ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನಪ್ರತಿನಿಧಿಗಳ ನಡೆ ನುಡಿ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಯ ಕುರಿತು ಆತ್ಮವಿಮರ್ಶೆ, ಚಿಂತನೆ, ಮಾತು ಮತ್ತು ಬರಹ ನಡೆದಿರುವಷ್ಟು ಬೇರೆ ಯಾವ ದೇಶದ­ಲ್ಲಿಯೂ ನಡೆದಿರುವ ಸಂಭವ ಇಲ್ಲ.  ನಮ್ಮ ದೇಶ­ದಲ್ಲಿ ಇದು ನಿರಂತರ ಪ್ರಕ್ರಿಯೆ ಎನ್ನಬ­ಹುದು. ಇದು ವಿಕಾಸಶೀಲ ಸಂಸ್ಕೃತಿಯ ಲಕ್ಷಣ ಕೂಡ ಹೌದು. ನಮ್ಮ ದೇಶದ ಸಂಸ್ಕೃತಿ ಹಲವು ಸಂಸ್ಕೃತಿಗಳು ಬೆರೆತ ರಸಕ್ರಿಯೆಯಲ್ಲಿ ವಿಕಸನ­ಗೊಳ್ಳುತ್ತಾ ಬಂದ ಒಂದು ಅನನ್ಯ ಸಂಸ್ಕೃತಿ. ಸಂಸ್ಕೃತಿ ಎಂಬುದೇನಿದೆಯೋ ಅದು ಮತ-ಧರ್ಮಕ್ಕೆ ತಳಕು ಹಾಕಿಕೊಂಡಿರುವ ಅನೇಕ ದೇಶಗಳಲ್ಲಿ ಸಾಂಸ್ಕೃತಿಕ ವಿಕಾಸ ಎಂಬುದಿಲ್ಲ. ಸಾಂಸ್ಕೃತಿವಾಗಿ ಕೊಡು ಕೊಳ್ಳುವ ಪ್ರಕ್ರಿಯೆಯೂ ಇಲ್ಲ. ಆದುದರಿಂದ ಅದು ವಿಕಸನಗೊಳ್ಳುವುದೂ ಇಲ್ಲ.

ಅಮೂರ್ತವಾದ, ಅಂದರೆ ಯಾವುದೇ ರೂಪ­ದಲ್ಲಿ ನಮ್ಮ ಕಣ್ಣಿಗೆ ಕಾಣಿಸದಿರುವಂಥ ‘ಸಂಸ್ಕೃತಿ’ ಎಂಬುದರ ಕುರಿತು ನಡೆದಿರುವ ವಿಮರ್ಶೆ, ವಿಶ್ಲೇಷಣೆಯ ವಿಚಾರ ಬದಿಗಿರಿಸಿ, ಒಬ್ಬ ವ್ಯಕ್ತಿಯಲ್ಲಿ ಕಾಣಿಸುವ ಸಂಸ್ಕೃತಿಯ ಕುರಿ­ತಾಗಿ ಅದು ಏನು, ಯಾವ ರೀತಿಯಲ್ಲಿ ವ್ಯಕ್ತ­ವಾಗುತ್ತದೆ ಎಂದು ಹೇಳಬೇಕಾದರೆ, ಅದನ್ನು ‘ನಡೆ ಮತ್ತು ನುಡಿ’ ಎಂಬ ಕೇವಲ ಎರಡು ಶಬ್ದಗಳಲ್ಲಿ ಹಿಡಿದಿಡಬಹುದು. ‘ನಡೆ’ ಶಬ್ದದಲ್ಲಿ ‘ಗುಣ ಅಥವಾ ನಡತೆ’ ಎಂಬುದು ಅಡಕ­ವಾ­ಗಿದೆ. ಒಬ್ಬ ಮನುಷ್ಯನನ್ನು ನಾವು ಗುರುತಿಸು­ವುದು ಅವನ ನಡತೆ ಮತ್ತು ನುಡಿಯ ಮೂಲಕವೇ; ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನೊಡನೆ ನಡೆಸುವ ಎಲ್ಲಾ ಸಂಬಂಧ ಮತ್ತು ವ್ಯವಹಾರ ಇವೆರಡರ ಮೂಲಕವೇ.

ಒಬ್ಬ ವ್ಯಕ್ತಿಯ ನಡೆ ನುಡಿ ಹೇಗೆ ರೂಪುಗೊಳ್ಳುತ್ತದೆ, ಅದಕ್ಕೆ ಅವನಿಗೆ ಮಾದರಿ­ಗಳು ಎಲ್ಲಿ ದೊರೆಯುಯತ್ತವೆ ಎಂದು ವಿಚಾರ ಮಾಡುವುದಾದರೆ, ಅದು ನಿರಂತರವಾಗಿ ತನ್ನ ತಾಯಿತಂದೆಯರಿಂದ, ಗುರುಹಿರಿಯರಿಂದ, ಸ್ನೇಹಿತರಿಂದ ಮತ್ತು ಸಮಾಜದಲ್ಲಿ ಆತನ ಸುತ್ತ ಇರುವ  ನೂರಾರು ವ್ಯಕ್ತಿಗಳ ಜೀವನದಿಂದ ದೊರೆ­ಯುತ್ತವೆ ಎಂದು ಹೇಳಬಹುದು. ನಮ್ಮದು ಪ್ರಜಾಪ್ರಭುತ್ವವಾಗಿರುವುದರಿಂದ, ನಮ್ಮ ಸಮಾಜದಲ್ಲಿ ತಾಯಿತಂದೆ, ಗುರು­ಹಿರಿಯರು ಮತ್ತು ಸ್ನೇಹಿತರ ಹೊರತಾಗಿ ನಡೆ ನುಡಿಗೆ ಮಾದರಿಯಾಗುವ ಇತರ ವ್ಯಕ್ತಿಗಳಲ್ಲಿ ಮುಖ್ಯವಾಗಿ ನಮ್ಮನ್ನು ಪ್ರತಿನಿಧಿಸುವ ನಮ್ಮ ಜನನಾಯಕರು ಕೂಡ ನಮಗೆ ಮಾದರಿ ಎಂದು ಹೇಳಬಹುದು. ಅವರು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ಸರ್ಕಾರದ ಒಳಗಿರಲಿ, ಹೊರಗಿರಲಿ ಅವರು ನಮ್ಮನ್ನು ಪ್ರತಿನಿಧಿಸುವವರೇ ಆಗಿರು­ತ್ತಾರೆ. ಅವರು ಸಾಮಾಜಿಕರ ನಡೆನುಡಿಗೆ ಮಾದ­ರಿಯಾಗಿರಬೇಕಾದರೆ ಅವರ ನಡೆ ನುಡಿ ಹೇಗಿರಬೇಕು ಎನ್ನುವುದು ಎಲ್ಲರೂ ಬಲ್ಲ ವಿಚಾರ.

ಈ ಸಂದರ್ಭದಲ್ಲಿ, ನಮ್ಮ ಸಮಾಜದಲ್ಲಿರುವ ಜನನಾಯಕರಲ್ಲಿ ನಾವು ಒಪ್ಪಿಕೊಳ್ಳಬಹುದಾದ, ಮೆಚ್ಚಿಕೊಳ್ಳಬಹುದಾದ ಎಷ್ಟು ಮಾದರಿಗಳು ಸಿಗುತ್ತವೆ ಎಂದು ನಾವು ವಿಚಾರ ಮಾಡಬೇಕು. ಯಾಕೆಂದರೆ, ಮುಂದಿನ ಪೀಳಿಗೆಯಲ್ಲಿ ಜನನಾ­ಯ­ಕರಾಗಿ ರೂಪುಗೊಳ್ಳುವಂಥವರಿಗೆ ಒಳ್ಳೆಯ ನಡೆ ನುಡಿಯ ಮಾದರಿಗಳ ಅಗತ್ಯ ಇದೆ. ಅಂಥ ಮಾದರಿಗಳು ಅಲಭ್ಯವೆಂದಾದರೆ, ನಮ್ಮ ಸಮಾಜ, ನಮ್ಮ ಪ್ರಜಾಪ್ರಭುತ್ವ ಅನಾಗರಿಕ­ವಾ­ಗುತ್ತಾ ಹೋಗಬಹುದು. ನಮ್ಮ ಪ್ರಜಾಪ್ರ­ಭುತ್ವದ ಹಿಂದಿನ ದಿನಗಳಿಗೆ ಹೋಲಿಸಿದರೆ, ಇತ್ತೀಚೆಗಿನ ವರ್ಷಗಳಲ್ಲಿ, ಒಳ್ಳೆಯ ಮಾದರಿಗಳ ಸಂಖ್ಯೆ ಬಹಳ ಕಡಿಮೆಯಾಗಿ, ಇಲ್ಲವೇನೊ ಎನ್ನುವ ಸ್ಥಿತಿ ಉಂಟಾಗಿದೆ.. ಮುಖ್ಯವಾಗಿ, ಚುನಾ­ವಣೆಯ ಸಮಯದಲ್ಲಿ, ‘ನಮ್ಮ ಜನನಾ­ಯಕರು’ ಎಂದು ಹೇಳಲು ನಮಗೆ ನಾಚಿಕೆ­ಯಾಗುವ ಮಟ್ಟದಲ್ಲಿ ಇವತ್ತಿನ ಜನನಾಯಕರ ನಡೆ ನುಡಿ  ಇದೆ. ಶುದ್ಧ ಚಿಂತನೆ ಮತ್ತು ಶುದ್ಧ ನಾಲಗೆ ಇಲ್ಲದ ವ್ಯಕ್ತಿಗಳೇ ಜನ ನಾಯಕ­ರಾಗುತ್ತಿರುವುದು ಒಂದು ಸಾಮಾಜಿಕ ದುರಂತ.

ಜನಸಾಮಾನ್ಯರ ಮಾತಿನಲ್ಲಿ ‘ಭಾಷೆಯಿಲ್ಲದ ಮನುಷ್ಯ’ ಎಂದರೆ ‘ಸಂಸ್ಕೃತಿ ಇಲ್ಲದ ಮನುಷ್ಯ’ ಎಂದು ಅರ್ಥ. ಯಾಕೆಂದರೆ, ಒಬ್ಬ ಮನುಷ್ಯ­ನನ್ನು ‘ಕಾಣಲು’ ನಮಗೆ ಸಾಧ್ಯವಾಗುವುದು ಅವನು ಆಡುವ ಮಾತಿನ ಮೂಲಕವೇ. ಒಳ್ಳೆಯ ಮಾತು ಒಳ್ಳೆಯ ಸಂಸ್ಕೃತಿಯ ಲಕ್ಷಣ. ಮಾತಿನಲ್ಲಿ ವ್ಯಕ್ತಿಯ ಸನ್ನಡತೆ ಮತ್ತು ವಿಚಾರಶೀಲತೆ ಪ್ರಕಟ­ಗೊಳ್ಳುವಂತೆಯೇ, ದುರ್ಗುಣ ಮತ್ತು ವಿಚಾರ­ಹೀನತೆ ಕೂಡ ಪ್ರಕಟಗೊಳ್ಳುತ್ತದೆ.

ಜನನಾಯ­ಕರ ಚಾರಿತ್ರ್ಯ ಬಹುಮಟ್ಟಿಗೆ ಅಗೋಚರ ಪ್ರಜೆಗಳಿಗೆ ನೇರವಾಗಿ ಕಾಣಿಸು ವಂಥದು ಅವರ ನಡೆ ನುಡಿ. ಭ್ರಷ್ಟನ ನಡೆ ನುಡಿ ಹೇಗೆ ಇದ್ದರೂ ಅದು ಮೌಲ್ಯಹೀನ ಎನ್ನುವುದು ಪ್ರಜ್ಞಾವಂತ­ರಾದ ಪ್ರಜೆಗಳಿಗೆ ಗೊತ್ತಿರುತ್ತದೆ. ಪ್ರಜೆಗಳನ್ನು ಪ್ರತಿನಿಧಿಸುವ ಸದ್ಗುಣ ಇಲ್ಲದವನ ನಡೆ ನುಡಿ ಹೇಗಿದ್ದರೇನು?

ಯಾವ ಪ್ರಕ್ರಿಯೆಯ ಮೂಲಕ ನಮ್ಮ ಸಮಾಜದಲ್ಲಿ ಒಳ್ಳೆಯ ನಡೆ ನುಡಿಯ ವ್ಯಕ್ತಿಗಳು ತಯಾರಾಗಬಹುದು? ಈ ಪ್ರಶ್ನೆಯನ್ನೇ ಇನ್ನೊಂದು ರೀತಿ ಕೇಳುವುದಾದರೆ ನಮ್ಮ ಮಕ್ಕಳು ಹೇಗೆ ಒಳ್ಳೆಯ ನಡೆ ನುಡಿಯವರಾಗಿ ರೂಪುಗೊಳ್ಳಬಹುದು ಎಂದು ಕೇಳುವುದು ಹೆಚ್ಚು ಸ್ಪಷ್ಟ. ತಾಯಿತಂದೆಯ ನಡೆ ನುಡಿಯೇ ಮಕ್ಕಳಿಗೆ ಮೊದಲ ಮಾದರಿ. ನಡೆ ಮತ್ತು ನುಡಿಯನ್ನು ‘ಸಂಸ್ಕೃತಿ’ ಎಂಬುದಾಗಿ ಪರಿಭಾವಿಸಿ ಒಬ್ಬ ವ್ಯಕ್ತಿಯ ಸಾಂಸ್ಕೃತಿಕ ವ್ಯಕ್ತಿತ್ವದಲ್ಲಿ ಏನೇನಿ­ರಬೇಕು ಎಂದು ವಿಶ್ಲೇಷಿಸಿ ನೋಡೋಣ.

ಸಾಮಾನ್ಯ ಪ್ರಜೆಗಳಿಗೆ ತಮ್ಮ ಮಾತೃಭಾಷೆ ಅಥವಾ ಮನೆಭಾಷೆಯಲ್ಲಿ ಯೋಚಿಸುವ ಗುಣ ಇರಬೇಕು; ತನ್ನ ಯೋಚನೆ ಮತ್ತು ಭಾವನೆ­-ಯನ್ನು ಅಭಿವ್ಯಕ್ತಿಸುವ ಸಾಮರ್ಥ್ಯ ಇರಬೇಕು. ಬದುಕಿಗೆ ದುಡಿಮೆ ಅಗತ್ಯ. ಆದರೆ ಒಳ್ಳೆಯ ಬದುಕಿಗೆ ದೊಡ್ಡ ಪಗಾರ ಮಾತ್ರ ಸಾಲದು, ಒಳ್ಳೆಯ ಸರ್ಕಾರ ಕೂಡ ಬೇಕು. ಮನುಷ್ಯ ಕೇವಲ ದುಡಿಯುವ ಯಂತ್ರವಾದರೆ ವಿಚಾರಶಕ್ತಿ ನಷ್ಟವಾಗುತ್ತದೆ.

ವಿವೇಕ ಅವಿವೇಕದ ನಡುವಿನ ವ್ಯತ್ಯಾಸವೇ ತಿಳಿಯದಂತಾಗುತ್ತದೆ. ಜ್ಞಾನ ಸಂಗ್ರಹ ಮಾಡಲು, ವಿಚಾರಶಕ್ತಿ ಬೆಳೆಸಲು ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವ ಪರಿಪಾಠ ಅಗತ್ಯ. ಕನ್ನಡ, ತಮಿಳು, ಇಂಗ್ಲಿಷ್, ಅರೆಬಿಕ್ ಇತ್ಯಾದಿ ಯಾವ ಮಾಧ್ಯಮದಲ್ಲೇ ಓದಿಕೊಂ­ಡಿರಲಿ, ಪುಸ್ತಕ ಓದುವ ಮನಸ್ಸು ಇರಬೇಕು. ಓದುವ ಮನಸ್ಸು ಅಂದರೆ ವಿಕಾಸಶೀಲ ಮನಸ್ಸು. ಎಷ್ಟು ಭಾಷೆಗಳನ್ನು ಕಲಿತುಕೊಂಡಿದ್ದರೂ, ಲೋಕ ಸುತ್ತಿ ಎಷ್ಟು ಸಂಸ್ಕೃತಿಗಳನ್ನು ಕಂಡಿದ್ದರೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಇರುವುದು ಅವನ ಮಾತೃ ಸಂಸ್ಕೃತಿಯಲ್ಲಿ ಮತ್ತು ಅವನ ನೆಲದ ಭಾಷೆಯಲ್ಲಿ ಮಾತ್ರ.

ಯಾವುದೇ ರೂಪದ ಕೌಶಲ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ತನ್ನ ಸ್ವಂತ ಭಾಷೆಯಲ್ಲಿ ಚೆನ್ನಾಗಿ ಮಾತಾಡುವ ಮತ್ತು ಬರೆಯುವ ಸಾಮರ್ಥ್ಯ ಇರಬೇಕಾಗುತ್ತದೆ. ವ್ಯಕ್ತಿಯ ಸಾಂಸ್ಕೃತಿಕ ಅಸ್ತಿತ್ವ ಮಾತ್ರವಲ್ಲ, ಸಾಮಾಜಿಕ ಅಸ್ತಿತ್ವ ಕೂಡ ಇರುವುದು ಇದರಲ್ಲೇ. ಒಬ್ಬ ವ್ಯಕ್ತಿ ಸಂಗೀತ, ನೃತ್ಯ, ಕ್ರೀಡೆ ಇತ್ಯಾದಿಗಳಲ್ಲಿ ಕೌಶಲ­ವನ್ನು ಪಡೆದಿರುವುದು ಅವನ ಸಂಸ್ಕೃತಿ­ಯ­ಲ್ಲಿರುವ ವಿಶೇಷ ಗುಣ ಎನ್ನಬಹುದು. ಸುಸಂಸ್ಕೃತ ಎನಿಸಿಕೊಳ್ಳಲು ಒಳ್ಳೆಯ ನಡೆ ನುಡಿ ಸಾಕು.

ನಮ್ಮ ನಡೆ ನುಡಿಯ ಮೂಲಕ ಅರ್ಥಾತ್ ನಮ್ಮ ನಡತೆಯ ಮೂಲಕ ಇತರರ ಮನಸ್ಸಿನಲ್ಲಿ ನಮ್ಮ ಬಗ್ಗೆ ಒಂದು ಚಿತ್ರ ಮೂಡುತ್ತದೆ. ಈ ಚಿತ್ರ ಶುದ್ಧವೂ ಸುಂದರವೂ ಆಗಿರುವಂತೆ ನಮ್ಮ ಮಕ್ಕಳ ಗುಣ ನಡತೆಯನ್ನು ರೂಪಿಸಬೇಕು. ನಮ್ಮ ಇಂದಿನ ಯುವಕ ಯುವತಿಯರು ನುಡಿ­ದಂತೆ ನಡೆಯುವವರಾದರೆ, ನಡೆಗೂ ನುಡಿಗೂ ಮಾದರಿಯಾದರೆ ನಮಗೆ ಒಳ್ಳೆಯ ಪ್ರಜಾಪ್ರಭುತ್ವ ಬೇಗನೆ ಸಿಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT