ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 20.9.1996

Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಗುಜರಾತ್‌ಗೆ ರಾಷ್ಟ್ರಪತಿ ಆಡಳಿತ
ನವದೆಹಲಿ, ಸೆ. 19 (ಪಿಟಿಐ)– ಗುಜರಾತ್ ಮುಖ್ಯಮಂತ್ರಿ ಸುರೇಶ್ ಮೆಹತಾ ನೇತೃತ್ವದ ಹನ್ನೊಂದು ತಿಂಗಳ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಇಂದು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ. ಅಲ್ಲದೆ, ರಾಜ್ಯ ವಿಧಾನಸಭೆಯನ್ನು ಅನಿರ್ದಿಷ್ಟ ಅವಧಿವರೆಗೆ ಅಮಾನತಿನಲ್ಲಿಡಲಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಸಂವಿಧಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಕೆ.ಪಿ.ಸಿಂಗ್ ಅವರು ಕಳುಹಿಸಿರುವ ವರದಿ ಮೇರೆಗೆ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರು ಸಂವಿಧಾನದ 356ನೇ ವಿಧಿ ಅನ್ವಯ ಗುಜರಾತ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದಿದ್ದಾರೆ.

ಲಾಕಪ್‌ಗೆ ಸುಖ್‌ರಾಂ,ರುನುಗೆ ಜಾಮೀನು
ನವದೆಹಲಿ, ಸೆ. 19 (ಪಿಟಿಐ)– ದೂರ ಸಂಪರ್ಕ ಇಲಾಖೆಯ 1.68 ಕೋಟಿ ರೂಪಾಯಿ ಹಗರಣದ ಆರೋಪಿಗಳಾದ ದೂರಸಂಪರ್ಕ ಇಲಾಖೆಯ ಉನ್ನತಾಧಿಕಾರಿ ರುನು ಘೋಷ್ ಮತ್ತು ಹೈದರಾಬಾದ್ ಮೂಲದ ಎ.ಆರ್.ಎಂ. ಉದ್ಯಮದ ವ್ಯವಸ್ಥಾಪಕ ನಿರ್ದೇಶಕ ಪಟ್ಟಾಲು ರಾಮ ರಾವ್ ಅವರನ್ನು ದೆಹಲಿ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿದೆ.

ಈ ಮಧ್ಯೆ ಇಂದು ನಡೆದ ಪ್ರಮುಖ ಬೆಳವಣಿಗೆ ಎಂದರೆ ಈ ಹಗರಣದ ಪ್ರಮುಖ ಆರೋಪಿ, ಸಂಪರ್ಕ ಖಾತೆಯ ಮಾಜಿ ಸಚಿವ ಸುಖ್‌ರಾಂ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ತಕ್ಷಣ ಲೋಕ ನಾಯಕ ಭವನದಲ್ಲಿನ ಸಿಬಿಐಯ ಲಾಕಪ್‌ಗೆ ಒಪ್ಪಿಸಲಾಯಿತು.

ಹತ್ತು ಸಾವಿರದಲ್ಲಿ 8 ಜನ ವರಮಾನ ತೆರಿಗೆದಾರರು
ಬೆಂಗಳೂರು, ಸೆ. 19– ಆದಾಯ ತೆರಿಗೆ ಮಿತಿಯನ್ನು ಯಾವುದೇ ಕಾರಣಕ್ಕೂ ಏರಿಸುವುದನ್ನು ಇಂದು ಇಲ್ಲಿ ಬಲವಾಗಿ ವಿರೋಧಿಸಿದ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ. ಮಧು ದಂಡವತೆ ಅವರು, ‘ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಕ್ಕೆ ಇರುವವರನ್ನು ಅದರ ಅಡಿಯಲ್ಲಿ ತರುವುದಕ್ಕೆ ಅಗತ್ಯವಿರುವ ಕ್ರಮವನ್ನುಈಗ ಕೈಗೊಳ್ಳಬೇಕಾಗಿದೆ’ ಎಂದರು.

ಆದಾಯ ತೆರಿಗೆ ಮಿತಿಯನ್ನು ರೂ.1000 ದಷ್ಟು ಹೆಚ್ಚಿಸಿದರೆ ವಾರ್ಷಿಕ ಒಂದು ನೂರು ಕೋಟಿ ಮೊತ್ತದ ವರಮಾನ ತೆರಿಗೆ ತಗ್ಗುತ್ತದೆ. ಇಷ್ಟು ಹಾನಿಯನ್ನು ಭರಿಸುವ ಸ್ಥಿತಿ ಯಲ್ಲಿ ದೇಶ ಇಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಆಶ್ರಯ ದಲ್ಲಿ ನಡೆದ ಒಂದು ದಿನದ ‘ಕೇಂದ್ರೀಯ ಹಣಕಾಸು ಪೂರೈಕೆ ಸಂಸ್ಥೆಗಳ ಸಮ್ಮೇಳನ’ ದಲ್ಲಿ ಪ್ರಧಾನ ಭಾಷಣ ಮಾಡಿದಪ್ರೊ. ಮಧು ದಂಡವತೆ , ‘ಜಗತ್ತಿನ ಯಾವುದೇ ದೇಶಕ್ಕೆ ಹೋಲಿಸಿದರೂ ಭಾರತದಲ್ಲಿ ವರಮಾನ ತೆರಿಗೆ ಕಟ್ಟುವವರ ಪ್ರಮಾಣ ತೀರಾ ಕಡಿಮೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT