ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಹೊತ್ತಿ ಉರಿದೊಡೆ?

ಅಕ್ಷರ ಗಾತ್ರ

ಅಂದು ನಸುಕಿನ ಮಸುಕು ಹರಿಯುವ ಮುನ್ನವೇ ಬೆಂಗಳೂರಿನ ಅತಿದೊಡ್ಡ ಕೆರೆಯೆಂದೇ ಪ್ರಖ್ಯಾತವಾದ ಬೆಳ್ಳಂದೂರು ಕೆರೆ, ಯಮಲೂರಿನ ಭಾಗದಲ್ಲಿ ಹೊತ್ತಿ ಉರಿಯುತ್ತಿತ್ತು!

ನಾಲ್ಕು ಅಡಿ ಎತ್ತರದ ನೊರೆಯ ಮೇಲೆ ನರ್ತಿಸುತ್ತಿದ್ದ ಜ್ವಾಲೆಗಳನ್ನು ಕಂಡು ನಾಗರಿಕರು ಬೆರಗಾದರು. ಬೆಂಗಳೂರಿನ ಇತಿಹಾಸದಲ್ಲಿ ಕೆರೆಗಳು ನೊರೆ ತುಂಬಿದ್ದು ಇತ್ತಾದರೂ, ಹೊತ್ತಿ ಉರಿದ ಉದಾಹರಣೆಗಳು ಇರಲಿಲ್ಲ. ಎಲ್ಲರಲ್ಲೂ ಆಶ್ಚರ್ಯ, ಆತಂಕವನ್ನು ಉಂಟು ಮಾಡಿದ ವಿದ್ಯಮಾನ, ಉರಿ ನಂದುತ್ತಿದ್ದಂತೆಯೇ ಮರೆಯಾಯಿತು. ಇದರ ಹಿಂದಿರುವ ಕಾರಣ, ಇದು ನೀಡುತ್ತಿರುವ ಎಚ್ಚರಿಕೆಯ ಸಂಕೇತ ಜನಸಾಮಾನ್ಯರನ್ನು ತಲುಪಲೇ ಇಲ್ಲ.

ತನ್ನ ಸಹಜವಾದ ಬಣ್ಣ, ವಾಸನೆ, ರುಚಿಯನ್ನು  ಮಾರ್ಪಡಿಸಿ ಅನುಪಯುಕ್ತವಾಗಿಸುವಂತಹ ವಸ್ತುಗಳು  ಸೇರಿದಾಗ ನೀರು ಮಲಿನವಾಗುತ್ತದೆ. ರಾಸಾಯನಿಕ ವಿಜ್ಞಾನದ ದೃಷ್ಟಿಯಿಂದ ನೋಡಿದಾಗ ‘ಶುದ್ಧ ನೀರು’ ಎನ್ನುವುದು ಇಲ್ಲವೇ ಇಲ್ಲ.

ನೀರಿನಲ್ಲಿ ಕರಗಿರುವ ಮತ್ತು ತೇಲುತ್ತಿರುವ ಹಲವಾರು ವಸ್ತುಗಳಿವೆ. ಹೈಡ್ರೋಜನ್‌ ಸಲ್ಫೈಡ್‌, ಕಾರ್ಬನ್‌ ಡೈ ಆಕ್ಸೈಡ್‌, ಅಮೋನಿಯಾ, ಆಕ್ಸಿಜನ್‌ ಮುಂತಾದ ಅನಿಲಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನಿಷಿಯಂ ಮತ್ತು ಸೋಡಿಯಂನ ಲವಣಗಳೂ ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಕರಗಿರುತ್ತವೆ.

ಮರಳು, ಜೇಡಿಮಣ್ಣು ಮತ್ತು ಹೂಳಿನ ಅತಿ ಸೂಕ್ಷ್ಮ ಕಣಗಳು ನೀರಿನಲ್ಲಿ ಹರಡಿರುತ್ತವೆ. ಸೂಕ್ಷ್ಮ ಜೀವಿಗಳೂ ಇರುತ್ತವೆ. ಆದರೆ ಅವು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ, ನೀರಿನ ಸಹಜ ಗುಣವನ್ನು ಬದಲಿಸುವುದಿಲ್ಲ. ಆದ್ದರಿಂದ ನೀರು ಬಗ್ಗಡವಾಗುವುದಿಲ್ಲ. ಆದರೆ ನಗರವೊಂದರಿಂದ ಕೆರೆಗಳಿಗೆ ಸೇರುತ್ತಿರುವ ಚರಂಡಿಯ ನೀರಿನಲ್ಲಿ ಮಲ ಮೂತ್ರ, ಕೊಳೆತ ತರಕಾರಿ, ಪ್ಲಾಸ್ಟಿಕ್‌ ಮುಂತಾದ ವಸ್ತುಗಳಿರುತ್ತವೆ.

ಮಾಲಿನ್ಯಕಾರಕ ವಸ್ತುಗಳು ನೀರನ್ನು ಸೇರಿದಾಗ, ಅದರ ಮೇಲೆ ನೀರಿನಲ್ಲಿರುವ ಎರಡು ರೀತಿಯ ಸೂಕ್ಷ್ಮ ಜೀವಿಗಳು ರಾಸಾಯನಿಕ ಕ್ರಿಯೆ ನಡೆಸುತ್ತವೆ. ವಾಯು ಜೀವಿಗಳು ಮತ್ತು ಅವಾಯು ಜೀವಿಗಳು ಎಂದು ಇವನ್ನು ಕರೆಯುತ್ತಾರೆ. ವಾಯು ಜೀವಿಗಳ ಕ್ರಿಯೆಗೆ ಆಮ್ಲಜನಕ ಅತ್ಯವಶ್ಯಕ. ಆದ್ದರಿಂದ ಇವು ನೀರಿನ ಮೇಲ್ಪದರದಲ್ಲಿ ಮಾತ್ರ ವಾಸಿಸುತ್ತವೆ.

ಅವಾಯು ಜೀವಿಗಳಿಗೆ ಆಮ್ಲಜನಕ ಬೇಕಾಗಿಲ್ಲವಾದ್ದರಿಂದ ನೀರಿನ ಆಳದಲ್ಲಿ ಜೀವಿಸುತ್ತವೆ. ವಾಯು ಜೀವಿಗಳು ತ್ಯಾಜ್ಯ ವಿಘಟಿಸುವ ಮೂಲಕ ಸಂಕೀರ್ಣ ಸಾವಯವ ಪದಾರ್ಥಗಳನ್ನು ನಿರವಯವ ಪದಾರ್ಥ ನೀರು ಮತ್ತು ಅನಿಲಗಳನ್ನಾಗಿ ಪರಿವರ್ತಿಸುತ್ತವೆ. ತ್ಯಾಜ್ಯ ಪದಾರ್ಥಗಳನ್ನು ಜೀರ್ಣಿಸುವ ಈ ಕೆಲಸಕ್ಕೆ ಆಮ್ಲಜನಕ ಬೇಕೇ ಬೇಕು.

ಇದಕ್ಕಾಗಿ ಅವು ನೀರಿನಲ್ಲಿ ಕರಗಿದ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ಇದರಿಂದ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕಡಿಮೆ ಆಗುತ್ತದೆ. ನೀರಿನಲ್ಲಿರುವ ಶೈವಲಗಳು ಮತ್ತು ಕೆಲ ಪ್ರಭೇದದ ಜೀವಿಗಳು ದ್ಯುತಿ ಸಂಶ್ಲೇಷಣ ಕ್ರಿಯೆಯಲ್ಲಿ ತೊಡಗುತ್ತವೆ. ಇದರಲ್ಲಿ ಬಿಡುಗಡೆಯಾದ ಆಮ್ಲಜನಕ ಮತ್ತೊಮ್ಮೆ ನೀರಿಗೆ ಸೇರಿ ಸಮತೋಲನ ಉಂಟು ಮಾಡುತ್ತದೆ.

ಕೆರೆಯ ನೀರಿಗೆ ಸೇರುವ ಮಲಿನ ವಸ್ತುಗಳ ಪ್ರಮಾಣ ಹೆಚ್ಚಾದಂತೆ ಅದನ್ನು ಜೀರ್ಣಿಸಲು ಬೇಕಾದ ಆಮ್ಲಜನಕದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಹೀಗೆ ನೀರಿನಲ್ಲಿರುವ ಆಮ್ಲಜನಕವೆಲ್ಲವೂ ಮುಗಿಯುತ್ತಿದ್ದಂತೆ, ವಾಯು ಜೀವಿಗಳು ಮತ್ತು ಪ್ರೋಟೊ ಜೀವಿಗಳು ಸಾಯಲು ಪ್ರಾರಂಭಿಸುತ್ತವೆ.

ಅವಾಯು ಜೀವಿಗಳು ನೀರಿನ ಮೇಲ್ಪದರಕ್ಕೆ ಬಂದು ತ್ಯಾಜ್ಯ ವಸ್ತುಗಳಲ್ಲಿರುವ ಹೈಡ್ರೋಜನ್‌ ಅನ್ನು ಬಿಡುಗಡೆ ಮಾಡುತ್ತವೆ. ಈ ಹೈಡ್ರೋಜನ್‌, ತ್ಯಾಜ್ಯ ವಸ್ತುಗಳಿಂದ ಬರುವ ಗಂಧಕದ ಜೊತೆ ಸೇರಿ ದುರ್ನಾತ ಬೀರುವ ಹೈಡ್ರೋಜನ್‌ ಸಲ್ಫೈಡ್‌ ಅನಿಲವನ್ನು ಉತ್ಪತ್ತಿ ಮಾಡುತ್ತದೆ. ಆಗ ನೀರು ಬಗ್ಗಡವಾಗಿ ಸೂರ್ಯ ರಶ್ಮಿ ಪ್ರವೇಶಿಸಲು ಸಾಧ್ಯವಾಗದಂತೆ ಮಾಡುತ್ತದೆ. ಸೌರಶಕ್ತಿ ದೊರೆಯದಾದಾಗ, ಶೈವಲಗಳು ಸಾಯುತ್ತವೆ. ಇತರ ಜೀವಿಗಳೂ ಅವನ್ನು ಹಿಂಬಾಲಿಸುತ್ತವೆ. ಆಗ ಜೀವಂತವಾದ ಸ್ವಚ್ಛ ನೀರಿನ ಕೆರೆ ಉಳಿದೆಲ್ಲ ಜೀವಿಗಳಿಗೆ ಮಾರಕಪ್ರಾಯವಾದ, ಕೊಳಕು ಗುಂಡಿಯಾಗುತ್ತದೆ.

ಮನೆಗಳಲ್ಲಿ ಬಳಸುವ ಶಾಂಪೂ, ಟೂತ್‌ ಪೇಸ್‌್ಟ, ಕೀಟನಾಶಕಗಳು, ವಾಷಿಂಗ್‌ ಮಷಿನ್‌ಗಳಲ್ಲಿ ಹೇರಳವಾಗಿ ಬಳಸುವ ಡಿಟರ್ಜೆಂಟುಗಳು,  ಚರ್ಮ ಹದ ಮಾಡುವ ಕಾರ್ಖಾನೆಗಳು, ಬಣ್ಣ ಹಾಗೂ ಪ್ಲಾಸ್ಟಿಕ್‌ ತಯಾರಕಾ ಘಟಕಗಳು ಹೊರಹಾಕುವ ವಸ್ತುಗಳು ಅಂತಿಮವಾಗಿ ನೊರೆಗೆ ಕಾರಣವಾಗುತ್ತವೆ. ಈ ವಸ್ತುಗಳು ನೀರಿನಲ್ಲಿ ಕರಗಿರುವ ಅನಿಲಗಳು ಹಾಗೂ ತೈಲದೊಂದಿಗೆ ಸೇರಿ ನೀರಿನ ಮೇಲ್ಮೈ ಮೇಲೆ ಉಂಟಾಗುವ ಎಳೆತದಿಂದ (Surface tension) ನೀರಿನ ಗುಳ್ಳೆಗಳನ್ನು ಉಂಟು ಮಾಡುತ್ತವೆ.

ಈ ಗುಳ್ಳೆಗಳು ಗಾಳಿಯೊಂದಿಗೆ ಸೇರಿ ನೊರೆಯನ್ನು ಉಂಟು ಮಾಡುತ್ತವೆ. ಈ ನೊರೆಯಲ್ಲಿ ಸೇರಿರುವ ತ್ಯಾಜ್ಯಗಳ ರಾಸಾಯನಿಕಗಳು ಅದು ಬಹಳ ವಿಸ್ತಾರವಾಗಿರುವ ಮೇಲ್ಮೈ ಮೇಲೆ ದೀರ್ಘಕಾಲ ಉಳಿಯುವಂತೆ ಮಾಡುತ್ತವೆ. ನೀರಿಗೆ ಬರುವ ತ್ಯಾಜ್ಯದ ಪ್ರಮಾಣ ಹೆಚ್ಚಾದಂತೆ ನೊರೆಯೂ ಹೆಚ್ಚಾಗಿ, ಉಕ್ಕಿ ಹರಿಯುತ್ತದೆ. ಇಂತಹದೇ ಪರಿಣಾಮ ವರ್ತೂರು ಕೆರೆಯಲ್ಲಿ ಕಂಡುಬಂದಿತ್ತು. ಇದು ಪ್ರಾಣಿ, ಪಕ್ಷಿಗಳು, ಮನುಷ್ಯರು, ಸಸ್ಯವರ್ಗಕ್ಕೂ ಅಪಾಯಕಾರಿ.

ಬೆಂಗಳೂರಿನ ಜನದಟ್ಟಣೆಯ ಹೆಚ್ಚಳದೊಂದಿಗೆ ಕೆರೆಗೆ ಸೇರುವ ಕೊಳಕು ನೀರಿನ ಪ್ರಮಾಣವೂ ಹೆಚ್ಚಾಗಿದೆ. ಅದರಲ್ಲೂ ಈ ನೀರು ಯಾವುದೇ ಸಂಸ್ಕರಣೆಗೆ ಒಳಗಾಗದೆ ಕೆರೆಗಳನ್ನು ಸೇರಿದಾಗ ಅಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಜೀರ್ಣಿಸುವಷ್ಟು ಆಮ್ಲಜನಕ ದೊರೆಯದೇ ಹೋಗುವುದರಿಂದ ಅವಾಯು ಜೀವಿಗಳು ನೀರಿನ ಮೇಲ್ಪದರದಲ್ಲಿ ಹೈಡ್ರೋಜನ್‌ ಸಲ್ಫೈಡ್‌ ಅನಿಲವನ್ನು ಉತ್ಪತ್ತಿ ಮಾಡುತ್ತವೆ. ಇದರೊಂದಿಗೆ ಮಿಥೇನ್‌ ಕೂಡಾ ಬಿಡುಗಡೆಯಾಗುತ್ತದೆ.  ಈ ಅನಿಲಕ್ಕೆ ಯಾವುದೇ ರೀತಿ ಬೆಂಕಿಯ ಸಂಪರ್ಕ ಬಂದಾಗ ಹೊತ್ತಿ ಉರಿಯುತ್ತದೆ.

ವರ್ತೂರು, ಬೆಳ್ಳಂದೂರು ಕೆರೆಗಳಲ್ಲೂ ಆದದ್ದು ಇದೇ. ಇಂತಹ ಘಟನೆಗಳು ಜಗತ್ತಿನ ಬೇರೆ ಭಾಗದಲ್ಲಿ ನಡೆದಿವೆಯಾದರೂ ಬೆಂಗಳೂರಿನಲ್ಲಿ ನಡೆದಿರುವುದು ಪ್ರಥಮ ಬಾರಿಗೆ ಎನ್ನುವುದು ಪರಿಣತರ ಅಭಿಪ್ರಾಯ. ಮನೆಗಳಲ್ಲಿ ಗೃಹಿಣಿಯರು ಒಮ್ಮೊಮ್ಮೆ ತಮ್ಮ ವಾಷ್‌ಬೇಸಿನ್‌ಗಳಿಂದ ಹೈಡ್ರೋಜನ್‌ ಸಲ್ಫೈಡ್‌ನ ವಾಸನೆ ಬರುವುದನ್ನು ಗಮನಿಸಿರಬಹುದು. ಇದು ಕೂಡಾ ಇಂತಹದೇ ಪ್ರಕ್ರಿಯೆಯ ಪರಿಣಾಮ. ಅಲ್ಲಿ ಮಿಥೇನ್‌ ಅನಿಲವೂ ಉತ್ಪತ್ತಿಯಾಗಬಹುದು. ಆ ಅನಿಲಕ್ಕೆ ಬೆಂಕಿ ತಗುಲಿದಲ್ಲಿ?

ಆದ್ದರಿಂದ ಹೊತ್ತಿ ಉರಿದ ಕೆರೆಗಳು ತಣ್ಣಗಾದವೆಂದು ನಾವು ತಣ್ಣಗೆ ಕೂಡುವಂತಿಲ್ಲ, ಇದು ನಾವು ಕೆರೆಗಳು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ತ್ಯಾಜ್ಯವನ್ನು ಸೇರಿಸುತ್ತಿರುವುದರ ಸಂಕೇತ. ಪರಿಸ್ಥಿತಿ ಕೈ ಮೀರುವ ಮುಂಚೆ ಎಚ್ಚೆತ್ತುಕೊಳ್ಳಬೇಕು. ಬೆಂಕಿ ನಂದಿಸುವ ನೀರೇ ಹೊತ್ತಿ ಉರಿದರೆ ಮಾಡುವುದೇನು ಎನ್ನುವಂತಿಲ್ಲ.

ತಕ್ಷಣವೇ ಕೆರೆ ಸೇರುವ  ಮಲಿನ ವಸ್ತುಗಳನ್ನು ಸಂಸ್ಕರಿಸುವುದೊಂದೇ ಇದಕ್ಕಿರುವ ಉತ್ತರ. ಬಿಬಿಎಂಪಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಎಂದು ಒಬ್ಬರ ಮೇಲೆ ಒಬ್ಬರು ಜವಾಬ್ದಾರಿಯನ್ನು ವರ್ಗಾಯಿಸದೇ ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT