ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SRH vs KKR | ಐಪಿಎಲ್ ಫೈನಲ್ ಇಂದು: ಮದಗಜಗಳ ಸೆಣಸಿಗೆ ಸಿದ್ಧವಾದ ಚೆನ್ನೈ

ಕೋಲ್ಕತ್ತ ನೈಟ್‌ ರೈಡರ್ಸ್‌–ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ
Published 26 ಮೇ 2024, 0:30 IST
Last Updated 26 ಮೇ 2024, 0:30 IST
ಅಕ್ಷರ ಗಾತ್ರ

ಚೆನ್ನೈ: ಚೆಪಾಕ್ ಕ್ರೀಡಾಂಗಣದ ಮುಖ್ಯದ್ವಾರ ಮುಂಭಾಗದಲ್ಲಿ ಸಾಗುವಾಗ ಪ್ಯಾಟ್ ಕಮಿನ್ಸ್ ಮತ್ತು ಶ್ರೇಯಸ್ ಅಯ್ಯರ್ ಅವರಿಬ್ಬರೂ ಇರುವ ದೊಡ್ಡ  ಚಿತ್ರ ಹಾಗೂ ‘ಐಪಿಎಲ್ ಫೈನಲ್–2024’ ಎಂಬ ಒಕ್ಕಣೆ ಗಮನ ಸೆಳೆಯಿತು. ಅದೂ ಶುಕ್ರವಾರದಂದು!

ಹೌದು; ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮುನ್ನವೇ ಈ ಪೋಸ್ಟರ್ ಇಲ್ಲಿ ಕಾಣಿಸಿಕೊಂಡಿತ್ತು. ಇಂತಹದೊಂದು ಹೋರ್ಡಿಂಗ್ ಸಿದ್ಧಗೊಳಿಸುವ ಕಲಾವಿದನಿಗೆ ‘ದಿವ್ಯದೃಷ್ಟಿ’ಯೇ ಇರಬೇಕು. ಸನ್‌ರೈಸರ್ಸ್ ತಂಡವು 36 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ಎದುರು ಗೆದ್ದು ಫೈನಲ್‌ ಪ್ರವೇಶಿಸಿತು. 

ಇದೀಗ ಭಾನುವಾರ ಸನ್‌ರೈಸರ್ಸ್ ತಂಡವು ಕೋಲ್ಕತ್ತ ನೈಟ್‌ ರೈಡರ್ಸ್‌ ಬಳಗವನ್ನು ಎದುರಿಸಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿಯೂ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ಪ್ಯಾಟ್ ಕಮಿನ್ಸ್ ಬಳಗವು ಸೋತಿತ್ತು. ಈ ಬಾರಿಯ ಟೂರ್ನಿಯ ಲೀಗ್ ಹಂತದಲ್ಲಿ ನಿರಂತರವಾಗಿ ಅಬ್ಬರಿಸುತ್ತಲೇ ಈ ಹಂತಕ್ಕೆ ಬಂದಿರುವ ಎರಡು ತಂಡಗಳು ಇವು. ಲೀಗ್ ಹಂತದಲ್ಲಿಯೂ ಎರಡೂ ತಂಡಗಳು ಪರಸ್ಪರ ಎದುರಿಸುವ ಮೂಲಕವೇ ಅಭಿಯಾನ ಆರಂಭಿಸಿದ್ದವು. ಸುಮಾರು ಎರಡು ತಿಂಗಳು ನಡೆದ ಟೂರ್ನಿಯಲ್ಲಿ ಸತತವಾಗಿ ತಮ್ಮ ಸಾಮರ್ಥ್ಯ ಕಾಯ್ದುಕೊಂಡು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಗಳಿಸಿದ್ದವು.

ಆ ಎಲ್ಲ ಶ್ರಮಕ್ಕೆ ಪ್ರಶಸ್ತಿ ಹೊಳಪು ತುಂಬುವ ಸಮಯ ಬಂದಿದೆ. ಕೋಲ್ಕತ್ತ ತಂಡವು ಮೂರನೇ ಹಾಗೂ ಸನ್‌ರೈಸರ್ಸ್ ಎರಡನೇ ಪ್ರಶಸ್ತಿ ಜಯಿಸುವ ಛಲದಲ್ಲಿವೆ. 

ಸನ್‌ರೈಸರ್ಸ್ ನಾಯಕ ಕಮಿನ್ಸ್ ಅವರಿಗೆ ಇದು ಅದೃಷ್ಟದ ವರ್ಷ. ಬೌಲಿಂಗ್ ಮತ್ತು ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲಿಯೂ ಯಶಸ್ಸು ಸಾಧಿಸಿದ್ದಾರೆ. ಹೋದ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯಾ ತಂಡವನ್ನು ಕಮಿನ್ಸ್ ಮುನ್ನಡೆಸಿದ್ದರು. ಆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಿಂಚಿದ್ದ ಟ್ರಾವಿಸ್ ಹೆಡ್, ಸನ್‌ರೈಸರ್ಸ್‌ ತಂಡದಲ್ಲಿಯೂ ಮಿಂಚುತ್ತಿದ್ದಾರೆ. 

ಅಲ್ಲದೇ ಪಟಾಕಿಯಂತೆ ಸಿಕ್ಸರ್, ಬೌಂಡರಿ ಸಿಡಿಸುವ ಯುವತಾರೆ ಅಭಿಷೇಕ್ ಶರ್ಮಾ ಮತ್ತು ಹೆಡ್ ಸನ್‌ರೈಸರ್ಸ್ ತಂಡಕ್ಕೆ ಅಬ್ಬರದ ಆರಂಭ ನೀಡುವ ಸಮರ್ಥರು. ಇವರಿಬ್ಬರಲ್ಲದೇ ಏಡನ್ ಮರ್ಕರಂ, ಹೆನ್ರಿಚ್ ಕ್ಲಾಸೆನ್, ಬ್ದುಲ್ ಸಮದ್, ನಿತೀಶ್ ರೆಡ್ಡಿ ಹಾಗೂ ರಾಹುಲ್ ತ್ರಿಪಾಠಿ ಅವರ ಬಿಸಾಟದಿಂದಾಗಿ  ಐಪಿಎಲ್‌ನಲ್ಲಿ ರನ್‌ ಗಳಿಕೆಯ ದೊಡ್ಡ ದಾಖಲೆಗಳನ್ನು ಈ ಬಾರಿ ಮಾಡಿರುವ ತಂಡವಿದು. ಎರಡನೇ ಕ್ವಾಲಿಫೈಯರ್‌ನಲ್ಲಿ ಬೌಲಿಂಗ್ ಪಡೆಯೂ ತನ್ನ ಸಂಪೂರ್ಣ ಸಾಮರ್ಥ್ಯ ಮೆರೆಯಿತು. ಶಾಬಾಜ್ ಅಹಮದ್, ಅಭಿಷೇಕ್, ನಾಯಕ ಕಮಿನ್ಸ್ ಹಾಗೂ ಟಿ. ನಟರಾಜನ್ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾದರು. 

ಸುನಿಲ್ ನಾರಾಯಣ
ಸುನಿಲ್ ನಾರಾಯಣ

ಆದರೆ ಕೋಲ್ಕತ್ತ ತಂಡವೆನೂ ಕಮ್ಮಿಯಿಲ್ಲ. ಮೆಂಟರ್ ಗೌತಮ್ ಗಂಭೀರ್ ಹಾಗೂ ಕೋಚ್ ಚಂದ್ರಕಾಂತ್ ಪಂಡಿತ್ ಅವರ ತಂತ್ರಗಾರಿಕೆಯನ್ನು ಅಚ್ಚುಕಟ್ಟಾಗಿ ಜಾರಿಗೊಳಿಸುವ ಕಲೆಯನ್ನು ಶ್ರೇಯಸ್ ಕರಗತ ಮಾಡಿಕೊಂಡಿದ್ದಾರೆ. 

ಆಲ್‌ರೌಂಡರ್ ಸುನಿಲ್ ನಾರಾಯಣ ಅವರು ಆರಂಭಿಕ ಬ್ಯಾಟರ್ ಹಾಗೂ ಸ್ಪಿನ್ನರ್ ಆಗಿ ಗೆಲುವಿನ ರೂವಾರಿಯಾಗಬಲ್ಲರು. ಚೆನ್ನೈ ಅಂಗಳದ ಗುಣವನ್ನು ಬಳಸಿಕೊಂಡು  ತಮ್ಮ ಸ್ಪಿನ್ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲು ವರುಣ್ ಚಕ್ರವರ್ತಿ ಕೂಡ ಸಿದ್ಧವಾಗಿದ್ದಾರೆ. ಅವರಲ್ಲದೇ ಈ ಟೂರ್ನಿಯ ಅತ್ಯಂತ ದುಬಾರಿ ಮೌಲ್ಯ ಪಡೆದ ಆಟಗಾರ, ವೇಗಿ ಮಿಚೆಲ್ ಸ್ಟಾರ್ಕ್‌ ತಮ್ಮ ಆಸ್ಟ್ರೇಲಿಯನ್ ಮಿತ್ರ ಕಮಿನ್ಸ್‌ಗೆ ಚಳ್ಳೇಹಣ್ಣು ತಿನ್ನಿಸಲು ಸಿದ್ಧರಾಗಿದ್ದಾರೆ.

ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್, ಗುರ್ಬಾಜ್, ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್, ರಿಂಕು ಸಿಂಗ್, ಅಂಗಕ್ರಿಷ್ ರಘುವಂಶಿ ಹಾಗೂ ಆ್ಯಂಡ್ರೆ ರಸೆಲ್ ಅವರಂತಹ ಬಲಾಢ್ಯರು ಇನಿಂಗ್ಸ್‌ ಕಟ್ಟಬಲ್ಲರು. 

ಒಟ್ಟಿನಲ್ಲಿ ವಾರಾಂತ್ಯದ ದಿನದಂದು ಚೆನ್ನೈ ಅಂಗಳದಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ‘ಮದಗಜ’ಗಳಂತೆ ಹೋರಾಟ ಮಾಡುವ ನಿರೀಕ್ಷೆ ಗರಿಗೆದರಿದೆ. 

ಅಭಿಷೇಕ್ ಶರ್ಮಾ 
ಅಭಿಷೇಕ್ ಶರ್ಮಾ 
ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಜಿಯೊ ಸಿನಿಮಾ ಆ್ಯಪ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT