ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆ, ವಿಭಜನೆಗಳಿಂದ ಬರಿಯ ವೇದನೆ

ಅಕ್ಷರ ಗಾತ್ರ

ಜೆಪಿ ನೇತೃತ್ವದಲ್ಲಿ ನಡೆದ ‘ಸಂಪೂರ್ಣ ಕ್ರಾಂತಿ’ ಮಾದರಿಯ ದೇಶವ್ಯಾಪಿ ಅಂದೋಲನವೊಂದಕ್ಕೆ ಭಾರತದ ಜನಕೋಟಿ ಇದೀಗ ಸಜ್ಜಾಗಿರುವಂತಿದೆ. ದೇಶದ ಪ್ರಗತಿಗೆ ಮಾರಕವಾಗಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಯಾವುದೇ ಬಗೆಯ ಅಹಿಂಸಾತ್ಮಕ ಹೋರಾಟಕ್ಕೆ ಕಟಿಬದ್ಧವಾಗಿದೆ. ಜನಲೋಕಪಾಲ ವಿಧೇಯಕ ಮಂಡನೆಗೆ ಬದ್ಧವಾಗಿರುವುದಾಗಿ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಸಾರಿ ಹೇಳುತ್ತಿದ್ದಾರೆ. ಇದೆಲ್ಲ ಉತ್ತಮ ಬೆಳವಣಿಗೆ. ಆದರೆ, ಇವಕ್ಕೆ ಬಾಲಗ್ರಹ ಪೀಡೆ. ನೂರೆಂಟು ತಗಾದೆ.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿ ಹೊಸ ಸಂಚಲನ ಮಾಡಿಸಿದ್ದೇನೋ ನಿಜ. ಆದರೆ, ಮಸೂದೆಯ ಕರಡು ಸಿದ್ಧಪಡಿಸಲು ಸಮಿತಿ ರಚಿಸುವಾಗಲೇ ಅಪಸ್ವರದ ಹೊಗೆ. ಹಿಂಬಾಲಕರು ಹಜಾರೆಯವರನ್ನು ‘ಯುಗ ಪುರುಷ’ ಎಂಬಂತೆ ಬಿಂಬಿಸುತ್ತಾ ‘ಭಜನೆ’ಯಲ್ಲಿ ತೊಡಗಿದರು. ಸಮಯ ಸಾಧಕ, ಭ್ರಷ್ಟಾಚಾರ ಪೋಷಕ ರಾಜಕಾರಣಿಗಳು ‘ವಿಭಜನೆ’ಯ ಜಾಲ ಹೆಣೆಯತೊಡಗಿದರು. ನಿಷ್ಠ, ಭಷ್ಟ, ಪರಿಶುದ್ಧ, ಅಪ್ರಬುದ್ಧ, ಅಪ್ರಾಮಾಣಿಕ, ಅನರ್ಹ.. ಎಂಬಿತ್ಯಾದಿ ಹಣೆಪಟ್ಟಿ ಹಚ್ಚುತ್ತಾ ಹಗರಣಗಳ ಸೃಷ್ಟಿಗೆ, ವಿಭಜನೆಯ, ವರ್ಗೀಕರಣದ ಪುಷ್ಟಿಗೆ ಹುನ್ನಾರ ನಡೆಸಿದರು.  ಮತ್ತದೇ ನುಂಗಪ್ಪಗಳ ಸೈತಾನ ಸಂತತಿ ಇರಬಹುದೇ?

ಜೆ ಪಿ ಹಾದಿಯಲ್ಲೇ ಸಾಗಿ, ಯುವಶಕ್ತಿಯನ್ನು ಸಂಘಟಿಸಿ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ‘ಅಣ್ಣಾ’ ಸಮರ್ಥರು. ಆದರೆ, ಅವರ ಪ್ರಭಾ ವಲಯದಲ್ಲಿರುವವರ ಬಾಲಿಶ ಹೇಳಿಕೆಗಳು, ರಾಜಕೀಯ ವಾಸನೆಯ ಉದ್ಗಾರಗಳು ‘ಅಣ್ಣಾ’ಅವರನ್ನು ನಿರ್ವಿಣ್ಣಗೊಳಿಸುವಂತಿವೆ. ಭಾಷಾ ಸಮಸ್ಯೆಯನ್ನು ಎದುರಿಸುತ್ತಿರುವ ಅವರು, ‘ದುಭಾಷಿ’ಯ ನೆರವು ಪಡೆದ ಮೇಲೂ, ‘ಬಹುರೂಪಿ’ಗಳ ಒಡಕು ಭಾಷೆಯನ್ನು, ಒಗಟುಗಳನ್ನು ಅರಿಯುವುದು ಕಷ್ಟ. ಆಗಸ್ಟ್ 15ರ ಗಡುವು ಮಾರ್ಜಾಲಗಳಿಗೆ ತುಸು ಬಿಡುವು. ತಮ್ಮ ಚೇಲಾ, ಬಾಲಗಳ ಮೂಲಕ ಮೀಡಿಯಾಗಳಲ್ಲಿ ಗೊಂದಲದ ಹೇಳಿಕೆಗಳನ್ನು ಪ್ರಸಾರ ಮಾಡುವ ‘ಎಂಡೋ ಸಲ್ಫಾನ್ ಮನುಷ್ಯ’ರ  ಮನಸ್ಸುಗಳನ್ನು ನಿಯಂತ್ರಿಸುವ ಬಗೆಗೆ ತುರ್ತು ಕ್ರಮ ಅಗತ್ಯ. ಬಿರುಕು, ಗೆದ್ದಲು ಶಿಥಿಲ ಮಹಲು.
ಪ್ರಾಯಶಃ ಕ್ರಿಕೆಟ್‌ನಂತೆ ಇಲ್ಲಿಯೂ ಕೂಡ ಫಿಕ್ಸಿಂಗ್, ಬೆಟ್ಟಿಂಗ್ ಇರಬಹುದೇನೊ. ಅಣ್ಣಾ ಗುಂಪಿನ ಬಣ್ಣ ಬಯಲಾಗಿಸುವ ಬಗ್ಗೆ, ಜನ ಲೋಕಪಾಲ ಮಸೂದೆ ಸಂಸತ್ತಿನಲ್ಲಿ ಗೆದ್ದರೂ ಭವಿಷ್ಯದಲ್ಲಿ ಬಿದ್ದು ಹೋಗುವ ಬಗ್ಗೆ, ಪಿತೂರಿಯೇನಾದರೂ ನಡೆಯುತ್ತಿರಬಹುದೆ?

ಸಂಸತ್ತಿನಲ್ಲಿ ಮಸೂದೆ ಪಾಸಾದ ಮೇಲೆ ಅನುಷ್ಠಾನ ಎಂಬುದೊಂದು ಇದೆಯಲ್ಲ, ಆಗ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಭ್ರಷ್ಟರ ವಿರುದ್ಧ ನಿಜಕ್ಕೂ ದೃಢ ನಿಲುವು ತಳೆದು, ಉಗ್ರ ಶಿಕ್ಷೆ ವಿಧಿಸಲು ಅನುವಾಗಬಹುದೆ? ಅಥವಾ ಮತ್ತದೇ ಸಮಯ ಕೊಲ್ಲುವ, ಕನಸು ಕೊಲ್ಲುವ, ಸಮಯ ಸಾಯಿಸುವ ’ಮೆಗಾ ಧಾರಾವಾಹಿ’ಗಳ ಪುನರ್ ಪ್ರಸಾರವೆ?
121 ಕೋಟಿ ಜನಸಂಖ್ಯೆ ಹೊಂದಿರುವ ನಮಗೆ ವಿಶ್ವದಲ್ಲೇ ದ್ವಿತೀಯ ಸ್ಥಾನ.

ಭ್ರಷ್ಟಾಚಾರದಲ್ಲಿ ಕೂಡ ಉನ್ನತ (?) ಸ್ಥಾನ. ಸುಲಿದು ತಿನ್ನುವ ಸಂತಾನಕ್ಕೆ ಶಾಶ್ವತ ತಡೆ ಒಡ್ಡದೇ ಹೋದರೆ, ರಾಷ್ಟ್ರದ ಸಂಸ್ಕೃತಿಯ ಸಾವಿಗಾಗಿ ಅಳಲು ‘ರುಡಾಲಿ’ಗಳೂ ಸಿಗಲಾರದು! ‘ಕೆಟ್ಟದ್ದನ್ನು ಕೇಳುವುದಿಲ್ಲ, ನೋಡುವುದಿಲ್ಲ, ಮಾತಾಡುವುದಿಲ್ಲ’ ಎನ್ನುವ ಮೂರು ಮಂಗಗಳ ಚಿತ್ರ ನೋಡುವುದೇ ಆಗಿದೆ. ‘ಕೆಟ್ಟದ್ದನ್ನು ಮಾಡುವುದಿಲ್ಲ, ಸಹಿಸುವುದಿಲ್ಲ, ಆಗಗೊಡುವುದಿಲ್ಲ’ ಎಂದು ಪಣತೊಡುವ ಜನಗಣ ಈಗ ಬೇಕಾಗಿದೆ.

ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಎನ್‌ಜಿಓಗಳು, ಶ್ರಮಜೀವಿಗಳು, ಸಮಾಜದ ಎಲ್ಲಾ ಸ್ತರಗಳ ಜನರು ಜತೆಗೂಡಿಯೇ ಹೋರಾಟ ನಡೆಸಬೇಕಾಗಿದೆ. ಸರ್ಟಿಫಿಕೇಟ್ ನೀಡುವ ‘ಸಜ್ಜನ’ರು ಒಗ್ಗಟ್ಟನ್ನು ಒಡೆದು, ಯೋಜನೆಯನ್ನು ಹಾಳುಗೆಡವಿ, ವಂದನೆಯನ್ನಷ್ಟೇ ಅಪ್ಪಿಕೊಳ್ಳುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.

ಚೆರ್ನೊಬಿಲ್ ಮಾದರಿಯ ಮಹಾದುರಂತವೊಂದು ಜಪಾನ್‌ನಲ್ಲಿ ಘಟಿಸಿದೆ. ಭೂಕಂಪ, ಸುನಾಮಿಗಳು ಸತತವಾಗಿ ಸಂಭವಿಸುತ್ತಲೇ ಇವೆ. ಫುಕುಶಿಮಾದ ಅಣುಸ್ಥಾವರ ಅಪಾಯಕಾರಿ ವಿಕಿರಣ ಪಸರಿಸುವ ಸಾಧ್ಯತೆ ಇದ್ದು ರೊಬೊಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಷ್ಟಿದ್ದೂ, ಜಪಾನೀಯರ ಶ್ರಮ ಸಂಸ್ಕೃತಿಗೆ, ಆತ್ಮವಿಶ್ವಾಸಕ್ಕೆ ಗಾಸಿಯಾಗಿಲ್ಲ. ಐದೇ ವರ್ಷಗಳಲ್ಲಿ ಬಲಿಷ್ಠ ದೇಶವನ್ನು ಪುನರ್ ನಿರ್ಮಿಸಲು ಅವರು ಸಜ್ಜಾಗಿದ್ದಾರೆ. ನಾವಾದರೋ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ರಾಜಕಾರಣದ ರಾಡಿಯಲ್ಲಿ ಮುಳುಗೇಳುತ್ತಿದ್ದೇವೆ. ರೋಸಿ ಹೋದ ಜನಕೋಟಿ ಈಗ ವಿನೂತನ ಬಗೆಯ ಹೋರಾಟಕ್ಕೆ ರಂಗಸ್ಥಳ ಹತ್ತುವಾಗ, ಚೌಕಿ  ಮನೆಯಲ್ಲಿ ಗದ್ದಲ. ಸಮುದ್ರ ಮಥನದ ಸನ್ನಾಹದಲ್ಲಿರುವಾಗಲೇ ರಾಕ್ಷಸರು ಅಮೃತ ಚಪ್ಪರಿಸಲು ಗದ್ದಲವೆಬ್ಬಿಸುತ್ತಿದ್ದು, ದೇವತೆಗಳು ಕಾರ್ಕೋಟಕ (ಮತ್ತದೇ ಎಂಡೋಸಲ್ಫಾನ್) ವಿಷದ ಬಾಧೆಗೆ ಬಳಲುತ್ತಿದ್ದಾರೆಯೆ?

ಕಚೇರಿ, ಕಾಂಪ್ಲೆಕ್ಸ್, ಅಂಗಡಿ ಮುಂಗಟ್ಟುಗಳಲ್ಲಿ ಸಿಸಿ ಕ್ಯಾಮೆರಾ ಇರಲಿ. ಆದರೆ, ಆಂದೋಲನಕಾರರ ನಡುವೆ ಸರ್ಚ್‌ಲೈಟ್, ಸಿಲೆಕ್ಷನ್ ಬೇಡ. ‘ಲಂಚ ಪ್ರಪಂಚ’ ವನ್ನು ಮುಳುಗಿಸುವ ಅಲೆ ಎದ್ದಿದೆ. ವಿಜಯ ಸೂತ್ರ ಸಾರಥಿ ಅಣ್ಣಾ ಕೈಯಲ್ಲೇ ಇರಲಿ. ಕೋಟಿ ಕೋಟಿ ಜನ ಅವರ ಜತೆಗಿರಲಿ. ಜೆಪಿ ಚಳವಳಿ ಸರ್ವೋದಯ. ಅಣ್ಣಾ ಅವರದು ದಿವ್ಯೋದಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT