್ಚು ಕೆಲಸ. ಆಗ ಕಂಪ್ಯೂಟರ್, ಆಫ್‌ಸೆಟ್ ಇತ್ಯಾದಿ ಯಾವುದೂ ಇರಲಿಲ್ಲ. ಕೈಯಿಂದ ಮೊಳೆ ಜೋಡಿಸಿ ಮುದ್ರಣ ಮಾಡುತ್ತಿದ್ದ ಕಾಲ.

ಮೈಸೂರನ್ನು ಬಿಟ್ಟು ಮತ್ತೆ ಬೆಂಗಳೂರಿಗೇ ಬಂದು, ಕನ್ನಡ ಸಾಹಿತ್ಯ ಪರಿಷತ್ತಿನ ಬಿಎಂಶ್ರಿ ಅಚ್ಚುಕೂಟದಲ್ಲಿ ಮೇಲ್ವಿಚಾರಕನಾಗಿ, ನಾಲ್ಕೈದು ವರ್ಷಗಳು ಇದ್ದೆ. ಆಮೇಲೆ ದೊಡ್ಡ ಪ್ರಮಾಣದಲ್ಲಿ ನಾನೇ ಒಂದು ಪ್ರಿಂಟಿಂಗ್ ಪ್ರೆಸ್ ಮಾಡಿ, ತಲೆ ಎತ್ತದ ಹಾಗೆ ಕೈಸುಟ್ಟುಕೊಂಡೆ.

ಇವೆಲ್ಲವೂ ನನ್ನ ಸ್ವಂತ ವಿಚಾರಗಳೇ ಆದರೂ, ಕೆಲವು ವಿಚಾರಗಳು ಎಲ್ಲರಿಗೂ ತಿಳಿಯಬೇಕಾಗಿದ್ದು ಅದಕ್ಕಾಗಿ ಬರೆಯಲೇಬೇಕಾಯಿತು.

ಆ ಕಾಲದಲ್ಲಿ ನಾನು ಘಟಾನುಘಟಿಗಳ ಪುಸ್ತಕಗಳು ಎಲ್ಲವನ್ನೂ ಮುದ್ರಣ ಮಾಡುತ್ತಿದ್ದೆ. ಕುವೆಂಪು, ಡಿವಿಜಿ, ಮಾಸ್ತಿ, ತೀನಂಶ್ರಿ, ವಿಸೀ, ರಾಜರತ್ನಂ, ದೇಜಗೌ ಇತ್ಯಾದಿ. ಬೇರೆ ಬೇರೆ ಮುದ್ರಕರೂ ಪ್ರಕಾಶಕರೂ ಪ್ರೂಫ್ ನೋಡಲು ಕೊಡುತ್ತ ಇದ್ದರು. ಕ್ರೌನ್ ಇಷ್ಟು ಪುಟಗಳಿಗೆ ಇಷ್ಟು, ಡೆಮಿ ಆದರೆ ಇಷ್ಟು ಎಂದು ಸಂಭಾವನೆಯೂ ಸಿಗುತ್ತಿತ್ತು.

ಪದವೀಧರನಲ್ಲದ, ಯಾವ ಮೇಷ್ಟ್ರೂ ಅಲ್ಲದ, ವೇತನ ಬಹಳ ಕಡಮೆ ಇರುವ, ನಿವೃತ್ತಿ ವೇತನ ಕನಸಿನಲ್ಲಿಯೂ ಕಾಣದ ನಾನು ಇಂಥವುಗಳಿಂದೆಲ್ಲ ಜೀವನ ನಿರ್ವಹಣೆ ಮಾಡುತ್ತಿದ್ದೆ.

ಭಾರತೀಯ ಕಾವ್ಯಮೀಮಾಂಸೆ, ಕವಿರಾಜಮಾರ್ಗ, ವಡ್ಡಾರಾಧನೆ, ಕಾನೂರು ಸುಬ್ಬಮ್ಮ ಹೆಂಡತಿ - ಇಂಥವುಗಳ ಮುದ್ರಣ ಮಾತ್ರ ಅಲ್ಲ, ಆ ಕಾಲದಲ್ಲಿ ಜನಪ್ರಿಯರಾಗಿದ್ದು ಅನಕೃ, ತರಾಸು, ತ್ರಿವೇಣಿ-ಇಂಥವರ ಆರು ಏಳು ಕಾದಂಬರಿಗಳನ್ನೂ ನಾನು ಮುದ್ರಣ ಮಾಡಿದ್ದಂತೆ ಸಿನಿಮಾಗಳಾಗಿ ಹೆಸರು ಗಳಿಸಿದ ನಾಗರಹಾವು, ಬೆಳ್ಳಿಮೋಡ-ಇಂಥವುಗಳ ಮೊದಲ ಮುದ್ರಕನಾಗಿ. ಸಾಹಿತ್ಯ ನನಗೆ ಬಲದ ಕಣ್ಣು; ಮುದ್ರಣ ಎಡದ ಕಣ್ಣು. ಬಹುಶಃ ಎರಡು ಸಾವಿರಕ್ಕೂ ಮಿಕ್ಕು ಪುಸ್ತಕಗಳನ್ನು ನಾನು ಮುದ್ರಣ ಮಾಡಿದ್ದೇನೆ. ಪುಸ್ತಕಗಳು ಇರಲಿ, ಒಂದು ಕರಪತ್ರವೂ ಶುದ್ಧವಾಗಿ ತಪ್ಪಿಲ್ಲದೆ ಇರಬೇಕು ಎಂಬ ಕೆಟ್ಟ ಚಟವುಳ್ಳವನು.

`ಎಲ್ಲಿ ಆ ಚೇರ್ ಈ ಕಡೆಗೆ ಎಳಕೊಳ್ಳಿ~ ಎನ್ನುತ್ತ ಒಂದು ಹಸ್ತಪ್ರತಿಯನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು, `ಇದು ಪ್ರಿಂಟಿಂಗ್‌ನಲ್ಲಿ ಎಷ್ಟು ಪುಟ ಬರುತ್ತದೆ, ಕಾಗದ ಎಷ್ಟು ಬೇಕಾಗುತ್ತದೆ, ಮುದ್ರಣ ವೆಚ್ಚ ಎಷ್ಟು ಬೀಳುತ್ತದೆ~ ಎಂದು ಕೇಳುತ್ತಿದ್ದ ಕುವೆಂಪು ಅವರ ಪ್ರಶ್ನೆಗಳಿಗೆ ಉತ್ತರ ಹೇಳುವುದೇನೋ ನನಗೆ ಸಲೀಸು ಕೆಲಸ. ಆದರೆ ಅವರ ಸಮ ಸಮ ಕುಳಿತುಕೊಳ್ಳುವುದು ಇದೆಯಲ್ಲ, ಅದು ಮುಜುಗರ ಎಂದರೆ ಮಹಾ ಮುಜುಗರದ ಕೆಲಸ. ಮಾಸ್ತಿ, ಕುವೆಂಪು ಇಂಥ ದೊಡ್ಡವರು ಮತ್ತೊಬ್ಬರ ಬಗ್ಗೆ ಒಂದು ಕೆಟ್ಟ ಮಾತು ಆಡಿದ್ದನ್ನು ನಾನು ಎಂದೂ ಕೇಳಿಲ್ಲ; ನೋಡಿಲ್ಲ.

ಮೊದಲು ಮೊದಲು ಕುವೆಂಪು, ಮಾಸ್ತಿ, ಡಿವಿಜಿ ಇಂಥವರ ಬಳಿ ಹೋಗುವಾಗ ನನಗೆ ಹೆದರಿಕೆಯೇ ಆಗುತ್ತಿತ್ತು. ಕಾರಣ ತುಂಬಾ ದೊಡ್ಡವರು ಎಂದು. ಆಮೇಲೆ ಸಲೀಸು. ಭಯ ಹೊರಟು ಹೋಯಿತು.

ಇದಕ್ಕೆ ಕಾರಣ ತೀನಂಶ್ರಿಯಂಥವರು `ನಮ್ಮ ಶೇಷನಾರಾಯಣ ಒಂದು ಸಲ ನೋಡಿದರೆ ಸಾಕು. ಒಂದು ತಪ್ಪೂ ಉಳಿಯಲು ಸಾಧ್ಯವೇ ಇಲ್ಲ~- ಹೀಗೆ ಹೇಳುತ್ತ ಇದ್ದುದೇ.
ಮಾಸ್ತಿಯವರಂತೂ ಇನ್ನೂ ಮುಂದುವರಿದು `ಆಹಾ, ಚೆನ್ನಾಗಿ ಮುದ್ರಣ ಮಾಡಿದೀರಿ ಶೇಷನಾರಾಯಣ, ಚೆನ್ನಾಗಿ ಮಾಡಿದೀರಿ. ಮಲ್ಲಿಗೆ ಮೊಗ್ಗು ಅರಳಿದ ಹಾಗೆ~ ಎನ್ನುತ್ತ ಇದ್ದರು. ತಮಗೆ ಮೆಚ್ಚಿಕೆಯಾಗಿ ಸಂತಸವಾದರೆ ದ್ವಿರುಕ್ತಿ, ಎರಡೆರಡು ಸಲ ಹೇಳುವುದು ಮಾಸ್ತಿಯವರ ರೂಢಿ.

ಮಲ್ಲಿಗೆ ಮೊಗ್ಗಿಗೂ ಮುದ್ರಣ ಮುಗಿಸಿದ ಹಾಳೆಗೂ ಹೋಲಿಕೆ.

ನಾನು ಸಾಹಿತ್ಯ ಪರಿಷತ್ತಿನ ಅಚ್ಚುಕೂಟಕ್ಕೆ ಕೆಲಸಕ್ಕೆ ಸೇರಿದಾಗ, ಈರ್ವರು ಮಹನೀಯರು ಹಗಲೂ ಇರುಳೂ ಅಲ್ಲಿ ದುಡಿಯುತ್ತ ಇದ್ದರು. ಅವರೆಂದರೆ ಜಿ.ವಿ ಮತ್ತು ಎರಡನೆಯವರು ಬಸವಾರಾಧ್ಯರು. ಜಿ.ವಿ. ನಿಘಂಟು ಗುದ್ದಾಟದೊಂದಿಗೆ ವಿಧಾನಸೌಧಕ್ಕೂ ಪ್ರದಕ್ಷಿಣೆ ಹಾಕುತ್ತ ಇದ್ದರು. ಅನುದಾನ ಹೆಚ್ಚಳಕ್ಕೆ ಈ ಅಲೆದಾಟ. ಬಸವಾರಾಧ್ಯರೋ ನಿಘಂಟು ಕೆಲಸಕ್ಕಾಗಿ ತಮ್ಮ ಜೀವವನ್ನೇ ತೇಯ್ದರು.

ಆದರೆ ಪರಿಷತ್ತಿಗೆ ಹಣದ ಹರಿವು ಹೆಚ್ಚಿದ್ದು ಜಿ. ನಾರಾಯಣರ ಕಾಲದಲ್ಲಿ ಮಾತ್ರ. `ಕನ್ನಡದ ಕೆಲಸಗಳಿಗೆ ಸರ್ಕಾರ ಹಣ ಕೊಡುವುದಿಲ್ಲ. ಎನ್ನುತ್ತಿದೆ~ ಎಂದು ಅವರು ಒಂದು ಹೇಳಿಕೆ ನೀಡಿದರೆ ಸಾಕು. ಆ ಪಕ್ಷದ ಆ ಸರ್ಕಾರಕ್ಕೇ ಕೇಡುಗಾಲ. ಯಾಕೆಂದರೆ ಜಿ. ನಾರಾಯಣ ಅವರಿಗೆ ಅಂಥ ಸಾಮರ್ಥ್ಯ ಇತ್ತು. ಪ್ರಾಮಾಣಿಕತೆ, ಸರಳ ಜೀವನಕ್ಕೆ ಮತ್ತೊಂದು ಹೆಸರು ಜಿ. ನಾರಾಯಣ.

ಜಿ. ನಾರಾಯಣರ ಕಾಲದಲ್ಲಿ, ಪರಿಷತ್ತಿನ ಆಡಳಿತದಲ್ಲಿ ಭಾರಿ ಬದಲಾವಣೆಯಾಯಿತು. ಸದಸ್ಯರ ಸಂಖ್ಯೆ ಹೆಚ್ಚಿತು. ಬರೇ ಸಾಹಿತಿಗಳಿಗೇ ಈ ಸಂಸ್ಥೆ ಎಂದು ಇದ್ದುದು, ಜನಸಾಮಾನ್ಯರೂ ಇತ್ತ ನೋಡುವಂತಾಯಿತು. ಹಣದ ವಹಿವಾಟು ಹೆಚ್ಚಿತು. ಜಿಲ್ಲೆಗಳಲ್ಲಿ ಸಾಹಿತ್ಯ ಪರಿಷತ್ತಿನ ಶಾಖೆಗಳೂ ತೆರೆದುವು.

ಇನ್ನೂರು, ಮುನ್ನೂರು ಸದಸ್ಯರು ಇದ್ದ ಸಾಹಿತ್ಯ ಪರಿಷತ್ತಿನಲ್ಲಿ, ಈಗ ಓಟು ಮಾಡಲು ಒಂದು ಲಕ್ಷಕ್ಕೂ ಮೀರಿದ ಸದಸ್ಯರು ಸಾಲುಗಟ್ಟಿ ನಿಲ್ಲುತ್ತಾರೆ ಎಂದರೆ ಈಗ ನಂಬಬೇಕು. ನಾವು ಓಟು ಮಾಡುವ ಕಾಲದಲ್ಲಿ ಇದ್ದುದು ಒಂದೇ ಸಾಲು ಸಂಖ್ಯೆ.

ಆಮೇಲೆ ಹಂಪನಾ ಬಂದರು. ಹಗರಣ ಮಾಡಿಕೊಂಡರು. ಗಂಡ-ಹೆಂಡತಿ ಇಬ್ಬರೂ ಕಾಲೇಜುಗಳಲ್ದ್ದ್‌ದರು. ಯಾವ ತಾಪತ್ರಯವೂ ಇಲ್ಲದ ಈ ಹಂಪನಾ ನ್ಯಾಯಾಲಯಕ್ಕೆ ಹೋಗುವಂಥಾದ್ದು ಪರಿಷತ್ತಿನ ದುರ್ದೈವ. ಈಗ ಆ ಹಳೆಯ ಕಥೆಗಳನ್ನು ನಿಲ್ಲಿಸಿ ಮುಂದಿನ ವಿಚಾರಗಳಿಗೆ ಬರೋಣ.

ಎಂದಿನಂತೆ ಹಾಲಿ ಅಧ್ಯಕ್ಷರ ಅವಧಿ ಮುಗಿಯಿತು. ಹೊಸ ಅಧ್ಯಕ್ಷರ ಚುನಾವಣೆ ಆಗಬೇಕು. ಮುಂದಿನ ತಿಂಗಳ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುತ್ತದೆ. ಕೇಂದ್ರದ ಅಧ್ಯಕ್ಷರಾಗಲು, ಜಿಲ್ಲೆಗಳಿಗೆ ಅಧ್ಯಕ್ಷರಾಗಲು ತೀವ್ರ ಪೈಪೋಟಿಯಿದೆ. ಇದು ಸಹಜ.

ಆದರೆ ಚಾಮರಾಜಪೇಟೆಯ ನಡುಮಧ್ಯದಲ್ಲಿ ಇರುವ ಈ ಕನ್ನಡ ಸಾಹಿತ್ಯ ಪರಿಷತ್ತು ಒಂದು ಕಾಲದಲ್ಲಿ `ಇದು ಸಾಹಿತಿಗಳಿಗೆ, ಸಾಹಿತ್ಯ ಸಂಸ್ಥೆಗೆ ಸೇರಿದ ಕಟ್ಟಡ. ಇಲ್ಲಿ ನಮಗೆ ಏನೂ ಕೆಲಸ ಇಲ್ಲ~ ಎಂದು ಅದನ್ನು ದಾಟಿ ಮುಂದೆ ಹೋಗುತ್ತಿದ್ದವರು, ಈಗ ಒಂದು ಲಕ್ಷದಷ್ಟು ಜನ ಇಲ್ಲಿ ನಾವೂ ನೋಡುವಂಥದು ಇದೆ ಎಂದು ಒಳ ಪ್ರದೇಶಿಸುವಂತೆ ಆದದ್ದು ಸ್ವಾಗತಾರ್ಹವೇ. ಇದುವೇ ಪ್ರಜಾಪ್ರಭುತ್ವ ಆದರೆ, ಇದು ಬರೇ ಸಂಖ್ಯಾಬಲ ಆಗಬಾರದು, ಅಷ್ಟೇ.

ಈಗ ಹೆಚ್ಚು ಕಡಿಮೆ `ನನ್ನನ್ನು ಆಯ್ಕೆ ಮಾಡಿ~ ಎಂದು ವಿನಂತಿಸಿಕೊಂಡು ಕಾಗದಗಳು ಬರುತ್ತ ಇವೆ. ಇದೂ ನಡೆಯಬೇಕಾದ ಕಾರ್ಯವೇ.

ಹೀಗೆ ಬರುತ್ತ ಇರುವ ಕಾಗದಗಳಲ್ಲಿ ಇಬ್ಬರು ಮೂವರು ನನಗೆ ಅತ್ಯಂತ ಪರಿಚಿತರೇ. ಚಂಪಾ ಮತ್ತು ಜರಗನಹಳ್ಳಿ, ಪುಂಡರೀಕ ಹಾಲಂಬಿ. ಹಾಲಂಬಿಯವರ ಮುಖತಃ ಪರಿಚಯ ಅಷ್ಟಾಗಿ ಇಲ್ಲದಿದ್ದರೂ ದೀರ್ಘಕಾಲದಿಂದ ಪರಿಷತ್ತಿನಲ್ಲಿಯೇ ಇರುವವರು. ಜರಗನಹಳ್ಳಿ ಶಿವಶಂಕರರೂ ಅಷ್ಟೆ. ಚುಟುಕು ಕವಿಯಾದ ಇವರು ಎಲ್ಲರಿಗೂ ಪರಿಚಿತರೇ. ಚಂಪಾ ಸರಿಯೇ ಸರಿ, ಹಿಂದೆಯೂ ಅಧ್ಯಕ್ಷರಾಗಿದ್ದವರು. ಸಾಹಿತ್ಯ ವಲಯದಲ್ಲಿ ಎಲ್ಲರೂ ವಿನಂತಿಸಿಕೊಂಡಿದ್ದಾರೆ.

ಮೊನ್ನೆ ಒಂದು ಪೋಸ್ಟ್‌ಕಾರ್ಡ್ ಬಂದಿದೆ. ಅದು ಮುದ್ರಣವಾದ ಒಂದು ಕಾರ್ಡ್. ಅದರಲ್ಲಿ ತಪ್ಪುಗಳೇ ತುಂಬಿವೆ. ಸಾಹಿತಿಗಳು, ಮೇಷ್ಟ್ರುಗಳು, ಕೊನೆಯ ಪಕ್ಷ ಕಾಗದಗಳಲ್ಲಾದರೂ ಸರಿಯಾಗಿ ಬರೆಯದಿದ್ದಲ್ಲಿ, ಇನ್ನು ಯಾರು ಬರೆಯಬೇಕು? ಆ ಕಾಗದದ ವಿವರ ಹೀಗಿದೆ:
ಪೂಜ್ಯಾ ಗುರುಗಳೇ/ ಆತ್ಮೀಯರೆ/ ಹಿತೈಷಿಗಳೇ/ ಕನ್ನಡದ ಬಂಧುಗಳೇ,
ಗುರುಗಳಿಗೂ ಹಿತೈಷಿಗಳಿಗೂ ಕನ್ನಡದ ಬಂಧುಗಳಿಗೂ ಪಕ್ಕದ ದೀರ್ಘ ಇದ್ದ ಮೇಲೆ ಆತ್ಮೀಯರಿಗೂ ಹಾಕಬೇಕಿತ್ತು. ಇಲ್ಲದೇ ಎಲ್ಲದಕ್ಕೂ ಬಿಡಬಹುದಿತ್ತು. ಇದು ಅಂಥ ಹೇಳಿಕೊಳ್ಳುವ ತಪ್ಪೇನೂ ಅಲ್ಲ, ಬಿಡೋಣ.

ಆದರೆ ಪೂಜ್ಯಾ ಆಗಬಾರದು. ಪೂಜ್ಯ ಆದರೆ ಸಾಕು.

ನಾನು ಖಂಡಿತ ಗುರುಗಳೂ ಅಲ್ಲ. ಯಾವ ಮಠವೂ ನನಗೆ ಇಲ್ಲ.

ಆಮೇಲೆ `ತಮ್ಮೆಲ್ಲರ ಆರ್ಶೀವಾದ ಬಯಸುತ್ತಾ ಮಾರ್ಗದರ್ಶನದಂತೆ~ ಎಂದಿದೆ. `ಚುನಾವಣೆ ಹಿನ್ನಲೆ~ ಇದೆ.

`ಆರ್ಶೀವಾದ~ ಅಲ್ಲ. ಇದು `ಆಶೀರ್ವಾದ~ ಆಗಬೇಕು. `ಹಿನ್ನಲೆ~ ಅಲ್ಲ, ಹಿನ್ನೆಲೆ.
 

`ಮಾರ್ಗದರ್ಶನದ್ದಂತೆ ಅಲ್ಲ~. ಮಾರ್ಗದರ್ಶನ ಸಾಕು.

ಈಗ ಒಂದು ಹಳೆಯ ವಿಚಾರ ನೆನಪಿಗೆ ಬರುತ್ತ ಇದೆ. ನನ್ನ `ಅಯೋಧ್ಯೆಯಲ್ಲಿ ರಾಮನಿಲ್ಲ~ ಎನ್ನುವ ರಾಜಕೀಯ ಕಾದಂಬರಿಯನ್ನು ಒಬ್ಬ ಪ್ರಕಾಶಕರು ರಾಜ್ಯೋತ್ಸವದ ದಿನವೇ ಬಿಡುಗಡೆ ಮಾಡಿದರು. ಈಗ ಆ ಪ್ರಕಾಶಕರು ನಿಧನರಾಗಿದ್ದಾರೆ. ಬಿಡುಗಡೆಯಾದ ಐದು ತಿಂಗಳಲ್ಲಿಯೇ 3000 ಪ್ರತಿಗಳು ಖರ್ಚಾಗಿವೆ. ಅವರ ಹೆಸರು ಬೇಡ.

ಆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದವರು ನಮ್ಮ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಬಿ.ಟಿ. ಲಲಿತಾ ನಾಯಕರ ಉಪಸ್ಥಿತಿ. ಪುಸ್ತಕ ಪರಿಚಯಿಸುತ್ತ ಒಬ್ಬ ಮಹಾನುಭಾವರು ಉದ್ದಕ್ಕೂ `ರಾಜ್ಯೋಸ್ತವ~, `ರಾಜ್ಯೋಸ್ತವ~ ಎಂದು ಹೇಳಿಕೊಂಡು ಹೋದರೆ ಹೊರತು, ಅಪ್ಪಿತಪ್ಪಿಯೂ `ರಾಜ್ಯೋತ್ಸವ~ ಎನ್ನಲಿಲ್ಲ.

ಈಗ ಇಂಥ ವಿಚಾರಗಳಿಗಾಗಿಯೇ ನನಗೆ ಭಯ ಎಂದರೆ ಭಯ.

ಮುಂದೆ ಒಂದು ಕಾಲದಲ್ಲಿ ಕನ್ನಡನಾಡಿನ ಜನಸಂಖ್ಯೆ ಹತ್ತು ಕೋಟಿ ಆಗುತ್ತದೆ. ಆಗ ಕ್ರಮದಂತೆ ಪರಿಷತ್ತಿನ ಸದಸ್ಯರ ಸಂಖ್ಯೆ ಐವತ್ತು ಲಕ್ಷ ಆಗಿಬಿಡುತ್ತದೆ. ಈಗಿನ ಸದಸ್ಯರು ಎಲ್ಲರೂ ಸ್ವರ್ಗ ಹೋಗಿ ಸೇರಿಬಿಟ್ಟಿರುತ್ತಾರೆ. ಹೊಸ ಸದಸ್ಯರ ಸಂಖ್ಯಾಬಲ ವಿಜೃಂಭಿಸುತ್ತದೆ.

ಆಗ ಪರಿಷತ್ತಿನ ಅಧ್ಯಕ್ಷನಾಗಿ ಒಬ್ಬ ಧನಿಕನೇ ಬಂದು ಬಿಡುತ್ತಾನೆ. ಈತ ಒಂದು ರಾಜಕೀಯ ಪಕ್ಷದವನು. ರಾಜಕೀಯದಲ್ಲಿ ಸೋತ ಒಬ್ಬ ಎಂ.ಎಲ್.ಎ. ಮಹತ್ವಾಕಾಂಕ್ಷಿ. ಕೋಟಿಗಳನ್ನು ಚೆಲ್ಲುವವನು. ಈಗ ಕೋಟಿ ಎನ್ನುವುದು ಲೆಕ್ಕಕ್ಕಿಲ್ಲವಷ್ಟೆ. ಒಂದು ದಿನಪತ್ರಿಕೆಯ ಮೊದಲ ಪುಟದಿಂದ ಹನ್ನೆರಡನೆಯ ಪುಟಗಳವರೆಗೆ ಬರೇ ಕೋಟಿಗಳ ಲೆಕ್ಕವೇ ಇರುತ್ತದೆ.

ಈತ ಕೃಷ್ಣನ ಪಕ್ಷಕ್ಕೆ ಸೇರಿದವನು. ಬಾಯಲ್ಲಿ ಸದಾ ರಾಮರಾಜ್ಯ. ಆದರೆ `ನಾಲಗೆ ಎಳೆದು ಹಾಕಿ, ಕೈಕಾಲು ಕತ್ತರಿಸಿ~ ಎಂದು ಹೇಳುತ್ತ ಇರುತ್ತಾನೆ. ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಾನೆ. ಇಂಥವರೇ ತಾನೇ ಈಗ ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳಾಗಿರುವುದು.

ಕನ್ನಡ ಸಾಹಿತ್ಯ ಪರಿಷತ್ತಿಗೂ ಮುಂದೆ ಇಂಥವನೇ ಒಬ್ಬ ಅಧ್ಯಕ್ಷನಾಗಬಹುದೆ? ಸಂಖ್ಯಾಬಲ ಒಳ್ಳೆಯದೋ? ಕೆಟ್ಟದ್ದೊ? ಈ ಸಂಖ್ಯಾಬಲ ನಮ್ಮ ಸಾಹಿತ್ಯ ಪರಿಷತ್ತನ್ನೂ ಎಲ್ಲಿಗೆ ಕೊಂಡೊಯ್ಯುತ್ತದೆಯೋ?

ಆದರೆ ಅಂಥ ಸ್ಥಿತಿಯನ್ನು ನೋಡಲು ನಾನಿರುವುದಿಲ್ಲ. ಈಗಲೆ ನನಗೆ ಎಂಬತ್ತೈದು ಮುಗಿದಿದೆ. ಮುಂದೆ ನನ್ನ ಮೊಮ್ಮಗನೋ ಮರಿಮಗನೋ ಈ ನೋಟಗಳನ್ನು ನೋಡಿಯಾನು. ನಾನೂ ಪರಿಷತ್ತಿನ ಆಜೀವ ಸದಸ್ಯರಲ್ಲಿ ಒಬ್ಬನಾಗಿರುವುದರಿಂದ ಈ ಅನಿಸಿಕೆ ಹಂಚಿಕೊಂಡಿದ್ದೇನೆ.

 (ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in)
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT