ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಫೈನಲ್‌ಗೆ ಸಿಂಧು ಲಗ್ಗೆ

Published 25 ಮೇ 2024, 23:30 IST
Last Updated 25 ಮೇ 2024, 23:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ಪಿ.ವಿ.ಸಿಂಧು ಶನಿವಾರ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯ ಸಿಂಗಲ್ಸ್‌ನಲ್ಲಿ ಥಾಯ್ಲೆಂಡ್‌ನ ಬುಸಾನನ್‌ ಒಂಗ್ಬಾಮ್‌ರುಂಗ್ಫಾನ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು.

ಎರಡು ವರ್ಷಗಳಿಂದ ಪ್ರಶಸ್ತಿಯ ಬರ ಎದುರಿಸುತ್ತಿರುವ ಐದನೇ ಶ್ರೇಯಾಂಕದ ಸಿಂಧು, 13-21, 21-16, 21-12 ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಬುಸಾನನ್‌ ಅವರನ್ನು ಹಿಮ್ಮೆಟ್ಟಿಸಿದರು. ಆಕ್ಸಿಯಾಟಾ ಅರೆನಾದಲ್ಲಿ ಸಿಂಧು ಎದುರಾಳಿ ಆಟಗಾರ್ತಿಯನ್ನು ಮಣಿಸಲು 88 ನಿಮಿಷ ತೆಗೆದುಕೊಂಡರು.

2022ರಲ್ಲಿ ಸಿಂಗಪುರ ಓಪನ್‌ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಭಾರತದ 26 ವರ್ಷದ ಆಟಗಾರ್ತಿ ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಕಳೆದ ವರ್ಷ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು.‌

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು, ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಬಹುಕಾಲದ ಬಳಿಕ ಲಯಕ್ಕೆ ಮರಳಿರುವ ವಿಶ್ವದ 15ನೇ ರ‍್ಯಾಂಕ್‌ನ ಆಟಗಾರ್ತಿ, ಫೈನಲ್‌ ಹಣಾಹಣಿಯಲ್ಲಿ ಚೀನಾದ ವಾಂಗ್ ಝಿ ಯಿ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 7ನೇ ಸ್ಥಾನದಲ್ಲಿರುವ ವಾಂಗ್‌, ಕಳೆದ ವರ್ಷ ಆರ್ಕ್ಟಿಕ್ ಓಪನ್‌ನಲ್ಲಿ ಸಿಂಧು ಅವರನ್ನು ಸೋಲಿಸಿದ್ದರು. ಆದರೆ, ಒಟ್ಟಾರೆ ಮೂರು ಮುಖಾಮುಖಿಯಲ್ಲಿ ಸಿಂಧು ಎರಡು ಬಾರಿ ಗೆಲುವು ಸಾಧಿಸಿದ್ದು, ಫೈನಲ್‌ನಲ್ಲಿ ಮತ್ತೆ ಅವರ ವಿರುದ್ಧ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.

ಒಲಿಂಪಿಕ್ಸ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿರುವ ಸಿಂಧು, ಕಳೆದ ವರ್ಷ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ವಿಶ್ರಾಂತಿಯ ಬಳಿಕ ಕಣಕ್ಕೆ ಇಳಿದರೂ ಫಾರ್ಮ್‌ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದರು.

ಪ್ರಸಕ್ತ ಋತುವಿನ ಆರು ಟೂರ್ನಿಗಳಲ್ಲಿ ಕೇವಲ ಎರಡರಲ್ಲಿ ಕ್ವಾರ್ಟರ್‌ಫೈನಲ್‌ ಹಂತ ತಲುಪಿದ್ದರು. 

2019ರ ಹಾಂಗ್‌ಕಾಂಗ್ ಓಪನ್‌ನಲ್ಲಿ ಮಾತ್ರ ಸಿಂಧು ಅವರು ಬುಸಾನನ್‌ ಅವರಿಗೆ ಮಣಿದಿದ್ದರು. ಇನ್ನುಳಿದ 18 ಮುಖಾಮುಖಿಯಲ್ಲೂ ಭಾರತದ ಆಟಗಾರ್ತಿ ಮೇಲುಗೈ ಸಾಧಿಸಿದ್ದಾರೆ. ಇಷ್ಟಾದರೂ ಸೆಮಿಫೈನಲ್‌ನಲ್ಲಿ ಸಿಂಧು ಅವರಿಗೆ ಬುಸಾನನ್‌ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು.

ಆರಂಭದಲ್ಲಿ ಥಾಯ್ಲೆಂಡ್‌ ಆಟಗಾರ್ತಿಯು ಆಕರ್ಷಕ ಸ್ಮ್ಯಾಷ್‌ಗಳು, ಅಮೋಘ ಬ್ಲಾಕ್‌, ಡ್ರಾಪ್‌ ಮತ್ತು ನಿಖರ ಡ್ರೈವ್ ಮೂಲಕ ಮೇಲುಗೈ ಸಾಧಿಸಿ ಸಿಂಧು ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಹಲವು ಸುದೀರ್ಘ ರ‍್ಯಾಲಿಗಳಿಗೆ ಸಾಕ್ಷಿಯಾದ ಮೊದಲ ಗೇಮ್‌ನಲ್ಲಿ ಬುಸಾನನ್‌ ಮೇಲುಗೈ ಸಾಧಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಸಿಂಧು, ಬ್ಯಾಕ್‌ಹ್ಯಾಂಡ್‌ ಹೊಡೆತಗಳು ಹಾಗೂ ಚುರುಕಿನ ಪಾದಚಲನೆಯು ಮೇಲುಗೈ ಪಡೆದು ಸ್ಕೋರ್‌ ಸಮಬಲಗೊಳಿಸಿದರು. ನಿರ್ಣಾಯಕ ಗೇಮ್‌ನಲ್ಲೂ ಭಾರತದ ಆಟಗಾರ್ತಿಯ ಆಕ್ರಮಣಕಾರಿ ಆಟದ ಎದುರು ಬುಸಾನನ್‌ ನಿಯಂತ್ರಣ ಕಳೆದುಕೊಂಡು ಶರಣಾದರು.

‘ಸೂಪರ್‌ 500’ ಹಂತದ ಟೂರ್ನಿ ಇದಾಗಿದ್ದು, ಒಟ್ಟು ₹3.48 ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ. ಸಿಂಧು ಮತ್ತು ಅಶ್ಮಿತಾ ಹೊರತುಪಡಿಸಿ ಭಾರತದ ಸ್ಪರ್ಧಾಳುಗಳು ಮೊದಲೆರಡು ಸುತ್ತಿನಲ್ಲೇ ನಿರಾಸೆ ಮೂಡಿಸಿದ್ದರು. ಆಶ್ವಿತಾ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT