ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಲಾಸೆ ಮಾಡುವವರೆಗೆ ಆರೋಪಿ ನಿರಪರಾಧಿ ಅಲ್ಲ

Last Updated 7 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಕ ರ್ನಾಟಕದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಬರೆದಿರುವ ಲೇಖನ (ಡಾ. ಟಿ.ಆರ್. ಚಂದ್ರಶೇಖರ, ಪ್ರ ವಾ ಅಭಿಮತ, ನ.24) ಅತ್ಯಂತ ಮೌಲಿಕವೂ ಸಕಾಲಿಕವೂ ಆಗಿದೆ. ಕರ್ನಾಟಕದ ಇಂದಿನ ರಾಜಕೀಯ ಎತ್ತ ಸಾಗುತ್ತಿದೆ ಎನ್ನುವ ಪೂರ್ಣ ಚಿತ್ರಣ ಯಥಾವತ್ತಾಗಿ ಅಲ್ಲಿ ಬಿಂಬಿತವಾಗಿದೆ.

ಒಂದು ಸಣ್ಣ ಉದಾಹರಣೆ ಹೇಳುವುದಾದರೆ ನಾವೂ, ಎಂದರೆ ಜನರೂ ಭ್ರಷ್ಟಾಚಾರಿಗಳಾಗಿದ್ದೇವೆ. ಒಂದು ಸಣ್ಣ ಕೆಲಸ ಮಾಡಿಸಿಕೊಳ್ಳಲೂ ಒಂದು ಸರ್ಕಾರದ ಆಫೀಸಿಗೆ ಹೋದರೆ ಲಂಚ ಕೊಟ್ಟೇ ಮಾಡಿಸಿಕೊಳ್ಳುತ್ತೇವೆ. ಹೀಗೆ ಹೇಳಿದರೆ ಜನ ಹೇಳುವುದೇ ಬೇರೆ: `ನಮ್ಮ ಕೆಲಸ ಬಿಟ್ಟು ಎಷ್ಟು ದಿನ ಅಲಿಯಾಕಾಗತೈತೆ ಸಾರ್, ಕಾಸು ಬಿಚ್ಚದಿದ್ದರೆ ಕೆಲಸವೇ ಆಗುವುದಿಲ್ಲ. ಏನಾದರೊಂದು ಕಾರಣ ತೆಗೆದು ಸುಮ್ಮನೇ ಅಲೀಸ್ತಾನೆ ಇರ‌್ತಾರೆ~ ಇತ್ಯಾದಿ.

ಡಿನೋಟಿಫಿಕೇಶನ್ ಹಗರಣಗಳಿಂದ ಅರ್ಧ ಡಜನ್ ಮಂತ್ರಿಗಳೂ, ಗಣಿ ಧಣಿಗಳೂ, ಇನ್ನಿತರೇ ಕಾರಣಕ್ಕಾಗಿ ಹಲವರೂ ಈಗ ಜೈಲು ಸೇರಿದ್ದಾರಷ್ಟೆ. ಜೈಲು ಸೇರಿದೊಡನೆ ಅವರು ಅಪರಾಧಿಗಳು ಆಗುವುದಿಲ್ಲ. ನಿರಪರಾಧಿಯೂ ಆಗುವುದಿಲ್ಲ. ಇದಕ್ಕೆ ವಿಧಿವಿಧಾನಗಳಿವೆ. ನ್ಯಾಯಾಲಯದಲ್ಲಿ ಸಾಕಷ್ಟು ವಾದ ಪ್ರತಿವಾದಗಳು ನಡೆದು ಅವನು ಅಪರಾಧಿ ಅಥವಾ ಅಪರಾಧಿ ಅಲ್ಲ ಎನ್ನುವುದು ತೀರ್ಮಾನವಾಗಬೇಕಾಗುತ್ತದೆ.

ಹೀಗೆ ತೀರ್ಮಾನ ಆಗುವವರೆಗೂ ಅವನು ಸೆರೆಮನೆಯಲ್ಲಿಯೇ ಇರಬೇಕಾಗುತ್ತದೆ. ಸ್ಥಾನಮಾನಗಳ ಸಲುವಾಗಿ ಕೆಲವರಿಗೆ ವಿಶೇಷ ಸಲಿಗೆಗಳು ಇರುತ್ತವೆ. ಮನೆಯೂಟ, ಸ್ನೇಹಿತರೊಡನೆ ಬಂಧು ಬಳಗದೊಂದಿಗೆ ಭೇಟಿ-ಇತ್ಯಾದಿ.

ಇಷ್ಟೆಲ್ಲ ಇದ್ದರೂ ಆತ ನಿರ್ದೋಷಿ ಎಂದು ತೀರ್ಪು ಹೊರಬೀಳುವವರೆಗೂ ಅವನು ಇಷ್ಟನೇ ನಂಬರ್ ಖೈದಿ ಎಂದೇ ಪರಿಗಣನೆಗೆ ಬರುತ್ತಾನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಅವರಿಗೂ ಒಂದು ನಂಬರ್ ಇದೆ. ಯಡಿಯೂರಪ್ಪ ಇಷ್ಟನೇ ನಂಬರ್ ಖೈದಿ ಎಂದು ಲೆಕ್ಕದ ಪುಸ್ತಕಗಳಲ್ಲಿ ನಮೂದಾಗಿರುತ್ತದೆ.

ಮೊನ್ನೆ ಕೇಂದ್ರದ ಮಂತ್ರಿಯಾದ ಎಸ್.ಎಂ. ಕೃಷ್ಣ, ಸಂಸದರಾದ ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ಇಂಥವರುಗಳ ಬಗ್ಗೆ ಗಣಿ ಅವ್ಯವಹಾರ ಆರೋಪಗಳು ಬಂದಿವೆ. ಇವರೆಲ್ಲರೂ ಅದನ್ನು ನಿರಾಕರಿಸಿದ್ದಾರೆ. ಆದರೆ ಆ ಬಗ್ಗೆ ವಿಚಾರಣೆಗಳು ನಡೆಯಬೇಕಿದೆ; ನಡೆಯುತ್ತದೆ. ಅಲ್ಲಿಯವರೆಗೂ ಎಂದರೆ ಸಾಬೀತು ಆಗುವವರೆಗೂ ಇಂಥವರು ಅಪರಾಧಿಯ ಪಟ್ಟಿಯಲ್ಲಿಯೇ ಇರುತ್ತಾರೆ. ಅಲ್ಲಿಗೆ ಎಲ್ಲ ಪಕ್ಷಗಳವರ ಮೇಲೂ ಆಪಾದನೆ ಹೊರಿಸಲಾಗಿದೆ.

ಈಗ ಸುಖರಾಂ ಅವರನ್ನು ಉದಾಹರಣೆ ತೆಗೆದುಕೊಳ್ಳೋಣ, ಇದು ಹಳೆಯ ಕೇಸು. ಈತ ಭ್ರಷ್ಟನೇ ನಿಜ ಎಂದು ನ್ಯಾಯಾಲಯ ತೀರ್ಮಾನಿಸಿತು. ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿತು. ಈತನ ಪ್ರಾಯ ಈಗ ಎಂಬತ್ತಾರು ವರ್ಷ. ಜೈಲುಶಿಕ್ಷೆ ಅನುಭವಿಸಿ ಈತ ಹೊರಬೇಕಾದರೆ ತೊಂಬತ್ತರ ಮನೆಯೂ ದಾಟೀತು. ಅಷ್ಟರವರೆಗೆ ಈತ ಬದುಕಿರುತ್ತಾನೋ ಇಲ್ಲವೋ, ಅನುಕಂಪದ ಆಧಾರದ ಮೇಲೆ, ಎಂದರೆ ವಯಸ್ಸಿನ ದೃಷ್ಟಿಯಿಂದ ಶಿಕ್ಷೆಯನ್ನು ತಡೆಹಿಡಿದಿದ್ದಾರೆ, ಅಷ್ಟೇ. ಆದರೆ ನ್ಯಾಯಾಲಯ ಈತ ಅಪರಾಧಿ ಎಂದು ಘೋಷಿಸಿದೆ.

ಎಷ್ಟೋ ದಿನಗಳು ಕಳೆದರೂ ನ್ಯಾಯಕ್ಕೇ ಜಯ ದೊರಕುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಅಪರಾಧಿ ಎಂದಾದರೂ ಒಂದು ದಿನ ತಾನು ಮಾಡಿದ ಅಪರಾಧಕ್ಕೆ ಶಿಕ್ಷೆಯನ್ನು ಅನುಭವಿಸಲೇಬೇಕು ಎನ್ನುವ ಕಾನೂನಿನ ಬಗ್ಗೆ ಗೌರವ ಮೂಡುವ ಹಾಗೆಯೂ ಇದೆ ಈ ಪ್ರಕರಣ.

ಆದರೆ, ಈಗ ಕರ್ನಾಟಕದಲ್ಲಿ ಏನಾಗಿದೆ? ನ್ಯಾಯಮೂರ್ತಿ ಸಂತೋಷ ಹೆಗ್ಡೆಯವರನ್ನು ತುಚ್ಛವಾಗಿ ಜರಿದು, ಅವರು ಒಂದು ಪಕ್ಷಕ್ಕೇ ಸೀಮಿತವಾದವರು ಎಂದು ಬೊಬ್ಬೆ ಹಾಕಲಾಗುತ್ತಿದೆ. ತನಗೆ ವಹಿಸಿದ ಕೆಲಸವನ್ನು ಹೆಗ್ಡೆಯವರು ಸಮರ್ಥವಾಗಿ ಮಾಡಿ ಮುಗಿಸಿದ್ದಾರೆ.

ಒಬ್ಬ ಶೇಷನ್, ಒಬ್ಬ ಸಂತೋಷ ಹೆಗ್ಡೆ-ಇಂಥವರನ್ನು ಜನ ಎಂದೂ ಮೆಚ್ಚುತ್ತಾರೆ. ಮೆಚ್ಚುವಂಥ ಕೆಲಸವನ್ನು ನ್ಯಾಯಾಂಗ ತೀರ್ಮಾನಿಸಲಿ ಎಂದು ದೀಪಗಳನ್ನು ಹಚ್ಚಿಟ್ಟಿದ್ದಾರೆ.

ಸಂತೋಷ ಹೆಗ್ಡೆ, ಸಿಬಿಐ ಮುಂತಾದ ಸಂಸ್ಥೆಗಳನ್ನು ಅತ್ಯಂತ ಲಘುವಾಗಿ ಮಾತಾಡುತ್ತಿರುವವರು ಯಾರು? ಜನತೆಯೆ? ಉಹ್ಞೂಂ, ಜನ ಅಲ್ಲ. ಜನ `ನ್ಯಾಯಾಲಯದ ತೀರ್ಪುಗಳು ಹೊರಬರಲಿ. ಅಲ್ಲಿಯವರೆಗೂ ಕಾದು ನೋಡೋಣ~ ಎಂದು ಮೌನದಿಂದ ಕಾದು ಕುಳಿತಿದ್ದಾರೆ.

ಆದರೆ ಸಚಿವ ರೇಣುಕಾಚಾರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ-ಮುಂತಾದ ಧುರೀಣರು ಮಾತ್ರ ಬಾಯಿಗೆ ಬಂದದ್ದನ್ನೆಲ್ಲ ಹರಿಯಬಿಡುತ್ತಾರೆ. ರೇಣುಕಾಚಾರ್ಯರನ್ನು `ಈತನೂ ನಮ್ಮ ಮಂತ್ರಿ~ ಎಂದು ಹೇಳಿಕೊಳ್ಳಲೂ ನಮಗೆ ನಾಚಿಕೆಯಾಗುತ್ತದೆ. ಇನ್ನೂ ಈಶ್ವರಪ್ಪನವರ ಕತೆಯೋ? ನಾಲಗೆ ಹಿಡಿದು ಎಳೆದು ಹಾಕುವುದು, ಕೈಕಾಲುಗಳನ್ನು ಕತ್ತರಿಸುವುದು ಇತ್ಯಾದಿ ವೀರಾವೇಶದ ಮಾತುಗಳು, ಇವರಿಬ್ಬರೇ ಅಲ್ಲ. ಇನ್ನೂ ಇವರಂಥವರೇ ಅನೇಕ ಜನ. ಈ ಜನರ ನಡುವೆ ನಾವು ಬಾಳುವೆ ಮಾಡಬೇಕಾಗಿದೆಯಲ್ಲ ಎನ್ನುವ ಹಾಗೆ. ಇನ್ನೂ ಘಜನಿ ಮಹಮ್ಮದನನ್ನೂ ಔರಂಗಜೇಬನನ್ನೂ ಕ್ರೂರಿಗಳು ಎನ್ನುವುದು ಯಾಕೆ? ಕರ್ನಾಟಕದಲ್ಲಿಯೇ ಕ್ರೂರಿಗಳು ಇದ್ದಾರಲ್ಲ.

ಇನ್ನು ಜೈಲಿಗೆ ಹೋದವರನ್ನು ಭೇಟಿಯಾಗುವ ವಿಚಾರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅವರ ಮನೆಯ ಮಕ್ಕಳು, ರಾಜ್ಯಾಧ್ಯಕ್ಷರು, ಅವರ ಆಪ್ತರು-ಹೋಗಿ ಭೇಟಿಯಾಗುವುದರಲ್ಲಿ ತಪ್ಪೇನೂ ಅಲ್ಲ.
 
ಯಡಿಯೂರಪ್ಪನವರ ದೀರ್ಘಕಾಲದ ರಾಜಕೀಯ ಸೇವೆಯನ್ನೂ ಅವರ ಛಲವನ್ನೂ ನಾನೂ ಮೆಚ್ಚುತ್ತೇನೆ. ಆದರೆ ಆ ಹಿಂಡು ಜನ? ಸೆರೆಮನೆಯ ಅಧಿಕಾರಿಗಳಿಗೇ ಇಷ್ಟು ಜನರ ಭೇಟಿ ತಿಳಿದಿಲ್ಲವಂತೆ. ಹಾಗೆಂದು ಒಂದು ಪತ್ರಿಕೆ ಬರೆದಿದೆ? ಇಷ್ಟು ಜನರಿಗೆ ಭೇಟಿ ಕೊಟ್ಟರೂ ಸರಿಯೆ? ಇಂಥ ಭೇಟಿಗಳು ಬೇಕೆ?

 ಕೇಂದ್ರದ ಮಾಜಿ ಸಚಿವ ನಿರೀಕ್ಷಣಾ ಜಾಮೀನನ್ನೇ ಕೋರಿಲ್ಲ. ಕರುಣಾನಿಧಿಯವರ ಮಗಳು, ಹಲವು ಸಲ ಜಾಮೀನು ನಿರಾಕರಣೆಯಾಗಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ. ಕರ್ನಾಟಕದಲ್ಲಿ ಏನಾಗುತ್ತಿದೆ?

ಕಡತಗಳೇ ನಾಶವಾಗುತ್ತಿವೆ. ಕಾರ್ಪೊರೇಷನ್ ಕೊಠಡಿಗೇ ಬೆಂಕಿ ಹಚ್ಚುತ್ತಾರೆ. ನಾಳೆ ಈ ಜನ ವಿಧಾನಸೌಧಕ್ಕೆ ಬೆಂಕಿಹಚ್ಚಿ ಬಿಡುತ್ತಾರೋ ಏನೋ? ನಮ್ಮ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ? ಹೇಸಿಗೆಯಾಗುವಂಥ ಎಂಜಲೆಲೆಗಳ ಮೇಲೆ ಉರುಳಾಡುವವರನ್ನು ಮಂತ್ರಿಗಳೇ  ಬೆಂಬಲಿಸುವ ಮಾತು. ಈ ಮಂತ್ರಿಗಳನ್ನು ಬೇರೆ ರಾಜ್ಯದಲ್ಲಾದರೆ ಕಿತ್ತೊಗೆಯುತ್ತಿದ್ದರು.

ಅಷ್ಟಲ್ಲದೆ, ಸೆರೆಮನೆಯಲ್ಲಿದ್ದ ಮಾಜಿ ಮುಖ್ಯಮಂತ್ರಿಗಳನ್ನು ಬಲಿಷ್ಠ ಮಠದ ಸ್ವಾಮೀಜಿಯೊಬ್ಬರು ಹೋಗಿ ನೋಡುತ್ತಾರೆ. ಇದು ಸರಿಯೆ? ಇದು ಕ್ರಮವೆ? ಇಲ್ಲಿ ಜಾತಿ ಹೆಡೆದೆರೆಯುತ್ತದೆ. ಬಲಿಷ್ಠ ಜಾತಿಯ ಹೆಡೆ ಹೋಗಿ ಏನು ಆಶೀರ್ವಾದ ಮಾಡುತ್ತಾರೆ?

ಬೇಗ ಬಿಡುಗಡೆಯಾಗಿ ಹೊರಬನ್ನಿ ಎಂದೋ. ಟಿ.ವಿ.ಯಲ್ಲಿ ಈ ಚಿತ್ರಗಳನ್ನು ನಾವು ನೋಡಿದ್ದಾಯ್ತು. ಹಾಗಾದ ಮೇಲೆ ಜೈಲಿನಲ್ಲಿರುವ ಎಲ್ಲರನ್ನು, ಯಾಕೆ ಇವರು, ಈ ಸ್ವಾಮಿಗಳು, ಭೇಟಿಯಾಗಲಿಲ್ಲ? ಕಟ್ಟಾ ಅಪ್ಪ ಮಗ, ಜನಾರ್ದನರೆಡ್ಡಿ, ಕೃಷ್ಣ, ಕೃಷ್ಣಯ್ಯಶೆಟ್ಟಿ ಇನ್ನೂ ಇಂಥವರು; ಇವರು ತಮ್ಮ ಜಾತಿಯವರಲ್ಲ ಎಂದೋ.
ಈಗ ನಾವು ಒಂದು ಗೋವಿನ ಹಾಡು ಹಾಡೋಣವೆ?

ಜಾತಿಯೆ ನಮ್ಮ ತಾಯಿ ತಂದೆ
ಜಾತಿಯೆ ನಮ್ಮ ಬಂಧು ಬಳಗವು
ಜಾತಿಯೇ ಸರ್ವಸ್ವವೂ....
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ....

ಕೋಟ್ಯಂತರ ರೂಪಾಯಿ ಜನರ ಹಣವನ್ನು ನಕಲಿ ಬಿಲ್ಲು ಸೃಷ್ಟಿಸಿ ತಿಂದು ಹಾಕಿದ್ದಾರೆ ಎಂಬ ಅನುಮಾನ ಬಂದ ಕಾರ್ಪೊರೇಷನ್ ಕಡತಗಳನ್ನು ಸುಟ್ಟಿದ್ದನ್ನು ಸಿಐಡಿಗೆ ವಹಿಸುತ್ತಾರಂತೆ. ಸಿಐಡಿ ಗೃಹ ಇಲಾಖೆಗೆ ಸೇರಿದ ಒಂದು ಸಂಸ್ಥೆ. ನ್ಯಾಯ ದೊರಕುತ್ತದೆಯೆ ಇದಕ್ಕೆ ವಹಿಸಿದರೆ? ಇದರ ತನಿಖೆಯನ್ನು ಸಿಬಿಐ, ಲೋಕಾಯುಕ್ತಕ್ಕೆ ವಹಿಸಬೇಕು; ಹಾಗೆಂದು ಜನ ಕೂಗು ಹಾಕಬೇಕು.

ಲೋಕಾಯುಕ್ತ ಎಂದೊಡನೆ ಅದನ್ನು ದುರ್ಬಲ ಮಾಡಲು ಈ ಸರ್ಕಾರ ಏನೆಲ್ಲ ಪ್ರಯತ್ನಿಸುತ್ತಿದೆ ಎನ್ನುವುದನ್ನು ಜನ ಅರಿತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದು, ಅಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ತಂದು ಕೂರಿಸುವುದು. ಹೀಗೆ ಬಾಯಿತುಂಬಾ ಏನೇನೋ ಹೇಳಿ ನಡತೆಯಲ್ಲಿ ಹೀಗೆಲ್ಲ ಮಾಡಿದರೆ ಜನತೆಗೆ ತಿಳಿಯುವುದಿಲ್ಲವೆ? ಇದರ ಫಲವನ್ನು ಮುಂದೆ ಅನುಭವಿಸಬೇಕಾದೀತು.

ಲೋಕಾಯುಕ್ತ ಸಂತೋಷ ಹೆಗ್ಡೆಯವರು ನಿವೃತ್ತರಾದರು. ಆ ಜಾಗಕ್ಕೆ ಶಿವರಾಜ ಪಾಟೀಲರು ಬಂದರು. ಅವರು ಏನೋ ಕಾರಣದಿಂದ ಅಧಿಕಾರಕ್ಕೆ ರಾಜೀನಾಮೆ ನೀಡಬೇಕಾಯಿತು. ಅದೇ ಕಾರಣವೇ ಸರ್ಕಾರ ಸೂಚಿಸಿದ ಬನ್ನೂರುಮಠರ ಮೇಲೂ ಇದೆ.

ನ್ಯಾಯಮೂರ್ತಿ ಬನ್ನೂರು ಮಠರೇ ಈಗ ಒಂದು ಕೆಲಸ ಮಾಡಬೇಕು. ನ್ಯಾಯಾಂಗದಲ್ಲಿ ಜಾತಿಯ ದೂಳು ಕವಿಯಬಾರದು. ಯಡಿಯೂರಪ್ಪನವರಿಗೆ ಅವರ ಮೇಲೆ ನಂಬಿಕೆ ಇದೆ. `ಹಾಗೆಂದು ವದಂತಿ ಹರಡಲು ಬಿಡಬಾರದು. ಆದ್ದರಿಂದ ಈ ಹುದ್ದೆಯನ್ನು ನಾನು ವಹಿಸಿಕೊಳ್ಳಲು ಸಾಧ್ಯವಿಲ್ಲ~ ಎಂದು ಅವರೇ ತಿರಸ್ಕರಿಸಬೇಕು ಮತ್ತು ಹೇಳಿಕೆ ನೀಡಬೇಕು. ಆಗ ತಾನಾಗಿಯೇ ಜನಕ್ಕೆ ಅವರ ಮೇಲಿನ ಘನತೆ ಹೆಚ್ಚುತ್ತದೆ. ನ್ಯಾಯಾಂಗದ ಮೇಲೆಯೂ ಗೌರವ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT