ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಚಿವರಿಗೊಂದು ಪತ್ರ

Last Updated 12 ಮೇ 2015, 19:30 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ವಂದನೆಗಳು.
ಉನ್ನತ ಶಿಕ್ಷಣ ಸಂಸ್ಥೆಯೊಂದರಲ್ಲಿ ಅಧ್ಯಯನ-ಅಧ್ಯಾಪನದ ಕೆಲಸಗಳನ್ನು ನಿರ್ವಹಿಸುತ್ತಿರುವ ನನಗೆ, ನನ್ನ ಇಲಾಖೆಯ ಮುಖ್ಯಸ್ಥರಾದ ತಮ್ಮ ಜೊತೆ ಕೆಲವು ಚಿಂತನೆಗಳನ್ನು ಹಂಚಿಕೊಳ್ಳುವುದಕ್ಕೆ  ಇದು ಸಕಾಲ ಅನ್ನಿಸಿದ್ದರಿಂದ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.
ರಾಜ್ಯದಲ್ಲಿ ಇದೇ ಮೊದಲ ಬಾರಿ ಒಮ್ಮೆಗೇ ಆರು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ಆರಿಸುವ ಮಹತ್ವದ ಹೊಣೆಗಾರಿಕೆ ತಮ್ಮ ಸಚಿವಾಲಯಕ್ಕೆ ಬಂದಿದೆ.  ಇದಕ್ಕಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಇಲಾಖೆ ಸಾಕಷ್ಟು ಶ್ರಮ ಪಟ್ಟಿದೆ. ಜೊತೆಗೆ ಕುಲಪತಿಗಳನ್ನು ತುಂಬುವುದಕ್ಕೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸುವ ಕ್ರಮವನ್ನೂ ಈ ಸಲ ಜಾರಿಗೆ ತಂದಿದೆ. ಇದನ್ನು ವಿಶ್ರಾಂತ ಕುಲಪತಿಗಳ ಸಂಘದವರು ವಿರೋಧಿಸಿದರೂ, ಇಲಾಖೆಯ ಈ ಕ್ರಮ ಸರಿಯಾಗಿಯೇ ಇದೆ. ವಿಶ್ವಮಾನ್ಯತೆ ಪಡೆದಿರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲೂ ಕುಲಪತಿ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸುವ ಕ್ರಮ ಇದೆ.

ತಮಗೆ ತಿಳಿದಿರುವಂತೆ ರಾಜ್ಯದಲ್ಲಿ ಕಳೆದ 20 ವರ್ಷಗಳಿಂದೀಚೆಗೆ ವಿಶ್ವವಿದ್ಯಾಲಯಗಳ ಗುಣಮಟ್ಟ ಕುಸಿಯುತ್ತಿದೆ. ಇದು ಅತ್ಯಂತ ಕಳವಳಕಾರಿಯಾದ ವಿದ್ಯಮಾನ. ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನಚ್ಯುತಗೊಂಡಷ್ಟೂ ನಮ್ಮ ಸಮಾಜದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ವಿಶ್ವವಿದ್ಯಾಲಯದಂಥ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿ, ನಿಷ್ಕಳಂಕ ವ್ಯಕ್ತಿತ್ವ, ಮೇಧಾವಿತನವಿಲ್ಲದ ಕುಲಪತಿ, ಮೂಲತಃ ಸಂಶೋಧನಾ ಗುಣ-ಸ್ವಭಾವವಿಲ್ಲದ ಬೋಧಕರ ಕೊರತೆಯಿಂದಾಗಿ ನಮ್ಮಲ್ಲಿ ಅವನತಗೊಂಡಿವೆ.

ಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹಣ ಮುಖ್ಯ ಪಾತ್ರ ವಹಿಸುತ್ತಿದೆ ಎಂಬ ವದಂತಿ ಅಥವಾ ಸತ್ಯಸಂಗತಿಗೆ ನಮ್ಮಲ್ಲಿ ಅನೇಕ ವರ್ಷಗಳ ಇತಿಹಾಸ ಇದೆ. ಇದು ನಿಜವೇ ಆಗಿದ್ದರಿಂದಲೋ ಏನೋ ಕಳೆದ 20 ವರ್ಷಗಳಿಂದೀಚೆಗೆ, ವಿಶ್ವವಿದ್ಯಾಲಯಗಳ ಸುತ್ತಲಿನ ಪ್ರಭಾವಳಿ ಹೆಚ್ಚೂಕಡಿಮೆ ನಿಸ್ತೇಜಗೊಂಡಿದೆ (ಇದಕ್ಕೆ ಅಪವಾದಗಳೂ ಇವೆ. ಆದರೆ ಅವುಗಳ ಸಂಖ್ಯೆ ಕಡಿಮೆ). ದುಡ್ಡು ಕೊಟ್ಟು ಆಯ್ಕೆಯಾಗಿ ಬರುವ ಕುಲಪತಿಗಳು ಮೊದಲಿಗೆ ತಾವು ಕಳೆದುಕೊಂಡಷ್ಟು ದುಡ್ಡನ್ನು ದುಡಿಯಲು   ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಆನಂತರ ಇನ್ನೊಂದಷ್ಟು ದುಡ್ಡು ಮಾಡಿಕೊಂಡು ಹೋಗುವಂತಹ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ಈ ‘ಯಾರಿಗೋ’ ದುಡ್ಡು ಕೊಡುವ ಮತ್ತು ‘ಇನ್ನಾವುದರಿಂದಲೋ’ ದುಡ್ಡು ಮಾಡುವ ಸಾಧ್ಯತೆಯನ್ನು ಕುಲಪತಿಗಳ ಕೈಯಿಂದ ಕಿತ್ತು ಹಾಕಿದರೆ ಆಗ ಬಲಾಢ್ಯರೋ, ಧನಾಢ್ಯರೋ ವಿಶ್ವವಿದ್ಯಾಲಯದತ್ತ ಮುಖ ಮಾಡದೆ ಸಜ್ಜನರೂ, ನಿಷ್ಕಳಂಕರೂ ಅದರ ಸಾರಥ್ಯ ವಹಿಸಲು ಮುಂದೆ ಬರಬಹುದು.

ಅದನ್ನು ಸಾಧ್ಯಗೊಳಿಸಬೇಕಿದ್ದರೆ ತಮ್ಮ ಇಲಾಖೆ ಬಹಳ ಮುಖ್ಯವಾಗಿ ಎರಡು ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ– ಬೋಧಕೇತರ ಹುದ್ದೆಗಳನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಪರೀಕ್ಷೆ ನಡೆಸಿ ತುಂಬಬೇಕು. ಇದರಲ್ಲಿ ಕುಲಪತಿಗಳ ಯಾವುದೇ ಪಾತ್ರ ಇರಕೂಡದು (ತಮ್ಮ ಇಲಾಖೆ ಈಗಾಗಲೇ ಪದವಿ ಅಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಅಂತಹ  ಪ್ರಯತ್ನ ನಡೆಸಿದೆ). ವಿಶ್ವವಿದ್ಯಾಲಯದ ಅಧ್ಯಾಪಕರ ಮತ್ತು ಆಡಳಿತಾತ್ಮಕ ಸಿಬ್ಬಂದಿಯ ನೇಮಕಾತಿಗೂ ಇಂತಹ ಪ್ರತ್ಯೇಕ ನೇಮಕಾತಿ ಪ್ರಾಧಿಕಾರ ಸ್ಥಾಪಿಸುವುದರಿಂದ, ಕುಲಪತಿ ಸ್ವಯಂ ಭ್ರಷ್ಟಗೊಳ್ಳುವ  ಸಾಧ್ಯತೆ ಇಲ್ಲವಾಗುತ್ತದೆ.

ಅದೇ ರೀತಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಟ್ಟಡ ಕಾಮಗಾರಿಗಳಿಂದ ಕುಲಪತಿಗಳನ್ನು ಹೊರಗಿರಿಸುವುದು. ಭೌತಿಕ ಕಾಮಗಾರಿಗಳ  ನಿರ್ವಹಣೆಯಲ್ಲೂ ಕುಲಪತಿ ಭ್ರಷ್ಟಗೊಳ್ಳುವ ಸಾಧ್ಯತೆ ಹೆಚ್ಚು. ಈ ಕಾಮಗಾರಿಗಳನ್ನು ಸರ್ಕಾರವೇ  ಸಾರ್ವಜನಿಕರ ವಿಶ್ವಾಸಾರ್ಹತೆ ಗಳಿಸಿದ ನಿರ್ಮಾಣ ಸಂಸ್ಥೆಗಳಿಗೆ ವಹಿಸಿಕೊಟ್ಟರೆ ಅಲ್ಲೂ ಕಾಂಚಾಣದ ಕುಣಿತ ಸ್ಥಗಿತಗೊಳ್ಳುತ್ತದೆ. ಕುಲಪತಿಗಳು ಕುಲಪತಿಗಳಾಗಿ ಇರಬೇಕೇ ಹೊರತು ಮೇಸ್ತ್ರಿಗಳಾಗಬಾರದು.

ಮೊದಲಿಗೆ ಈ ಎರಡು ಬದಲಾವಣೆಗಳನ್ನು ತಾವು ಜಾರಿ ಮಾಡಿದ್ದೇ ಆದಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ- ಅಧ್ಯಾಪನ- ಸಂಶೋಧನೆ ಮತ್ತು ಜ್ಞಾನಪ್ರಸರಣದ ನಾಲ್ಕು ಕೆಲಸಗಳಿಗೆ ಕುಲಪತಿ ಹೆಚ್ಚು ಒತ್ತು ಕೊಡುತ್ತಾರೆ. ನೇಮಕಾತಿ ಪ್ರಾಧಿಕಾರದ ಮೂಲಕ ಆಯ್ಕೆಯಾಗಿ ಬಂದ ಅಧ್ಯಾಪಕರು ಕುಲಪತಿಯವರ ‘ಋಣ’ ತಮ್ಮ ಮೇಲಿದೆ, ಅವರು ತಮಗೆ ಕೆಲಸ ಕೊಡಿಸಿದ್ದಾರೆ ಎಂಬ ಊಳಿಗಮಾನ್ಯ ಸಮಾಜದ ಮೌಲ್ಯಗಳ ಮರ್ಜಿಗೆ ಒಳಗಾಗದೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.

ನೇಮಕಾತಿ ಮತ್ತು ಕಾಮಗಾರಿ ವ್ಯವಹಾರಗಳಿಂದ ಕುಲಪತಿಗಳನ್ನು ಹೊರತುಪಡಿಸಿದಾಗ ‘ಏನೂ ಹುಟ್ಟದ’ ಜಾಗಗಳಿಗೆ ಹೋಗುವುದಕ್ಕೆ ‘ವಿಶೇಷ ಲೌಕಿಕಾಸಕ್ತಿ’ ಬೆಳೆಸಿಕೊಂಡ ಯಾವ ಪ್ರಾಧ್ಯಾಪಕರೂ ಬಯಸಲಾರರು. ಆಗ  ಕುಲಪತಿ ಆಕಾಂಕ್ಷಿ ಅರ್ಜಿಗಳ ಸಂಖ್ಯೆ, ಅದಕ್ಕಾಗಿ ರಾಜಕಾರಣಿಗಳ- ಮಠಾಧೀಶರ ಒತ್ತಡ ಕುಸಿಯುತ್ತದೆ.

ಇಂಥ ಮಹತ್ವದ ಬದಲಾವಣೆಗಳನ್ನು ತಂದರೆ, ರಾಜ್ಯದ ವಿಶ್ವವಿದ್ಯಾಲಯಗಳು ಹೊಸ ದಾರಿಯಲ್ಲಿ ಬೆಳೆಯುತ್ತವೆ. ರಾಜ್ಯದಲ್ಲಿ ಇದುವರೆಗೆ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ  ಸ್ಪಷ್ಟ ನಿಯಮಾವಳಿ ಇಲ್ಲ.  ಇರುವ ನಿಯಮಾವಳಿಗಳೂ ವಿಜ್ಞಾನ ವಿಭಾಗದಿಂದ ಬಂದ ಪ್ರಾಧ್ಯಾಪಕರು ಕುಲಪತಿಯಾಗಲು ಒತ್ತು ಕೊಡುವಂತಿವೆ. ಇವೆಲ್ಲವನ್ನೂ ಪರಿಷ್ಕರಿಸಿ ಆಮೂಲಾಗ್ರ ಬದಲಾವಣೆ ಮಾಡಬೇಕಾಗಿದೆ. ಅಧ್ಯಾಪಕರ ಆಯ್ಕೆ ಮತ್ತು ಪದೋನ್ನತಿಗೆ ಯುಜಿಸಿ ನಿಗದಿಪಡಿಸಿರುವ ಮಾನದಂಡಗಳು ನಮ್ಮದೇ ರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ಅಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ ಸಾರ್ವಜನಿಕವಾಗಿ ನಗೆಪಾಟಲಿಗೆ ಗುರಿಯಾಗಿವೆ. ಈ ಕುರಿತು ಅನೇಕ ಅಧಿವೇಶನಗಳಲ್ಲೂ ಚರ್ಚೆ ನಡೆದಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪೂರ್ಣಪ್ರಮಾಣದ ಅಧ್ಯಾಪಕರ ಆಯ್ಕೆ ಪ್ರಕ್ರಿಯೆ ಆರಂಭವಾಗಿಲ್ಲ. ಜಾನಪದ ವಿಶ್ವವಿದ್ಯಾಲಯದ ಅಧ್ಯಾಪಕರ ಆಯ್ಕೆಯೂ ನನೆಗುದಿಗೆ ಬಿದ್ದಿದೆ.

ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಪ್ರಕರಣಗಳನ್ನು ತಮ್ಮ ಇಲಾಖೆ ಮತ್ತು ಕುಲಾಧಿಪತಿಗಳು ತನಿಖೆ ನಡೆಸಲು ಆದೇಶಿಸಿದ್ದಾರೆ. ಇಡೀ ಉನ್ನತ ಶಿಕ್ಷಣ ಕ್ಷೇತ್ರವನ್ನು ಸ್ವಚ್ಛಗೊಳಿಸಲು ಇದು ಸಕಾಲ. ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಡುವಲ್ಲಿ ಮನಸೋ-ಇಚ್ಛೆ ನಡೆದುಕೊಂಡ  ಸಂದರ್ಭದಲ್ಲಿ, ವಿಧಾನಸಭಾ ಅಧಿವೇಶನದಲ್ಲಿ ಒಳ್ಳೆಯ ಚರ್ಚೆ ನಡೆದು ತಾವು ನಡುಪ್ರವೇಶ ಮಾಡಿ ಅದಕ್ಕೊಂದು ಘನತೆ-ಗೌರವ ಬರುವಂತೆ ಮಾಡಿದ್ದೀರಿ. ಅದೇ ರೀತಿ ವಿಶ್ವವಿದ್ಯಾಲಯದ ಸಂರಚನೆಯಲ್ಲೂ ಕೆಲವು ಮೂಲಭೂತ ಬದಲಾವಣೆಗಳನ್ನು ಮಾಡುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಸಮಯ. ದಯವಿಟ್ಟು ಕಾರ್ಯಾಚರಣೆಗೆ ತನ್ನಿ, ನಮಸ್ಕಾರ.
-ಲೇಖಕ ಮುಖ್ಯಸ್ಥ, ಡಿವಿಜಿ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT