2ನೇ ಹಂತ: ಮತದಾನ ಇಂದು
ಬೆಂಗಳೂರು, ಸೆ. 10– ರಾಜ್ಯದಲ್ಲಿ ನಾಳೆ ನಡೆಯಲಿರುವ ಎರಡನೇ ಸುತ್ತಿನ ಮತದಾನದಲ್ಲಿ ಒಬ್ಬರು ಮಾಜಿ ಪ್ರಧಾನಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯ ಘಟಕಗಳ ಮೂವರು ಅಧ್ಯಕ್ಷರು ಸೇರಿದಂತೆ ಅನೇಕ ಘಟಾನುಘಟಿಗಳ ರಾಜಕೀಯ ಭವಿಷ್ಯವನ್ನು ಮತದಾರರು ತೀರ್ಮಾನಿಸಲಿದ್ದಾರೆ.
ಹದಿಮೂರು ಲೋಕಸಭೆ ಹಾಗೂ 104 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಒಟ್ಟು 632 ಅಭ್ಯರ್ಥಿಗಳು ಮತದಾರರ ‘ಅಗ್ನಿಪರೀಕ್ಷೆ’ಗೆ ಒಳಗಾಗಲಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮೂಲಕ ಚುನಾವಣೆ ನಡೆಯಲಿದೆ.
***
ಅಮೇಥಿಯಲ್ಲಿ ಸೋನಿಯಾ ನಾಮಪತ್ರ
ಸುಲ್ತಾನ್‌ಪುರ (ಉತ್ತರ ಪ್ರದೇಶ), ಸೆ. 10– ಬಿಜೆಪಿ ವಿರೋಧಿ ಘೋಷಣೆ, ಕಾಂಗ್ರೆಸ್ ಪರ ಜನಸಾಗರದ ಮುಗಿಲು ಮುಟ್ಟುವ ಘೋಷಣೆಗಳ ನಡುವೆ ಸೋನಿಯಾ ಗಾಂಧಿ ಅವರು ತಮ್ಮ ಪತಿ ರಾಜೀವ್ ಗಾಂಧಿ ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ಇಂದು ನಾಮಪತ್ರ ಸಲ್ಲಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಚುನಾವಣೆಯು ರಂಗೇರುವಂತೆ ಮಾಡಿದರು.
ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಸುವ ಸಂಗತಿ ಜಿಲ್ಲಾ ಆಡಳಿತಕ್ಕೆ ಮೊದಲೇ ಗೊತ್ತಿದ್ದ ಕಾರಣ ಜಿಲ್ಲಾಧಿಕಾರಿ ಕಾರ್ಯಾಲಯದ ಒಳಗಡೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.